Saturday, October 5, 2024

ಇವನ ಅಸಹ್ಯ ತಾಳಲಾರದೆ ಮಗನೇ ಶೂಟ್‌ ಮಾಡ್ಕೊಂಡು ಸತ್ತನಂತೆ!

ಭಾರತೀಯ ಕುಸ್ತಿ ಸಂಸ್ಥೆಯ ಮಾಜಿ ಅಧ್ಯಕ್ಷ, ಸಂಸದ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಒಬ್ಬ ಸಾಚ ಆಗಿದ್ದರೆ ಬೆಂಗಳೂರಿನಲ್ಲಿ ನಡೆಯಲಿರುವ ಕಂಬಳ ಕಾರ್ಯಕ್ರಮಕ್ಕೆ ಬರಲು ಯಾರೂ ವಿರೋಧ ವ್ಯಕ್ತಪಡಿಸುತ್ತಿರಲಿಲ್ಲ. ಈತ ಎಷ್ಟು ಹಿಂಸಕ ಎಂದರೆ ಈತನ ಕಾಟ ತಾಳಲಾರದೆ ಮಗ ಶಕ್ತಿ ಶರಣ್‌ ಸಿಂಗ್‌ ತನ್ನ 23ನೇ ವಯಸ್ಸಿನಲ್ಲಿ ಪಿಸ್ತೂಲಿನಿಂದ ಶೂಟ್‌ ಮಾಡಿಕೊಂಡು ಸತ್ತ. Brij Bhushan Sharan Singh’s son Shakthi Singh shot himself with licensed pistol.

ರಾಜಕೀಯ ಎಂತಯ ವ್ಯಕ್ತಿಯನ್ನೂ ಬದುಕಿಸುತ್ತದೆ ಎನ್ನುವುದಕ್ಕೆ ಈ ಬ್ರಿಜ್‌ ಭೂಷಣ್‌ ಉತ್ತಮ ಉದಾಹರಣೆ. 38 ಕ್ರಿಮಿನಲ್‌ ಕೇಸ್‌ಗಳು ಈತನ ಮೇಲಿದೆ. ಜನ ಹೆದರಿ ಓಟು ಹಾಕಿದ್ದಾರೋ ಇಲ್ಲ ಈತನ ಯಾವ ಗುಣವನ್ನು ನೋಡಿ ಹಾಕಿದ್ದಾರೋ ದೇವರೇ ಬಲ್ಲ. “ರವೀಂದರ್‌ ಸಿಂಗ್‌ನನ್ನು ಕೊಂದವನನ್ನು ನಾನೇ ಶೂಟ್‌ ಮಾಡಿ ಕೊಂದೆ,” ಎಂದು ನೇರವಾಗಿ ಹೇಳಿಕೆ ನೀಡಿದ್ದಾನೆ. ರವೀಂದರ್‌ ಸಿಂಗ್‌ ಈತನ ಅತ್ಯಂತ ಆತ್ಮೀಯ ಗೆಳೆಯನಾಗಿದ್ದ.

ಆರು ಬಾರಿ ಸಂಸದನಾಗಿ ಆಯ್ಕೆಯಾಗಿರುವ ಬ್ರಿಜ್‌ ಭೂಷಣ್‌ ಮೇಲೆ ದರೋಡೆ, ಮರ್ಡರ್‌, ಸುಲಿಗೆ, ಲೈಂಗಿಕ ಕಿರುಕುಳ ಸೇರಿದಂತೆ 38 ಕ್ರಿಮಿನಲ್‌ ಕೇಸುಗಳಿವೆ. ಪೋಸ್ಕೋ ಕಾಯಿದೆಯಡಿಯೂ ಕೇಸು ದಾಖಲಾಗಿದೆ. ಪುರುಷ ಮತ್ತು ಮಹಿಳಾ ಕುಸ್ತಿ ಪಟುಗಳು ಅತ್ಯಂತ ಬಲಿಷ್ಠರಾಗಿರುತ್ತಾರೆ, ಅವರನ್ನು ನಿಯಂತ್ರಿಸಲು ನನ್ನನ್ನು ಬಿಟ್ಟರೆ ಇಲ್ಲಿ ಯಾರಿದ್ದಾರೆ? ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಬ್ರಿಜ್‌ ಹೇಳಿದ ಮಾತಿದು. 2021ರಲ್ಲಿ ಕುಸ್ತಿಪಟುವೊಬ್ಬರಿಗೆ ಸ್ಟೇಜಿನಲ್ಲೇ ಕಪಾಳ ಮೋಕ್ಷ ಮಾಡಿದ್ದು ದೇಶಾದ್ಯಂತ ವೈರಲ್‌ ಆಗಿತ್ತು.

ಈ ವರ್ಷ ಭಾರತದ ಒಲಿಂಪಿಕ್‌ ಕುಸ್ತಿಪಟುಗಳು ತಮಗಾಗಿರುವ ಲೈಂಗಿಕ ಕಿರುಕುಳವನ್ನು ಖಂಡಿಸಿ, ಬ್ರಿಜ್‌ ಭೂಷಣ್‌ನನ್ನು ಬಂಧಿಸುವಂತೆ ಪ್ರತಿಭಟನೆ ನಡೆಸಿದರು. ಆತನ ವಿರುದ್ಧ ಎಫ್‌ಐಆರ್‌ ದಾಖಲಿಸಲು ಡೆಲ್ಲಿ ಪೊಲೀಸರಿಗೂ ಧೈರ್ಯ ಇರಲಿಲ್ಲ. ಕೊನೆಗೆ ಸುಪ್ರಿಂ ಕೋರ್ಟ್‌ ಆದೇಶದ ಮೇರೆಗೆ ಎಫ್‌ಐಆರ್‌ ದಾಖಲಾಯಿತು. ಒಂದು ಪೋಸ್ಕೋ ಕಾಯಿದೆಯಡಿ ದಾಖಲಾದರೆ, ಆರು ಮಹಿಳಾ ಕುಸ್ತಿಪಟುಗಳು ನೀಡಿರುವ ದೂರಿನ ಮೇರೆಗೆ ಲೈಂಗಿಕ ಕಿರುಕುಳದ ಆರೋಪದಡಿ ಎಫ್‌ಐಆರ್‌ ದಾಖಲಾಯಿತು. ಸರಕಾರದ ಹಸ್ತಕ್ಷೇವಾದ ಹಿನ್ನಲೆಯಲ್ಲಿ ಕುಸ್ತಿಪಟುಗಳು ಪ್ರತಿಭಟನೆಯನ್ನು ನಿಲ್ಲಿಸಿದ್ದರು.

ಹೆಣ್ಣು ಮಕ್ಕಳ ಉಸಿರಾಟವನ್ನು ಪರೀಕ್ಷಿಸುವೆ ಎಂದು ಅವರ ಹೊಟ್ಟೆಯನ್ನು, ಮೊಲೆಗಳನ್ನು ಮುಟ್ಟಿ ಕಿರುಕುಳ ನೀಡುತ್ತಿದ್ದ ಎಂದು ಕುಸ್ತಿಪಟುಗಳು ಮಾಡಿರುವ ಆರೋಪದಲ್ಲಿ ದಾಖಲಾಗಿದೆ. ಹೊಟೇಲ್‌, ಕುಸ್ತಿ ಸಂಸ್ಥೆಯ ಕಚೇರಿ, ತರಬೇತಿ ನಡೆಯುವ ಸ್ಥಳ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಟೂರ್ನಿ ಎಲ್ಲ ಕಡೆ ಬ್ರಿಜ್‌ ಭೂಷಣ್‌ ಹಾಜರಿರುತ್ತಿದ್ದನಂತೆ. “ಈ ವಿಷಯವನ್ನು ಪ್ರಧಾನಿಗಳಿಗಾಗಲಿ ಅಥವಾ ಕ್ರೀಡಾ ಸಚಿವರಿಗಾಗಲೀ ತಿಳಿಸಿದರೆ ಕೊಲೆ ಮಾಡುವುದಾಗಿ ಹೆದರಿಸುತ್ತಿದ್ದ,” ಎಂದು ವಿನೇಶ್‌ ಫೋಗತ್‌ ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದು. ಆರಂಭದಲ್ಲಿ ಭಾರತದ ಅನೇಕರಿಗೆ ಈತನ ಮೇಲೆ ಮಾಡಿರುವ ಆರೋಪಗಳ ಬಗ್ಗೆ ಸಂಶಯವೆದ್ದಿತ್ತು. ಇದು ರಾಜಕೀಯ ಪ್ರೇರಿತ ಎಂದು ಎಲ್ಲರೂ ಊಹಿಸಿದ್ದರು. ಆದರೆ ಮಹಿಳಾ ಕುಸ್ತಿಪಟುಗಳು ಒಂದಾಗಿ ಪ್ರತಿಭಟನೆ ಮಾಡಿ ಎಫ್‌ಐಆರ್‌ನಲ್ಲಿ ದಾಖಲಾದ ಅಂಶಗಳನ್ನು ಗಮನಿಸಿದಾಗ ಎಲ್ಲರ ಸಂಶಯ ದೂರವಾಗಿತ್ತು. ಈತನ ವಿರುದ್ಧ 1500 ಪುಟಗಳ ಜಾರ್ಜ್‌ಶೀಟನ್ನು ಡೆಲ್ಲಿ ಪೊಲೀಸರು ದಾಖಲಿಸಿದ್ದಾರೆ.

ಈಗ ಹೇಳಿ ಇಂಥ ವ್ಯಕ್ತಿ ನಮ್ಮ ಕಂಬಳ ಅಥವಾ ಯಾವುದೇ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲು ಅರ್ಹನೇ ಎಂದು.

Related Articles