Saturday, July 27, 2024

ಕೊನೆಯವರೆಗೂ ಹೋರಾಟ ನೀಡುತ್ತೇವೆಂಬ ನಂಬಿಕೆ ಇದ್ದಿತ್ತು: ರಂಜಿತ್‌ ಸಿಂಗ್

sportsmail:

ಹೈದರಾಬಾದ್‌ನ ಗಾಚಿ ಬೌಲಿ ಕ್ರೀಡಾಂಗಣಲ್ಲಿ ನಡೆಯುತ್ತಿರುವ 2022ನೇ ಸಾಲಿನ ಪ್ರೈಮ್‌ ವಾಲಿಬಾಲ್‌ ಲೀಗ್‌ನಲ್ಲಿ ಬೆಂಗಳೂರು ಟಾರ್ಪೆಡೊಸ್‌ ತಂಡ  ಕೊಚ್ಚಿ ಬ್ಲೂ ಸ್ಪೈಕರ್ಸ್‌ ವಿರುದ್ಧ 14-15, 12-15, 15-13, 15-9, 15-14  ಅಂತರದಲ್ಲಿ ರೋಚಕ ಜಯ ಗಳಿಸಿ ಶುಭಾರಂಭ ಕಂಡಿದೆ. ಮೊದಲ ಎರಡು ಸೆಟ್‌ಗಳಲ್ಲಿ ಸೋಲನುಭವಿಸಿರುವ ಬೆಂಗಳೂರು ತಂಡ ಅದ್ಭತವಾಗಿ ಪುಟಿದೆದ್ದಿದೆ. ನಂತರ ಮೂರು ಸೆಟ್‌ಗಳಲ್ಲಿ ಸತತ ಜಯ ಗಳಿಸಿ ಮೊದಲ ಯಶಸ್ಸು ಕಂಡಿತು.

ತಮ್ಮ ತಂಡವು ಪಂದ್ಯದ ಕೊನೆಯ ಕ್ಷಣದವರೆಗೂ ಹೋರಾಟ ನೀಡಿ ಯಾವ ರೀತಿಯಲ್ಲಿ ಜಯ ಗಳಿಸಿತು ಎನ್ನವುದರ ಬಗ್ಗೆ ಬೆಂಗಳೂರು ಟಾರ್ಪೆಡೊಸ್‌ ತಂಡದ ನಾಯಕ ರಂಜಿತ್‌ ಸಿಂಗ್‌ ವಿವರಿಸಿದ್ದಾರೆ.

“ನಾವು ಕೊಚ್ಚಿ ಬ್ಲೂ ಸ್ಪೈಕರ್ಸ್‌ ತಂಡದ ಮೊದಲ ಪಂದ್ಯವನ್ನು ವೀಕ್ಷಿಸಿದ್ದೇವೆ, ಮತ್ತು ಅದನ್ನು ವಿಶ್ಲೇಷಿಸಿದ್ದೇವೆ. ಮೊದಲಿನ ಪಂದ್ಯದಿಂದ ಯಾವೆಲ್ಲ ಅಂಶಗಳನ್ನು ಬದಲಾಯಿಸಿಕೊಳ್ಳಬಹುದು ಎಂಬುದು ನಮಗೆ ತಿಳಿದಿತ್ತು. ಕೊಚ್ಚಿ ಯಾವ ರೀತಿಯಲ್ಲಿ ತನ್ನ ಯೋಜನೆಗಳನ್ನು ಬದಲಾಯಿಸಿಕೊಳ್ಳುತ್ತದೋ ಅದೇ ರೀತಿಯಲ್ಲಿ ನಮ್ಮ ಯೋಜನೆಗಳನ್ನು ನಾವು ಕಾರ್ಯರೂಪಕ್ಕೆ ತರುವವರಿದ್ದೆವು. ಮೊದಲ ಸೆಟ್‌ ನಮ್ಮ ಕೈಯಲ್ಲಿದ್ದಿತ್ತು, ಆದರೆ ನಾವು ಮೊದಲ ಸೆಟ್‌ ಸೋತೆವು, ಅದೇ ರೀತಿ ಎರಡನೇ ಸೆಟ್‌ ಕೂಡ,” ಎಂದು ರಂಜಿತ್‌ ಸಿಂಗ್‌ ಹೇಳಿದರು.

 

“ನಮ್ಮಲ್ಲಿ ಬೆಂಚ್‌ ಶಕ್ತಿ ಉತ್ತಮವಾಗಿರುವುದರಿಂದ ನಾವು ಪಂದ್ಯದಲ್ಲಿ ಪುಟಿದೇಳುತ್ತೇವೆ ಎಂಬ ಆತ್ಮವಿಶ್ವಾಸವಿದ್ದಿತ್ತು. ಪಂಕಜ್‌ ಶರ್ಮಾ, ರೋಹಿತ್‌ ಪಿ, ಲವ್‌ಮೀತ್‌ ಕಠಾರಿಯಾ, ವರಣ್‌ ಜಿಎಸ್‌, ಬಿ, ಮಿದುನ್‌ ಕುಮಾರ್‌ ಅವರಂಥ ಆಟಗಾರರಿರುವುದರಿಂದ ನಮ್ಮ ಆತ್ಮವಿಶ್ವಾಸ ಕುಗ್ಗುವುದಿಲ್ಲ ಎಂಬ ನಂಬಿಕೆ ಇತ್ತು, ಮತ್ತು ನಾವು ಕೊನೆ ಕ್ಷಣದವರೆಗೂ ಹೋರಾಟ ನೀಡಿ ಪಂದ್ಯವನ್ನು ಗೆದ್ದೆವು,” ಎಂದರು.

ಮೊದಲ ಎರಡು ಸೆಟ್‌ನಲ್ಲಿ ಸೋತಿರುವುದು ತಂಡಕ್ಕೆ ಆಘಾತವನ್ನುಂಟುಮಾಡುವ ಸಂಗತಿಯಾಗಿತ್ತು, ಆದರೆ ಅವರು ಆತ್ಮವಿಶ್ವಾಸವನ್ನು ಉಳಿಸಿಕೊಂಡು ಪರಿಸ್ಥಿತಿಯನ್ನು ಧನಾತ್ಮಕದ ಕಡೆಗೆ ಕೊಂಡೊಯ್ದರು ಎಂದು ರಂಜಿತ್‌ ಹೇಳಿದರು.

“ಕೊಚ್ಚಿ ತಂಡದ ಎಲ್ಲ ಆಟಗಾರರು ಭಾರತದ ಶಿಬಿರದಲ್ಲಿ ಇದ್ದುದರಿಂದ ಅಲ್ಲಿಯ ಪ್ರತಿಯೊಬ್ಬ ಆಟಗಾರರ ಸಾಮರ್ಥ್ಯದ ಬಗ್ಗೆ ನಮಗೆ ಅರಿವಿದ್ದಿತ್ತು. ಆದ್ದರಿಂದ ಎರಡು ಸೆಟ್‌ ಸೋತರೂ, ಯಾವುದೇ ಹಂತದಲ್ಲೂ ಸೋಲುತ್ತೇವೆಂಬ ಭಾವನೆ ನಮ್ಮಲ್ಲಿರಲಿಲ್ಲ. ನಾವು ಉತ್ತಮ ಪ್ರದರ್ಶನ ನೀಡಿದರೂ ಎರಡು ಸೆಟ್‌ ಸೋತಿರುವುದು ಆಘಾತವನ್ನುಂಟುಮಾಡಿತ್ತು. ಆದರೆ ನಮ್ಮ ತಂಡದಲ್ಲಿ ಯಾರೂ ಕೈ ಚೆಲ್ಲುವ ಮನಸ್ಸನ್ನು ಹೊಂದಿರದೆ ಇರುವುದು ನಮಗೆ ಯಶಸ್ಸನ್ನು ತಂದುಕೊಟ್ಟಿತು” ಎಂದರು.

ಶುಕ್ರವಾರ ನಡೆಯಲಿರುವ ಎರಡನೇ ಪಂದ್ಯದಲ್ಲಿ ಬೆಂಗಳೂರು ಟಾರ್ಪೆಡೊಸ್‌ ತಂಡ ಹೈದರಾಬಾದ್‌ ಬ್ಲ್ಯಾಕ್‌ ಹಾಕ್ಸ್‌ ವಿರುದ್ಧ ಸೆಣಸಲಿದೆ, ಮುಂದಿನ ಸವಾಲಿಗಾಗಿ ನಾವು ಎಲ್ಲ ರೀತಿಯ ಯೋಜನೆಯನ್ನು ಈಗಾಗಲೇ ಮಾಡಿಕೊಂಡಿದ್ದೇವೆ ಎಂದು ರಂಜಿತ್‌ ಹೇಳಿದ್ದಾರೆ.

 

“ಹೈದರಾಬಾದ್‌ ತಂಡ ಮೊದಲ ಪಂದ್ಯದಲ್ಲಿ ಯಾವ ರೀತಿಯಲ್ಲಿ ಆಡಿತ್ತು ಎಂಬುದನ್ನು ನಾವು ನೋಡಿದ್ದೇವೆ. ಅವರ ಸಾಮರ್ಥ್ಯ ಮತ್ತು ದೌರ್ಬಲ್ಯವನ್ನು ನಾವು ನೋಡಿದ್ದೇವೆ ಮತ್ತು ತರಬೇತಿ ಸಂದರ್ಭದಲ್ಲಿ ನಾವು ಅವುಗಳ ಕಡೆಗೆ ಗಮನಹರಿಸಲಿದ್ದೇವೆ, ನಾವು ಖಂಡಿತವಾಗಿಯೂ ಜಯದ ಕಡೆಗೆ ಗಮನಹರಿಸಲಿದ್ದೇವೆ, ನಾವು ಯಾವ ರೀತಿಯಲ್ಲಿ ರಣತಂತ್ರ ರೂಪಿಸಿದ್ದೇವೋ ಅದೇ ಪ್ರಕಾರ ಋತುವಿನ ಪ್ರತಿಯೊಂದು ಪಂದ್ಯದಲ್ಲೂ ಕಾರ್ಯರೂಪಕ್ಕೆ ತರಲಿದ್ದೇವೆ,” ಎಂದು ರಂಜಿತ್‌ ಹೇಳಿದರು.

ವಾಲಿಬಾಲ್‌ ಅಭಿಮಾನಿಗಳು ತಮ್ಮ ತಂಡ ಮತ್ತು ಫ್ರಾಂಚೈಸಿಗಳಿಗೆ ಪ್ರೋತ್ಸಾಹ ನೀಡುತ್ತಿರುವ ಬಗ್ಗೆ ಬೆಂಗಳೂರು ಟಾರ್ಪೆಡೊಸ್‌ ತಂಡದ ನಾಯಕ ಮೆಚ್ಚುಗೆ ವ್ಯಕ್ತಪಡಿಸಿದರು.

“ಸಾಮಾಜಿಕ ಜಾಲತಾಣಗಳಲ್ಲಿ ವಾಲಿಬಾಲ್‌ ಅಭಿಮಾನಿಗಳು ಸದಾ ಕಾರ್ಯಶೀಲರಾಗಿದ್ದು ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿರುವುದಕ್ಕೆ ನಾನು ಕೃತಜ್ಞನಾಗಿದ್ದೇನೆ. ಕ್ರೀಡಾಂಗಣದಲ್ಲಿ ಅವರ ಹಾಜರಾತಿ ಇಲ್ಲದಿದ್ದರೂ ಅವರು ಕ್ರೀಡೆಯ ಬಗ್ಗೆ ಮೆಚ್ಚುಗೆ, ಪ್ರೋತ್ಸಾಹ ತೋರುತ್ತಿರುವುದು ಖುಷಿಯ ಸಂಗತಿ. ತಮ್ಮಿಂದ ಹೇಗೆ ಸಾಧ್ಯವೋ ಆ ರೀತಿಯಲ್ಲಿ ಅವರು ತಮ್ಮ ತಂಡಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಅವರ ಈ ಪ್ರೋತ್ಸಾಹಕ್ಕೆ ತುಂಬು ಹೃದಯದ ಧನ್ಯವಾದಗಳು,” ಎಂದು ರಂಜಿತ್‌ ಸಿಂಗ್‌ ಹೇಳಿದರು.

Related Articles