ಏಷ್ಯನ್ ಸ್ಕೇಟಿಂಗ್ ಚಾಂಪಿಯನ್‌ಷಿಪ್, ಮೈಸೂರಿನ ರಿಯಾಗೆ ಕಂಚಿನ ಪದಕ

0
305
ಸ್ಪೋರ್ಟ್ಸ್ ಮೇಲ್ ವರದಿ

ಕೊರಿಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ರೋಲ್ ಸ್ಕೇಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿರುವ ಮೈಸೂರಿನ ರಿಯಾ ಎಲಿಜಬೆತ್ ಅಚಯ್ಯ ಕಂಚಿನ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ.

ಮಹಿಳಾ ಜೂನಿಯರ್ ವಿಭಾಗದ 15,000 ಮೀ. ಎಲಿಮಿನೇಷನ್ ವಿಭಾಗದಲ್ಲಿ28 ನಿಮಿಷ 22.512 ಸೆಕೆಂಡುಗಳಲ್ಲಿ ಗುರಿ ತಲುಪಿದ ರಿಯಾ ಮೂರನೇ ಸ್ಥಾನ ಗಳಿಸಿದರು.  ಚಿನ್ನ ಮತ್ತು ಬೆಳ್ಳಿಯನ್ನು ಕೊರಿಯಾದ ಸ್ಪರ್ಧಿಗಳು ಗೆದ್ದುಕೊಂಡರು.
17 ವರ್ಷದ ರಿಯಾ ಕಳೆದ 13 ವರ್ಷಗಳಿಂದ ಸ್ಕೇಟಿಂಗ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದು ಅವರ ಮೂರನೇ ಅಂತಾರಾಷ್ಟ್ರೀಯ ಸ್ಪರ್ಧೆ. 2016ರ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ  7ನೇ ಸ್ಥಾನ, 2018 ಜುಲೈನಲ್ಲಿ ನೆದರ್ಲೆಂಡ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ  6ನೇ ಸ್ಥಾನ ಗಳಿಸಿದ್ದರು. ಪ್ರಸಿದ್ಧ ಸ್ಕೇಟಿಂಗ್ ತರಬೇತುದಾರ ಮೈಸೂರಿನ ಶ್ರೀಕಾಂತ್ ರಾವ್ ಅವರಲ್ಲಿ ರಿಯಾ ತರಬೇತಿ ಪಡೆಯುತ್ತಿದ್ದಾರೆ.
ಕೆ.ಎನ್. ಅಚಯ್ಯ ಹಾಗೂ ಪ್ರಿಯಾ ಅವರ ಮಗಳಾಗಿರುವ ರಿಯಾ, ಓದಿನಲ್ಲೂ ಉತ್ತಮ ಸಾಧನೆ ಮಾಡಿದ್ದಾರೆ. ಮೈಸೂರಿನ ಮಹಾಜನ್ ಪಿಯು ಕಾಲೇಜಿನಲ್ಲಿ ಓದುತ್ತಿರುವ ರಿಯಾ ಅವರ ಕ್ರೀಡಾ ಬದುಕಿಗಾಗಿಯೇ ಅಚಯ್ಯ ಮಡಿಕೇರಿಯಲ್ಲಿ ಸ್ವಂತ ಉದ್ಯೋಗ ಹೊಂದಿದ್ದರೂ ಮೈಸೂರಿನಲ್ಲಿ ನೆಲೆಸಿದ್ದಾರೆ.
ಮಗಳ ಸಾಧನೆಯ ಬಗ್ಗೆ ಸ್ಪೋರ್ಟ್ಸ್ ಮೇಲ್ ಜತೆ ಮಾತನಾಡಿದ ಅಚಯ್ಯ, ಮೊದಲ ಅಂತಾರಾಷ್ಟ್ರೀಯ ಪದಕ ಖುಷಿ ಕೊಟ್ಟಿದೆ. ಗುರು ಶ್ರೀಕಾಂತ್ ರಾವ್ ಉತ್ತಮ ರೀತಿಯಲ್ಲಿ ತರಬೇತಿ ನೀಡುತ್ತಿದ್ದಾರೆ. ಮೈಸೂರಿನ ವಿಜಯನಗರದಲ್ಲೇ ಅಕಾಡೆಮಿ ಇರುವುದರಿಂದ ಅಭ್ಯಾಸಕ್ಕೆ ಹೆಚ್ಚು ಅನುಕೂಲವಾಯಿತು. ಇದರಿಂದ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಸಾಧ್ಯವಾಯಿತು, ಎಂದರು.
ಮಹಾರಾಷ್ಟ್ರದ ವಿಕ್ರಂ ಕೂಡ ಪುತುಷರ ವಿಭಾದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.