Friday, June 14, 2024

ಪೂವಮ್ಮಗೆ ಮಂಗಳೂರಿನಲ್ಲಿ ನಿವೇಶನ: ಕುಮಾರಸ್ವಾಮಿ

ಸ್ಪೋರ್ಟ್ಸ್ ಮೇಲ್ ವರದಿ

ಹಿಂದಿನ ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆದ್ದಾಗ ಕರ್ನಾಟಕದ ಎಂ.ಆರ್. ಪೂವಮ್ಮ ಅವರಿಗೆ ಅಂದಿನ ಕಾಂಗ್ರೆಸ್ ಸರಕಾರ ನಿವೇಶನ ನೀಡುವುದಾಗಿ ಭರವಸೆಯನ್ನಿತ್ತಿತ್ತು. ಆದರೆ ಐದು ವರ್ಷಗಳ ಅವಧಿ ಮುಗಿದು, ಚುನಾವಣೆ ನಡೆದು ಹೊಸ ಸರಕಾರ ಬಂದರೂ ಆ ಭರವಸೆ ಈಡೇರಲಿಲ್ಲ.

 ಈಗ ಪೂವಮ್ಮ ಜಕಾರ್ತದಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಒಂದು ಚಿನ್ನ ಹಾಗೂ ಒಂದು ಬೆಳ್ಳಿ ಪದಕ ಗೆದ್ದಿದ್ದಾರೆ. ಶುಕ್ರವಾರ ಮಂಗಳೂರಿಗೆ ಆಗಮಿಸಿದ್ದ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರು ಪೂವಮ್ಮಗೆ ಸರಕಾರದ ವತಿಯಿಂದ 40 ಲಕ್ಷ ರೂ.ಗಳ ನಗದು ಬಹುಮಾನ ವಿತರಿಸಿದರು. ಅಲ್ಲದೆ ಮಂಗಳೂರಿನಲ್ಲಿ ನಿವೇಶನ ನೀಡುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಕೂಡಲೇ ನಿವೇಶನ ನೀಡುವುದಾಗಿ ಹೇಳಿದರು.

ಸ್ಪೋರ್ಟ್ಸ್ ಮೇಲ್ ವರದಿ

ಚಾಂಪಿಯನ್ ಪೂವಮ್ಮ ಅವರಿಗೆ ಸೈಟ್ ನೀಡುವುದು ಯಾವಾಗ? ಎಂದು ಸ್ಪೋರ್ಟ್ಸ್ ಮೇಲ್ ಶುಕ್ರವಾರ ಬೆಳಿಗ್ಗೆ ವರದಿ ಮಾಡಿತ್ತು. ಸಾಮಾಜಿಕ ಜಾಲತಾಣಗಳ ಮೂಲಕ ವರದಿ ಮುಖ್ಯಮಂತ್ರಿಗಳನ್ನೂ ಮುಟ್ಟಿತ್ತು.
ಶುಕ್ರವಾರ  ದಕ್ಷಿಣ ಕನ್ನಡ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ
ಮುಖ್ಯಮಂತ್ರಿಗಳು, ಸದ್ಯಕ್ಕೆ ನಗದು ಬಹುಮಾನವನ್ನು ನೀಡಿರುತ್ತೇವೆ. ಬೆಂಗಳೂರಿಗೆ ಹಿಂದಿರುಗಿದ ನಂತರ ಅಧಿಕಾರಿಗಳೊಂದಿಗೆ ಚರ್ಚಿಸಿ, ಮಂಗಳೂರಿನ ಅಧಿಕಾರಿಗಳೊಂದಿಗೆ ಮಾತನಾಡಿ, ಎಲ್ಲಿ ನಿವೇಶನ ಇದೆ ಎಂಬುದನ್ನು ಗಮನಿಸಿ ಪೂವಮ್ಮಗೆ ನೀಡಬೇಕಾಗಿರುವ ನಿವೇಶನ ನೀಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮ ಮುಗಿದ ನಂತರ ಸ್ಪೋರ್ಟ್ಸ್ ಮೇಲ್ ಜತೆ ಮಾತನಾಡಿದ ಪೂವಮ್ಮ, ಸರಕಾರ ಈ ಬಾರಿ ಉತ್ತಮ ರೀತಿಯಲ್ಲಿ ಸ್ಪಂದಿಸಿದೆ, ಇಲ್ಲಿಯ ಜನಪ್ರತಿನಿಧಿಗಳ ಪ್ರೋತ್ಸಾಹ ಉತ್ತಮವಾಗಿತ್ತು. ಮುಖ್ಯಮಂತ್ರಿಗಳು ಅತ್ಯಂತ ಕಾಳಜಿಯಿಂದ, ತಾಳ್ಮೆಯಿಂದ ಮಾತುಗಳನ್ನು ಆಲಿಸಿ ಧನಾತ್ಮಕವಾದ ಪ್ರತಿಕ್ರಿಯೆ ನೀಡಿದ್ದಾರೆ. ಇದು ಮುಂದಿನ ಕ್ರೀಡಾಕೂಟಗಳಲ್ಲಿ ಪದಕ ಗೆಲ್ಲಲು ಸ್ಫೂರ್ತಿಯಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸದ ನಳೀನ್ ಕುಮಾರ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು.

Related Articles