ಸಡಗರದ ಗೇಮ್ಸ್‌ಗೆ ಸಂಭ್ರಮದ ತೆರೆ

0
361
ಏಜೆನ್ಸೀಸ್ ಜಕಾರ್ತ

ಏಷ್ಯನ್ ಗೇಮ್ಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತ 69 ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿತು. ಹದಿನೈದು ದಿನಗಳ ಕಾಲ ನಡೆದ ಕ್ರೀಡಾಕೂಟಕ್ಕೆ ಭಾನುವಾರ ಸಂಜೆ ಅಂತಿಮ ತೆರೆ ಬಿದ್ದಿತು.

ಕೊನೆಯ ದಿನದಲ್ಲಿ ಭಾರತಕ್ಕೆ ಯಾವುದೇ ಸ್ಪರ್ಧೆಯಲ್ಲಿ  ಪಾಲ್ಗೊಳ್ಳುವ ಅವಕಾಶ ಇದ್ದಿರಲಿಲ್ಲ. ಪುರುಷರ ಟ್ರಯಥ್ಲಾನ್‌ ಮಾತ್ರ ಕೊನೆಯ ದಿನದ ಸ್ಪರ್ಧೆಯಾಗಿತ್ತು. ಭಾರತ ಹಾಕಿ ತಂಡದ ನಾಯಕಿ ರಾಣಿ ರಾಮ್‌ಪಾಲ್ ರಾಷ್ಟ್ರ ಧ್ವಜವನ್ನು ಹಿಡಿದು ಸಮಾರೋಪ ಸಮಾರಂಭದಲ್ಲಿ ತಂಡವನ್ನು ಮುನ್ನಡೆಸಿದರು. ಸುಡುಮದ್ದುಗಳ ಸಡಗರ, ಹಾಡಿನ ಇಂಪು ಇವುಗಳೊಂದಿಗೆ ಇಂಡೋನೇಷ್ಯಾದ ಸಾಂಸ್ಕೃತಿಕ ಜಗತ್ತು ಅನಾವರಣಗೊಂಡಿತು.
ಇಸೈನಾ ಸರಸ್ವತಿ, ಇಕಾನ್, ರಾನ್, ದೆನಡಾ. ಗಿಗಿ, ದಿರಾ ಸುಗಂದಿ ಸೇರಿದಂತೆ ಖ್ಯಾತ ನಾಮರು ಹಾಡು ಕುಣಿಗಳ ಮೂಲಕ ಮುಕ್ತಾಯ ಸಮಾರಂಭಕ್ಕೆ ರಂಗು ನೀಡಿದರು. 28 ರಾಷ್ಟ್ರಗಳ ಕ್ರೀಡಾಪಟುಗಳು 465 ಚಿನ್ನದ ಪದಕಗಳನ್ನು ಗೆದ್ದುಕೊಂಡರು. ಪಾಲ್ಗೊಂಡಿದ್ದ 45 ರಾಷ್ಟ್ರಗಳ ಪೈಕಿ 37 ರಾಷ್ಟ್ರಗಳು ಪದಕಗಳನ್ನು ಗೆದ್ದವು. 132 ಚಿನ್ನದ ಪದಕಗಳನ್ನು ಗೆದ್ದುಕೊಂಡ ಚೀನಾ ಅಗ್ರ ಸ್ಥಾನ ಪಡೆಯಿತು.
ಜಪಾನಿನ ಯುವ ಈಜುಗಾರ್ತಿ ರಿಕಾಕೊ ಐಕೀ ಈ ಬಾರಿಯ ಏಷ್ಯನ್ ಗೇಮ್ಸ್‌ನ ಶ್ರೇಷ್ಠ ಅಥ್ಲೀಟ್ ಗೌರವಕ್ಕೆ ಪಾತ್ರರಾದರು. ಜಕಾರ್ತದಲ್ಲಿ ಐಕೀ 6 ಚಿನ್ನದ ಪದಕಗಳನ್ನು ಗೆದ್ದು ಇತಿಹಾಸ ಬರೆದರು. 2022ರ ಏಷ್ಯನ್ ಗೇಮ್ಸ್ ಆತಿಥ್ಯ ವಹಿಸಲಿರುವ ಚೀನಾಕ್ಕೆ ಏಷ್ಯನ್ ಒಲಿಂಪಿಕ್ಸ್ ಧ್ವಜವನ್ನು ಹಸ್ತಾಂತರಿಸಲಾಯಿತು.