ಸೋಮಶೇಖರ್ ಪಡುಕರೆ, sportsmail:
ಮೊನ್ನೆ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹರಾಜಿನಲ್ಲಿ ಆಂಧ್ರಪ್ರದೇಶದ ಆರಂಭಿಕ ಆಟಗಾರ ಅಶ್ವಿನ್ ಹೆಬ್ಬಾರ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾದರು. ಆಂಧ್ರಪ್ರದೇಶದ ಆಟಗಾರನಾಗಿರುತ್ತಿದ್ದರೆ ಅಶ್ವಿನ್ ಬಗ್ಗೆ ಅಷ್ಟು ಕುತೂಹಲ ಮೂಡುತ್ತಿರಲಿಲ್ಲ. ಆದರೆ ಸಿ.ಕೆ. ನಾಯ್ಡು ಟ್ರೋಫಿಯಲ್ಲಿ ಕರ್ನಾಟಕದ ವಿರುದ್ಧವೇ ಶತಕ ಸಿಡಿಸಿದ ಈ ಆರಂಭಿಕ ಆಟಗಾರನ ಹೆಸರಿನ ಮೊದಲಿರುವ ಊರು ಮತ್ತು ಹೆಸರಿನ ಕೊನೆಯಲ್ಲಿರುವ ಸರ್‌ನೇಮ್ ನಿಜವಾಗಿಯೂ ಕುತೂಹಲವನ್ನು ಕೆರಳಿಸಿತು.
ಆಂಧ್ರದ ಆಟಗಾರ…ಆದರೆ ಹೆಬ್ಬಾರ್… ಹೆಸರಿನ ಮೊದಲು ಕಟ್ಟಿಂಗೇರಿ!!. ಆಂಧ್ರಪ್ರದೇಶ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಅರುಣ್ ಕುಮಾರ್ ಅವರನ್ನು ಸಂಪರ್ಕಿಸಿ ದೂರವಾಣಿ ಸಂಖ್ಯೆ ತೆಗೆದುಕೊಂಡು ಅಶ್ವಿನ್ ಜೊತೆ ಮಾತಿಗಿಳಿದಾಗ ಅವರು ಉಡುಪಿ ಜಿಲ್ಲೆಯ ಕಟ್ಟಿಂಗೇರಿಯವರು ಎಂದು ತಿಳಿದಾಗ ಖುಷಿ.
ಸದ್ಯ ಆಂಧ್ರದ ನೆಲ್ಲೂರಿನಲ್ಲಿ ನೆಲೆಸಿರುವ ರಾಜ್‌ಗಿರಿ ಹೆಬ್ಬಾರ್ ಮತ್ತು ನಳಿನಿ ಹೆಬ್ಬಾರ್ ಅವರ ಎರಡನೇ ಮಗ ಅಶ್ವಿನ್ ಹೆಬ್ಬಾರ್. ತುಳು ಚೆನ್ನಾಗಿ ಮಾತನಾಡುತ್ತಾರೆ. “ನಮ್ಮ ತಂದೆ ಸಾಗರ ಜೀವವಿಜ್ಞಾನಿ, ತಾಯಿ ನಳಿನಿ ಹೆಬ್ಬಾರ್ ಮೂಲತಃ ಕೇರಳದ ತ್ರಿಶೂರ್‌ನವರು. ತಂದೆಯವರು ಉದ್ಯೋಗ ನಿಮಿತ್ತ ಇಲ್ಲಿಗೆ ವಲಸೆ ಬಂದು ಬಹಳ ವರುಷ ಕಳೆದಿದೆ, ಈಗ ಅವರು ನಿವೃತ್ತರಾಗಿದ್ದಾರೆ. ನಮ್ಮ ಕುಟುಂಬದ ಹೆಚ್ಚಿನವರು ಮಂಗಳೂರಿನಲ್ಲಿದ್ದಾರೆ. ಆಗಾಗ ಬಂದು ಹೋಗುತ್ತೇವೆ,” ಎಂದು ಅಶ್ವಿನ್ ನುಡಿದರು.
ಜೂನಿಯರ್ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ ಅಶ್ವಿನ್ ಹೆಬ್ಬಾರ್ ಕರ್ನಾಟಕ ವಿರುದ್ಧದ ಸಿಕೆ ನಾಯ್ಡು ಪಂದ್ಯದಲ್ಲಿ ಶತಕ ಸಿಡಿಸಿ ತಂಡಕ್ಕೆ ಆಧಾರವಾಗಿದ್ದರು. ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ನಾಲ್ಕನೇ ಆಟಗಾರ. ಅದರಲ್ಲಿ ಒಂದು ಶತಕ ಹಾಗೂ ಒಂದು ಅರ್ಧ ಶತಕ ಸೇರಿತ್ತು. 2016ರಲ್ಲಿ ರಣಜಿ ಕ್ರಿಕೆಟ್‌ಗೆ ಆಂಧ್ರದ ಪರ ಕಾಲಿಟ್ಟಾಗಿನಿಂದ ಅಶ್ವಿನ್ ಆರಂಭಿಕ ಆಟಗಾರನಾಗಿ ಸ್ಥಿರ ಪ್ರದರ್ಶನ ತೋರುತ್ತಿದ್ದಾರೆ. ಹರಿಯಾಣ ವಿರುದ್ಧ ಬರೋಡದಲ್ಲಿ ನಡೆದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕೇವಲ 53 ಎಸೆತಗಳಲ್ಲಿ ಔಟಾಗದೆ ಗಳಿಸಿದ 103ರನ್ ಬಿಸಿಸಿಐನ ಹಿರಿಯ ಆಟಗಾರರ ಗಮನ ಸೆಳೆಯಿತು.
ಹರ್ಷಲ್ ಪಟೇಲ್, ಯಜುವೇಂದ್ರ ಚಹಾಲ್ ಹಾಗೂ ಮೋಹಿತ್ ಶರ್ಮಾ ಅವರ ಬೌಲಿಂಗ್ ದಾಳಿಗೆ ದಿಟ್ಟ ಉತ್ತರ ನೀಡಿದ ಹೆಬ್ಬಾರ್, ಅವರ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಹಾಗೂ 2 ಸಿಕ್ಸರ್ ಸೇರಿತ್ತು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 680ರನ್ ಗಳಿಸಿರುವ ಹೆಬ್ಬಾರ್ ಲಿಸ್ಟ್ ಎ ಪಂದ್ಯಗಳಲ್ಲಿ ಒಂದು ಶತಕ ಮತ್ತು ನಾಲ್ಕು ಅರ್ಧ ಶತಕ ಸೇರಿ 1023 ರನ್ ಗಳಿಸಿರುತ್ತಾರೆ. ಟಿ20 ಕ್ರಿಕೆಟ್‌ನ 36 ಇನ್ನಿಂಗ್ಸ್‌ಗಳಲ್ಲಿ 1117ರನ್ ಗಳಿಸಿರುವ ಹೆಬ್ಬಾರ್ ಅವರ ಸಾಧನೆಯಲ್ಲಿ ಒಂದು ಶತಕ ಹಾಗೂ ಏಳು ಅರ್ಧ ಶತಕ ಸೇರಿದೆ. ಮಧ್ಯಮವೇಗದ ಬೌಲರ್ ಆಗಿರುವ ಅಶ್ವಿನ್ ಟಿ20 ಕ್ರಿಕೆಟ್‌ಗೆ ಅಗತ್ಯವಿರುವ ಆಲ್ರೌಂಡರ್.
ನೆಲ್ಲೂರಿನಲ್ಲಿ 2006 ರಲ್ಲಿ ನಡೆದ ಕ್ರಿಕೆಟ್ ಶಿಬಿರವೊಂದರಲ್ಲಿ ಪಾಲ್ಗೊಂಡು ಕ್ರಿಕೆಟ್ ಬದುಕಿಗೆ ಕಾಲಿಟ್ಟ ಅಶ್ವಿನ್ ಹೆಬ್ಬಾರ್ ಆಂಧ್ರಪ್ರದೇಶದ 13 ಮತ್ತು 23 ವಯೋಮಿತಿಯ ತಂಡದ ನಾಯಕನಾಗಿ ಮಿಂಚಿದ್ದರು. ಯಾವಾಗಲೂ ಶತಕ ಅಥವಾ ಅರ್ಧ ಶತದಕ ಮೂಲಕ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳುವ ಹೆಬ್ಬಾರ್ ಯಾವುದೇ ಪ್ರಭಾವದ ಮೂಲಕ ತಂಡದಲ್ಲಿ ಸ್ಥಾನ ಪಡೆದವರಲ್ಲ. ಚಿಕ್ಕಂದಿನಿಂದಲೂ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಎಂಎಸ್‌ಕೆ ಪ್ರಸಾದ್ ಅವರ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಹೆಬ್ಬಾರ್ ತನ್ನ ಸಾಧನೆಯಲ್ಲಿ ಪ್ರಸಾದ್ ಅವರ ಪಾತ್ರ ಪ್ರಮುಖವಾಗಿದೆ ಎನ್ನುತ್ತಾರೆ.
“ಪ್ರಸಾದ್ ಸರ್ ಅವರ ಅಕಾಡೆಮಿ ಸೇರದೇ ಇರುತ್ತಿದ್ದರೆ ನಾನಿಂದು ಈ ಹಂತವನ್ನು ತಲುಪಲು ಆಗುತ್ತಿರಲಿಲ್ಲ. ಏಕೆಂದರೆ ಅವರ ತರಬೇತಿಯ ಕ್ರಮ ಅಷ್ಟು ಪರಿಣಾಮಕಾರಿ,” ಎನ್ನುತ್ತಾರೆ ಅಶ್ವಿನ್.
ನಿರಂತರ ಪ್ರದರ್ಶನ ತೋರುತ್ತಿರುವ ಅಶ್ವಿನ್ ಈ ಬಾರಿಯ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಂಧ್ರ ತಂಡದ ನಾಯಕತ್ವ ವಹಿಸಿದರು.
ಕ್ರಿಕೆಟ್‌ಗಾಗಿ ಓದುವುದನ್ನೇ ಬಿಟ್ಟೆ!!!
ನಿಮ್ಮಲ್ಲಿ ಆತ್ಮವಿಶ್ವಾಸ ಇದೆ ಎಂದಾದರೆ ಯಾವುದೇ ಉತ್ತಮ ತೀರ್ಮಾನವನ್ನು ಕೈಗೊಳ್ಳಲು ಅಡ್ಡಿ ಆತಂಕಗಳು ಎದುರಾಗುವುದಿಲ್ಲ. ಅಶ್ವಿನ್ ಹೆಬ್ಬಾರ್ ಓದಿರುವುದು ದ್ವಿತೀಯ ಪಿಯುಸಿ, ಆದರೆ ಕ್ರಿಕೆಟ್‌ನ ಮೇಲೆ ಹೆಚ್ಚಿನ ಗಮನ ಹರಿಸಿಸ ವೃತ್ತಿಪರ ಕ್ರಿಕೆಟಿಗರಾಗಬೇಕೆಂಬ ಹಂಬಲದಿಂದ ಅವರು ಕಾಲೇಜು ಶಿಕ್ಷಣಕ್ಕೆ ಮನಸ್ಸು ಮಾಡಲಿಲ್ಲ. ಹಿರಿಯ ಅಣ್ಣ ತಂದೆಯಂತೆ ಮೆರಿನ್ ಎಂಜಿನಿಯರ್ ಆಗಿದ್ದರೂ ಅಶ್ವಿನ್ ಕ್ರಿಕೆಟ್ ಮೂಲಕ ಬದುಕು ರೂಪಿಸಿಕೊಳ್ಳಲು ತೀರ್ಮಾನಿಸಿದರು. “ಪ್ರತಿಯೊಂದು ವೃತ್ತಿಯಲ್ಲೂ ಸವಾಲುಗಳಿರುತ್ತವೆ. ಕ್ರಿಕೆಟ್ ನನ್ನ ಪಾಲಿನ ಉದ್ಯೋಗ ಹಾಗೂ ಬದುಕು ಕೂಡ. ಆರಂಭದಲ್ಲಿ ತಂದೆಯವರು ಆಸಕ್ತಿ ತೋರಲಿಲ್ಲ. ಆದರೆ ಅಂಗಣಲ್ಲಿ ನನ್ನ ಆಟವನ್ನು ನೋಡಿ, ಕ್ರಿಕೆಟ್‌ಗೆ ಜಗತ್ತಿನಲ್ಲಿ ಸಿಗುತ್ತಿರುವ ಸ್ಥಾನ ಮಾನವನ್ನು ಗಮನಿಸಿ ಕೊನೆಯಲ್ಲಿ ಒಪ್ಪಿಗೆ ಸೂಚಿಸಿದರು. ಈಗ ನನಗೆ ಬದುಕೆಂದರೆ ಕ್ರಿಕೆಟ್ ಆಗಿದೆ ಎಂದು ಹೇಳುವ ಅಶ್ವಿನ್ ಹೆಬ್ಬಾರ್ ಅವರ ಮಾತಿನಲ್ಲಿ ಆತ್ಮವಿಶ್ವಾಸ ಮನೆ ಮಾಡಿತ್ತು.
ಡೆಲ್ಲಿ ಕ್ಯಾಪಿಟಲ್ಸ್‌ಗೆ ಧನ್ಯವಾದಗಳು:
ಇತ್ತೀಚಿಗೆ ನಡೆದ ಐಪಿಎಲ್ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಅಶ್ವಿನ್ ಅವರನ್ನು ಮೂಲ ಬೆಲೆ 20ಲಕ್ಷ ರೂ.ಗಳಿಗೆ ಖರೀದಿಸಿದೆ. ಇಲ್ಲಿ ಹಣ ಮುಖ್ಯವಲ್ಲಿ, ನನ್ನನ್ನು ಗುರುತಿಸಿ ಆಯ್ಕೆ ಮಾಡಿದ್ದು ಮುಖ್ಯ ಎನ್ನುತ್ತಾರೆ ಅಶ್ವಿನ್. “ಅದೆಷ್ಟೋ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಆಟಗಾರರು ಖರೀದಿ ಆಗಿಲ್ಲ. ಆದರೆ ನನ್ನ ಮೇಲೆ ನಂಬಿಕೆ ಇಟ್ಟು ಡೆಲ್ಲಿ ಕ್ಯಾಪಿಟಲ್ಸ್ ಖರೀದಿ ಮಾಡಿದೆ. ಇಲ್ಲಿ ಟಿ20 ಕ್ರಿಕೆಟ್‌ನಲ್ಲಿ ತೋರಿದ ಸಾಧನೆಯೇ ಪ್ರಮುಖವಾಗಿರುತ್ತದೆ. ಅವಕಾಶ ಸಿಕ್ಕಾಗ ಉತ್ತಮ ಪ್ರದರ್ಶನ ತೋರುತ್ತೇನೆಂಬ ನಂಬಿಕೆ ಇದೆ, ಮುಂದಿನ ಹರಾಜಿನಲ್ಲಿ ಉತ್ತಮ ಬೆಲೆ ಸಿಗುವಂತೆ ಆಟವಾಡುವೆ,” ಎಂದು ಅಶ್ವಿನ್ ಹೇಳಿದರು.
ಎಬಿಡಿ ಫೇವರಿಟ್ ಆಟಗಾರ:
ಜಗತ್ತಿನ ಆಟಗಾರರಲ್ಲಿ ತಮಗೆ ಯಾರು ಮಾದರಿ ಎಂದು ಕೇಳಿದಕ್ಕೆ ಅಶ್ವಿನ್, “ಕ್ರಿಕೆಟ್‌ನ ಮಾಡೆಲ್‌ಗಳು ಈಗ ಋತುವಿನಿಂದ ಋತುವಿಗೆ ಬದಲಾಗುತ್ತಿರುತ್ತದೆ, ಆದರೆ ನನ್ನ ಪಾಲಿಗೆ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಮಾದರಿ. ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್ ಕೂಡ. ಭಾರತದ ಆಟಗಾರರಲ್ಲಿ ರೋಹಿತ್ ಶರ್ಮಾ ಅವರ ಆಟ ಇಷ್ಟ,” ಎಂದರು.
ವೇಗದ ಬೌಲರ್‌ಗಳ ದಂಡಿಸುವೆ!!
26 ವರ್ಷದ ಅಶ್ವಿನ್ ಹೆಬ್ಬಾರ್ ನಾಚಿಕೆ ಸ್ವಭಾವದ ವ್ಯಕ್ತಿ, ಆದರೆ ಅಂಗಣಕ್ಕಿಳಿದರೆ ಅಬ್ಬರದ ಆಟಗಾರ. ಗಂಟೆಗೆ 140 ಕಿಮೀ ವೇಗದಲ್ಲಿ ಬೌಲಿಂಗ್ ಮಾಡುವ ಬೌಲರ್‌ಗಳ ಬೆವರಿಳಿಸುವ ಸಾಮರ್ಥ್ಯ ಹೊಂದಿರುವ ಆಟಗಾರ. ಕಳೆದ ಎರಡು ವರ್ಷಗಳಿಂದ ಎಂಎಸ್‌ಕೆ ಪ್ರಸಾದ್ ಅವರು ವೈಯಕ್ತಿಕ ತರಬೇತಿ ನೀಡುತ್ತಿದ್ದಾರೆ. ಇದರಿಂದ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರಲು ಸಾಧ್ಯವಾಯಿತು ಎನ್ನುತ್ತಾರೆ ಅಶ್ವಿನ್.
ಕಟ್ಟಿಂಗೇರಿ ಎಂದಾಗ ನಮಗೆ ಮೊದಲು ನೆನಪಾಗುವುದು ಖ್ಯಾತ ಕಲಾವಿದ ಕಟ್ಟಿಂಗೇರಿ ಕೃಷ್ಣ ಹೆಬ್ಬಾರ್. ಈಗ ಕಟ್ಟಿಂಗೇರಿಯ ಅಶ್ವಿನ್ ಹೆಬ್ಬಾರ್ ಐಪಿಎಲ್‌ನಲ್ಲಿ ಡೆಲ್ಲಿ ಪರ ಮಿಂಚಿ, ರಣಜಿಯಲ್ಲಿ ಶತಕಗಳನ್ನು ಸಿಡಿಸಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆಯಲಿ ಎಂಬದೇ ಹಾರೈಕೆ. “ಮನೆ ಆಂಧ್ರವಾದರೂ …ಮನಸ್ಸು ಕಟ್ಟಿಂಗೇರಿ,” ಎನ್ನುತ್ತಾರೆ ಅಶ್ವಿನ್ ಹೆಬ್ಬಾರ್