Saturday, July 27, 2024

ಅಕ್ಷಯ್‌ ಕರ್ನೆವಾರ್‌: 4 – 4 – ೦- 2 ವಿಶ್ವ ದಾಖಲೆ

 ಸೋಮಶೇಖರ್‌ ಪಡುಕರೆ, SportsMail

4-4-0-2 ಇದು ವಿದರ್ಭ ಕ್ರಿಕೆಟ್‌ ತಂಡದ ಸ್ಪಿನ್‌ ಬೌಲರ್‌ ಅಕ್ಷಯ್‌ ಕರ್ನೇವಾರ್‌ ಮಣಿಪುರ ವಿರುದ್ಧ ನಡೆದ ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಪಂದ್ಯದಲ್ಲಿ ಮಾಡಿದ ಬೌಲಿಂಗ್‌ ಸಾಧನೆ. ಇದುವರೆಗೂ ಟಿ20 ಕ್ರಿಕೆಟ್‌ನ ಯಾವುದೇ ಹಂತದ ಪಂದ್ಯದಲ್ಲೂ ಈ ದಾಖಲೆಯನ್ನು ಯಾರೂ ಮಾಡಿಲ್ಲ. ಇದು ಕ್ರಿಕೆಟ್‌ ವಿಶ್ವ ದಾಖಲೆಯಾಗಿದೆ.

 

2018ರಲ್ಲಿ ಪಾಕಿಸ್ತಾನದ ಬೌಲರ್‌ ಮೊಹಮ್ಮದ್‌ ಇರ್ಫಾನ್‌ ಕೆರೆಬಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ 4-3-1-2 ಸಾಧನೆ ಮಾಡಿದ್ದರು. ಆದರೆ ಅಕ್ಷಯ್‌ ಸಾಧನೆ ಟಿ20 ಕ್ರಿಕೆಟ್‌ನಲ್ಲಿ ಹೊಸ ಮೈಲಿಗಲ್ಲು.

ಬಲ ಮತ್ತು ಎಡಗೈಗಳಲ್ಲಿ ಬೌಲಿಂಗ್‌ ಮಾಡುವ ಸಾಮರ್ಥ್ಯ ಹೊಂದಿರುವ ಅಕ್ಷಯ್‌ ಮಂಗಳವಾರ ಸಿಕ್ಕಿಂ ವಿರುದ್ಧ ನಡೆದ ಪಂದ್ಯದಲ್ಲಿ 4-1-5-4 ಸಾಧನೆ ಮಾಡಿದ್ದಾರೆ. ಆದರೆ ಸೋಮವಾರ ಅವರು ಶೂನ್ಯ ರನ್‌ ನೀಡಿ ಎರಡು ವಿಕೆಟ್‌ ಗಳಿಸಿರುವುದು ಕ್ರಿಕೆಟ್‌ ಜಗತ್ತಿನಲ್ಲೇ ಅಚ್ಚರಿಯ ಹೊಸ ಅಲೆಯನ್ನು ಎಬ್ಬಿಸಿದೆ.

ಹಳ್ಳಿಯ ಪ್ರತಿಭೆ:

ಮಂಗಳವಾರ ಅಕ್ಷಯ್‌ ಜತೆ ಮಾತನಾಡುವ ಅವಕಾಶ ಸಿಕ್ಕಿತು. ಕರ್ನಾಟಕದ ಮಾಜಿ ಆಟಗಾರ ಗಣೇಶ್‌ ಸತೀಶ್‌ ಅವರಿಂದ ಇದು ಸಾಧ್ಯವಾಯಿತು. ರಾಜ್ಯದ ಪ್ರತಿಭಾವಂತ ಕ್ರಿಕೆಟಿಗ ಗಣೇಶ್‌ ಸತೀಶ್‌ ಈಗ ವಿದರ್ಭ ಪರ ಆಡುತ್ತಿದ್ದಾರೆ.

ಮಹಾರಾಷ್ಟ್ರದ ಯವತ್ಮಾಲ್‌ ಜಿಲ್ಲೆಯ ಪಂಡರ್ಕಾವಾಡದ ಗ್ರಾಮಕ್ಕೆ ಸೇರಿದ ಅಕ್ಷಯ್‌ ಕರ್ನೇವಾರ್‌ ಅವರ ತಂದೆ ಕಿಸಾನ್‌ ಸರಕಾರಿ ಬಸ್‌ ಚಾಲಕ. ತಾಯಿ ವಂದನ. ಚಿಕ್ಕಂದಿನಲ್ಲೇ ಕ್ರಿಕೆಟ್‌ನಲ್ಲಿ ತೊಡಗಿಕೊಂಡಿದ್ದ ಅಕ್ಷಯ್‌ ಸ್ಪಿನ್‌ ಬೌಲರ್‌ ಆಗಿದ್ದು, ಎರಡೂ ಕೈಗಳಿಂದಲೂ ಚೆಂಡನ್ನು ಸ್ಪಿನ್‌ ಮಾಡುವ ಕೌಶಲ್ಯವನ್ನು ಹೊಂದಿದ್ದು, ವಿದರ್ಭ ತಂಡದ ಯಶಸ್ಸಿನಲ್ಲಿ ಅವರ ಪಾತ್ರ ಪ್ರಮುಖವಾಗಿದೆ.

ದಾಖಲೆ ಬಗ್ಗೆ ಅರಿವಿರಲಿಲ್ಲ:

“ನಾನು ಮೂರು ಓವರ್‌ಗಳನ್ನು ಎಸೆದಿದ್ದೆ, ದಾಖಲೆ ಬಗ್ಗೆ ಅರಿವಿರಲಿಲ್ಲ. ನಮ್ಮ ತಂಡದಲ್ಲಿ ಯಾರೋ ಈ ಬಗ್ಗೆ ತಂಡದ ನಾಯಕರಿಗೆ ಮಾಹಿತಿ ನೀಡಿ ಇನ್ನೊಂದು ಓವರ್‌ ಮೇಡನ್‌ ಮಾಡಿದರೆ ದಾಖಲೆ ಆಗುತ್ತದೆ ಎಂದು ತಿಳಿಸಿದರಂತೆ, ಇದರಿಂದಾಗಿ ನನಗೆ ನಾಲ್ಕನೇ ಓವರ್‌ ಸಿಕ್ಕಿತು. ನನಗೆ ಈಗಲೂ ನಂಬಲಾಗುತ್ತಿಲ್ಲ, ನಾಲ್ಕೂ ಓವರ್‌ಗಳಲ್ಲಿ ಬ್ಯಾಟ್ಸ್‌ಮನ್‌ ರನ್‌ ಯಾಕೆ ರನ್‌ ಗಳಿಸಲಿಲ್ಲ ಎಂದು. ನನ್ನ ಬೌಲಿಂಗ್‌ನಲ್ಲಿ ನಿಖರತೆ ಇದೆ, ಯಾವಾಗಲೂ ನಾವು ವಿಕೆಟ್‌ ಮೇಲೆಯೇ ಗಮನ ಇಟ್ಟು ಬೌಲಿಂಗ್‌ ಮಾಡುತ್ತೇನೆಯೇ ವಿನಃ ವೈಡ್‌ ಅಥವಾ ನೋಬಾಲ್‌ ಎಸೆಯುವುದಿಲ್ಲ. ಈ ಯಶಸ್ಸು ನನ್ನ ಬದುಕಿಗೆ ತಿರುವು ನೀಡಲಿದೆ ಎಂಬ ನಂಬಿಕೆ, ಏಕೆಂದರೆ ನನ್ನ ಕ್ರಿಕೆಟ್‌ ಬದುಕಿನ ಹಾದಿ ಅಷ್ಟು ಸುಲಭವಾಗಿಲ್ಲ. ನಿರಂತರ ಶ್ರಮ ಇದೆ,”  ಎಂದು ವಿಜಯವಾಡದಿಂದ ಅಕ್ಷಯ್‌ ಮಾತನಾಡಿದರು.

 

ವಿದರ್ಭ ತಂಡ ರಣಜಿ ಚಾಂಪಿಯನ್‌ ಪಟ್ಟ ಗೆಲ್ಲುವಲ್ಲಿ ಕರ್ನಾಟಕದ ಆಟಗಾರ ಗಣೇಶ್‌ ಸತೀಶ್‌ ಅವರ ಬ್ಯಾಟಿಂಗ್‌ ಪ್ರಮುಖ ಕಾರಣವಾಗಿತ್ತು. ತಂಡದ ಪ್ರತಿಯೊಬ್ಬ ಆಟಗಾರನೂ ಗಣೇಶ್‌ ಅವರ ಬ್ಯಾಟಿಂಗ್‌ ಮಾತ್ರವಲ್ಲ ಅವರ ಸರಳತೆಯ ಬಗ್ಗೆ ಅಂದು ಮಾತನಾಡಿದ್ದರು. ಮಂಗಳವಾರ ಅಕ್ಷಯ್‌ ಕೂಡ ಕನ್ನಡಿಗನ ಬಗ್ಗೆ ಮೆಚ್ಚುಗೆಯ ಮಾತನಾಡಿದರು. “ಅಷ್ಟೊಳ್ಳೆ ಆಟಗಾರ ಕರ್ನಾಟಕ ತಂಡವನ್ನು ಯಾಕೆ ಬಿಡಬೇಕಾದ ತೀರ್ಮಾನ ಕೈಗೊಂಡರೋ ಗೊತ್ತಿಲ್ಲ. ಉತ್ತಮ ಬ್ಯಾಟ್ಸ್ಮನ್‌ ಮಾತ್ರವಲ್ಲ, ಉತ್ತಮ ಗುಣವಂತ. ಅವರು ಅಷ್ಟು ಸರಳವಾಗಿರಲು ಕಾರಣವೇನೆಂಬುದು ಅವರ ಮನೆಗೆ ಹೋದಾಗ ತಿಳಿಯಿತು,” ಎಂದು ಅಕ್ಷಯ್‌ ತಮ್ಮ ತಂಡದ ಸಹ ಆಟಗಾರ ಕನ್ನಡಿಗ ಗಣೇಶ್‌ ಸತೀಶ್‌ ಬಗ್ಗೆ ಮಾತನಾಡಿದ್ದಾರೆ.

ಅಕ್ಷಯ್‌ ಕರ್ನೆವಾರ್‌ ಕೇವಲ ರಣಜಿಯಲ್ಲಿ ಮಾತ್ರವಲ್ಲ, ಭಾರತ ತಂಡದಲ್ಲೂ ಮಿಂಚುವ ಅವಕಾಶ ಸಿಗಲಿ ಎಂಬುದೇ ಹಾರೈಕೆ.

Related Articles