Saturday, July 27, 2024

ಕೆಪಿಎಲ್‌ಗೆ ಕಾಲಿಟ್ಟ ಅಭಿಲಾಶ್ ಶೆಟ್ಟಿ

ಸ್ಪೋರ್ಟ್ಸ್ ಮೇಲ್ ವರದಿ 

ಕೋಟ…..ಇದು ಪ್ರತಿಭೆಗಳ ಊರು. ಯಾವುದೇ ಕ್ಷೇತ್ರದಲ್ಲಿ ತೊಡಗಿಸಿಕೊಂಡರೂ ಅಲ್ಲಿ ತಮ್ಮದೇ ಆದ ಛಾಪು ಮೂಡಿಸುವುದು ಇಲ್ಲಿಯ ಯುವ ಪ್ರತಿಭೆಗಳ ಗುಣ. ಈ ಸಾಲಿನಲ್ಲಿ ಸೇರಿದ್ದಾರೆ ಯುವ  ಪ್ರತಿಭಾವಂತ ಕ್ರಿಕೆಟಿಗ  ಕೋಟದ ಗಿಳಿಯಾರಿನ ಅಭಿಲಾಶ್ ಶೆಟ್ಟಿ. ಪ್ರಸಕ್ತ ನಡೆಯುತ್ತಿರುವ ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಶಿವಮೊಗ್ಗ ಲಯನ್ಸ್ ಪರ ಆಡುವ ಮೂಲಕ ಅಭಿಲಾಶ್ ಶೆಟ್ಟಿ ವೃತ್ತಿಪರ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು.

ಹೊಟೇಲ್ ಉದ್ಯೋಗ ಮಾಡಿಕೊಂಡಿರುವ ಗಿಳಿಯಾರಿನ ರಾಮ ಶೆಟ್ಟಿ ಹಾಗೂ ಗುಣರತ್ನ ಅವರ ಪುತ್ರ ಅಭಿಲಾಶ್ ಶಿಸ್ತಿನ ಆಲ್ರೌಂಡರ್, ಲೀಗ್‌ಗಳಲ್ಲಿ ಮಿಂಚಿದ ಅಭಿಲಾಶ್‌ಗೆ  ಈ ಬಾರಿ ಕರ್ನಾಟಕ ಪ್ರೀಮಿಯರ್ ಲೀಗ್ ನಲ್ಲಿ  ಆಡುವ ಅವಕಾಶ ಸಿಕ್ಕಿತು. ಹುಬ್ಬಳ್ಳಿಯಲ್ಲಿ ನಡೆದ ಹುಬ್ಬಳ್ಳಿ ಟೈಗರ್ಸ್ ವಿರುದ್ಧದ ಪಂದ್ಯದಲ್ಲಿ ಕರಾವಳಿಯ  ಈ ಪ್ರತಿಭೆ ಪಾದಾರ್ಪಣೆ ಮಾಡುವ ಅವಕಾಶ ಸಿಕ್ಕಿತು. ಮೊದಲ ಎರಡು ಓವರ್‌ಗಳಲ್ಲಿ ಉತ್ತಮ ಬೌಲಿಂಗ್ ಮಾಡಿದ ಅಭಿಲಾಶ್ ಶೆಟ್ಟಿ, ಕೊನೆಯ ಎರಡು ಓವರ್‌ಗಳಲ್ಲಿ ವಿನಯ್ ಕುಮಾರ್ ಅನಭವಕ್ಕೆ ಬೆಲೆ ಕೊಡಬೇಕಾಯಿತು. ಮೈಸೂರಿನಲ್ಲಿ ನಡೆದ ಪಂದ್ಯದಲ್ಲಿ ಅದ್ಭುತ ನಾಲ್ಕು ಕ್ಯಾಚ್ ಕಬಳಿಸಿದ ಅಭಿಲಾಶ್ ಅದಕ್ಕಾಗಿಯೇ ವಿಶೇಷ ಪುರಸ್ಕಾರಕ್ಕೆ ಭಾಜನರಾದರು. ೨ ಓವರ್ ಗಳಲ್ಲಿ ಕೇವಲ ೧೧ ರನ್ ನೀಡಿದರು.
ಕೋಟ ವಿವೇಕ್ ಹೈಸ್ಕೂಲ್‌ನಲ್ಲಿ ಶಿಕ್ಷಣ ಮುಗಿಸಿದ ಅಭಿಲಾಶ್ ನಂತರ ಮೂಡಬಿದಿರೆಯ ಆಳ್ವಾಸ್‌ನಲ್ಲಿ ಪಿಯುಸಿಗೆ ಸೇರಿಕೊಂಡರು. ಅಲ್ಲಿ ಡಾ. ಮೋಹನ್ ಆಳ್ವಾ ಅವರು ಉತ್ತಮ ರೀತಿಯ ಪ್ರೋತ್ಸಾಹ ನೀಡಿದುದರ ಪರಿಣಾಮ ರಾಜ್ಯದ ಲೀಗ್ ಪಂದ್ಯಗಳಲ್ಲಿ ಆಡಲು ಸಾಧ್ಯವಾಯಿತು. ಹೆರಾನ್ಸ್, ಜ್ಯುಪಿಟರ್ ಪರ ಆಡಿದ ಅಭಿಲಾಶ್ ಉತ್ತಮ ಆಲ್ರೌಂಡರ್. ರಾಜ್ಯ ಅಂಡರ್ ೧೯ ತಂಡದಲ್ಲಿ ಆಡಿರುವ ಅಭಿಲಾಶ್ ರಾಜ್ಯ ೨೩ ವರ್ಷದೊಳಗಿನವರ ಸಂಭಾವ್ಯರ ಪಟ್ಟಿಯಲ್ಲಿದ್ದರು. ಅಂಡರ್ ೧೯ ಏಕದಿನದಲ್ಲಿ ೫ ಪಂದ್ಯಗಳನ್ನಾಡಿ ೫ ವಿಕೆಟ್ ಗಳಿಸಿದ್ದರು. ಅಭಿಲಾಶ್ ಅವರ ಕ್ರಿಕೆಟ್ ಬದುಕಿಗೆ ಮಾವಂದಿರಾದ ರತ್ನಾಕರ ಶೆಟ್ಟಿ ಹಾಗೂ ಅರುಣ್ ಕುಮಾರ್ ಶೆಟ್ಟಿ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿದ್ದಾರೆ. ಕೋಚ್ ಜಯಪ್ರಕಾಶ್ ಅಂಚನ್ ಕೂಡ ಅಭಿಲಾಶ್ ಅವರ ಕ್ರಿಕೆಟ್ ಬದುಕಿಗೆ ನೆರವಾಗುತ್ತಿದ್ದಾರೆ.
 ‘ಆಳ್ವಾಸ್‌ಗೆ ಸೇರಿದ ನಂತರ ಕ್ರೀಡೆಗೆ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ಸಿಕ್ಕಿತು. ಡಾ. ಮೋಹನ್ ಆಳ್ವಾ ಅವರು ಎಲ್ಲ  ರೀತಿಯ ಎಲ್ಲಾ ವಿಭಾಗದ ಕ್ರೀಡೆಗೂ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದಾರೆ. ಹಾಸ್ಟೆಲ್, ಶಾಲಾ ಶುಲ್ಕ ಎಲ್ಲದರಿಂದಲೂ ವಿನಾಯಿತಿ ಇದೆ. ಮುಂದಿನ ದಿನಗಳಲ್ಲಿ ಉತ್ತಮ ಆಲ್ರೌಂಡರ್ ಆಗಿ ಮಿಂಚಬೇಕೆಂಬ ಹಂಬಲ,‘ ಎಂದು ಸರಳ ಸ್ವಭಾವದ ಅಭಿಲಾಶ್ ಹೇಳಿದರು.

Related Articles