Tuesday, April 30, 2024

ಖುರಾಶ್ ಕ್ರೀಡೆಯಲ್ಲಿ ಖುಷಿ ತಂದ ತ್ರಿವೇಣಿ

ಸೋಮಶೇಖರ್ ಪಡುಕರೆ ಬೆಂಗಳೂರು

ಅವರು ಜೂಡೋ ಕ್ರೀಡೆಯಲ್ಲಿ ಪಳಗಿದವರು. ಪತಿಯೂ ಕೂಡ ಜೂಡೋ ಕೋಚ್. ಬೆಳಗಾವಿಯಲ್ಲಿ ನೂರಾರು ಜೂಡೋ ಪಟುಗಳನ್ನು ರಾಷ್ಟ್ರಕ್ಕೆ ನೀಡಿದವರು. ಏಕಲವ್ಯ ಪ್ರಶಸ್ತಿಯನ್ನೂ ಗೆದ್ದವರು. ಕೇಂದ್ರ ಸರಕಾರ ಹಾಗೂ ಭಾರತೀಯ ಖುರಾಶ್ ಸಂಸ್ಥೆಯ ಸಲಹೆ ಹಾಗೂ ನೆರವಿನಿಂದ ಉಜ್ಬೆಕಿಸ್ತಾನದ ರಾಷ್ಟ್ರೀಯ ಕ್ರೀಡೆಯಾಗಿರುವ ಖುರಾಷ್ ಕ್ರೀಡೆಯಲ್ಲಿ ಪಳಗಿ ಕರ್ನಾಟಕಕ್ಕೆ ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ತಂದುಕೊಟ್ಟ ಸಾಧಕಿ. ಬೆಳಗಾವಿಯ  ತ್ರಿವೇಣಿ. ಈ ಚಾಂಪಿಯನ್ ಖುರಾಶ್ ಪಟುಗಳನ್ನು ಸಜ್ಜುಗೊಳಿಸುವಲ್ಲಿ ಪಟ್ಟ ಪಾಡು ಅಷ್ಟಿಷ್ಟಲ್ಲ.

ಜೂಡೋ ಹಾಗೂ ಖುರಾಶ್ ಎರಡೂ ಮಾರ್ಷಲ್ ಆರ್ಟ್ ಕ್ರೀಡೆ. ಎರಡರಲ್ಲೂ ಸಾಮ್ಯತೆ ಇದೆ. ಆದರೆ 13 ಬಾರಿ ರಾಷ್ಟ್ರೀಯ ಚಾಂಪಿಯನ್ ಪಟ್ಟ ಗೆದ್ದಿರುವ ಮಲಪ್ರಭಾ  ಜಾದವ್ ಅವರನ್ನು ಖುರಾಷ್ ಕ್ರೀಡೆಗೆ ಬದಲಾಯಿಸುವುದು ಹೇಗೆ ಎಂಬುದೇ ತ್ರಿವೇಣಿ ಹಾಗೂ ಅವರ ಪತಿ ಜಿತೇಂದರ್ ಸಿಂಗ್ ಅವರಿಗೆ ಆರಂಭದಲ್ಲಿ ಯಕ್ಷ ಪ್ರಶ್ನೆಯಾಗಿತ್ತು.

ಮೊದಲು ಒಪ್ಪಲಿಲ್ಲ

ಖುರಾಶ್ ಕ್ರೀಡೆ ಮೊದಲು ಕಾಮನ್‌ವೆಲ್ತ್ ಹಾಗೂ ಏಷ್ಯನ್ ಗೇಮ್ಸ್ ಪಟ್ಟಿಯಲ್ಲೇ  ಇರಲಿಲ್ಲ. ಇದರಿಂದಾಗಿ ಫೆಡರೇಷನ್ ವಿನಂತಿ ಮಾಡಿಕೊಂಡರೂ ತ್ರಿವೇಣಿ ಒಪ್ಪಿರಲಿಲ್ಲ. 2014ರಲ್ಲಿ  ಫೆಡರೇಷನ್ ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರ ಇದು ಕಾಮನ್‌ವೆಲ್ತ್ ಹಾಗೂ ಏಷ್ಯನ್ ಕ್ರೀಡೆ ಆಗಲಿದೆ, ಇದಕ್ಕಾಗಿ ಸ್ಪರ್ಧಿಗಳನ್ನು ಸಜ್ಜುಗೊಳಿಸಿ ಎಂದು ವಿನಂತಿ ಮಾಡಿಕೊಂಡಿತು. ಇದರಿಂದ ಆಸಕ್ತಿ ವಹಿಸಿದ ತ್ರಿವೇಣಿ ಮಲಪ್ರಭಾ ಅವರನ್ನು ಉಜ್ಬೆಕಿಸ್ತಾನದಲ್ಲಿ ತರಬೇತಿಗೆ ಸಜ್ಜುಗೊಳಿಸಿದರು. ನಂತರ ತುರ್ಕ್ಮೆನಿಸ್ತಾನದಲ್ಲಿ ನಡೆದ ಅಂತಾರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಭಾರತ ತಂಡ ಪಾಲ್ಗೊಳ್ಳುವಂತೆ ಮಾಡಿದರು. ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ನೆರವು ಕೂಡ ಸಿಕ್ಕಿತು. ಬೆಳಗಾವಿಯ ಜನಪ್ರತಿನಿಧಿಗಳೂ ಇದಕ್ಕೆ ನೆರವು ನೀಡಿದರು. ಇದರಿಂದಾಗಿ ತ್ರಿವೇಣಿ ಭಾರತದ ಜೂಡೋ ಕೋಚ್ ಜೊತೆಯಲ್ಲಿ ಖುರಾಶ್‌ನ ಕೋಚ್ ಆಗಿಯೂ ಪಳಗಿದರು. ಮಲಪ್ರಭಾ ಮೂರು ಬಾರಿ ರಾಷ್ಟ್ರೀಯ ಚಾಂಪಿಯನ್ ಪಟ್ಟವನ್ನೂ ಗೆದ್ದರು.

ಜೂಡೋ ವಿದ್ಯಾರ್ಥಿ ವೇತನದ ಹಣ ಬಳಕೆ

ಏಷ್ಯನ್ ಗೇಮ್ಸ್‌ಗೆ ಪೂರ್ವ ತಯಾರಿಯಾಗಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಮಲಪ್ರಭಾ  ಭಾಗವಹಿಸಬೇಕೆಂದಾಯಿತು. ಪಾಲ್ಗೊಂಡ ಮಲಪ್ರಭಾ  ಮೊದಲ ಸುತ್ತಿನಲ್ಲೇ ಸೋಲನುಭವಿಸಿದರು. ಈ ಬಾರಿ ಮತ್ತೆ ಉಜ್ಬೆಕಿಸ್ತಾನದಲ್ಲಿ ತರಬೇತಿಗೆ ಸಿದ್ಧತೆ ಮಾಡಲಾಯಿತು. ಆದರೆ  ಈ ತರಬೇತಿಗೆ ಯಾರೂ ಆರ್ಥಿಕ ನೆರವು ನೀಡಲಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಮನವಿ ಮಾಡಿಕೊಂಡಾಗ ತ್ರಿವೇಣಿ ಅವರಿಗೆ ಸಿಕ್ಕಿದ್ದು 35,000 ರೂ. ನಂತರ ಜೂನಿಯರ್ ಜೂಡೋ ಪಟುಗಳಿಗೆ ಕೇಂದ್ರ ಸರಕಾರದಿಂದ ಬಂದ ವಿದ್ಯಾರ್ಥಿ ವೇತನ ಹಾಗೂ ಮಲಪ್ರಭಾ  ಅವರ ಮನೆಯವರು ಒಗ್ಗೂಡಿಸಿದ ಹಣ ಸೇರಿಸಿ ತರಬೇತಿಗಾಗಿ ಕಳುಹಿಸಿಕೊಡಲಾಯಿತು. ಉಜ್ಬೆಕಿಸ್ತಾನದಲ್ಲಿ ಪಳಗಿದ ಮಲಪ್ರಭಾ  ನೇರವಾಗಿ ಏಷ್ಯನ್ ಗೇಮ್ಸ್‌ನಲ್ಲಿ ಪಾಲ್ಗೊಂಡು ಕಂಚಿನ ಪದಕ ಗೆದ್ದರು.

ಇದುವರೆಗೂ ಅಭಿನಂದನೆ ಸಲ್ಲಿಸಲಿಲ್ಲ

ಕರ್ನಾಟಕ ರಾಜ್ಯ ಸರಕಾರ ಕ್ರೀಡೆಯ  ಬಗ್ಗೆ ವಿಚಿತ್ರ ನಿಲುವನ್ನು ತಳೆದಿದೆ. ಗೆದ್ದ ಒಬ್ಬರಿಗೆ ನೇರವಾಗಿ ನಗದು ಬಹುಮಾನ ನೀಡುವುದು. ಮತ್ತಿಬ್ಬರಿಗೆ ಅಭಿನಂದನೆ ಸಲ್ಲಿಸುವ ವ್ಯವದಾನವನ್ನೂ ತೋರಿಸಲಿಲ್ಲ. ಕಬಡ್ಡಿ, ರಿಲೇ, ಟೆನಿಸ್ ಹಾಗೂ ಖುರಾಶ್‌ನಲ್ಲಿ ರಾಜ್ಯಕ್ಕೆ ಪದಕ ಬಂದಿರುತ್ತದೆ. ರಿಲೇಯಲ್ಲಿ ಚಿನ್ನ ಗೆದ್ದಿರುವ ಪೂವಮ್ಮಗೆ ಈಗಾಗಲೇ ರಾಜ್ಯ ಸರಕಾರ ೪೦ ಲಕ್ಷ ರೂ. ಬಹುಮಾನವನ್ನು ನೀಡಿದೆ. ಆದರೆ ಉಳಿದ ಕ್ರೀಡಾಪಟುಗಳ ಬಗ್ಗೆ ಇನ್ನೂ ತೀರ್ಮಾನ ಕೈಗೊಂಡಂತಿಲ್ಲ. ಪದಕ ಗೆದ್ದಿರುವ ಕ್ರೀಡಾಪಟುಗಳನ್ನು ವಿಮಾನ ನಿಲ್ದಾಣದಲ್ಲಿ ಬರ ಮಾಡಿಕೊಳ್ಳುವ ಕೆಲಸ ನಡೆದಿಲ್ಲ. ಪೂವಮ್ಮ ಅವರನ್ನು ಹೊರತುಪಡಿಸಿದರೆ. ಖುರಾಶ್‌ನಲ್ಲಿ ಬೆಳ್ಳಿ ಗೆದ್ದಿರುವ ದಿಲ್ಲಿಯ ಪಿಂಕ್ ಬಲ್ಹರಾ ಅವರಿಗೆ ದಿಲ್ಲಿ ಸರಕಾರ ೭೫ ಲಕ್ಷ ರೂ.ಗಳನ್ನು ಈಗಾಗಲೇ ನೀಡಿದೆ.  ಆದರೆ ನಮ್ಮ ಕರ್ನಾಟಕ ಸರಕಾರ ನಗದು ಬಹುಮಾನ ನೀಡಲು ಯಾವುದೇ ಜ್ಯೋತಿಷಿ ಹತ್ತಿರ ವಿಷ ಹಾಗೂ ಅಮೃತ ಘಳಿಗೆಯ ಬಗ್ಗೆ ಲೆಕ್ಕಾಚಾರಾ ಹಾಕುತ್ತಿರಬೇಕು.

ಕಾಮನ್‌ವೆಲ್ತ್ ಚಾಂಪಿಯನ್‌ಷಿಪ್‌ಗೆ ಆಯ್ಕೆ

ಭೋಪಾಲ್‌ನಲ್ಲಿ ನಡೆದ ಕಾಮನ್‌ವೆಲ್ತ್ ಆಯ್ಕೆ ಟ್ರಯಲ್ಸ್‌ನಲ್ಲಿ ತ್ರಿವೇಣೆ ಅವರಲ್ಲಿ ತರಬೇತಿ ಪಡೆಯುತ್ತಿರುವ ಬೆಳಗಾವಿಯ ಮಲಪ್ರಭಾ  ಜಾದವ್ ಹಾಗೂ ಗೀತಾ ಕೆ.ಡಿ. ಜೂನಿಯರ್ ಕಾಮನ್‌ವೆಲ್ತ್ ಚಾಂಪಿಯನ್‌ಷಿಪ್‌ಗೆ ಆಯ್ಕೆಯಾಗಿರುತ್ತಾರೆ.

ಇಷ್ಟದಾರೂ ಅವರು ಕೋಚ್ ಅಲ್ಲ ಅಂದರೆ?

ಖುರಾಶ್ ಕಾಮನ್‌ವೆಲ್ತ್ ಹಾಗೂ ಏಷ್ಯನ್ ಕ್ರೀಡೆ ಅಲ್ಲ ಎಂಬ ಧ್ವನಿ ಎದ್ದಿತ್ತು. ಆದರೆ  ಈ ಬಾರಿ ಕಾಮನ್‌ವೆಲ್ತ್ ಹಾಗೂ ಏಷ್ಯನ್ ಕ್ರೀಡಾಕೂಟಗಳಲ್ಲೂ ಈ ಕ್ರೀಡೆಗೆ ಅವಕಾಶ ನೀಡಲಾಗಿದೆ. ಕರ್ನಾಟಕದ ಕೆಲವು ಕ್ರೀಡಾ ಸಂಘಟನೆಯ ಪದಾಧಿಕಾರಿಗಳಿಗೆ ಇನ್ನೂ ಸಮಾಧಾನವಾಗದೆ ತ್ರಿವೇಣಿ ಅವರು ಖುರಾಶ್ ತರಬೇತುದಾರರೇ ಅಲ್ಲ ಎಂಬ ಧ್ವನಿ ಎತ್ತುತ್ತಿದ್ದಾರೆ. ಆದರೆ ಅವರು ಪಟ್ಟ ಕಷ್ಟ ಹಾಗೂ ಫಲಿತಾಂಶ ನಮ್ಮ ಕಣ್ಣ ಮುಂದೇ ಇದೆ. ಅವರು ನಿಜವಾದ ಕೋಚ್ ಹಾಗೂ ಚಾಂಪಿಯನ್ ಎಂಬುದಕ್ಕೆ ಏಷ್ಯನ್ ಗೇಮ್ಸ್ ಪದಕವೇ ಸಾಕ್ಷಿ. ಅಲ್ಲದೆ ಕೇಂದ್ರ  ಕ್ರೀಡಾ ಇಲಾಖೆ ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರವೇ ಸಾಕ್ಷಿ.

Related Articles