ಡಿ. 11-22: ತೆಲಂಗಾಣದಲ್ಲಿ ಖೇಲೋ ಇಂಡಿಯಾ ಯೂಥ್ ಗೇಮ್ಸ್
ಹೊಸದಿಲ್ಲಿ: ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರು ಸೋಮವಾರ ಖೇಲೋ ಇಂಡಿಯಾ ಯೂತ್ ಗೇಮ್ಸ್ 2026ರ ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಿದರು. Sports minister Dr Mansukh Mandaviya announces Khelo India Youth Games 2026 schedule; Hyderabad to host 22 sports.
ಕ್ರೀಡಾ ಸಚಿವಾಲಯದ ಮಹತ್ವಾಕಾಂಕ್ಷೆಯ ಕ್ರೀಡಾಕೂಟವಾದ ಖೇಲೋ ಇಂಡಿಯಾ ಯೂತ್ ಗೇಮ್ಸ್ ಡಿಸೆಂಬರ್ 11ರಿಂದ 22ರವರೆಗೆ ತೆಲಂಗಾಣದಲ್ಲಿ ನಡೆಯಲಿದೆ. ಈ ಬಾರಿ 27 ಸ್ಪರ್ಧಾತ್ಮಕ ಕ್ರೀಡೆಗಳು ಹಾಗೂ ಒಂದು ಪ್ರಾತ್ಯಕ್ಷಿಕೆ ಕ್ರೀಡೆಯನ್ನು ಸೇರ್ಪಡೆಗೊಳಿಸಲಾಗಿದೆ.
ಹೈದರಾಬಾದ್ನ ಬಸೀರ್ಬಾಗ್ನಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣ ಸಂಕೀರ್ಣ ಹಾಗೂ ಆಧುನಿಕ ಗಚ್ಚಿಬೌಲಿ ಕ್ರೀಡಾ ಸಂಕೀರ್ಣ ಸೇರಿದಂತೆ ನಗರದ ವಿವಿಧ ಕ್ರೀಡಾಂಗಣಗಳಲ್ಲಿ 22 ಕ್ರೀಡೆಗಳ ಪದಕ ಸ್ಪರ್ಧೆಗಳು ನಡೆಯಲಿವೆ. ಉಳಿದ ಕ್ರೀಡೆಗಳಿಗೆ ಖಮ್ಮಂ (ಬಿಲ್ಲುಗಾರಿಕೆ), ಹನುಮಕೊಂಡ (ಅಥ್ಲೆಟಿಕ್ಸ್), ಕರೀಂನಗರ (ಜೂಡೋ), ನಿಜಾಮಾಬಾದ್ (ಟೇಬಲ್ ಟೆನಿಸ್) ಮತ್ತು ಮಹಬೂಬ್ನಗರ (ಕಬಡ್ಡಿ) ಆತಿಥ್ಯ ವಹಿಸಲಿವೆ.
“ಖೇಲೋ ಇಂಡಿಯಾ ಯೂತ್ ಗೇಮ್ಸ್ 2026ರ ವೇಳಾಪಟ್ಟಿಯನ್ನು ಪ್ರಕಟಿಸಲು ನನಗೆ ಅತ್ಯಂತ ಸಂತೋಷವಾಗುತ್ತಿದೆ. ಪ್ರತಿಭಾವಂತ ಕ್ರೀಡಾಪಟುಗಳಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ವೇದಿಕೆ ಕಲ್ಪಿಸಿರುವ ಖೇಲೋ ಇಂಡಿಯಾ ಸರಣಿಯ ಮತ್ತೊಂದು ಕ್ರೀಡಾಕೂಟ ಇದಾಗಿದೆ. ಈ ಕ್ರೀಡಾಕೂಟಗಳ ಮೂಲಕ ಪ್ರತಿಭಾವಂತರು ನಮ್ಮ ಯೋಜನೆಗಳ ನೆರವಿನಿಂದ ಉನ್ನತ ಸಾಧನೆಯ ಹಾದಿಯಲ್ಲಿ ಮುನ್ನಡೆಯಲು ಅವಕಾಶ ದೊರೆತಿದೆ.
“ಐಚಿ-ನಗೋಯಾದಲ್ಲಿ ನಡೆದ ಏಷ್ಯನ್ ಗೇಮ್ಸ್ ಬಳಿಕ ಖೇಲೋ ಇಂಡಿಯಾ ಯೂತ್ ಗೇಮ್ಸ್ ನಡೆಯುತ್ತಿರುವುದರಿಂದ ಈ ಬಾರಿ ಉತ್ತಮ ಗುಣಮಟ್ಟದ ಪ್ರದರ್ಶನಗಳನ್ನು ನಿರೀಕ್ಷಿಸಬಹುದು,” ಎಂದು ಡಾ. ಮಾಂಡವಿಯಾ ಹೇಳಿದರು.
ಖೇಲೋ ಇಂಡಿಯಾ ಕ್ರೀಡಾಕೂಟಗಳ ಇತಿಹಾಸದಲ್ಲೇ ಮೊದಲ ಬಾರಿಗೆ ತೆಲಂಗಾಣ ಆತಿಥ್ಯ ವಹಿಸುತ್ತಿರುವ ಈ 12 ದಿನಗಳ ಕ್ರೀಡಾ ಹಬ್ಬದಲ್ಲಿ ಸುಮಾರು 6,000 ಕ್ರೀಡಾಪಟುಗಳು ಹಾಗೂ 1,800 ಸಹಾಯಕ ಸಿಬ್ಬಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಸಾಫ್ಟ್ಬಾಲ್ ಇದೇ ಮೊದಲ ಬಾರಿಗೆ ಸ್ಪರ್ಧಾತ್ಮಕ ಕ್ರೀಡೆಯಾಗಿ ಸೇರ್ಪಡೆಯಾಗಿದ್ದರೆ, ಸೈಲಿಂಗ್ (ಹಾಯಿ ದೋಣಿ ಸ್ಪರ್ಧೆ) ಕ್ರೀಡೆಯನ್ನು ಇದೇ ಮೊದಲ ಬಾರಿಗೆ ಖೇಲೋ ಇಂಡಿಯಾ ಯೂತ್ ಗೇಮ್ಸ್ ಕಾರ್ಯಕ್ರಮದಲ್ಲಿ ಸೇರಿಸಲಾಗಿದೆ. ಆದರೆ ಸೈಲಿಂಗ್ ಪ್ರಾತ್ಯಕ್ಷಿಕೆ ಕ್ರೀಡೆಯಾಗಿ ನಡೆಯಲಿದೆ.
“ಒಲಿಂಪಿಕ್ಸ್ನಲ್ಲಿ ನಾವು ಹೆಚ್ಚಿನ ಸಂಖ್ಯೆಯ ಕ್ರೀಡೆಗಳಲ್ಲಿ ಭಾಗವಹಿಸುವಂತಾಗಲು ದೇಶದ ಕ್ರೀಡಾ ವ್ಯವಸ್ಥೆಯನ್ನು ವಿಸ್ತರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ನಮ್ಮ ಸಮುದ್ರ ಮತ್ತು ಪರ್ವತಗಳಂತಹ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಆಡುವ ಕ್ರೀಡೆಗಳಿಗೂ ಉತ್ತೇಜನ ನೀಡಬೇಕು ಎಂಬುದು ಪ್ರಧಾನಿಯವರ ಆಶಯವಾಗಿದೆ.
“ಸೈಲಿಂಗ್ ಅಂತಹದ್ದೇ ಒಂದು ಕ್ರೀಡೆಯಾಗಿದೆ. ನಮ್ಮ ಸೈಲಿಂಗ್ ಕ್ರೀಡಾಪಟುಗಳು ಈ ಕ್ರೀಡಾಕೂಟದ ಭಾಗವಾಗುತ್ತಿರುವುದು ಹಾಗೂ ತಮ್ಮ ಕ್ರೀಡೆಯನ್ನು ಪ್ರಚಾರಪಡಿಸಲು ಅವಕಾಶ ದೊರೆಯುತ್ತಿರುವುದು ಸಂತಸದ ಸಂಗತಿ,” ಎಂದು ಸಚಿವರು ತಿಳಿಸಿದರು.
2025ರ ಮೇ 3ರಿಂದ 15ರವರೆಗೆ ಬಿಹಾರದಲ್ಲಿ ಹಿಂದಿನ ಆವೃತ್ತಿಯ ಖೇಲೋ ಇಂಡಿಯಾ ಯೂತ್ ಗೇಮ್ಸ್ ನಡೆದಿತ್ತು. ಅಲ್ಲಿ ಮಹಾರಾಷ್ಟ್ರ 58 ಚಿನ್ನ, 47 ಬೆಳ್ಳಿ ಹಾಗೂ 53 ಕಂಚು ಸೇರಿದಂತೆ ಒಟ್ಟು 158 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದು ಪ್ರಶಸ್ತಿಯನ್ನು ಉಳಿಸಿಕೊಂಡಿತ್ತು. ಇದು ಮಹಾರಾಷ್ಟ್ರದ ಐದನೇ ಖೇಲೋ ಇಂಡಿಯಾ ಪ್ರಶಸ್ತಿಯಾಗಿದ್ದು, ಸತತ ಮೂರನೇ ಪ್ರಶಸ್ತಿಯೂ ಆಗಿತ್ತು.
ಎರಡು ಬಾರಿ ಖೇಲೋ ಇಂಡಿಯಾ ಪ್ರಶಸ್ತಿ ಗೆದ್ದಿರುವ ಹರಿಯಾಣ 39 ಚಿನ್ನ, 27 ಬೆಳ್ಳಿ ಹಾಗೂ 51 ಕಂಚು ಸೇರಿದಂತೆ ಒಟ್ಟು 117 ಪದಕಗಳೊಂದಿಗೆ ಎರಡನೇ ಸ್ಥಾನ ಪಡೆದಿತ್ತು. ರಾಜಸ್ಥಾನ 24 ಚಿನ್ನ, 12 ಬೆಳ್ಳಿ ಹಾಗೂ 24 ಕಂಚು ಸೇರಿದಂತೆ ಒಟ್ಟು 60 ಪದಕಗಳೊಂದಿಗೆ ಮೂರನೇ ಸ್ಥಾನ ಗಳಿಸಿತ್ತು.
ಬಿಹಾರದಲ್ಲಿ ನಡೆದ ಹಿಂದಿನ ಆವೃತ್ತಿಯಲ್ಲಿ ಒಟ್ಟು 26 ದಾಖಲೆಗಳು ನಿರ್ಮಾಣವಾಗಿದ್ದವು. ಅವುಗಳಲ್ಲಿ ಎಂಟು ದಾಖಲೆಗಳನ್ನು ಬಾಲಕಿಯರು ನಿರ್ಮಿಸಿದ್ದರು. ಈ ಪೈಕಿ ಐದು ದಾಖಲೆಗಳು ವೇಟ್ಲಿಫ್ಟಿಂಗ್ನ ರಾಷ್ಟ್ರೀಯ ಯುವ ದಾಖಲೆಗಳಾಗಿದ್ದವು.
ತೆಲಂಗಾಣ ಖೇಲೋ ಇಂಡಿಯಾ ಯೂತ್ ಗೇಮ್ಸ್ನ 27 ಸ್ಪರ್ಧಾತ್ಮಕ ಕ್ರೀಡೆಗಳು:
ಬಿಲ್ಲುಗಾರಿಕೆ (ಆರ್ಚರಿ), ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಬಾಸ್ಕೆಟ್ಬಾಲ್, ಬಾಕ್ಸಿಂಗ್., ಸೈಕ್ಲಿಂಗ್, ಫೆನ್ಸಿಂಗ್, ಫುಟ್ಬಾಲ್, ಗಾತ್ಕಾ, ಜಿಮ್ನಾಸ್ಟಿಕ್ಸ್, ಹಾಕಿ, ಜೂಡೋ, ಕಬಡ್ಡಿ, ಕಲರಿಪಯಟ್ಟು, ಖೋ-ಖೋ, ಮಲ್ಲಕಂಬ, ರೋಯಿಂಗ್, ಶೂಟಿಂಗ್, ಈಜು, ಸಾಫ್ಟ್ಬಾಲ್, ಟೇಬಲ್ ಟೆನಿಸ್, ಟೆನಿಸ್, ಥಾಂಗ್-ತಾ, ವಾಲಿಬಾಲ್, ವೇಟ್ಲಿಫ್ಟಿಂಗ್, ಕುಸ್ತಿ, ಯೋಗಾಸನ.

