Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಹುಡುಗನ ವೇಷ ಧರಿಸಿ, ಸೈಕಲ್‌ ಅಭ್ಯಾಸ ಮಾಡಿ ಬೆಳ್ಳಿ ಗೆದ್ದ ಫರೀಬಾ

ನಾಗೋಯಾ: ಅಫಘಾನಿಸ್ತಾನದಲ್ಲಿ ಮಹಿಳೆಯರಿಗೆ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಎಷ್ಟು ಪ್ರೋತ್ಸಾಹ ನೀಡಲಾಗುತ್ತಿದೆ ಎಂಬುದು ಜಗತ್ತಿಗೇ ತಿಳಿದ ವಿಷಯ. ಪ್ರತಿಯೊಂದು ಕ್ರೀಡಾಕೂಟದ ಸಂದರ್ಭದಲ್ಲಿ ಅಲ್ಲಿಯ ಮಹಿಳಾ ಕ್ರೀಡಾಪಟುಗಳ ದುರಂತ ಹಾಗು ಸಾಹಸದ ಕತೆಗಳು ಜಗತ್ತಿಗೆ ಪರಿಚಯವಾಗುತ್ತದೆ. ತಾಲಿಬಾನಿಗಳ ಬೆದರಿಕೆ ಹಾಗೂ ಮೂಲಭೂತವಾದಿಗಳ ಕಿರುಕುಳ ಇವುಗಳ ನಡುವೆ ಹುಡುಗರ ವೇಷ ಧರಿಸಿ, ಸಾಧನೆ ಮಾಡಬೇಕೆಂದು ದೇಶ ತೊರೆದ ಅಫಘಾನಿಸ್ತಾನದ ಫರೀಬಾ ಹಶಿಮಿ ಈ ಬಾರಿ ಜಪಾನಿನ ನಾಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್‌ ಗೇಮ್ಸ್‌ನ ಮಹಿಳೆಯರ ರೋಡ್ ರೇಸ್‌ನಲ್ಲಿ ಫರೀಬಾ ಬೆಳ್ಳಿ ಪದಕ ಗೆದ್ದು ಅಫ್ಘಾನಿಸ್ತಾನದ ಕ್ರೀಡಾ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದ್ದಾರೆ. Fariba Hashimi The Afghan cyclist who trained disguised as a man won silver in the women’s road race, becoming Afghanistan’s first female Asian Games medalist since 2002

23 ವರ್ಷದ ಫರೀಬಾ ಬಾಲ್ಯದಲ್ಲೇ ಸೈಕ್ಲಿಂಗ್‌ನತ್ತ ಆಕರ್ಷಿತರಾಗಿದ್ದರು. ಸಹೋದರಿ ಯುಲ್ಡುಜ್ ಅವರೊಂದಿಗೆ ಸೈಕ್ಲಿಂಗ್ ಆರಂಭಿಸಿದ ಅವರು, ಅಫ್ಘಾನಿಸ್ತಾನದ ಫರ್ಯಾಬ್ ಪ್ರಾಂತ್ಯದಲ್ಲಿ ತರಬೇತಿ ಪಡೆಯುತ್ತಿದ್ದಾಗ ಹಲವು ವಿರೋಧಗಳನ್ನು ಎದುರಿಸಬೇಕಾಯಿತು. ಹುಡುಗಿಯರು ಸಾರ್ವಜನಿಕವಾಗಿ ಸೈಕಲ್ ಸವಾರಿ ಮಾಡುವುದನ್ನು ವಿರೋಧಿಸುತ್ತಿದ್ದವರಿಂದ ಕಲ್ಲು, ಬಾಟಲಿ ಎಸೆಯುವ ಘಟನೆಗಳೂ ನಡೆದಿದ್ದವು.

ಪರಿಸ್ಥಿತಿಯಿಂದಾಗಿ ಫರೀಬಾ ಹಲವು ಬಾರಿ ಹುಡುಗನ ವೇಷ ಧರಿಸಿ ತರಬೇತಿಗೆ ತೆರಳಬೇಕಾಗಿತ್ತು. ಮುಖಕ್ಕೆ ಮಾಸ್ಕ್ ಹಾಗೂ ಸನ್‌ಗ್ಲಾಸ್ ಧರಿಸಿ ತನ್ನ ಗುರುತು ಮರೆಮಾಚಿಕೊಂಡು ಸೈಕಲ್ ಅಭ್ಯಾಸ ಮಾಡುತ್ತಿದ್ದಳು. ಆದರೂ ಕ್ರೀಡೆಯ ಮೇಲಿನ ಆಸಕ್ತಿ ಕಡಿಮೆಯಾಗಲಿಲ್ಲ.

2021ರಲ್ಲಿ ಅಫ್ಘಾನಿಸ್ತಾನದ ಪರಿಸ್ಥಿತಿ ಬದಲಾಗುತ್ತಿದ್ದಂತೆ ಫರೀಬಾ ಮತ್ತು ಯುಲ್ಡುಜ್ ದೇಶ ತೊರೆದು ಇಟಲಿಗೆ ತೆರಳಿದರು. ಅಲ್ಲಿಂದ ತಮ್ಮ ಸೈಕ್ಲಿಂಗ್ ವೃತ್ತಿಜೀವನವನ್ನು ಮುಂದುವರಿಸಿದ ಇಬ್ಬರೂ 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲೂ ಅಫ್ಘಾನಿಸ್ತಾನವನ್ನು ಪ್ರತಿನಿಧಿಸಿದರು.

ನಾಗೋಯಾ ಏಷ್ಯನ್ ಗೇಮ್ಸ್‌ನಲ್ಲಿ ಫರೀಬಾ ಮೊದಲಿಗೆ ಮಹಿಳೆಯರ ವೈಯಕ್ತಿಕ ಟೈಮ್ ಟ್ರಯಲ್‌ನಲ್ಲಿ ಏಳನೇ ಸ್ಥಾನ ಪಡೆದಿದ್ದರು. ಆದರೆ ರೋಡ್ ರೇಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಅವರು 2 ಗಂಟೆ 50 ನಿಮಿಷ 5 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಬೆಳ್ಳಿ ಗೆದ್ದರು. ಚೀನಾದ ಗುವೊ ಲಿ ಚಿನ್ನ, ಹಾಂಗ್ ಕಾಂಗ್‌ನ ಲೆಯುಂಗ್ ವಿಂಗ್ ಯೀ ಕಂಚು ಪಡೆದರು.

ಈ ಸಾಧನೆಯೊಂದಿಗೆ ಫರೀಬಾ 2002ರ ಬುಸಾನ್ ಏಷ್ಯನ್ ಗೇಮ್ಸ್ ಬಳಿಕ ಅಫ್ಘಾನಿಸ್ತಾನದ ಮೊದಲ ಮಹಿಳಾ ಏಷ್ಯನ್ ಗೇಮ್ಸ್ ಪದಕ ವಿಜೇತೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಪದಕ ಗೆದ್ದ ಬಳಿಕ ಫರೀಬಾ, ಈ ಸಾಧನೆ ಅಫ್ಘಾನ್ ಮಹಿಳೆಯರ ಸ್ಥೈರ್ಯವನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ. ತಮ್ಮ ಸಾಧನೆಯ ಮೂಲಕ ಅಫ್ಘಾನಿಸ್ತಾನದ ಹುಡುಗಿಯರು ಮತ್ತು ಮಹಿಳೆಯರಿಗೆ ಕ್ರೀಡೆಯಲ್ಲಿ ತಮ್ಮ ಕನಸುಗಳನ್ನು ಬೆನ್ನಟ್ಟಲು ಪ್ರೇರಣೆ ಸಿಗಲಿ ಎಂಬುದು ಅವರ ಆಶಯ. ಒಮ್ಮೆ ಸೈಕಲ್ ಏರಲು ತನ್ನ ಗುರುತನ್ನೇ ಮರೆಮಾಚಬೇಕಾಗಿದ್ದ ಫರೀಬಾ, ಇಂದು ಅದೇ ಸೈಕಲ್ ಮೂಲಕ ಇಡೀ ಏಷ್ಯಾದ ಕ್ರೀಡಾ ವೇದಿಕೆಯಲ್ಲಿ ತನ್ನ ದೇಶದ ಧ್ವಜವನ್ನು ಎತ್ತಿ ಹಿಡಿದಿರುವುದು ವಿಶೇಷ.


administrator