ಕರ್ನಾಟಕ ಕರಾವಳಿಯ BACA KRS 50+ ತಂಡದ ಮಿಂಚಿನ ಪ್ರದರ್ಶನ
ಗ್ರೇಟರ್ ನೋಯ್ಡಾ: ಶ್ರೀನಿವಾಸ್ ಯು.ಬಿ. ಅವರ ನಾಯಕತ್ವದ ಕರ್ನಾಟಕ ಕರಾವಳಿಯ BACA KRS 50+ ತಂಡವು ಗ್ರೇಟರ್ ನೋಯ್ಡಾದಲ್ಲಿ ನಡೆದ ಆಲ್ ಇಂಡಿಯಾ ವೆಟರನ್ಸ್ ಕ್ರಿಕೆಟ್ ಲೀಗ್ (VCL) 50+ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಫೈನಲ್ ಪ್ರವೇಶಿಸುವ ಮೂಲಕ ಗಮನ ಸೆಳೆದಿದೆ. ಅಂತಿಮ ಪಂದ್ಯದಲ್ಲಿ ಉತ್ತಮ ಪೈಪೋಟಿ ನೀಡಿದರೂ NCR (North Central Region) 50+ ತಂಡದ ವಿರುದ್ಧ ಸೋಲು ಅನುಭವಿಸಿ ರನ್ನರ್ಸ್ಅಪ್ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. Karnataka Coastal BACA KRS 50 Plus team, led by Srinivas UB, made headlines in Greater Noida last week by reaching the finals of the All India Veterans Cricket League (VCL) 50 Plus Tournament
ಟೂರ್ನಿಯುದ್ದಕ್ಕೂ ಕರ್ನಾಟಕ ಕರಾವಳಿ ತಂಡದ ಆಟಗಾರರು ಶಿಸ್ತುಬದ್ಧ ಹಾಗೂ ಪರಿಣಾಮಕಾರಿ ಪ್ರದರ್ಶನ ನೀಡಿದರು. ಲೀಗ್ ಹಂತದಲ್ಲಿ ಉತ್ತರ ಪ್ರದೇಶ 50+ ಮತ್ತು ಹರಿಯಾಣ 50+ ತಂಡಗಳನ್ನು ಮಣಿಸಿದ ತಂಡ, ಸೆಮಿಫೈನಲ್ನಲ್ಲಿ ಉತ್ತಮ ಆಟಗಾರರಿಂದ ಕೂಡಿದ್ದ Rest of India 50+ ತಂಡವನ್ನು ಸೋಲಿಸಿ ಫೈನಲ್ಗೆ ಲಗ್ಗೆ ಇಟ್ಟಿತು.

ಮಾಜಿ ರಣಜಿ ಟ್ರೋಫಿ ಆಟಗಾರರಾದ ನಿತಿನ್ ಕಾಳೇಕರ್ ಮತ್ತು ಅಂಬೇಯ್ ಪರ್ವತ್ಕರ್ ತಂಡದ ಪರ ಗಮನಾರ್ಹ ಪ್ರದರ್ಶನ ನೀಡಿದರೆ, ಸ್ಥಳೀಯ ಆಟಗಾರ ರಿಚರ್ಡ್ ರೋಡ್ರಿಗಸ್ ಕೂಡ ಬ್ಯಾಟಿಂಗ್ ಹಾಗೂ ಒಟ್ಟಾರೆ ಆಟದ ಮೂಲಕ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ತಂಡದ ಯಶಸ್ಸಿನ ಹಾದಿಯಲ್ಲಿ ರಾಘವೇಂದ್ರ, ಶಿವ ಪ್ರಸಾದ್, ಘನಶ್ಯಾಮ್ ಮತ್ತು ಮಾಧವ್ ಕಾಮತ್ ಅವರು ಕೂಡ ತಮ್ಮ ಅಮೂಲ್ಯ ಕೊಡುಗೆ ನೀಡಿ ತಂಡಕ್ಕೆ ಅಗತ್ಯ ಸಂದರ್ಭದಲ್ಲಿ ಬೆಂಬಲ ಒದಗಿಸಿದರು.
ಟೂರ್ನಿಯಲ್ಲಿ ದೆಹಲಿ 50+ ಹಾಗೂ ಹಿಮಾಚಲ 50+ ತಂಡಗಳೂ ಭಾಗವಹಿಸಿದ್ದವು.
ಫೈನಲ್ ಪಂದ್ಯದಲ್ಲಿ ಕೊನೆಯವರೆಗೂ ಹೋರಾಟದ ಮನೋಭಾವ ಪ್ರದರ್ಶಿಸಿದ ರಿಚರ್ಡ್ ರೋಡ್ರಿಗಸ್ ಅವರಿಗೆ “ಫೈಟರ್ ಆಫ್ ದಿ ಫೈನಲ್ಸ್” ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಾಧನೆಯ ಮೂಲಕ ಕರ್ನಾಟಕ ಕರಾವಳಿಯ BACA KRS ತಂಡವು ಭಾರತದ 50+ ಕ್ರಿಕೆಟ್ನಲ್ಲಿ ತನ್ನದೇ ಆದ ಗಟ್ಟಿಯಾದ ಛಾಪು ಮೂಡಿಸಿದೆ. ವಯಸ್ಸು ಕೇವಲ ಸಂಖ್ಯೆಯಷ್ಟೇ ಎಂಬುದನ್ನು ಸಾಬೀತುಪಡಿಸಿರುವ ತಂಡದ ಅನುಭವ ಹಾಗೂ ಉತ್ಸಾಹ ಯುವ ಕ್ರಿಕೆಟಿಗರಿಗೂ ಸ್ಫೂರ್ತಿಯಾಗಿದೆ.
ಗ್ರೇಟರ್ ನೋಯ್ಡಾದ ಯಶಸ್ಸಿನ ಬೆನ್ನಲ್ಲೇ ಕರ್ನಾಟಕ ಕರಾವಳಿ ತಂಡವು ನವೆಂಬರ್ 2026ರಲ್ಲಿ ಜೈಪುರದಲ್ಲಿ ನಡೆಯಲಿರುವ ಮುಂದಿನ ಟೂರ್ನಿಯಲ್ಲಿ ಭಾಗವಹಿಸಲು ಸಜ್ಜಾಗುತ್ತಿದೆ. ಈ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಉತ್ತಮ ಪ್ರದರ್ಶನ ನೀಡುವ ವಿಶ್ವಾಸವನ್ನು ತಂಡ ಹೊಂದಿದೆ.

