ಭುವನದ ಕ್ರಿಕೆಟ್ ಅಂಗಳಕ್ಕೆ ರಾಹುಲ್ ಅಭಿಮಾನಿ ಭುವನ್ ಗೌಡ ಎಂಟ್ರಿ
ಬೆಂಗಳೂರು: ಕ್ರಿಕೆಟ್ ದಿಗ್ಗಜ, ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ಅವರ ಆಟವನ್ನು ಚಿಕ್ಕಂದಿನಿಂದ ನೋಡಿ ಬೆಳೆದ ಕೆ.ಎಲ್. ರಾಹುಲ್ ಇಂದು ಕ್ರಿಕೆಟ್ ಜಗತ್ತಿನಲ್ಲಿ ಶ್ರೇಷ್ಠ ಆಟಗಾರರಲ್ಲಿ ಒಬ್ಬರೆನಿಸಿದ್ದಾರೆ. ರಾಹುಲ್ ದ್ರಾವಿಡ್‌ಗೆ ಕೋಟ್ಯಂತರ ಅಭಿಮಾನಿಗಳಿರಬಹುದು, ಆದರೆ ಅವರೆಲ್ಲ ಕೆ.ಎಲ್. ರಾಹುಲ್ ಅವರಂಥಾಗಲಿಲ್ಲ. ಈಗ ದೇಶದಲ್ಲಿ ಕೆ ಎಲ್ ರಾಹುಲ್ ಅವರ ಅಭಿಮಾನಿಗಳು ಅಪಾರ ಪ್ರಮಾಣದಲ್ಲಿದ್ದಾರೆ. ಅವರ ಆಟವನ್ನು ನೋಡಿ ಅವರಂತೆಯೇ ತಾನಾಗಬೇಕೆಂದು ಬಯಸಿದವರು ಎಷ್ಟು ಜನರಿದ್ದಾರೋ ಗೊತ್ತಿಲ್ಲ. ಆದರೆ ಬೆಂಗಳೂರಿನ ಸಹಕಾರ ನಗರದ ಭುವನ್ ಎನ್ ಗೌಡ ಚಿಕ್ಕಂದಿನಿಂದ ಕೆ ಎಲ್ ರಾಹುಲ್ ಅವರ ಆಟವನ್ನು ಗಮನಿಸಿ, ಕಲಿತು ಇಂದು ರಾಜ್ಯ ಕ್ರಿಕೆಟ್‌ನಲ್ಲಿ ದಿಟ್ಟ ಹೆಜ್ಜೆಯನ್ನಿಡುತ್ತಿದ್ದಾರೆ.
Bhuvan N. Gowda from Sahakara Nagar, Bengaluru, has been closely watching and learning from KL Rahul’s game since childhood, and today he is making a strong mark in Karnataka cricket.
ಬಾಲ್ಯದಲ್ಲಿ ಜಗತ್ತಿನ ಶ್ರೇಷ್ಠ ಅಟಗಾರರನ್ನು ಕಂಡಾಗ ಅವರಂತೆ ತಾನಾಗಬಯಸುವುದು ಸಹಜ. ಆದರೆ ಎಲ್ಲರಿಂದಲೂ ಅದು ಸಾಧ್ಯವಿಲ್ಲ. 19 ವರ್ಷದ ಆಟಗಾರ ಭುವನ್ ಗೌಡ ಚಿಕ್ಕಂದಿನಿಂದಲೂ ಕೆ ಎಲ್. ರಾಹುಲ್ ಅವರ ಅಭಿಮಾನಿ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೆಎಲ್ ರಾಹುಲ್ ಆಡುವ ಪಂದ್ಯವಿದ್ದರೆ ಅಲ್ಲಿ ಭುವನ್ ಹಾಜರ್. ಆಟ ನೋಡಿ ಮನೆಗೆ ಹಿಂದಿರುಗಿದರೂ ಅದೇ ಗುಂಗು. ಅದೇ ಶೈಲಿಯ ಹೊಡೆತಗಳ ಅಭಿನಯ. ಮಗನ ಈ ರೀತಿಯ ಆಸಕ್ತಿಯನ್ನು ಗಮನಿಸಿದ ತಂದೆ ಬ್ಯಾಟರಾಯನಪುರ ಸಹಕಾರ ನಗರದ ನರೇಂದ್ರ ಗೌಡ ಬಿ,ಎಸ್. ಅವರು ಉತ್ತಮ ಅಕಾಡೆಮಿಗೆ ಸೇರಿಸಿದರು.

ಅತ್ಯಂತ ಕಲಾತ್ಮಕವಾಗಿ ಆಡಬಲ್ಲ ಭುವನ್ ಗೌಡ ಮೊದಲಿಗೆ ಜಸ್ಟ್ ಕ್ರಿಕೆಟ್ ಅಕಾಡೆಮಿಯಲ್ಲಿ ಉತ್ತಮ ರೀತಿಯಲ್ಲಿ ತರಬೇತಿ ಪಡೆದರು. ರಂಜನ್ ಮ್ಯಾನ್ವೆಲ್ ಹಾಗೂ ವಿನಾಯಕ ಹವಳಪ್ಪಗೊಲ್ ಅವರಿಂದ ಹೆಚ್ಚಿನ ತರಬೇತಿ ಪಡೆದು ಪಳಗಿದರು. ವೊಲ್ಚರ್ಸ್ ಕ್ರಿಕೆಟ್ ಕ್ಲಬ್ ಸೇರಿದ ಬಳಿಕ ಭುವನ್ ಅವರ ಆಟಕ್ಕೆ ಹೊಸ ರೂಪು ಸಿಕ್ಕಿತು. ಈ ಬಾಲಕ ಯಾಕೆ ಕೆ. ಎಲ್ ರಾಹುಲ್ ಅವರ ಅಭಿಮಾನಿ ಏಕೆ ಎಂಬುದು ಆ ಬಳಿಕ ಸ್ಪಷ್ಟವಾಯಿತು.
U19 ನಲ್ಲಿ ಅಜೇಯ ದ್ವಿಶತಕದ ಸಂಭ್ರಮ:
ಬಲಗೈ ಆಟಗಾರ ಹಾಗೂ ಆಫ್ ಸ್ಪಿನ್ ಬೌಲರ್ ಆಗಿರುವ ಭುವನ್ ವಿವಿಧ ಹಂತರದ ಲೀಗ್ ಪಂದ್ಯಗಳಲ್ಲಿ ಮಿಂಚುತ್ತಿದ್ದಾರೆ. ಭುವನ್ ಈ ಬಾರಿಯ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) 19ವರ್ಷ ವಯೋಮಿತಿಯ ಲೀಗ್ ಪಂದ್ಯದಲ್ಲಿ ದ್ವಿಶತಕ (221) ರನ್ ಸಿಡಿಸಿ ತಾನೊಬ್ಬ ಭವಿಷ್ಯದ ಭರವಸೆಯ ಆಟಗಾರನೆಂಬುದಕ್ಕೆ ಮುನ್ನುಡಿ ಬರೆದಿದ್ದಾರೆ. ವೊಲ್ಚರ್ಸ್ ಕ್ರಿಕೆಟ್ ಕ್ಲಬ್ ಪರ ಆಡುತ್ತಿರುವ ಭುವನ್, 169 ಎಸೆತಗಳನ್ನೆದುರಿಸಿ 37 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 221 ರನ್ ಗಳಿಸಿ ಎದುರಾಳಿ ತಂಡದ ಬೌಲಿಂಗ್ ಪಡೆಯನ್ನು ಧೂಳೀಪಟ ಮಾಡಿದರು. ಈ ಇನ್ನಿಂಗ್ಸ್‌ನಲ್ಲಿ ಕಂಡು ಬಂದದ್ದು ಭುವನ್ ಅವರ ಪಳಗಿದ ಆಟ. ಎಲ್ಲಿಯೂ ತಪ್ಪಿನ ಹೊಡೆತಗಳಿಗೆ ಮನ ಮಾಡದೆ “ಕ್ಲಾಸಿಕಲ್” ಇನ್ನಿಂಗ್ಸ್ ಅದಾಗಿತ್ತು.

ಮೊದಲ ಪಂದ್ಯದಲ್ಲಿ ಭುವನ್ ಗೌಡ, ವೊಲ್ಚರ್ಸ್ ಕ್ರಿಕೆಟ್ ಕ್ಲಬ್ ಪರ ಅಜೇಯ 157 ರನ್ ಸಿಡಿಸಿ ರಾಜ್ಯ ಕ್ರಿಕೆಟ್‌ಗೆ ದಿಟ್ಟ ಹೆಜ್ಜೆ ಇಟ್ಟಿದ್ದರು. ತಾನೇಕೆ ಕೆ ಎಲ್ ರಾಹುಲ್ ಅಭಿಮಾನಿ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದರು. ಈ ಪಂದ್ಯದಲ್ಲಿ ಭವನ್, 163 ಎಸೆತಗಳನ್ನೆದುರಿಸಿ 14 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 157 ರನ್ ಗಳಿಸಿ ತಂಡಕ್ಕೆ ನೆರವಾಗಿದ್ದರು. ಈ ಇನ್ನಿಂಗ್ಸ್ ಕೂಡ ಭುವನ್ ಅವರ ಬ್ಯಾಟಿಂಗ್ ಪ್ರಬುದ್ಧತೆಗೆ ಸಾಕ್ಷಿಯಾಗಿತ್ತು.
ಮೂರನೇ ಪಂದ್ಯದಲ್ಲಿ ಭುವನ್ ಗೌಡ 4 ರನ್ ಅಂತರದಲ್ಲಿ ಶತಕದಿಂದ ವಂಚಿತರಾದರು. 119 ಎಸೆತಗಳನ್ನೆದುರಿಸಿ 14 ಬೌಂಡರಿ ನೆರವಿನಿಂದ 94 ರನ್ ಗಳಿಸಿ ನೂರರ ಗಡಿ ತಲಪುವಲ್ಲಿ ವಿಫಲರಾದರು.

ಕೋಚ್ ರಂಜನ್ ಮ್ಯಾನ್ವೆಲ್ ಮೆಚ್ಚುಗೆ:
ಭುವನ್ ಗೌಡ ಅವರ ಬ್ಯಾಟಿಂಗ್‌ಗೆ ವೊಲ್ಚರ್ಸ್ ಕ್ರಿಕೆಟ್ ಕ್ಲಬ್‌ಗೆ ಪ್ರಧಾನ ಕೋಚ್ ರಂಜನ್ ಮ್ಯಾನ್ವೆಲ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. Sportsmail ಜೊತೆ ಮಾತನಾಡಿದ ಅವರು, “ಭುವನ್ ಬದ್ಧತೆಯಿರುವ ಆಟಗಾರ. ಬಹಳ ಶಿಸ್ತಿನ ಆಟಗಾರ. ಅವನ ಸದ್ಯದ ಕ್ರಿಕೆಟ್ ಸಾಧನೆ ನನಗೆ ಖುಷಿ ಕೊಟ್ಟಿದೆ. ಸ್ಥಿರ ಪ್ರದರ್ಶನ ನೀಡಬೇಕಿದೆ. ಆತನಿಗೆ 50 ಓವರ್ ತನಕ ಕ್ರೀಸಿನಲ್ಲಿರು ರನ್ ತಾನಾಗಿಯೇ ಬರುತ್ತದೆ ಎಂದು ಹೇಳಿದ್ದೆ, ಅದರಂತೆಯೇ ಆತ ಹೆಚ್ಚು ಕಾಲ ಕ್ರೀಸಿನಲ್ಲಿದ್ದು ತಂಡಕ್ಕೆ ನೆರವಾಗಿದ್ದಾನೆ, ಆತನ ಆಟ ಖುಷಿ ಕೊಟ್ಟಿದೆ,” ಎಂದು ಹೇಳಿದರು.

ಆಟದಲ್ಲೂ ಟಾಪ್ ಕ್ಲಾಸ್, ಓದಿನಲ್ಲೂ ಡಿಸ್ಟಿಂಕ್ಷನ್!!
ಬ್ಯಾಟರಾಯನಪುರ ಸಹಕಾರ ನಗರದ ಕೃಷಿ ಕುಟುಂಬದ ನರೇಂದ್ರ ಗೌಡ ಬಿ,ಎಸ್. ಹಾಗೂ ಅರ್ಚನಾ ದಂಪತಿಯ ಪುತ್ರ ಭುವನ್ ಕ್ರಿಕೆಟ್‌ನಲ್ಲಿ ಯಾವ ರೀತಿ ಉತ್ತಮ ಪ್ರದರ್ಶನ ತೋರುತ್ತಿದ್ದಾನೋ ಅದೇ ರೀತಿ ಓದಿನಲ್ಲೂ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಓದುತ್ತ, ಕ್ರಿಕೆಟ್‌ನಲ್ಲೂ ಸಾಧನೆ ಮಾಡುತ್ತ ಈ ವರ್ಷ ಬೆಂಗಳೂರಿನ ಎಂ.ಎಸ್ ರಾಮಯ್ಯ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ ವ್ಯಾಸಂಗ ಮಾಡಲಿದ್ದಾರೆ.

ಮಗನ ಕ್ರಿಕೆಟ್ ಬದುಕಿನ ಬಗ್ಗೆ ಮಾತನಾಡಿದ ನರೇಂದ್ರ ಗೌಡ, “14 ವರ್ಷ ವಯೋಮಿತಿಯ ಕ್ರಿಕೆಟ್‌ನಲ್ಲೇ ಭುವನ್ ಉತ್ತಮ ಪ್ರದರ್ಶನ ತೋರುತ್ತಿದ್ದ, ಮೂರು ಪಂದ್ಯಗಳಲ್ಲೇ 190 ರನ್ ಗಳಿಸಿದ್ದ, ಆದರೆ ಕೊರೊನ ಕಾರಣ ಕ್ರಿಕೆಟ್ ಚಟುವಟಿಕೆ ಕುಂಟಿತಗೊಂಡಿತು. ಈಗ ಆತನ ಆಟ ನೋಡಿ ಖುಷಿಯಾಗುತ್ತಿದೆ. ಆತ ಗಳಿಸಿದ ರನ್ ತಂಡದ ಯಶಸ್ಸಿಗೆ ನೆರವಾಗುತ್ತಿದೆ. ಓದು ಮತ್ತು ಕ್ರಿಕೆಟ್ ಎರಡನ್ನೂ ಬ್ಯಾಲೆನ್ಸ್ ಮಾಡಿಕೊಂಡು ಯಶಸ್ಸು ಸಾಧಿಸಲಿ ಎಂಬುದೇ ಹಾರೈಕೆ. ಅಣ್ಣನ ಕ್ರಿಕೆಟ್ ಚಟುವಟಿಕೆ ನೋಡಿ ತಂಗಿ, ಲಿಶಾ ಗೌಡ ಕೂಡ ಕ್ರಿಕೆಟ್‌ನಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು ಖುಷಿಯ ಸಂಗತಿ,” ಎಂದು ಹೇಳಿದರು.

