Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಕ್ರೀಡಾಂಗಣವೇ ಇಲ್ಲದ ದ್ವೀಪದಿಂದ ಏಷ್ಯನ್‌ ಗೇಮ್ಸ್‌ಗೆ ಮುಬಸ್ಸಿನಾ

ಉಡುಪಿ: ಒಡಿಶಾದ ಭುವನೇಶ್ವದಲ್ಲಿ ನಡೆದ 65ನೇ ರಾಷ್ಟ್ರೀಯ ಅಂತರ್‌ ರಾಜ್ಯ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನ ವನಿತೆಯರ ಲಾಂಗ್ ಜಂಪ್‌ನಲ್ಲಿ ಎರಡು ಅದ್ಭುತ ಘಟನೆಗಳು ನಡೆದವು. ಮೊದಲು ಕೇರಳದ ಆನ್ಸಿ ಸೋಜನ್‌ 22 ವರ್ಷಗಳ ಹಿಂದೆ ಒಲಿಂಪಿಯನ್‌ ಅಂಜಬಾಬಿ ಜಾರ್ಜ್‌ ಅವರ ದಾಖಲೆಯನ್ನು ಮುರಿದರು. ನಂತರ ಲಕ್ಷದ್ವೀಪದ ಮುಬಸ್ಸಿನಾ ಮೊಹಮ್ಮದ್‌ ಏಷ್ಯನ್‌ ಗೇಮ್ಸ್‌ಗೆ ಆಯ್ಕೆಯಾದ ದ್ವೀಪರಾಜ್ಯದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು. Mubassina Mohammed from Lakshadweep became the first athlete from the island state to be selected for the Asian Games.

ಇಲ್ಲಿ ಕ್ರೀಡಾ ಜಗತ್ತಿಗೆ ಸ್ಫೂರ್ತಿಯಾದುದು ಕ್ರೀಡಾಂಗಣವೇ ಇಲ್ಲದ ಲಕ್ಷದ್ವೀಪದ ಪುಟ್ಟ ದ್ವೀಪದಿಂದ ಬಂದ ಮುಬಸ್ಸಿನಾ ಮೊಹಮ್ಮದ್‌ ಅವರ ಕ್ರೀಡಾ ಬದುಕಿನ ಹಾದಿ. ಲಕ್ಷದ್ವೀಪದಲ್ಲಿರುವ ಮಿನಿಕಾಯ್‌ ಎಂಬ ಪುಟ್ಟ ದ್ವೀಪ. ಅಲ್ಲಿ ದಿನಕ್ಕೆ ಒಮ್ಮೆ ಮಾತ್ರ ದೋಣಿ ಸಾರಿಗೆ ಇರುತ್ತದೆ. ಇಂದು ಹೋದರೆ ವಾಪಾಸು ಬರಬೇಕೆಂದರೆ ನಾಳೆಯೇ, ಮಣ್ಣಿನ ಟ್ರ್ಯಾಕ್‌ ಬಿಟ್ಟರೆ ಬೇರೆ ಯಾವುದೇ ಕ್ರೀಡಾ ಸೌಲಭ್ಯ ಅಲ್ಲಿಲ್ಲ. ಮುಬಸ್ಸಿನಾ ಅವರ ತಂದೆ ಮೊಹಮ್ಮದ್‌ ತೆಂಗಿನ ಮರ ಹತ್ತಿ ಕಾಯಿ ತೆಗೆಯುವ ಕೆಲಸ ಮಾಡುತ್ತಿದ್ದಾರೆ. ತಾಯಿ ದುಬಿನಾ ಬಾನು ಸಣ್ಣ ಕ್ಯಾಂಟೀನ್‌ ನಡೆಸುತ್ತಿದ್ದಾರೆ. ಈಗ ದುಬಿನಾ ಬಾನುಗೆ ಅನಾರೋಗ್ಯದ ಕಾರಣ ಕೆಲಸ ಮಾಡುತ್ತಿಲ್ಲ ಎಂದು ಬೆಂಗಳೂರಿನಲ್ಲಿರುವ ಅಂಜುಬಾಭಿ ಜಾರ್ಜ್‌ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ  ಮುಬಸ್ಸಿನಾ ಮೊಹಮ್ಮದ್‌ sportsmail ಗೆ ತಿಳಿಸಿದ್ದಾರೆ.

20 ವರ್ಷ ಪ್ರಾಯದ ಮುಬಸ್ಸಿನಾ ಲಕ್ಷದ್ವೀಪದ ಮೊದಲ ಅಂತಾರಾಷ್ಟ್ರೀಯ ಕ್ರೀಡಾಪಟು, ಆಕೆಯ ಉದ್ದನೆಯ ಜಿಗಿತ ಈಗ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದೆ, ಏಷ್ಯನ್‌ ಗೇಮ್ಸ್‌ಗೆ ವನಿತೆಯರ ವಿಭಾಗದಲ್ಲಿ ಮೂವರು ಆಯ್ಕೆಯಾಗಿದ್ದಾರೆ. ಆದರೆ ಇಬ್ಬರಿಗೆ ಮಾತ್ರ ಅವಕಾಶವಿರುತ್ತದೆ. ಬೆಂಗಳೂರಿನಿಂದ sportsmail ಜೊತೆ ಮಾತನಾಡಿದ ಮುಬಸ್ಸಿನಾ ಮೊಹಮ್ಮದ್‌, “ನಮ್ಮ ದ್ವೀಪದಲ್ಲಿ ಹೆಣ್ಣು ಮಕ್ಕಳು ಕ್ರೀಡೆಯಲ್ಲಿ ಪಾಲ್ಗೊಳ್ಳಲು ಹೆತ್ತವರೇ ಅವಕಾಶ ನೀಡುತ್ತಿಲ್ಲ. ಆದರೆ ನನ್ನ ಅಮ್ಮ ಇದಕ್ಕೆ ವಿರುದ್ಧವಾಗಿ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದರು. ಇದರಿಂದಾಗಿ ನಾನು ಲಕ್ಷದ್ವೀಪದ ಮೊದಲ ಅಂತಾರಾಷ್ಟ್ರೀಯ ಕ್ರೀಡಾಪಟುವಾದೆ ಎನ್ನಲು ಹೆಮ್ಮೆ ಅನಿಸುತ್ತಿದೆ. ಅಲ್ಲಿ ಕ್ರೀಡಾಂಗಣಗಳಿಲ್ಲ, ಉತ್ತಮ ಹೌಷ್ಠಿಕ ಆಹಾರವಿಲ್ಲ. ಮೀನೇ ಸರ್ವಸ್ವ. ಅಮ್ಮ ಈಗ ಅನಾರೋಗ್ಯದಲ್ಲಿ ಇರುವುದರಿಂದ ಕ್ಯಾಂಟೀನ್‌ ನಡೆಯುತ್ತಿಲ್ಲ. ಅಪ್ಪ ಮರ ಹತ್ತಿ ತೆಂಗಿನ ಕಾಯಿ ತೆಗೆಯುವ ಕೆಲಸ ಮಾಡುತ್ತಿದ್ದಾರೆ. ನನ್ನ ಯಶಸ್ಸಿನ ನಂತರ ಈಗ ನನ್ನ ಸಹೋದರಿಯೂ ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಮಾತ್ರವಲ್ಲ, ಇನ್ನೂ ಅನೇಕರು ವಿವಿಧ ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತದ್ದಾರೆ,” ಎಂದು ಊರಿನಲ್ಲಾದ ಬದಲಾವಣೆಯ ಬಗ್ಗೆ ಹೇಳಿದರು.

ಅಂಜು ಬಾಬಿ ಜಾರ್ಜ್‌ ಸ್ಫೂರ್ತಿ: ಮುಬಸ್ಸಿನಾ ಮೊಹಮ್ಮದ್‌ ಅವರಿಗೆ ಭಾರತದ ಶ್ರೇಷ್ಠ ಲಾಂಗ್‌ಜಂಪ್‌ ತಾರೆ ಅಂಜುಬಾಬಿ ಜಾರ್ಜ್‌ ಅವರೇ ಸ್ಫೂರ್ತಿಯಂತೆ, ಈಗ ಅವರ ಅಕಾಡಮಿಯಲ್ಲಿ ತರಬೇತಿಗೆ ಅವಕಾಶ ಸಿಕ್ಕಿರುವುದು ಕೂಡ ಭಾಗ್ಯವಂತೆ. “ಯಾವಾಗ ಲಾಂಗ್‌ ಜಂಪ್‌ನಲ್ಲಿ ನನ್ನನ್ನು ತೊಡಗಿಸಿಕೊಂಡೆನೋ ಆವತ್ತಿನಿಂದ ಅಂಜು ಬಾಬಿ ಜಾರ್ಜ್‌ ಅವರೇ ನನಗೆ ಸ್ಫೂರ್ತಿ. ಇಲ್ಲಿಗೆ ಆಗಮಿಸುವುದಕ್ಕೆ ಮೊದಲು ನನ್ನ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ. ಆದರೆ ಈಗ ಏಷ್ಯನ್‌ ಗೇಮ್ಸ್‌ಗೆ ಅರ್ಹತೆ ಪಡೆಯುವ ಹಂತವನ್ನು ತಲುಪಿರುವೆ. ಮೂವರು ಆಯ್ಕೆಯಾಗಿರುವುದರಿಂದ ಅವಕಾಶ ಸಿಗುತ್ತದೆ ಎಂಬ ಖಚಿತತೆ ಇಲ್ಲ. ಅಂಜು ಬಾಬಿ ಜಾರ್ಜ್‌ ಅಕಾಡೆಮಿಯಲ್ಲಿ ತರಬೇತಿಗೆ ಅವಕಾಶ ಸಿಕ್ಕಿರುವುದು ಪುಣ್ಯದ ಫಲ,” ಎಂದಿದ್ದಾರೆ.

2022ರಲ್ಲಿ ಕುವೈತ್‌ನಲ್ಲಿ ನಡೆದ 18 ವರ್ಷ ವಯೋಮಿತಿಯ ಏಷ್ಯನ್  ಚಾಂಪಿಯನ್‌ಶಿಪ್ ನಲ್ಲಿ ಭಾಗವಹಿಸುವ ಮೂಲಕ ಮುಬಸ್ಸಿನಾ ಲಕ್ಷದ್ವೀಪದ ಮೊದಲ ಅಂತಾರಾಷ್ಟ್ರೀಯ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಎನಿಸಿಕೊಂಡರು. ಅಲ್ಲಿ ಅವರು ಲಾಂಗ್ ಜಂಪ್ ಹಾಗೂ ಹೆಪ್ಟಾಥ್ಲಾನ್ ವಿಭಾಗಗಳಲ್ಲಿ  ಬೆಳ್ಳಿ ಪದಕ ಗೆದ್ದಿದ್ದರು.

ನಂತರ 20 ವರ್ಷ ವಯೋಮಿತಿಯ ರಾಷ್ಟ್ರೀಯ  ಚಾಂಪಿಯನ್‌ಶಿಪ್‌ನಲ್ಲಿ 6.30 ಮೀಟರ್ ಜಿಗಿದು ಚಿನ್ನ ಗೆದ್ದಿದ್ದ ಅವರು, ಈ ಋತುವಿನಲ್ಲಿ ಭಾರತದ ಅಗ್ರ ಆರು ಮಹಿಳಾ ಲಾಂಗ್ ಜಂಪರ್‌ಗಳ ಪೈಕಿ ಸ್ಥಾನ ಪಡೆದಿದ್ದಾರೆ.

ಮುಬಸ್ಸಿನಾ ಅವರ ಬಾಲ್ಯದ ಕೋಚ್ ಅಹ್ಮದ್ ಜವಾದ್ ಹಸನ್ ಲಕ್ಷದ್ವೀಪದ ರಾಜಧಾನಿ ಕವರತ್ತಿಯವರು. ಲ್ಲಿ ನೆಲೆಸಿದ್ದರು. ಆದರೆ ಮಿನಿಕಾಯ್‌ನಿಂದ ಕವರತ್ತಿಗೆ ಸಾರಿಗೆ ಸೌಲಭ್ಯ ಕಡಿಮೆಯಿದ್ದ ಕಾರಣ ಪ್ರತಿದಿನ ಹೋಗಿ ಬರುವುದು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ತರಬೇತಿಗಾಗಿ ಅವರ ಇಡೀ ಕುಟುಂಬ ಸುಮಾರು ಎರಡು ವರ್ಷಗಳ ಕಾಲ ಕವರತ್ತಿಗೆ ಸ್ಥಳಾಂತರಗೊಂಡಿತ್ತು.

” ದಿನಕ್ಕೆ ಒಂದೇ ದೋಣಿ ಸೇವೆ ಇರುತ್ತದೆ. ಅದೇ ದಿನ ಹಿಂದಿರುಗಲು ಸಾಧ್ಯವಿಲ್ಲ. ಆದರೆ ನನಗೆ ತರಬೇತಿ ಅಗತ್ಯವಾಗಿದ್ದರಿಂದ, ನಮ್ಮ ಇಡೀ ಕುಟುಂಬ ಎರಡು ವರ್ಷ ಕವರತ್ತಿಗೆ ಸ್ಥಳಾಂತರವಾಯಿತು. ನನ್ನ ಸಹೋದರಿ ಮತ್ತು ಇಬ್ಬರು ಅವಳಿ ತಮ್ಮಂದಿರು ಅಲ್ಲಿನ ಶಾಲೆಯಲ್ಲಿ ಸೇರಿದರು. ಪಿಯುಸಿ ಶಿಕ್ಷಣ ಮುಗಿಸಿದ ಬಳಿಕ ತಿರುವನಂತಪುರದಲ್ಲಿರುವ ಭಾರತೀಯ ಕ್ರೀಡಾಪ್ರಾಧಿಕಾರದ ತರಬೇತಿ ಕೇಂದ್ರದಲ್ಲಿ ಅಭ್ಯಾಸ ಮಾಡುವ ಅವಕಾಶ ಸಿಕ್ಕಿತು. ಈಗ ಅಂಜು ಬಾಬಿ ಜಾರ್ಜ್‌ ಅಕಾಡೆಮಿಯಲ್ಲಿ ತರಬೇತಿ ನಡೆಯುತ್ತಿದೆ,” ಎಂದು ಅವರು ಹೇಳಿದರು.


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.