ಎರವಲು ಪಡೆದ ಶೂನಲ್ಲಿ ಓಡಿ ಬೆಳ್ಳಿ ಗೆದ್ದ ಸೂರಜ್ ಮಾಶಿ
ಜಗದಲ್ಪುರ: ಖೇಲೋ ಇಂಡಿಯಾ ಟ್ರೈಬಲ್ ಗೇಮ್ಸ್‌ನಲ್ಲಿ ಒಬ್ಬೊಬ್ಬರದ್ದು ಒಂದೊಂದು ಕತೆ. ನಾಸಿಕ್ ಓಟಗಾರ ಸೂರಜ್ ಮಾಶಿ ಬೆಳ್ಳಿ ಗೆದ್ದಾಗ ಚಿನ್ನ ಗೆದ್ದಷ್ಟೇ ಸಂಭ್ರಮಿಸಿದರು. ಏಕೆಂದರೆ ಆ ಪದಕ ಗೆಲ್ಲಲು ಅವರು ಪಷ್ಟ ಕಷ್ಟ ಸಾಕಷ್ಟಿದೆ. ತರಬೇತಿ ಪಡೆಯಲು ಹಣ ಇಲ್ಲದೆ ತಾನೇ ಅಭ್ಯಾಸ ಮಾಡಿ ಓಡಿದರು. ಧರಿಸಲು ಶೂ ಇಲ್ಲದೆ ಸಹ ಓಟಗಾರನಿಂದ ಶೂ ಎರವಲು ಪಡೆದು ಓಡಿದರು. How a self-taught Suraj Mashi from Nashik bagged the men’s 5000m silver medal with borrowed spikes in the Khelo India Tribal Games
ನಾಸಿಕ್‌ನಲ್ಲಿ ತರಬೇತುದಾರರಿಗೆ ತಿಂಗಳ ಶುಲ್ಕ ಭರಿಸಲು ಹಣ ಇಲ್ಲದ ಬುಡಕಟ್ಟು ಕ್ರೀಡಾಪಟುಗಳ ಒಂದು ತಂಡವಿದ್ದು, ಸೂರಜ್ ಆ ಅಶಕ್ತ ತಂಡದ ಒಬ್ಬ ಸದಸ್ಯರು. ಈ ಹುಡುಗರಲ್ಲಿ ಹಣ ಇಲ್ಲದೇ ಇರಬಹುದು, ಆದರೆ ಇವರ ಓಟಲ್ಲಿ ಶ್ರೀಮಂತಿಕೆ ಇದೆ. ಇವರು ಪ್ರತಿಯೊಂದು ಗುಡ್ಡಗಾಡು ಓಟದಲ್ಲಿ ಪಾಲ್ಗೊಳ್ಳುತ್ತಿದ್ದರು. ಬಂದ ಹಣವನ್ನು ತಮ್ಮ ಶಿಕ್ಷಣ ಹಾಗೂ ಮನೆ ಖರ್ಚಿಗೆ ನೀಡುತ್ತಿದ್ದರು.

ಛತ್ತೀಸ್‌ಗಢದ ಜಗದಲ್ಪುರದಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಬುಡಕಟ್ಟು ಕ್ರೀಡಾಕೂಟದ ಅಥ್ಲೆಟಿಕ್ಸ್‌ನಲ್ಲಿ ಸೂರಜ್ 5000 ಮೀ ಓಟದಲ್ಲಿ ಬೆಳ್ಳಿ ಗೆದ್ದ ನಂತರ, ಅವರ ಮೊಗದಲ್ಲಿ ಖುಷಿ ಹಾಗೂ ನೋವು ಎರಡೂ ಮನೆ ಮಾಡಿತ್ತು. “ತರಬೇತಿಗಾಗಿ ಪ್ರತಿ ತಿಂಗಳು 4000 ರೂ. ಶುಲ್ಕ ಭರಿಸಲು ಸಾಧ್ಯವಾಗುತ್ತಿಲ್ಲ. ನಾಸಿಕ್ ಹಾಗೂ ಗುಜರಾತ್‌ನಲ್ಲಿ ನಡೆಯುವ ಮ್ಯಾರಥಾನ್ ಓಟಗಳಲ್ಲಿ ಗೆದ್ದು ಬಂದ ಹಣವನ್ನು ಕಾಲೇಜು ಶುಲ್ಕ ಹಾಗೂ ಮನೆ ಖರ್ಚಿಗೆ ನೀಡುತ್ತೇವೆ. ನಾನು ಕೋಚ್ ಇಲ್ಲದೇ ಅಭ್ಯಾಸ ಮಾಡುತ್ತಿರುವೆ, ಏನಾದರೂ ಸಮಸ್ಯೆ ಎದುರಾದಾಗ ಹಿರಿಯ ಅಥ್ಲೀಟ್‌ಗಳಿಂದ ಸಹಾಯ ಕೇಳುತ್ತೇವೆ,” ಎಂದು ಸೂರಜ್ ಹೇಳಿದರು.
ಖೇಲೋ ಇಂಡಿಯಾ ಬುಡಕಟ್ಟು ಕ್ರೀಡಾಕೂಟದಲ್ಲಿ ಪಾಲ್ಗೊಂಡಿರುವ ಸೂರಜ್ ಬಳಸುತ್ತಿದ್ದ ಶೂ ಸವೆದಿತ್ತು. ಈ ಕಾರಣಕ್ಕಾಗಿ ಸಹ ಓಟಗಾರರ ಶೂ ಧರಿಸಿ ಓಡಿರುವುದು ಬುಡಕಟ್ಟು ಸಮುದಾಯದ ಸ್ಥಿತಿಯನ್ನು ತಿಳಿಸುತ್ತದೆ.
ಪಾಲ್ಘರ್ ಜಿಲ್ಲೆಯ ಮೊಖಡಾ ತಾಲ್ಲೂಕಿನ ಒಂದು ಸಣ್ಣ ಹಳ್ಳಿಯ ಕೂಲಿ ಕಾರ್ಮಿಕನ ಮಗನಾರಿರುವ ಸೂರಜ್, ವರ್ಲಿ ಬುಡಕಟ್ಟು ಸಮುದಾಯಕ್ಕೆ ಸೇರಿದ್ದಾರೆ. ಖೇಲೋ ಇಂಡಿಯಾ ಕ್ರೀಡಾಕೂಟಗಳನ್ನು ನಡೆಸಿದ ಬಳಿಕ ಸರಕಾರ ಕೈತೊಳೆದುಕೊಂಡು ಕೂರಬಾರದು. ಇಂಥ ಸಮುದಾಯದ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಿಬೇಕು. ವಿಶೇಷ ಅನುದಾನಗಳನ್ನು ನೀಡಬೇಕು. ಹಾಗಿದ್ದಲ್ಲಿ ಮಾತ್ರ ಇಂಥ ಕ್ರೀಡಾಕೂಟಗಳಿಗೆ ಬೆಲೆ ಇರುತ್ತದೆ. ಇಲ್ಲವಾದಲ್ಲಿ ಇದು ಮತ್ತೊಂದು ಪ್ರದರ್ಶನದ ಕ್ರೀಡಾಕೂಟ ಎನಿಸಲಿದೆ.

