Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ದೊಡ್ಡ ಬಹುಮಾನ: ಮರೆಯಲಾಗದು ಟೆನಿಸ್ ಕ್ರಿಕೆಟಿಗಾದ ಅವಮಾನ

ಉಡುಪಿ: ಭಾರತದ ಟೆನಿಸ್‌ ಬಾಲ್‌ ಕ್ರಿಕೆಟ್‌ ಇತಿಹದಲ್ಲೇ ಹೊದ ಅಧ್ಯಾಯ ಬರೆಯಲಿದ್ದೇವೆ ಎಂದು ಒಟ್ಟು 40 ಲಕ್ಷ ರೂ. ಬಹುಮಾನ ಘೋಷಿಸಿದ ಎಚ್‌ಎಂಸಿ ಯುನೈಟೆಡ್‌ ಟೆನಿಸ್‌ ಬಾಲ್‌ ಕ್ರಿಕೆಟ್‌ ಟೂರ್ನಿಯ ಸಂಘಟಕರು ಬ್ರಹ್ಮಾವರ ಪೊಲೀಸ್‌ ಠಾಣೆಗೆ ಹೋಗಿ ಸಹಾಯ ಯಾಚಿಸಿದಾಗ ಉಡುಪಿ ಜಿಲ್ಲೆಯ ಕ್ರೀಡಾಭಿಮಾನಿಗಳ ನಿರಾಸೆಯ ಸುಳಿಗೆ ಸಿಲುಕಿದರು. ಬೃಹತ್‌ ಮೊತ್ತದದ ಈ ಟೂರ್ನಿ ಜಿಲ್ಲೆಯ ಕ್ರೀಡಾಭಿಮಾನಿಗಳಿಗೆ ಹಾಗೂ ಕ್ರೀಡಾ ಸಂಘಟಕರಿಗೆ ಒಂದು ಪಾಠ ಕಲಿಸಿರುವುದು ಸ್ಪಷ್ಟ. ಬ್ರಹ್ಮಾವರದಲ್ಲಿ ನಡೆದ ಕ್ರಿಕೆಟ್‌ ಟೂರ್ನಿಯ ಬಹುಮಾನ ದೊಡ್ಡದಿರಬಹುದು ಆದರೆ ಟೆನಿಸ್‌ ಬಾಲ್‌ ಕ್ರಿಕೆಟ್‌ಗೆ ಅದಕ್ಕಿಂತಲೂ ದೊಡ್ಡ ಅವಮಾನವಾಗಿದೆ ಎಂಬುದನ್ನು ನಾವು ಮರೆಯುವಂತಿಲ್ಲ. The prize money of the cricket tournament held in Brahmavara may have been huge, but we cannot forget that tennis ball cricket was an even bigger disgrace.

ದೊಡ್ಡ ಮೊತ್ತದ ಬಹುಮಾನ ಎಂದಾಕ್ಷಣ ಖುಷಿ ಹಾಗೂ ಅಚ್ಚರಿಯಾಗುವುದು ಸಹಜ. ಒಟ್ಟು 40 ಲಕ್ಷ ರೂ. ಬಹುಮಾನದ ಮೊತ್ತ ಎಂದಾಗಲೇ ನಮ್ಮ ಆಟಗಾರರು, ತಂಡದ ಮಾಲೀಕರು ಯೋಚಿಸಬೇಕಾಗಿತ್ತು. ಪಂದ್ಯದ ಷರತ್ತುಗಳು ಏನು? ಯಾವುದೇ ಕಾರಣದಿಂದ ಪಂದ್ಯ ನಿಂತರೆ ತಂಡದ ಮಾಲೀಕರು ಹಾಗೂ ಆಟಗಾರರ ಗತಿ ಏನು? ಈ ಹಿಂದಿನ ಟೂರ್ನಿಗಳಲ್ಲಿ ಘೋಷಿಸಿದಷ್ಟೇ ಬೃಹತ್‌ ಮೊತ್ತವನ್ನು ನೀಡಿದ್ದಾರಾ? ಸಂಘಟಕರು ಅಸಾಹಯಕರಾಗಿ ಕೈ ಎತ್ತಿದರೆ ಯಾರು ಹೊಣೆ? ಅಭ್ಯಾಸಕ್ಕೆ ತಗಲಿದ ವೆಚ್ಚ. ಬೇರೆ ಕಡೆಯಿಂದ ಆಟಗಾರರನ್ನು ಕರೆಸಿ ಹಣ ವ್ಯಯ ಮಾಡಿದ್ದು ಇತ್ಯಾದಿ ವೆಚ್ಚಗಳಿಗೆ ಯಾರು ಹೊಣೆ? ಇತ್ಯಾದಿಯಾಗಿ ಉದ್ಭವಿಸುವ ಪ್ರಶ್ನೆಗಳಿಗೆ ಉತ್ತರ ಇದೆಯೇ?

ಸಾಮಾನ್ಯವಾಗಿ ಟೂರ್ನಿಗಳು ನಡೆಯುವಾಗ ಮೊದಲ ದಿನವೇ ಸರಣಿ ಶ್ರೇಷ್ಠ ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಏನೆಲ್ಲಾ ಘೋಷಿಸಿದ್ದಾರೋ ಅವೆಲ್ಲ ಅಂಗಣದಲ್ಲಿ ಹಾಜರಿರುತ್ತದವು.ಬಹ್ಮಾವರದ ಗಾಂಧೀ ಮೈದಾನದಲ್ಲಿ ಬೈಕ್‌ ಹಾಗೂ ಕಾರು ಇಟ್ಟಿರಲಿಲ್ಲ. ಇವುಗಳ ಬಗ್ಗೆ ತಂಡಗಳ ಮಾಲೀಕರು ಪ್ರಶ್ನೆ ಮಾಡಿರುತ್ತಿದ್ದರೆ ವಾಸ್ತವದ ಅರಿವಾಗಿರುತ್ತಿತ್ತು.

ನಗದು ಬಹುಮಾನಕ್ಕೆ ಏನು ಗ್ಯಾರೆಂಟಿ?:   40 ಲಕ್ಷ ರೂ. ಬಹುಮಾನದ ಟೂರ್ನಿಯೊಂದು ಕ್ವಾರ್ಟರ್‌ ಫೈನಲ್‌ನಲ್ಲಿ ನಿಂತು ಹೋಗಿದೆ ಎಂದಾಗ ಹಲವಾರು ಸಂಶಯಗಳಿಗೆ ಎಡೆ ಮಾಡಿಕೊಡುತ್ತದೆ. ಪಂದ್ಯ ನಿಲ್ಲಲು ಕಾರಣ ಏನೇ ಇರಲಿ ಆದರೆ ನಗದು ಬಹುಮಾನ ನೀಡಲು ಹಣ ಇಲ್ಲದ ಕಾರಣ ಪಂದ್ಯ ನಿಲ್ಲಿಸಿದ್ದಾರೆ ಎಂಬ ಸಂಶಯ ಹುಟ್ಟುವುದು ಸಹಜ.

ಟೆನಿಸ್‌ ಬಾಲ್‌ ಕ್ರಿಕೆಟ್‌ಗೆ ಸಂಘಟನೆ ಅಗತ್ಯ: ರಾಜ್ಯದಲ್ಲಿ ನಡೆಯುವ ಟೂರ್ನಿಗಳನ್ನು ನಿಯಂತ್ರಿಸಲು, ಆಟಗಾರರಿಗೆ ಭದ್ರತೆ ನೀಡಲು, ತಂಡಗಳು ಶಿಸ್ತಿನಿಂದ ವರ್ತಿಸಲು, ನಿಯಮಗಳನ್ನು ರೂಪಿಸಲು ಕರ್ನಾಟಕದಲ್ಲಿ ಪ್ರಜ್ಞಾವಂತರಿಂದ ಕೂಡಿದ, ಆಟದ ಬಗ್ಗೆ ಕಾಳಜಿ ಇರುವ ಸಮರ್ಥ ಸದಸ್ಯರಿಂದ ಕೂಡಿದ ಕರ್ನಾಟಕ ರಾಜ್ಯ ಟೆನಿಸ್‌ ಬಾಲ್‌ ಕ್ರಿಕೆಟ್‌ ಸಂಸ್ಥೆಯನ್ನು ಹುಟ್ಟು ಹಾಕುವ ಅಗತ್ಯವಿದೆ.

ಇಲ್ಲಿ ಟೆನಿಸ್‌ ಬಾಲ್‌ ಕ್ರಿಕೆಟ್‌ ಆಟಗಾರರು ಸದಸ್ಯತ್ವವನ್ನು ಹೊಂದಿರಬೇಕು, ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಸಮಿತಿಗಳು ರಚನೆಯಾಗಬೇಕು, ಟೂರ್ನಿಗಳಲ್ಲಿ ಶಿಸ್ತು ಕಾಪಾಡಲು ಪ್ರತಿಯೊಂದು ಟೂರ್ನಿಗಳು ಸಂಸ್ಥೆಯಲ್ಲಿ ನೋಂದಾವಣೆ ಮಾಡಿಕೊಳ್ಳಬೇಕು. ಸಂಘಟಕರು ನಗದು ಬಹುಮಾನಗಳಿಗೆ ಗ್ಯಾರೆಂಟಿ ಒದಗಿಸಬೇಕು. ಒಟ್ಟಾರೆ ಆಟಗಾರರಿಗೆ ಅನ್ಯಾಯವಾಗಬಾರದು. ಬೃಹತ್‌ ಮೊತ್ತದ ಟೂರ್ನಿಗಳನ್ನು ಆಯೋಜನೆ ಮಾಡುವಾಗ ಆಯೋಜಕರ ಹಿಂದಿನ ಅನುಭವಗಳನ್ನು ಪರಿಗಣಿಸಬೇಕು.

ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಸಂಭವಿಸಿದ ಘಟನೆ ನಿಜವಾದ ಕ್ರೀಡಾಭಿಮಾನಿಗಳಿಗೆ, ಆಟಗಾರರಿಗೆ ಮತ್ತು ನೈಜ ಸಂಘಟಕರಿಗೆ ನೋವನ್ನುಂಟು ಮಾಡಿದೆ. ಕ್ರೀಡಾ ಸ್ಪರ್ಧೆಯೊಂದು ಪೊಲೀಸ್‌ ಠಾಣೆಯಲ್ಲಿ ತೀರ್ಮಾನವಾಗಿರುವುದು ಬೇಸರದ ಸಂಗತಿ. ಫೈನಾನ್ಸ್‌ ಸಾಲ ಪಡೆದವರ ಹಾಗೆ ಕಂತುಗಳಲ್ಲಿ ನೀಡುವುದು, ಚೆಕ್‌ ಮೂಲಕ ಗ್ಯಾರೆಂಟಿ ಕೊಡುವ ಪರಿಸ್ಥಿತಿ ನಿರ್ಮಾಣವಾಗಬಾರದಿತ್ತು. ಆಟ ನಿಲ್ಲಿಸಿದರೆ ಸಂಘಟಕರಿಗೆ ಹಾದಿ ಸುಲಭವಾಗಬಹುದು ಆದರೆ ಆಟಗಾರರಿಗೆ ಹಾಗೂ ಕ್ರಿಕೆಟ್‌ ಅಭಿಮಾನಿಗಳಿಗೆ ನೋವಾಗುವುದು ಸಹಜ.

ಒಂದೆಡೆ ಟೆನಿಸ್‌ ಬಾಲ್‌ ಕ್ರಿಕೆಟ್‌ಗೆ ಸಚಿನ್‌ ತೆಂಡೂಲ್ಕರ್‌ ಸೇರಿದಂತೆ ಭಾರತದ ಸೂಪರ್‌ ಸ್ಟಾರ್‌ಗಳು ಬಂಡವಾಳ ಹೂಡಿ ಇಂಡಿಯನ್‌ ಸ್ಟ್ರೀಟ್‌ ಪ್ರೀಮಿಯರ್‌ ಲೀಗ್‌ (ISPL) ಎಂಬ ಜಾಗತಿಕ ಮಟ್ಟದ ಲೀಗನ್ನೇ ಹುಟ್ಟು ಹಾಕಿ, ಅದರಲ್ಲಿ ಗ್ರಾಮೀಣ ಪ್ರತಿಭೆಗಳು ಅವಕಾಶ ಪಡೆದುಕೊಳ್ಳುತ್ತಿರುವಾಗ ನಾವು, ಕ್ರಿಕೆಟ್‌ನ ತಾಯಿ ಟೆನಿಸ್‌ ಬಾಲ್‌ ಕ್ರಿಕೆಟನ್ನು ಅವಮಾನಿಸುತ್ತಿರುವುದು ಬೇಸರದ ಸಂಗತಿ. ಇನ್ನಾದರೂ ತಜ್ಞರು ಎಚ್ಚೆತ್ತುಕೊಂಡು ಟೆನಿಸ್‌ ಬಾಲ್‌ ಕ್ರಿಕೆಟಿಗಾಗಿ  ಸಂಘಟಿತರಾಗಬೇಕಾದ ಅನಿವಾರ್ಯತೆ ಇದೆ. ಇಲ್ಲವಾದಲ್ಲಿ ಈ ರೀತಿಯ ಗೊಂದಲದ ಆಟ ಮುಂದುವರಿಯುವುದು.


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.