Friday, October 4, 2024

ಉಡುಪಿಯಲ್ಲಿ ರಣಜಿ ಪಂದ್ಯ ನಡೆದು ಇಂದಿಗೆ 45 ವರ್ಷ!

ಉಡುಪಿಯಲ್ಲಿ ಕ್ರಿಕೆಟ್‌‌ ನೋಡುವವರೇ ಹೆಚ್ಚು. ಆಡುವವರು ಕಡಿಮೆ. ಇಲ್ಲಿಯ ಹೆಚ್ಚಿನ ಆಟಗಾರರ ಬದುಕು ಟೆನಿಸ್‌ ಬಾಲ್‌ ಕ್ರಿಕೆಟ್‌ ಆಡುವುದರಲ್ಲೇ ಕೊನೆಗೊಳ್ಳುತ್ತದೆ. ಇತ್ತೀಚಿನ ವರ್ಷಗಳಲ್ಲಿ ಲೆದರ್‌ಬಾಲ್‌ ಕ್ರಿಕೆಟ್‌ ತರಬೇತಿ ಅಲ್ಲಿಲ್ಲಿ ನಡೆಯುತ್ತಿದೆ. ಯುವ ಆಟಗಾರರು ರಾಜ್ಯ ಮಟ್ಟದ ಕದ ತಟ್ಟುತ್ತಿದ್ದಾರೆ. ರಾಜ್ಯ ಕ್ರಿಕೆಟ್‌ ಸಂಸ್ಥೆ ಇಲ್ಲಿಯ ಕ್ರಿಕೆಟ್‌ ಅಭಿವೃದ್ಧಿಯ ಬಗ್ಗೆ ಯೋಜನೆಗಳನ್ನು ಮಾಡುತ್ತಿದೆ. ರಾಜ್ಯದ ರಣಜಿ ಇತಿಹಾಸವನ್ನು ಗಮನಿಸಿದಾಗ 1978-79ರ ರಣಜಿ ಋತುವಿನ ಲೀಗ್‌ ಪಂದ್ಯ ಉಡುಪಿಯ ಎಂಜಿಎಂ ಕಾಲೇಜಿನ ಅಂಗಣದಲ್ಲಿ ನಡೆದಿತ್ತು. 45 years back first Ranji Cricket match was held in Udupi.

ನವೆಂಬರ್‌ 18, 19 ಮತ್ತು 20 ಹೀಗೆ ಮೂರು ದಿನಗಳ ಕಾಲ ನಡೆದ ಪಂದ್ಯದಲ್ಲಿ ಕರ್ನಾಟಕ ಮತ್ತು ಆಂಧ್ರ ತಂಡಗಳು ಮುಖಾಮುಖಿಯಾಗಿದ್ದವು. ಕರ್ನಾಟಕ ತಂಡದ ನಾಯಕತ್ವನ್ನು ಬಿ. ಸುಧಾಕರ್‌‌ ರಾವ್‌‌ ಹಾಗೂ ಆಂಧ್ರಪ್ರದೇಶ ತಂಡದ ನಾಯಕತ್ವವನ್ನು ಎಚ್‌. ರಾಮ್‌ಪ್ರಸಾದ್‌ ವಹಿಸಿದ್ದರು. ಆಗ ವಲಯ ಮಟ್ಟದಲ್ಲಿ ಮೊದಲು ಲೀಗ್‌ ಹಂತದ ಪಂದ್ಯಗಳು ನಡೆಯುತ್ತಿದ್ದವು. ಕರ್ನಾಟಕ ಹಾಗೂ ಆಂಧ್ರ ದಕ್ಷಿಣ ವಲಯದಲ್ಲಿ ಆಡುತ್ತಿದ್ದವು. ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಆಂಧ್ರಪ್ರದೇಶ 58.5 ಓವರ್‌ಗಳಲ್ಲಿ 119 ರನ್‌ಗೆ ಆಲೌಟ್‌ಆಯಿತು. ಎ,ವಿ, ಜಯಪ್ರಕಾಶ್‌ 16/4 ವಿಕೆಟ್‌ ಗಳಿಸಿದರೆ ಕುಮಾರ್‌ 22/4 ವಿಕೆಟ್‌‌ ಸಾಧನೆ ಮಾಡಿದರು.

ಕರ್ನಾಟಕದ ಪ್ರಥಮ ಇನ್ನಿಂಗ್ಸ್‌ನಲ್ಲಿ ಸಂಜಯ್‌ ದೇಸಾಯಿ ಹಾಗೂ ರೋಜರ್‌ ಬಿನ್ನಿ ಅವರು ಇನ್ನಿಂಗ್ಸ್‌ ಆರಂಭಿಸಿದರು. ದೇಸಾಯಿ ಕೇವಲ 17 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರೆ, ರೋಜರ್ ಬಿನ್ನಿ 50 ರನ್‌ ಗಳಿಸಿ ಉತ್ತಮ ಆರಂಭ ಕಲ್ಪಿಸಿದರು. ಆಗ ಕರ್ನಾಟಕ ರಣಜಿಯ ಬ್ಯಾಟಿಂಗ್‌ ಬೆನ್ನೆಲುಬಾಗಿದ್ದ ಬ್ರಿಜೇಶ್‌ ಪಟೇಲ್‌ ಹಾಗೂ ಎವಿ ಜಯಪ್ರಕಾಶ್‌‌ ಶತಕ ಸಿಡಿಸಿದರು. ಜಯಪ್ರಕಾಶ್‌ 150 ರನ್‌ ಗಳಿಸಿದರೆ, ಬ್ರಿಜೇಶ್‌ ಪಟೇಲ್‌ 126 ರನ್‌ ಗಳಿಸುವ ಮೂಲಕ ತಂಡ ಬೃಹತ್‌ ಮೊತ್ತ ಕಲೆಹಾಕಿತು. ಎಚ್‌. ಚಂದ್ರಶೇಖರ್‌ 51 ರನ್‌ ಗಳಿಸಿದರು. ಕರ್ನಾಟಕ 93 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 420 ರನ್‌ ಗಳಿಸಿ ಡಿಕ್ಲೇರ್‌ ಘೋಷಿಸಿತು.

ಆಂಧ್ರದ ಪರ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಜಿ.ಕೆ.ಘಿಯಾ 137 ರನ್‌ ಸಿಡಿಸುವ ಮೂಲಕ ತಂಡ 328 ರನ್‌ ಗಳಿಸಿತು. ಇದರಿಂದಾಗಿ ಕರ್ನಾಟಕಕ್ಕೆ 28 ರನ್‌ ಜಯದ ಗುರಿ. ರಾಜ್ಯ ತಂಡ 8 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು 31 ರನ್‌ ಗಳಿಸುವ ಮೂಲಕ 8 ವಿಕೆಟ್‌ ಜಯ ಗಳಿಸಿ 8 ಅಂಕಗಳನ್ನು ತನ್ನದಾಗಿಸಿಕೊಂಡಿತು. ಅಲ್ಲಿಂದ ಇಲ್ಲಿಯವರೆಗೆ ಉಡುಪಿಯಲ್ಲಿ ರಣಜಿ ಪಂದ್ಯಗಳು ನಡೆದಿರಲಿಲ್ಲ. 45 ವರ್ಷಗಳು ಕಳೆದು, ಉಡುಪಿ ಜಿಲ್ಲೆಯಾದರೂ ಇಲ್ಲಿ ಕ್ರಿಕೆಟ್‌ ಅಭಿವೃದ್ಧಿಯಾಗಲಿಲ್ಲ. ರಾಜ್ಯ ಕ್ರಿಕೆಟ್‌‌ ಸಂಸ್ಥೆಯ ಪದಾಧಿಕಾರಿಗಳು ಭೇಟಿ ನೀಡುತ್ತಾರೆ, ಯಾವುದೋ ಭರವಸೆಯ ಮಾತನಾಡಿ ಹಿಂದಿರುಗುತ್ತಾರೆ.

Related Articles