Monday, December 4, 2023

ಜಿಲ್ಲಾ ಕ್ರೀಡಾಂಗಣಗಳಲ್ಲಿ ಕ್ರಿಕೆಟ್‌ ನೇರ ಪ್ರಸಾರ: ಇಲ್ಲಿದೆ ಕೆಲವು ನೇರ ಪ್ರಶ್ನೆಗಳು

ಕ್ರಿಕೆಟ್‌ ಪಿಚ್‌ನಲ್ಲಿ ರಾಜಕೀಯದಾಟ…. ಒಬ್ಬರು ಆಡುವುದನ್ನು ನೋಡಿ ಇನ್ನೊಬ್ಬರು ಆಡುವುದು ಸಹಜ….. ಜನರಿಗೆ ಇದರ ಅಗತ್ಯ ಇದೆಯೇ? ಇದು ಹಣದ ದುಂದು ವೆಚ್ಚವಲ್ಲವೇ? ಇತರ ಕ್ರೀಡೆಗಳ ಬಗ್ಗೆ ಇಲ್ಲದ ಪ್ರೀತಿ ಕ್ರಿಕೆಟ್‌ ಬಗ್ಗೆ ಅಷ್ಟು ಯಾಕೆ? Why Karnataka government ordered to Telecast of India v Australia Cricket world cup Final match in all district Stadiums?

ರಾಜ್ಯದಲ್ಲಿರುವ ಎಲ್ಲ ಶಾಲೆಗಳಲ್ಲಿ ಕ್ರೀಡಾಂಗಣ ಇದೆಯಾ? ಎಷ್ಟು ಶಾಲೆಗಳಲ್ಲಿ ಮಕ್ಕಳನ್ನು ಆಡಲಿಕ್ಕೆ ಬಿಡುತ್ತಾರೆ? ಇತ್ತೀಚಿಗೆ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕ ಕ್ರೀಡಾಪಟುಗಳು 32 ಚಿನ್ನ, 32 ಬೆಳ್ಳಿ ಹಾಗೂ 37 ಕಂಚಿನ ಪದಕಗಳೊಂದಿಗೆ 101 ಪದಕ ಗೆದ್ದರು ಆದರೆ ಆ ಕ್ರೀಡಾಪಟುಗಳು ರಾಜ್ಯದ ಕಿಟ್‌ ಇಲ್ಲದೆ ಸ್ಪರ್ಧಿಸಿದರು, ಆವಾಗ ಇಂಥ ಕಾಳಜಿ ಯಾಕೆ ತೋರಲಿಲ್ಲ? ರಾಜ್ಯದಲ್ಲಿ ವಾಲಿಬಾಲ್‌ ಲೀಗ್‌ ನಡೆಯದೆ ಎಷ್ಟು ವರ್ಷಗಳಾಯಿತು? ಫುಟ್ಬಾಲ್‌ನಲ್ಲಿ ಆಡುತ್ತಿರುವ ಮಕ್ಕಳೆಲ್ಲ ಕರ್ನಾಟಕದವರೇ? ಕಳೆದ ವರ್ಷ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ತರಬೇತಿ ಪಡೆಯಲು 75 ಕ್ರೀಡಾಪಟುಗಳಿಗೆ ತಲಾ 10 ಲಕ್ಷ? ರೂ. ನೀಡಲಾಯಿತು. ಅವರೆಲ್ಲ ತರಬೇತಿ ಪಡೆಯುತ್ತಿದ್ದಾರಾ? ಅವರು ಇತ್ತೀಚಿನ ಕ್ರೀಡಾಕೂಟಗಳಲ್ಲಿ ಪದಕ ಗೆದ್ದಿದ್ದಾರಾ?

ಕ್ರಿಕೆಟ್‌ ಹೊರತಾಗಿ ಬೇರೆ ಕ್ರೀಡೆಗಳ ಬಗ್ಗೆ ಯಾಕೆ ಈ ರೀತಿಯ ಕಾಳಜಿ ಇರುವುದಿಲ್ಲ? ಕ್ರಿಕೆಟ್‌ ಹೆಸರಿನಲ್ಲಿ ನಾಳೆ ಎಷ್ಟು ಬಾರ್‌ ಮತ್ತು ಪಬ್‌ಗಳು ಸಮಯ ಮೀರಿ ತೆರೆದುಕೊಂಡಿರುತ್ತವೆ? ಆನ್‌ಲೈನ್‌ ಜೂಜಿನಲ್ಲಿ ಯುವಕರು ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ ಅದಕ್ಕೆ ನಿಮ್ಮ ನಿಲುವೇನು? ಡ್ರೀಮ್‌ ಇಲೆವೆನ್‌ ಬಗ್ಗೆ ನಿಮ್ಮ ನಿಲುವೇನು? ರಾಜ್ಯದಲ್ಲಿರುವ ಯುವ ಕ್ರಿಕೆಟಿಗರಿಗೆ ಅವಕಾಶ ಸಿಗುತ್ತಿಲ್ಲ. ಇಲ್ಲಿ ಶಿಕ್ಷಣಕ್ಕೆ ಬಂದವರು ಲೀಗ್‌ ಪಂದ್ಯಗಳಲ್ಲಿ ಆಡುತ್ತಿದ್ದಾರೆ, ಇದರಿಂದ ರಾಜ್ಯ ನೈಜ ಕ್ರಿಕೆಟಿಗರಿಗೆ ಅನ್ಯಾಯವಾಗುತ್ತಿದೆ.

ಚಿನ್ನಸ್ವಾಮಿಯಲ್ಲಿ ಕ್ರಿಕೆಟ್‌ ಪಂದ್ಯ ವೀಕ್ಷಿಸುವ ನೀವುಗಳು ಕಂಠೀರವ ಕ್ರೀಡಾಂಗಣದಲ್ಲಿ ನಡೆಯುವ ರಾಷ್ಟ್ರೀಯ ಕ್ರೀಡಾಕೂಟ, ಫುಟ್ಬಾಲ್‌ ನಡೆಯುವಲ್ಲಿಗೆ ಎಂದಾದರೂ ಹೋಗಿ ಒಂದು ಗಂಟೆ ಕಾಲ ಕಳೆದು ಪ್ರೋತ್ಸಾಹ ಮಾಡಿದ್ದೀರಾ?

ಕ್ರೀಡಾಕೂಟ ನಡೆಯುವಾಗ ಗಾಯಗೊಂಡು ಕೈ ಕಾಲು ಮುರಿದುಕೊಂಡರೆ ಆ ಕ್ರೀಡಾಪಟುಗಳಿಗೆ ಚಿಕಿತ್ಸೆಗೆ ಪರಿಹಾರ ನೀಡುವ ಯಾವುದೇ ಯೋಜನೆ ಸರಕಾರದಲ್ಲಿಲ್ಲವಂತೆ, ಆ ಬಗ್ಗೆ ಯೋಚನೆ ಮಾಡಿದ್ದೀರಾ? ಬೆಂಗಳೂರಿನಲ್ಲಿರುವ ಶ್ರೀ ಕಂಠೀರವ ಒಳಾಂಗಣ ಕ್ರೀಡಾಗಣದಲ್ಲಿ ಪ್ರತಿ ವರ್ಷ ಮಳೆಗಾಲಕ್ಕೆ ಮಳೆ ನೀರು ಹೊಗ್ಗಿ ಅಲ್ಲಿರುವ ಮರದ ಹಾಸು ನಷ್ಟವಾಗುತ್ತದೆ. ಪ್ರತಿ ಬಾರಿಯೂ ಬದಲಾಯಿಸುವ ಪ್ರಕ್ರಿಯೆ ನಡೆಯತ್ತಿದೆಯೇ ಹೊರತು ಅದಕ್ಕೊಂದು ಪರಿಹಾರ ಕಂಡುಕೊಳ್ಳುವ ಬಗ್ಗೆ ಎಂದಾದರೂ, ಯಾವ ಸರಕಾರವಾದರೂ ಯೋಚಿಸಿದೆಯಾ?

ರಾಜ್ಯದಲ್ಲಿರುವ ನೂರಕ್ಕೂ ಹೆಚ್ಚು ಕ್ರೀಡಾ ತರಬೇತುದಾರರು ಕಾಯಂ ಉದ್ಯೋಗವಿಲ್ಲದೆ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ಪ್ರತಿಭಟನೆ ನಡೆಸಿದರು. ಕೆಲವರು ನಿವೃತ್ತಿಯಾಗಿ, ನಿಧನರಾದರು. ಎಂದಾದರೂ ಅವರ ಬದುಕಿನ ಬಗ್ಗೆ ಯೋಚಿಸಿದ್ದೀರಾ?

ನಿಜ ಕ್ರಿಕೆಟ್‌ ಮನರಂಜನೆಯನ್ನು ತಂದುಕೊಡುತ್ತದೆ, ಆದಾಯ ತಂದು ಕೊಡುತ್ತದೆ. ಒತ್ತಮ ವ್ಯವಹಾರ ನಡೆಯುತ್ತದೆ. ಬೆಟ್ಟಿಂಗ್‌ ದಂಧೆಗಳು ಹುಲುಸಾಗಿ ನಡೆಯುತ್ತವೆ. ರಾಜ್ಯ ಮತ್ತು ದೇಶಕ್ಕೆ ಆದಾಯ ಹರಿದುಬರುತ್ತದೆ. ಹೀಗೆಲ್ಲ ಕೇಳಿದರೆ ದೇಶದ್ರೋಹದ ಯೋಚನೆಯಲ್ಲ. ಭಾರತ ವಿಶ್ವಕಪ್‌ ಗೆಲ್ಲಬೇಕು. ಆದರೆ ನಿಮ್ಮ ಕಾಳಜಿ ಇತರ ಕ್ರೀಡೆಗಳು, ಜವಾಬ್ದಾರಿಗಳ ಬಗ್ಗೆಯೂ ಇದ್ದರೆ ಉತ್ತಮ.

Related Articles