ಒಂದೇ ಓವರ್ 41 ರನ್ ! ಇದು ನ್ಯಾಶ್ ನ ಬ್ರಹ್ಮಾಸ್ತ್ರ ದಾಖಲೆ

0
2077
ಆರ್.ಕೆ . ಆಚಾರ್ಯ ಕೋಟ 

ದುಬೈನಲ್ಲಿ ಏಷ್ಯಾ ಕಪ್ ನೀರಸವಾಗಿ ನಡೆಯುತ್ತಿದ್ದರೆ ಕರ್ನಾಟಕದ ಗ್ರಾಮೀಣ ಹಾಗೂ ಜಿಲ್ಲಾ ಮಟ್ಟದಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಗಳು ಅತ್ಯಂತ ಕುತೂಹಲದಿಂದ ನಡೆಯುತ್ತಿವೆ. ಕಳೆದ ರವಿವಾರ ನಡೆದ ಅರಸೀಕೆರೆ ಪ್ರೀಮಿಯರ್ ಲೀಗ್ ನಲ್ಲಿ ಒಂದೇ ಓವರ್ನಲ್ಲಿ 41 ರನ್ ದಾಖಲಾಗಿ ವಿಶ್ವ ದಾಖಲೆಯೊಂದು ನಿರ್ಮಾಣಗೊಂಡಿತು.

ಇದು ಟೆನಿಸ್ ಬಾಲ್ ಕ್ರಿಕೆಟ್ ನ ವಿಶ್ವ ದಾಖಲೆ. ಈ ಸಾಧನೆ ಮಾಡಿದವರು ಬೇರೆ ಯಾರೂ ಅಲ್ಲ, ನ್ಯಾಶ್ ಬೆಂಗಳೂರು ತಂಡದ ಬ್ರಹ್ಮಾಸ್ತ್ರ ಎಂದೇ ಖ್ಯಾತಿ ಪಡೆದಿರುವ ಲಕ್ಷೀಕಾಂತ್ ಪುರುಷೋತ್ತಮ  ಯಾನೆ ಪುರ್ಷಿ.
40ರ  ಹೊಸ್ತಿಲಲ್ಲಿರುವ ಹಿರಿಯ ಆಟಗಾರ ಪುರ್ಷಿ ಕೇಪ್ ಕೋಬ್ರಾಸ್ ಪರ ಆಡಿ  ಫೈನಲ್ ಪಂದ್ಯದಲ್ಲಿ 90 ರನ್ ಗುರಿ ತಲಪುವಾಗ ಎದುರಾಳಿ ಸಿಟಿ ಹುಂಟರ್ನ್ಸ್ ನ  ಹೆಸರಾಂತ ಎಸೆತಗಾರ ನಾಗೇಂದ್ರ ಅವರ ಎರಡನೇ ಓವರ್ ನಲ್ಲಿ 6,6,6,6nb,4,6,6 ಹೀಗೆ 41 ರನ್ ಗಳಿಸಿ ಯಾರಿಂದಲೂ ಮುರಿಯಲು ಕಷ್ಟ ಸಾಧ್ಯವಾದ ದಾಖಲೆಯೊಂದನ್ನು ಬರೆದರು.
ಬಾಲ್ಯದ ದಿನಗಳ ನೆನಪು. ನಟ ಶಾರೂಖ್ ಖಾನ್ ಅದೃಶ್ಯ ಪುರುಷನ ಚಮತ್ಕಾರದಿಂದ ಎದುರಾಳಿಯನ್ನು ಕ್ರಿಕೆಟ್ ಪಂದ್ಯದಲ್ಲಿ ಸೋಲಿಸಿದಂತೆ, ರಾಜ್ಯ ಟೆನಿಸ್ ಬಾಲ್ ಕ್ರಿಕೆಟ್ ನಲ್ಲಿ ಪುರುಷಿ ಖ್ಯಾತಿಯ ಯುವಕನ ಕ್ರಿಕೆಟ್ ಸಾಹಸದ ಕತೆ ಇದು.
1979ರಲ್ಲಿ  ಹಾಸನದ ಅರಸೀಕೆರೆಯ ಪುಟ್ಟ ಗ್ರಾಮ ಲೈಲಾಪುರದಲ್ಲಿ ಜನಿಸಿದ ಪುರುಷೋತ್ತಮ್ ಲಕ್ಷ್ಮಿಕಾಂತ್ ತನ್ನ ಗುರು ಎಲ್ ಎಸ್ ಚಂದ್ರೇಗೌಡ ಅವರ ನೆರವಿನಿಂದ 10ನೇ ವಯಸ್ಸಿನಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಗೆ ಕಾಲಿಟ್ಟರು. ಚಂದ್ರೇ ಗೌಡರು ಕಟ್ಟಿದ ಲೈಲಾಪುರ ಕ್ರಿಕೆಟ್ ಕ್ಲಬ್ ನಲ್ಲಿ ಉತ್ತಮವಾಗಿ ಆಡಿ ನಂತರ ರಾಜ್ಯದ ಉತ್ತಮ ತಂಡಗಳಲ್ಲಿ ಒಂದಾದ ಹಾಸನಾಂಬಾ ಕ್ರಿಕೆಟ್ ಕ್ಲಬ್ ನಲ್ಲಿ ಸ್ಥಾನ ಪಡೆಯುತ್ತಾರೆ. ನಂತರ ವೀನಸ್ ಕ್ರಿಕೆಟ್ ಕ್ಲಬ್ ಪರ ಆಡಿ ಉತ್ತಮ ಸಾಧನೆ ಮಾಡಿದರು.

ಅದೃಷ್ಟದ ನ್ಯಾಶ್ 

ಟೆನಿಸ್ ಹಾಗೂ ಲೆದರ್ ಬಾಲ್ ಎರಡೂ ಕ್ರಿಕೆಟ್ ನಲ್ಲಿ ಮಿಂಚಿದ ಪುರುಷಿಗೆ ಬೆಂಗಳೂರಿನ ಪ್ರತಿಷ್ಠಿತ ನ್ಯಾಶ್ ಬೆಂಗಳೂರು ತಂಡದಲ್ಲಿ ಆಡುವ ಅವಕಾಶ ಸಿಕ್ಕಿತು. ಇದುವರೆಗೂ ಎಲೆ ಮರೆಯ ಕಾಯಿಯಂತಿದ್ದ ಪುರುಷಿಗೆ ನ್ಯಾಶ್ ತಂಡ ಸೇರಿದ ನಂತರ ಅದೃಷ್ಟ ಬದಲಾಯಿತು. ದಾಖಲೆಗಳ ಮೇಲೆ ದಾಖಲೆ ಬರೆಯುತ್ತ ಸಾಗಿದ ಈ ಆಟಗಾರ ತನ್ನ ತಂಡಕ್ಕಾಗಿ ತೋರಿದ ಸಾಧನೆ ಅಪಾರ. ಕೊನೆಯ 6 ಎಸೆತಗಳ್ಳಿ 27 ರನ್, ಕೊನೆಯ ಓವರ್ನಲ್ಲಿ ಎದುರಾಳಿ ತಂಡಕ್ಕೆ 2 ರನ್ ಗಳಿಸಲೂ ಅವಕಾಶ ನೀಡದೆ  ಪಂದ್ಯ ಗೆಲ್ಲಿಸ ಕೊಟ್ಟಿದ್ದು, ನ್ಯಾಶ್ ನಲ್ಲಿ ಇತಿಹಾಸ ನಿರ್ಮಿಸಿತ್ತು.

ಆಟೋ ಚಾಲಕ 

ಇಷ್ಟೆಲ್ಲಾ ಸಾಧನೆ ಮಾಡಿರುವುದು ಬದುಕಾಗಿ ಆಟೋ ಓಡಿಸಿಕೊಂಡು.  ಆಟೋ ವೃತ್ತಿಯಾದರೆ, ಕ್ರಿಕೆಟ್ ಪ್ರವೃತ್ತಿ. ಸರಳ ಸಜ್ಜನರಾಗಿರುವ ಪುರುಷಿ ಬಹಳ ಸಂಕೋಚ ಸ್ವಭಾವದವರು. ಆದರೆ ಅಂಗಣದಲ್ಲಿ ಸ್ಫೋಟಕ ಆಟಗಾರ. ಬೌಲರ್ ಗಳ ಮೇಲೆ ಕರುಣೆ ತೋರದೆ ರನ್ ಗಳಿಸುವ ಪ್ರತಿಭಾವಂತ.
2009 ರಲ್ಲಿ ಉಡುಪಿಯಲ್ಲಿ ನಡೆದ ಸ್ಪಾರ್ಕ್ ಟ್ರೋಫಿ ಟೂರ್ನಿ ಯ್ಲಲಿ ಸರಣಿಶ್ರೇಷ್ಠ ಕ್ಕಾಗಿ  ಬೈಕ್, 2015 ರಲ್ಲಿ ಬೆಂಗಳೂರಿನ ಶಿವಾಜಿನಗರದಲ್ಲಿ ಮತ್ತೊಂದು ಬೈಕ್ ಪುರುಷಿ ಅವರ ಸಾಧನೆಯನ್ನು ನೆನಪಿಸುತ್ತಿವೆ. ಅಲ್ಲದೆ ಅವರ ಮನೆ ಟ್ರೋಫಿಗಳಿಂದ ತುಂಬಿರುವುದು ಅವರ ಸಾಧನೆಯ ಮೇಲೆ ಬೆಳಕು ಚೆಲ್ಲುವಂತಿದೆ.
ಲೆದರ್ ಬಾಲ್ ಕ್ರಿಕೆಟ್ ನ ತಾಯಿ ಎನಿಸಿರುವ ಟೆನಿಸ್ ಬಾಲ್ ಕ್ರಿಕೆಟ್ ನ ಪ್ರತಿಭೆಗಳನ್ನು ಗುರುತಿಸುವ ಕೆಲಸ ಆಗಬೇಕು.