Wednesday, July 24, 2024

Tour Of Nilgiris: ಟೂರ್‌ ಆಫ್‌ ನಿಲಗಿರೀಸ್‌ನಲ್ಲಿ 100 ಸೈಕ್ಲಿಸ್ಟ್‌ಗಳು ಭಾಗಿ

ಬೆಂಗಳೂರು: ರಾಜ್ಯದ ಸೈಕ್ಲಿಸ್ಟ್‌ಗಳಿಗೆ ಕುತೂಹಲವನ್ನುಂಟು ಮಾಡುವ ಟೂರ್‌ ಆಫ್‌ ನಿಲಗಿರೀಸ್‌ ಈ ವರ್ಷ ಡಿಸೆಂಬರ್‌ 10 ರಿಂದ 17ರ ವರೆಗೆ ನಡೆಯಲಿದೆ. 14ನೇ ಆವೃತ್ತಿಯ ಟಿಎಫ್‌ಎನ್‌ನಲ್ಲಿ 100ಕ್ಕೂ ಹೆಚ್ಚು ಸೈಕ್ಲಿಸ್ಟ್‌ಗಳು ಪಾಲ್ಗೊಳ್ಳಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ. 14th Edition of Tour of Nilgiris will be held from December 10 to 17.

2008ರಲ್ಲಿ 50 ಸೈಕ್ಲಿಸ್ಟ್‌ಗಳು ಆರಂಭಿಸಿದ ಈ ಸೈಕಲ್‌ ಟೂರ್‌ ಕೇವಲ ಬೆಂಗಳೂರಿಗೆ ಸೀಮಿತವಾಗಿತ್ತು. ನಂತರದ ವರ್ಷಗಳಲ್ಲಿ ಬೆಂಗಳೂರಿನಿಂದ ಮೈಸೂರು, ಊಟಿ, ವಯನಾಡು ಮತ್ತು ಮರಳಿ ಮೈಸೂರು ಮತ್ತು ಬೆಂಗಳೂರು ತಲಪುವುದಾಗಿತ್ತು. ಈಗ ಈ ಸೈಕಲ್‌ ಟೂರ್‌ ಮೈಸೂರಿನಿಂದ ಆರಂಭಗೊಂಡು ವಯನಾಡು-ಊಟಿ-ವಾಲಪಾರಿ-ಕೊಯಮತ್ತೂರು ಹಾಗೂ ಅಂತಿಮವಾಗಿ ಕೊಯಮತ್ತೂರಿನಲ್ಲಿ ಕೊನೆಗೊಳ್ಳಲಿದೆ.

ಕಳೆದ 14 ವರ್ಷಗಳಲ್ಲಿ 900ಕ್ಕೂ ಹೆಚ್ಚು ರೈಡರ್‌ಗಳು 8 ಲಕ್ಷಕ್ಕೂ ಹೆಚ್ಚು ಕಿಲೋ ಮೀಟರ್‌ ಪ್ರಯಾಣ ಮಾಡಿದ್ದಾರೆ. ಸೈಕಲ್‌ ಯಾನದ ಜೊತೆಯಲ್ಲಿ ಹೊಸ ಜಗತ್ತನ್ನು ಕಂಡಿದ್ದಾರೆ. ಹಸಿರು ಕಾಡನ್ನು ಸೀಳಿ ಹೋಗುವ ರಸ್ತೆಗಳು, ವನ್ಯಜೀವಿಗಳ ದರ್ಶನ, ಹಿಲ್‌ ಸ್ಟೇಷನ್‌, ಬಯಲು ಪ್ರದೇಶ, ಬೆಟ್ಟಗಳ ತಪ್ಪಲು ಹೀಗೆ ಟೂರ್‌ ಆಫ್‌ ನೀಲಗಿರೀಸ್‌ ಭಾರತದಲ್ಲೇ ಅತ್ಯಂತ ಅವಿಸ್ಮರಣೀಯ ಸೈಕಲ್‌ ಯಾನವಾಗಿದೆ. ಇದು ಟೂರ್‌ ಡಿ ಫ್ರಾನ್ಸ್‌ ರೀತಿ ಅಲ್ಲದಿದ್ದರೂ ಭಾರತದ ಟೂರ್‌ ಡಿ ಫ್ರಾನ್ಸ್‌ ಎಂದರೆ ತಪ್ಪಾಗಲಾರದು. “ಆರಂಭದಲ್ಲಿ ಬೆಂಗಳೂರಿಗೆ ಸೀಮಿತವಾಗಿದ್ದ ಟೂರ್‌ ಆಫ್‌ ನಿಲಗಿರೀಸ್‌ ಈಗ ಜಗತ್ತಿನ ಪ್ರಮುಖ ಸೈಕಲ್‌‌ ಸವಾರರನ್ನು ಆಕರ್ಷಿಸಿದೆ. ಇಲ್ಲಿ ಯಾವುದೇ ಸ್ಪರ್ಧೆ ಇರುವುದಿಲ್ಲ. ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತ ಸಾಗುವುದಾಗಿದೆ. ಇದರಿಂದಾಗಿ ವಿವಿಧ ಕಾರ್ಪೋರೇಟ್‌ ವಲಯದಲ್ಲಿ ಕೆಲಸ ಮಾಡುವವರು ಪಾಲ್ಗೊಳ್ಳುತ್ತಾರೆ. ಕೆಲಸದ ಒತ್ತಡಗಳಿಂದ ಒಂದು ವಾರ ಮುಕ್ತವಾಗಿ ಪರಿಸರದೊಂದಿಗೆ ಸಾಗುವುದೇ ಈ ಟೂರ್‌ನ ಉದ್ದೇವಾಗಿದೆ,” ಎನ್ನುತ್ತಾರೆ ಟೂರ್‌ ಆಫ್‌ ನಿಲಗಿರೀಸ್‌ನ ಸಂಘಟಕರಲ್ಲಿ ಒಬ್ಬರಾದ ದೀಪಕ್‌ ಮಾಜಿಪಾಟೀಲ್‌.

ದೆಹಲಿ, ಮುಂಬೈ, ದುಬೈ, ಯೂರೋಪಿನ ಕೆಲವು ಸವಾರರು, ಅಮೆರಿಕ ಹಾಗೂ ಸಿಂಗಾಪುರದಿಂದ ಸವಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಭಾರತದ ರಾಷ್ಟ್ರೀಯ ಮಾಜಿ ಚಾಂಪಿಯನ್‌, ಅಮೆರಿಕ ಹೊಟೇಲ್‌ ಉದ್ಯಮಿ ಕನ್ನಡಿಗ ಸತೀಶ್‌ ರಾವ್‌ ಮರಾಠೆ ಅವರು ಈ ಬಾರಿಯೂ ಪಾಲ್ಗೊಳ್ಳುತ್ತಿರುವುದು ಸಂಘಟಕರಲ್ಲಿ ಹರ್ಷವನ್ನುಂಟು ಮಾಡಿದೆ. ಡಿಸೆಂಬರ್‌ 9ರಂದು ಮೈಸೂರಿನ ರಿಯೋ ಮೆರಿಡಿಯನ್‌ ಹೊಟೇಲ್‌ನಲ್ಲಿ ಸೈಕಲ್‌ ಯಾನದ ಬಗ್ಗೆ ಪಾಲ್ಗೊಂಡವರಿಗೆ ವಿವರಣೆ ನೀಡಲಾಗುತ್ತದೆ. ಡಿಸೆಂಬರ್‌ 10ರಂದು ಟೂರ್‌ ಆರಂಭಗೊಳ್ಳುತ್ತದೆ. ಮೈಸೂರಿನಿಂದ ವಯನಾಡಿನ ಕಡೆಗೆ 150 ಕಿಮೀ ಯಾನ. ಡಿಸೆಂಬರ್‌ 11ರಂದು ವಯನಾಡಿನಲ್ಲೇ ಸೈಕಲ್‌ಯಾನ, ಇದು 90 ಕಿಮೀ ಯಾನವಾಗಿರುತ್ತದೆ. ಡಿಸೆಂಬರ್‌ 12 ರಂದು ವಯನಾಡಿನಿಂದ ಊಟಿಗೆ 107 ಕಿಮೀ ಯಾನ. ಡಿಸೆಂಬರ್‌ 13 ವಿಶ್ರಾಂತಿಯ ದಿನವಾಗಿರುತ್ತದೆ. ಡಿಸೆಂಬರ್‌ 14 ಟೂರ್‌ನ ಐದನೇ ಹಂತವಾಗಿದ್ದು, ಊಟಿಯಿಂದ ಕೊಯಮತ್ತೂರಿಗೆ 115 ಕಿಮೀ ಯಾನ. ಡಿಸೆಂಬರ್‌‌ 15 ಕೊಯಮತ್ತೂರಿನಿಂದ ವಾಲ್‌ಪರಾಯ್‌ಗೆ 155 ಕಿಮೀ ಯಾನ. ಡಿಸೆಂಬರ್‌ 16ರಂದು ವಾಲ್‌ಪರಾಯ್‌ನಲ್ಲೇ 105 ಕಿಮೀ ಯಾನವಿರುತ್ತದೆ. ಡಿಸೆಂಬರ್‌ 17 ಟೂರ್‌ನ ಕೊನೆಯ ದಿನವಾಗಿದ್ದು, ವಾಲ್‌ಪರಾಯ್‌ನಿಂದ ಕೊಯಮತ್ತೂರಿಗೆ 157 ಕಿಮೀ ಯಾನ, ಬಳಿಕ ಟೂರ್‌ ಅಂತ್ಯಗೊಳ್ಳುತ್ತದೆ. ಒಟ್ಟು 7 ದಿನಗಳಲ್ಲಿ ಸವಾರರು 900+ಕಿಮೀ ಯಾನವನ್ನು ಪೂರ್ಣಗೊಳಿಸಲಿದ್ದಾರೆ.

ಸೈಕ್ಲಿಂಗ್‌ನಲ್ಲೇ ಬದುಕು ಕಟ್ಟಿಕೊಂಡಿರುವ ಮಾಜಿ ರಾಷ್ಟ್ರೀಯ ಚಾಂಪಿಯನ್‌ ವೆಂಕಟೇಶ್‌ ಸೇರಿದಂತೆ ರಾಜ್ಯದ ಅನೇಕ ಸವಾರರು ಕರ್ನಾಟಕದಿಂದ ಪಾಲ್ಗೊಳ್ಳಲಿದ್ದಾರೆ. ಹೆಚ್ಚಿನ ಮಾಹಿತಿಗೆ www.tourofnilgiris.com ಗೆ ಲಾಗಿನ್‌ ಆಗಿ.

Related Articles