Thursday, March 28, 2024

ಭಾರತದ ಸೋಲಿನ ಸರಮಾಲೆ ಕೊನೆಗೂ ಅಂತ್ಯ, ಮತ್ತೆ ಮಿಂಚಿದ ಮಂಧಾನ

ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ಸತತ ಸೋಲುಗಳ ಸರಮಾಲೆ ಕೊನೆಗೂ ಅಂತ್ಯಗೊಂಡಿದೆ. ಕ್ರಿಕೆಟ್ ಕ್ಲಬ್ ಆ್ ಇಂಡಿಯಾದ ಬ್ರೆಬೌರ್ನ್ ಕ್ರೀಡಾಂಗಣದಲ್ಲಿ ನಡೆದ ತ್ರಿಕೋನ ಟಿ20 ಟೂರ್ನಿಯ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿತು.

PC: BCCI

ಈ ಮೂಲಕ ಸತತ ಆರು ಸೋಲುಗಳಿಗೆ ಅಂತ್ಯ ಹಾಡಿತು. ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯನ್ನು 0-3 ಅಂತರದಲ್ಲಿ ಸೋತಿದ್ದ ಭಾರತ, ನಂತರ ಟಿ20 ಟೂರ್ನಿಯಲ್ಲೂ ಸತತ 3 ಸೋಲುಂಡಿತ್ತು.
ಗುರುವಾರ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್, 18.5 ಓವರ್‌ಗಳಲ್ಲಿ 107 ರನ್‌ಗಳಿಗೆ ಆಲೌಟಾಯಿತು. ಭಾರತ ಪರ ಅನುಜಾ ಪಾಟೀಲ್ 21 ರನ್ನಿತ್ತು 3 ವಿಕೆಟ್ ಉರುಳಿಸಿದರೆ, ರಾಧಾ ಯಾದವ್ 16 ರನ್ನಿಗೆ 2 ವಿಕೆಟ್, ದೀಪ್ತಿ ಶರ್ಮಾ 24 ರನ್ನಿಗೆ 2 ವಿಕೆಟ್ ಹಾಗೂ ಪೂನಂ ಯಾದವ್ 17 ರನ್ನಿತ್ತು 2 ವಿಕೆಟ್ ಉರುಳಿಸಿದರು.

PC: BCCI

ನಂತರ ಸುಲಭ ಗುರಿ ಬೆನ್ನತ್ತಿದ ಭಾರತ ತಂಡ 15.4 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 108 ರನ್ ಗಳಿಸಿ ಜಯ ದಾಖಲಿಸಿತು. ಅಮೋಘ ಫಾರ್ಮ್‌ನಲ್ಲಿರುವ ಎಡಗೈ ಆರಂಭಿಕ ಆಟಗಾರ್ತಿ ಸ್ಮತಿ ಮಂಧಾನ ಕೇವಲ 41 ಎಸೆತಗಳಲ್ಲಿ 8 ಬೌಂಡರಿ ಹಾಗೂ ಒಂದು ಸಿಕ್ಸರ್ ಒಳಗೊಂಡ ಅಜೇಯ 62 ರನ್ ಸಿಡಿಸಿ ಭಾರತದ ಸುಲಭ ಜಯಕ್ಕೆ ಕಾರಣರಾದರು. ಇದು ಟೂರ್ನಿಯಲ್ಲಿ ಮಂಧಾನ ಗಳಿಸಿದ 3ನೇ ಹಾಗೂ ಕಳೆದ 7 ಪಂದ್ಯಗಳಲ್ಲಿ ಸಿಡಿಸಿದ 5ನೇ ಅರ್ಧಶತಕವಾಗಿದೆ.

PC: BCCI

ಈ ಪಂದ್ಯ ಗೆದ್ದರೂ ಭಾರತ ಫೈನಲ್ ತಲುಪಲು ಸಾಧ್ಯವಾಗಿಲ್ಲ. ಟೂರ್ನಿಯಲ್ಲಿ ತಲಾ 3 ಪಂದ್ಯಗಳನ್ನು ಗೆದ್ದಿರುವ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳು ಶನಿವಾರ ನಡೆಯುವ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಸೆಣಸಲಿವೆ.

ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್: 18.5 ಓವರ್‌ಗಳಲ್ಲಿ 107ಕ್ಕೆ ಆಲೌಟ್
ಡೇನಿಯೆಲ್ ವ್ಯಾಟ್ 31, ಏಮಿ ಜೋನ್ಸ್ 15, ನೆಥಾಲಿ ಶಿವರ್ 15; ಅನುಜಾ ಪಾಟೀಲ್ 3/21, ರಾಧಾ ಯಾದವ್ 2/16, ದೀಪ್ತಿ ಶರ್ಮಾ 2/24, ಪೂನಂ ಯಾದವ್ 2/17.
ಭಾರತ: 15.4 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 108 ರನ್
ಸ್ಮತಿ ಮಂಧಾನ ಅಜೇಯ 62, ಹರ್ಮನ್‌ಪ್ರೀತ್ ಕೌರ್ ಅಜೇಯ 20, ಮಿಥಾಲಿ ರಾಜ್ 6, ಜೆಮೈಮಾ ರಾಡ್ರಿಗ್ಸ್ 7; ಡೇನಿಯೆಲ್ ಹೇಜಲ್ 2/17.

Related Articles