Tuesday, April 16, 2024

ಕೇಪ್‌ಟೌನ್‌ನಲ್ಲಿ ವಿರಾಟ ವೈಭವ, 34ನೇ ಶತಕ ಸಿಡಿಸಿದ ರನ್ ಮಷಿನ್

ದಿ ಸ್ಪೋರ್ಟ್ಸ್ ಬ್ಯೂರೋ

ಕೇಪ್‌ಟೌನ್: ಆಧುನಿಕ ಕ್ರಿಕೆಟ್‌ನ ರನ್ ಮಷಿನ್ ವಿರಾಟ್ ಕೊಹ್ಲಿ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ. ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ 3ನೇ ಪಂದ್ಯದಲ್ಲೂ ಕಿಂಗ್ ಕೊಹ್ಲಿ ಶತಕದೊಂದಿಗೆ ಆರ್ಭಟಿಸಿದ್ದಾರೆ.

PC: BCCI

ಇಲ್ಲಿನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ನಡೆದ 6 ಪಂದ್ಯಗಳ ಸರಣಿಯ 3ನೇ ಹಣಾಹಣಿಯಲ್ಲಿ ವಿರಾಟ್ ಕೊಹ್ಲಿ ಅತ್ಯಮೋಘ, ಅಜೇಯ 160 ರನ್ ಬಾರಿಸಿದರು. 159 ಎಸೆತಗಳ ವಿರಾಟ್ ಕೊಹ್ಲಿ ಅವರ ಇನ್ನಿಂಗ್ಸ್‌ನಲ್ಲಿ 12 ಮನಮೋಹಕ ಬೌಂಡರಿಗಳು ಮತ್ತು 2 ಸಿಡಿಲಬ್ಬರದ ಸಿಕ್ಸರ್‌ಗಳಿದ್ದವು.

ಹರಿಣಗಳ ವಿರುದ್ಧ ಆರ್ಭಟಿಸುವ ಮೂಲಕ ವಿರಾಟ್ ಕೊಹ್ಲಿ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 34ನೇ ಶತಕ ಸಾಧನೆ ಮಾಡಿದರು. ಅಲ್ಲದೆ ಪ್ರಸಕ್ತ ಸರಣಿಯಲ್ಲಿ ವಿರಾಟ್ ಬಾರಿಸಿದ 2ನೇ ಶತಕ ಇದಾಗಿದೆ. ಡರ್ಬಾನ್‌ನ ಕಿಂಗ್ಸ್‌ಮೀಡ್ ಮೈದಾನದಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ಕೊಹ್ಲಿ 112ರನ್ ಗಳಿಸಿದ್ದರು.

ಅಲ್ಲದೆ ವಿರಾಟ್ ಕೊಹ್ಲಿ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ಪರ ನಾಯಕನಾಗಿ ಅತಿ ಹೆಚ್ಚು ಶತಕಗಳನ್ನು ಸಿಡಿಸಿದ ದಾಖಲೆ ಬರೆದರು. ನಾಯಕನಾಗಿ 12ನೇ ಶತಕ ಬಾರಿಸಿದ ಕೊಹ್ಲಿ, ಮಾಜಿ ನಾಯಕ ಹಾಗೂ ಬಂಗಾಳದ ಹುಲಿ ಖ್ಯಾತಿ ಸೌರವ್ ಗಂಗೂಲಿ ಅವರ 11 ಶತಕಗಳ ದಾಖಲೆಯನ್ನು ಮುರಿದರು.

ಕೇಪ್‌ಟೌನ್‌ನಲ್ಲಿ ವಿರಾಟ ಬ್ಯಾಟಿಂಗ್ ವೈಭವ

ರನ್: 160*

ಎಸೆತ: 159

ಬೌಂಡರಿ: 12

ಸಿಕ್ಸರ್: 02

ಸ್ಟ್ರೈಕ್‌ರೇಟ್: 100.62

Related Articles