ಅವಮಾನ… ನೋವು… ಬೇಸರ… ಉನ್ಮಾದ… ಟೀಕೆ-ಟಿಪ್ಪಣಿಗಳಿಂದ ಬೆಂದು ಹೋಗಿದ್ದ ಜೀವ.. ಆ ಬೇಗುದಿಯೆಲ್ಲಾ ಕಣ್ಣೀರಧಾರೆಯಾಗಿ ಹರಿಯಿತು. ಪ್ರಸಕ್ತ ಕ್ರಿಕೆಟ್ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಟೆಸ್ಟ್ ಬ್ಯಾಟ್ಸ್‌ಮನ್, ವಿಶ್ವದ ನಂ.1 ಟೆಸ್ಟ್ ಬ್ಯಾಟ್ಸ್‌ಮನ್, ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವನ್ ಸ್ಮಿತ್ ಸಿಡ್ನಿ ವಿಮಾನನಿಲ್ದಾಣದಲ್ಲಿ ಕಣ್ಣೀರು ಹಾಕಿ ನನ್ನನ್ನು ಕ್ಷಮಿಸಿ ಎಂದು ದೈನ್ಯವಾಗಿ ಬೇಡಿಕೊಳ್ಳುತ್ತಿದ್ದಂತೆ ನೈಜ ಕ್ರಿಕೆಟ್ ಪ್ರೇಮಿಗಳು ಮರುಕ ಪಟ್ಟಿದ್ದರು.
ತಪ್ಪು ಮಾಡುವುದು ಮಾನವ ಸಹಜ ಗುಣ. ಅದನ್ನು ಎಲ್ಲರ ಮುಂದೆ ಧೈರ್ಯದಿಂದ ಒಪ್ಪಿಕೊಳ್ಳುವುದು ಅದಕ್ಕಿಂತ ದೊಡ್ಡ ಗುಣ. ತಮ್ಮ ಅದ್ಭುತ ಆಟದಿಂದ ಇಡೀ ಕ್ರಿಕೆಟ್ ಜಗತ್ತೇ ಮೆಚ್ಚುವಂತಹ ಆಟಗಾರನಾಗಿ ಬೆಳೆದು ನಿಂತಿದ್ದ ಸ್ಟೀವನ್ ಸ್ಮಿತ್ ಇಂದು ಅದೇ ಕ್ರಿಕೆಟ್ ಜಗತ್ತಿನ ಮುಂದೆ ತಲೆ ತಗ್ಗಿಸಿ ನಿಂತಿದ್ದಾರೆ ನಿಜ. ಆದರೆ ಮಾಡಿದ ತಪ್ಪನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳುವ ಮೂಲಕ ತಪ್ಪಿನಲ್ಲೂ ಮಾದರಿಯಾಗಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಕೇಪ್‌ಟೌನ್ ಟೆಸ್ಟ್ ಪಂದ್ಯದಲ್ಲಿ ಬಾಲ್ ಟ್ಯಾಂಪರಿಂಗ್ ನಡೆಸಲು ಆಸ್ಟ್ರೇಲಿಯಾ ತಂಡ ವ್ಯವಸ್ಥಿತವಾಗಿ ಯೋಜನೆ ರೂಪಿಸಿತ್ತು. ಆ ಯೋಜನೆಯನ್ನು ಕಾರ್ಯಗತಗೊಳಿಸಲು ಹೋಗಿ ಕ್ಯಾಮರಾನ್ ಬ್ಯಾಂಕ್ರಾಫ್ಟ್ ಕ್ಯಾಮರಾಗಳ ಕಣ್ಣಿನಲ್ಲಿ ಸೆರೆಯಾಗಿದ್ದರು. 3ನೇ ದಿನದಾಟದ ಅಂತ್ಯದ ನಂತರ ಬ್ಯಾಂಕ್ರಾಫ್ಟ್ ಅವರನ್ನು ಸುದ್ದಿಗೋಷ್ಠಿಗೆ ಕರೆ ತಂದಿದ್ದ ಸ್ಟೀವನ್ ಸ್ಮಿತ್, ‘ನಾವು ಮಣ್ಣು ತಿನ್ನುವ ಕೆಲಸ ಮಾಡಿದ್ದೇವೆ’ ಎಂದು ಒಪ್ಪಿಕೊಂಡಿದ್ದರು. ಸಾಮಾನ್ಯವಾಗಿ ಕಾಂಗರೂಗಳು ತಮ್ಮ ತಪ್ಪನ್ನು ಹೀಗೆಲ್ಲಾ ಬಹಿರಂಗವಾಗಿ ಒಪ್ಪಿಕೊಳ್ಳುವವರಲ್ಲ. ಸತ್ಯ ಕಣ್ಣಿಗೆ ರಾಚುವಂತಿದ್ದರೂ ಆಸೀಸ್ ಆಟಗಾರರು ಆ ಸತ್ಯವನ್ನು ಸುಳ್ಳಾಗಿಸಿದ ನಿದರ್ಶನಗಳು ಬಹಳಷ್ಟಿವೆ. ಭಾರತ ತಂಡದ 2008ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ನಡೆದ ವಿವಾದಗಳೇ ಇದಕ್ಕೆ ಸಾಕ್ಷಿ.
ಕ್ರೀಡಾ ಸ್ಫೂರ್ತಿಯ ವಿರುದ್ಧವಾಗಿ ಕಾಂಗರೂಗಳು ಕೆಟ್ಟ ಇತಿಹಾಸ ಹೊಂದಿರುವಾಗ ‘ನಾನು ತಪ್ಪು ಮಾಡಿದ್ದೇನೆ’ ಎಂದು ಒಪ್ಪಿಕೊಳ್ಳುವ ಮೂಲಕ ಸ್ಟೀವನ್ ಸ್ಮಿತ್ ನಿಜಕ್ಕೂ ಮಾದರಿಯಾಗಿದ್ದಾರೆ.
ಸ್ಟೀವನ್ ಸ್ಮಿತ್ ಒಬ್ಬ ಗಂಡಸಿನ ರೀತಿ ತಪ್ಪನ್ನು ಒಪ್ಪಿಕೊಳ್ಳುವ ಧೈರ್ಯ ತೋರಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸ್ಮಿತ್ ಕಣ್ಣೀರಿಟ್ಟದ್ದನ್ನು ನೋಡಿ ನನಗೆ ತುಂಬಾ ನೋವಾಯಿತು. ವಿಮಾನ ನಿಲ್ದಾಣದಲ್ಲಿ ಸ್ಮಿತ್ ಅವರನ್ನು ನಡೆಸಿಕೊಂಡ ರೀತಿ ಬೇಸರ ತರಿಸಿದೆ. – ಶೋಯೆಬ್ ಅಖ್ತರ್, ಪಾಕಿಸ್ತಾನದ ಮಾಜಿ ಕ್ರಿಕೆಟಿಗ.
ಐಸಿಸಿಯಿಂದ ಒಂದು ಪಂದ್ಯದ ನಿಷೇಧಕ್ಕೊಳಗಾಗಿ, ಕ್ರಿಕೆಟ್ ಆಸ್ಟ್ರೇಲಿಯಾದಿಂದ ಒಂದು ವರ್ಷದ ನಿಷೇಧ ಶಿಕ್ಷೆಗೆ ಗುರಿಯಾದ ನಂತರ ಜೋಹಾನೆಸ್‌ಬರ್ಗ್‌ನಿಂದ ಸಿಡ್ನಿಗೆ ಹೊರಟ ಸ್ಟೀವನ್ ಸ್ಮಿತ್ ಅವರನ್ನು ಅಲ್ಲಿ ನಡೆಸಿಕೊಂಡ ಪರಿ ಅಕ್ಷರಶಃ ಅಕ್ಷಮ್ಯ. ಒಬ್ಬ ಕಳ್ಳನನ್ನು, ಒಬ್ಬ ಕೊಲೆಗಾರನನ್ನು ಎಳೆದುಕೊಂಡು ಹೋಗುವ ರೀತಿಯಲ್ಲಿ ಸ್ಮಿತ್ ಅವರನ್ನು ದಕ್ಷಿಣ ಆಫ್ರಿಕಾ ಪೊಲೀಸರು ಎರಡೂ ಕೈ ಹಿಡಿದು ಕರೆದೊಯ್ದರು. ಇದನ್ನು ನೋಡಿದ ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಟ್ವಿಟರ್‌ನಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೋಹಾನೆಸ್‌ಬರ್ಗ್‌ನಲ್ಲಿ ಸ್ಟೀವನ್ ಸ್ಮಿತ್ ಅವರನ್ನು ನಡೆಸಿಕೊಂಡ ರೀತಿ ತೀವ್ರ ಬೇಸರ ತರಿಸಿದೆ. ಇದು ನಿಜಕ್ಕೂ ನಾಚಿಕೆಗೇಡು. ಅಲ್ಲಿದ್ದವರೆಲ್ಲಾ ಹುಚ್ಚರು.
– ಸೌರವ್ ಗಂಗೂಲಿ, ಟೀಮ್ ಇಂಡಿಯಾದ ಮಾಜಿ ನಾಯಕ
ಜೋಹಾನೆಸ್‌ಬರ್ಗ್‌ನಿಂದ ಗುರುವಾರ ಸಿಡ್ನಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ದೇಶದ ಕ್ರಿಕೆಟ್ ಹೀರೊನನ್ನು ಅಲ್ಲಿ ನೆರೆದಿದ್ದವರು ಅತ್ಯಂತ ಹೀನಾಯವಾಗಿ ನಡೆಸಿಕೊಂಡರು. ಬೌನ್ಸರ್‌ಗಳ ಭದ್ರತೆಯ ಮಧ್ಯೆ ನಡೆದುಕೊಂಡು ಹೋಗುತ್ತಿದ್ದ ಸ್ಮಿತ್ ಅವರನ್ನು ಜನ ಮೋಸಗಾರ, ಮೋಸಗಾರನೆಂದು ಜರಿದರು. ಹಾಗಾದರೆ ನಿಜಕ್ಕೂ ಸ್ಮಿತ್ ಮೋಸಗಾರನೇ?.
ದುಡ್ಡಿನ ಆಸೆಗೆ ಬಲಿ ಬಿದ್ದು ಮ್ಯಾಚ್ ಫಿಕ್ಸಿಂಗ್ ನಡೆಸಿ ದೇಶಕ್ಕೆ ಕಳಂಕ ತಂದವರೇ ಮತ್ತೆ ರಾಜಾರೋಷವಾಗಿ ಆಡುತ್ತಿದ್ದಾರೆ. ಅಂಥದ್ದರಲ್ಲಿ ಸ್ಟೀವನ್ ಸ್ಮಿತ್ ಮಾಡಿದ ತಪ್ಪೇನಾದರೂ ಏನು? ಬಾಲ್ ಟ್ಯಾಂಪರಿಂಗ್ ನಡೆಯುತ್ತಿದೆ ಎಂಬುದು ಗೊತ್ತಿದ್ದೂ ಅದನ್ನು ತಡೆಯದೇ ಹೋಗಿದ್ದು ತಪ್ಪೇ. ಇದು ಕ್ರೀಡಾ ಸ್ಫೂರ್ತಿಗೆ ವಿರುದ್ಧ ಎಂಬುದೂ ನಿಜ. ಆದರೆ ಅದರ ಹಿಂದಿನ ಉದ್ದೇಶ ದೇಶವನ್ನು, ತಂಡವನ್ನು ಗೆಲ್ಲಿಸುವುದಾಗಿತ್ತೇ ವಿನಃ ದೇಶಕ್ಕೆ ಕಳಂಕ ಹಚ್ಚುವುದಾಗಿರಲಿಲ್ಲ. ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಸ್ಮಿತ್ ತಪ್ಪು ಮಾಡಿದ್ದಾರೆ. ಅದರಲ್ಲಿ ಯಾವ ಅನುಮಾನವೂ ಬೇಡ. ಆದರೆ ಅವರು ಮೋಸಗಾರನಂತೂ ಅಲ್ಲವೇ ಅಲ್ಲ.
ಬಹುಶಃ ನಾನು ಭಾವನಾತ್ಮಕವಾಗಿ ಯೋಚಿಸುತ್ತಿರಬಹುದು. ಆದರೆ ನನ್ನ ಕಣ್ಣಿಗೆ ಸ್ಟೀವನ್ ಸ್ಮಿತ್ ಮೋಸಗಾರನಂತೆ ಖಂಡಿತಾ ಕಾಣುತ್ತಿಲ್ಲ. ದೇಶಕ್ಕಾಗಿ ತಂಡಕ್ಕಾಗಿ ಟೆಸ್ಟ್ ಪಂದ್ಯವನ್ನು ಗೆಲ್ಲಲೇಬೇಕೆಂಬ ಹತಾಶ ನಾಯಕನಾಗಿ ಕಾಣುತ್ತಿದ್ದಾರೆ. ಆತ ಗೆಲ್ಲಲು ಅನುಸರಿಸಿದ ದಾರಿ ತಪ್ಪು ನಿಜ. ಆದರೆ ಭ್ರಷ್ಟ, ಮೋಸಗಾರನೆಂಬ ಕಳಂಕವನ್ನು ದಯವಿಟ್ಟು ಆತನಿಗೆ ಅಂಟಿಸಬೇಡಿ. – ಗೌತಮ್ ಗಂಭೀರ್, ಭಾರತದ ಕ್ರಿಕೆಟಿಗ.
ಸಿಡ್ನಿ ವಿಮಾನನಿಲ್ದಾಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸ್ಟೀವನ್ ಸ್ಮಿತ್ ತಮ್ಮ ತಪ್ಪನ್ನು ಒಪ್ಪಿಕೊಂಡು, ನನ್ನನ್ನು ಕ್ಷಮಿಸಿ ಎಂದು ಕಣ್ಣೀರು ಹಾಕಿದರು. ಕ್ರಿಕೆಟ್ ಆಸ್ಟ್ರೇಲಿಯಾಗೆ ದುಡ್ಡಿನ ಹೊಳೆಯೇ ಹರಿಯುವಂತೆ ಮಾಡಿದ ಆಟಗಾರನನ್ನು ಈ ಸಂದರ್ಭದಲ್ಲಿ ಅಲ್ಲಿನ ಕ್ರಿಕೆಟ್ ಮಂಡಳಿ ಏಕಾಂಗಿಯಾಗಿಸಿತ್ತು. ಸುದ್ದಿಗೋಷ್ಠಿಯಲ್ಲಿ ಸ್ಮಿತ್ ಅವರ ತಂದೆ ಪೀಟರ್ ಸ್ಮಿತ್ ಮಗನ ಜೊತೆಗಿದ್ದರು. ನಾನು ಮಾಡಿದ ತಪ್ಪಿನಿಂದ ನನ್ನ ಹೆತ್ತವರು ನೋವು ಅನುಭವಿಸುತ್ತಿದ್ದಾರೆ ಎನ್ನುವಾಗ ಸ್ಮಿತ್ ಪುಟ್ಟ ಮಗುವಿನ ರೀತಿ ಅತ್ತು ಬಿಟ್ಟರು. ನೊಂದು ಬೆಂದು ಹೋಗಿದ್ದ ಮಗನನ್ನು ತಂದೆ ಸಂತೈಸಿದರು.
ನನ್ನನ್ನು ದಯವಿಟ್ಟು ಕ್ಷಮಿಸಿ. ನಾನು ಕ್ರಿಕೆಟ್ ಆಟವನ್ನು ಪ್ರೀತಿಸುತ್ತೇನೆ. ಪುಟ್ಟ ಮಕ್ಕಳು ಕ್ರಿಕೆಟ್ ಆಟವನ್ನು ಆಡಲು ಬಯಸುವುದನ್ನು ಪ್ರೀತಿಸುತ್ತೇನೆ. ಒಂದು ತಪ್ಪು ನಿರ್ಧಾರವನ್ನು, ಪ್ರಶ್ನಾರ್ಹ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ಅದರಿಂದಾಗುವ ಪರಿಣಾಮಗಳನ್ನು ದಯವಿಟ್ಟು ಯೋಚಿಸಿ. ನಮ್ಮ ಒಂದು ತಪ್ಪು ನಿರ್ಧಾರ ತಂದೆ-ತಾಯಿ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇಲ್ಲಿ ನನ್ನ ಹಿಂದೆ ತಂದೆ ಹೇಗೆ ನಿಂತಿದ್ದಾರೆ ನೋಡಿ. ಎಲ್ಲರಿಗೂ ನನ್ನಿಂದ ನೋವಾಗಿದೆ. ನನ್ನನ್ನು ಕ್ಷಮಿಸಿ. – ಸ್ಟೀವನ್ ಸ್ಮಿತ್, ಆಸ್ಟ್ರೇಲಿಯಾ ಕ್ರಿಕೆಟಿಗ.
ಬಾಲ್ ಟ್ಯಾಂಪರಿಂಗ್ ಪ್ರಕರಣದ ಹಿಂದಿನ ಸೂತ್ರಧಾರ, ಸ್ಟೀವನ್ ಸ್ಮಿತ್ ಅವರೊಂದಿಗೆ ಒಂದು ವರ್ಷದ ನಿಷೇಧ ಶಿಕ್ಷೆಗೆ ಗುರಿಯಾಗಿರುವ ಮಾಜಿ ಉಪನಾಯಕ ಡೇವಿಡ್ ವಾರ್ನರ್ ಎಂಬ ಸತ್ಯ ಹೆಚ್ಚಿನವರಿಗೆ ಗೊತ್ತೇ ಇಲ್ಲ. ಹೌದು, ಈ ಎಲ್ಲಾ ನಾಟಕದ ಹಿಂದಿನ ರೂವಾರಿ ವಾರ್ನರ್. ಪಂದ್ಯ ಗೆಲ್ಲಲು ಅಡ್ಡ ದಾರಿ ಹಿಡಿಯುವಂತೆ ಪ್ರೇರೇಪಿಸಿದ್ದು ಡೇವಿಡ್ ವಾರ್ನರ್. ಬಾಲ್ ಟ್ಯಾಂಪರಿಂಗ್ ನಡೆಸಿ ಪಂದ್ಯ ಗೆಲ್ಲುವ ತಂತ್ರವನ್ನು ಹೆಣೆದು, ಆ ತಂತ್ರವನ್ನು ಕ್ಯಾಮರಾನ್ ಬ್ಯಾಂಕ್ರಾಫ್ಟ್ ಗೆ ವಾರ್ನರ್ ಹೇಳಿ ಕೊಟ್ಟಿದ್ದರು.
ಹಿರಿಯ ಆಟಗಾರ ಮತ್ತು ತಂಡದ ಉಪನಾಯಕ ವಾರ್ನರ್ ಹೇಳಿದ್ದನ್ನು ಚಾಚೂ ತಪ್ಪದೆ ಪಾಲಿಸಿದ ಬ್ಯಾಂಕ್ರಾಫ್ಟ್ ಕ್ಯಾಮರಾಗಳ ಕಣ್ಣಿನಲ್ಲಿ ಸೆರೆಯಾದರು ಮತ್ತು ಕ್ರಿಕೆಟ್ ಜಗತ್ತಿನ ಮುಂದೆ ತಾವೂ ಬೆತ್ತಲಾದರೂ, ತಂಡವನ್ನೂ ಬೆತ್ತಲಾಗಿಸಿದರು. ಬಾಲ್ ಟ್ಯಾಂಪರಿಂಗ್ ನಡೆಯಲಿದೆ ಎಂಬುದು ಗೊತ್ತಿದ್ದೂ ನಾಯಕನಾಗಿ ಅದನ್ನು ತಡೆಯದಿದ್ದದ್ದು ಸ್ಟೀವನ್ ಸ್ಮಿತ್ ಅವರ ದೊಡ್ಡ ತಪ್ಪು. ಹಾಗಂತ ಅವರು ಆ ತಪ್ಪನ್ನು ಡೇವಿಡ್ ವಾರ್ನರ್ ಮೇಲೆ ಹಾಕದೆ ಎಲ್ಲಾ ಹೊಣೆಯನ್ನು ತಾವೇ ಹೊತ್ತುಕೊಂಡು, ಸುದ್ದಿಗೋಷ್ಠಿಯಲ್ಲಿ ಮಾಧ್ಯಮಗಳನ್ನು ಎದುರಿಸಿದರು. ಎಲ್ಲವೂ ನನ್ನ ತಪ್ಪು, ನನ್ನನ್ನು ಕ್ಷಮಿಸಿ ಎಂದು ಅಂಗಲಾಚಿಕೊಂಡರು.
ತಪ್ಪು ನಡೆಯಲು ಅವಕಾಶ ಮಾಡಿಕೊಟ್ಟು ನಾನು ದೊಡ್ಡ ತಪ್ಪು ಮಾಡಿದ್ದೇನೆ. ಇದಕ್ಕಾಗಿ ಯಾರನ್ನೂ ದೂಷಿಸುವುದಿಲ್ಲ. ಎಲ್ಲಾ ಹೊಣೆಯನ್ನು ನಾನೇ ಹೊತ್ತುಕೊಳ್ಳುತ್ತೇನೆ. ಆ ತಪ್ಪಿನ ಪರಿಣಾಮ ಏನೆಂಬುದು ಈಗ ಅರ್ಥವಾಗುತ್ತಿದೆ. ಇದು ನನ್ನ ನಾಯಕತ್ವದ ವೈಫಲ್ಯ. ಇದು ನನ್ನನ್ನು ಜೀವನದುದ್ದಕ್ಕೂ ಕಾಡುತ್ತಲೇ ಇರುತ್ತದೆ. ನನ್ನನ್ನು ದಯವಿಟ್ಟು ಕ್ಷಮಿಸಿ. – ಸ್ಟೀವನ್ ಸ್ಮಿತ್, ಆಸ್ಟ್ರೇಲಿಯಾ ಕ್ರಿಕೆಟಿಗ.
ಎಷ್ಟೇ ದೊಡ್ಡ ಆಟಗಾರನಾದರೂ ಕ್ರೀಡಾ ಸ್ಫೂರ್ತಿಯಿಂದ ಆಡುವುದು ತುಂಬಾ ಮುಖ್ಯ. ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಬ್ರಿಯಾನ್ ಲಾರಾ, ರಿಕಿ ಪಾಂಟಿಂಗ್ ಕ್ರಿಕೆಟ್ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠರೆಂದು ಕರೆಸಿಕೊಳ್ಳುತ್ತಾರೆ. ಆದರೆ ಸಚಿನ್, ದ್ರಾವಿಡ್, ಲಾರಾ ಅವರಿಗಿರುವ ಗೌರವ ರಿಕಿ ಪಾಂಟಿಂಗ್ ಅವರಿಗೆ ಸಿಗುವುದಿಲ್ಲ. ಕಾರಣ ಸ್ಪಷ್ಟ. ಕ್ರಿಕೆಟ್ ಮೈದಾನಗಳಲ್ಲಿ ಪಾಂಟಿಂಗ್ ಹಲವಾರು ಬಾರಿ ಕ್ರೀಡಾ ಸ್ಫೂರ್ತಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಸ್ಟೀವನ್ ಸ್ಮಿತ್ ಕೂಡ ಪಾಂಟಿಂಗ್ ಹಾದಿಯಲ್ಲೇ ಸಾಗುತ್ತಿದ್ದಾರೆ. ದೊಡ್ಡ ಆಟಗಾರನಾದರೂ ಕ್ರೀಡಾ ಸ್ಫೂರ್ತಿಗೆ ವಿರುದ್ಧವಾಗಿ ನಡೆದುಕೊಂಡವರನ್ನು ಜನ ಯಾವತ್ತೂ ಗೌರವದಿಂದ ಕಾಣುವುದಿಲ್ಲ.