Saturday, July 27, 2024

ಮುದ್ದಿನ ಮಡದಿಗೆ ಪ್ರೇಮಿಗಳ ದಿನದ ಉಡುಗೊರೆ ನೀಡಿದ ಹಿಟ್‌ಮ್ಯಾನ್

ಬೆಂಗಳೂರು: ಟೀಮ್ ಇಂಡಿಯಾದ ಸ್ಟೈಲಿಷ್ ಬ್ಯಾಟ್ಸ್‌ಮನ್ ಹಾಗೂ ಕ್ರಿಕೆಟ್ ಜಗತ್ತಿನಲ್ಲಿ ಹಿಟ್‌ಮ್ಯಾನ್ ಎಂದೇ ಖ್ಯಾತಿ ಪಡೆದಿರುವ ರೋಹಿತ್ ಶರ್ಮಾ, ವಿಶೇಷ ದಿನಗಳಂದು ಪತ್ನಿ ರಿತಿಕಾ ಸಜ್‌ದೇ ಅವರಿಗೆ ಭರ್ಜರಿ ಉಡುಗೊರೆಗಳನ್ನು ನೀಡುವುದಕ್ಕೆ ಹೆಸರುವಾಸಿ.
PC: Instagram?Rohit Sharma
ಕಳೆದ ವರ್ಷದ ಡಿಸೆಂಬರ್ 13ರಂದು ರೋಹಿತ್ ಶರ್ಮಾ, ಮೊಹಾಲಿಯಲ್ಲಿ ನಡೆದ ಪ್ರವಾಸಿ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಅಮೋಘ ದ್ವಿಶತಕ ಸಿಡಿಸುವ ಮೂಲಕ ವಿವಾಹ ವಾರ್ಷಿಕೋತ್ಸವಕ್ಕೆ ಪತ್ನಿಗೆ ಭರ್ಜರಿ ಉಡುಗೊರೆ ನೀಡಿದ್ದರು.
ಮಂಗಳವಾರ ಪೋರ್ಟ್ ಎಲಿಜಬೆತ್‌ನ ಸೇಂಟ್ ಜಾರ್ಜ್ ಪಾರ್ಕ್ ಮೈದಾನದಲ್ಲಿ ನಡೆದ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ 5ನೇ ಏಕದಿನ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಪತ್ನಿ ರಿತಿಕಾಗೆ ಪ್ರೇಮಿಗಳ ದಿನದ ಉಡುಗೊರೆ ನೀಡಿದ್ದಾರೆ.
ಬುಧವಾರ ವ್ಯಾಲೆಂಟೈನ್ಸ್ ಡೇ(ಪ್ರೇಮಿಗಳ ದಿನ). ಮಂಗಳವಾರದ ಪಂದ್ಯದಲ್ಲಿ ತಾವು ಗೆದ್ದ ಪಂದ್ಯಶ್ರೇಷ್ಠ ಪ್ರಶಸ್ತಿಯ ಸೆಲ್ಫಿ ಕ್ಲಿಕ್ಕಿಸಿರುವ ರೋಹಿತ್ ಶರ್ಮಾ, ಅದನ್ನು ತಮ್ಮನ ಇನ್ಸ್‌ಟಾಗ್ರಾಮ್ ಖಾತೆಯಲ್ಲಿ ಪ್ರಕಟಿಸಿ ಮುದ್ದಿನ ಮಡದಿಗೆ ಅರ್ಪಿಸಿದ್ದಾರೆ. ಜತೆಗೆ ‘ಹ್ಯಾಪಿ ವ್ಯಾಲೆಂಟೈನ್ಸ್ ಡೇ ರಿತ್ಸ್‌‘ ಎಂದು ಬರೆದುಕೊಂಡಿದ್ದಾರೆ.
5ನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ 126 ಎಸೆತಗಳಲ್ಲಿ 115 ರನ್ ಗಳಿಸಿ ಭಾರತದ ಗೆಲುವಿಗೆ ಕಾರಣರಾಗಿದ್ದರು. ರೋಹಿತ್ ಅವರ ಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡವನ್ನು 73 ರನ್‌ಗಳಿಂದ ಬಗ್ಗು ಬಡಿದಿದ್ದ ಟೀಮ್ ಇಂಡಿಯಾ, 6 ಪಂದ್ಯಗಳ ಏಕದಿನ ಸರಣಿಯನ್ನು ಇನ್ನೂ ಒಂದು ಪಂದ್ಯ ಬಾರಿ ಇರುವಂತೆಯೇ 4-1ರಿಂದ ಗೆದ್ದಿತ್ತು. ಸರಣಿಯ 6ನೇ ಪಂದ್ಯ ಶುಕ್ರವಾರ ಸೆಂಚೂರಿಯನ್‌ನ ಸೂಪರ್ ಸ್ಪೋರ್ಟ್ ಪಾರ್ಕ್ ಮೈದಾನದಲ್ಲಿ ನಡೆಯಲಿದ್ದು, ಭಾರತ 5-1ರಲ್ಲಿ ಸರಣಿ ಗೆಲ್ಲುವ ಉತ್ಸಾಹದಲ್ಲಿದೆ.

Related Articles