Saturday, July 27, 2024

ಮಯಾಂಕ್ ಅಬ್ಬರದ ಶತಕ, ಬರೋಡಾ ವಿರುದ್ಧ ಕರ್ನಾಟಕ ‘ವಿಜಯ’ ಪತಾಕೆ

ದಿ ಸ್ಪೋರ್ಟ್ಸ್ ಬ್ಯೂರೋ

ಬೆಂಗಳೂರು: ಆರಂಭಿಕ ಬ್ಯಾಟ್ಸ್‌ಮನ್ ಮಯಾಂಕ್ ಅಗರ್ವಾಲ್ ಅಬ್ಬರದ ಶತಕ ಬಾರಿಸಿ, ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ ಕರ್ನಾಟಕ ತಂಡಕ್ಕೆ ಗೆಲುವಿನ ಆರಂಭ ತಂದುಕೊಟ್ಟಿದ್ದಾರೆ.

PC: Twitter/Mayank Agarwal

ಬೆಂಗಳೂರು ಹೊರವಲಯಲ್ಲಿರುವ ಜಸ್ಟ್ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ಬುಧವಾರ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ಕರ್ನಾಟಕ ತಂಡ ಬರೋಡ ತಂಡವನ್ನು ವಿ.ಜಯದೇವನ್(ವಿಜೆಡಿ) ನಿಯಮದ ಪ್ರಕಾರ 85 ರನ್‌ಗಳಿಂದ ಭರ್ಜರಿಯಾಗಿ ಬಗ್ಗು ಬಡಿಯಿತು.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಆರ್.ವಿನಯ್ ಕುಮಾರ್ ನಾಯಕತ್ವದ ಕರ್ನಾಟಕ ತಂಡ, ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 312 ರನ್ ದಾಖಲಿಸಿತು. ಬಲಗೈ ಓಪನರ್ ಮಯಾಂಕ್ ಅಗರ್ವಾಲ್ 90 ಎಸೆತಗಳಲ್ಲಿ 14 ಬೌಂಡರಿ ಮತ್ತು 2 ಸಿಕ್ಸರ್‌ಗಳ ನೆರವಿನಿಂದ ಆಕರ್ಷಕ 109 ರನ್ ಸಿಡಿಸಿ ರಾಜ್ಯ ಪಡೆಯ ಉತ್ತಮ ಮೊತ್ತಕ್ಕೆ ಕಾರಣರಾದರು. 4ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಆರ್.ಸಮರ್ಥ್ 69 ಎಸೆತಗಳಲ್ಲಿ 77 ರನ್ ಸಿಡಿಸಿದರು.
ಬಳಿಕ ಕಠಿಣ ಗುರಿ ಬೆನ್ನತ್ತಿದ ಬರೋಡ ತಂಡ 37 ಓವರ್‌ಗಳಲ್ಲಿ 8 ವಿಕೆಟ್‌ಗೆ 180 ರದ್ದ ವೇಳೆ ಪಂದ್ಯಕ್ಕೆ ಮಂದ ಬೆಳಕು ಅಡ್ಡಿ ಪಡಿಸಿತು. ಈ ಹಂತದಲ್ಲಿ ಫಲಿತಾಂಶಕ್ಕಾಗಿ ವಿಜೆಡಿ ನಿಯಮದ ಮೊರೆ ಹೋಗಲಾಯಿತು. ಆ ಮೂಲಕ ಕರ್ನಾಟಕ ತಂಡ 85 ರನ್‌ಗಳ ಜಯಭೇರಿ ಬಾರಿಸಿತು. ಕರ್ನಾಟಕ ಪರ ಆಫ್‌ಸ್ಪಿನ್ನರ್ ಕೆ.ಗೌತಮ್ 42 ರನ್ ನೀಡಿ 4 ವಿಕೆಟ್ ಪಡೆದರೆ, ಲೆಗ್‌ಸ್ಪಿನ್ನರ್ ಶ್ರೇಯಸ್ ಗೋಪಾಲ್ 30 ರನ್ನಿತ್ತು 3 ಕಬಳಿಸಿದರು.

ಸಂಕ್ಷಿಪ್ತ ಸ್ಕೋರ್
ಕರ್ನಾಟಕ: 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 312 ರನ್ (ಮಯಾಂಕ್ ಅಗರ್ವಾಲ್ 109, ಆರ್.ಸಮರ್ಥ್ 77, ಆರ್.ವಿನಯ್ ಕುಮಾರ್ 34*)
ಬರೋಡ: 37 ಓವರ್‌ಗಳಲ್ಲಿ 8 ವಿಕೆಟ್‌ಗೆ 180 ರನ್ (ಕೇದಾರ್ ದೇವ್‌‘ರ್ 48, ಕೃಣಾಲ್ ಪಾಂಡ್ಯ 39; ಕೆ.ಗೌತಮ್ 4/42, ಶ್ರೇಯಸ್ ಗೋಪಾಲ್ 3/30).
ವಿಜೆಡಿ ನಿಯಮದ ಪ್ರಕಾರ ಕರ್ನಾಟಕಕ್ಕೆ 85 ರನ್‌ಗಳ ಜಯ

Related Articles