Saturday, July 20, 2024

ಮನೆ ಸುಟ್ಟು ಕರಕಲಾದರೂ ಭಾರತದ ಪರ ಆಡುತ್ತಿದ್ದರು!!

ಇದು ಯಾವುದೋ ಸಿನಿಮಾದ ಕತೆಗೆ ನೀಡಿದ ಪೀಠಿಕೆ ಅಲ್ಲ. ಇದು ಭಾರತ ಫುಟ್ಬಾಲ್‌ ತಂಡದಲ್ಲಿ ಆಡುತ್ತಿದ್ದ ಮಣಿಪುರದ ಆಟಗಾರರ ಸ್ಥಿತಿ. ಅವರ ಮನೆ ಸುಟ್ಟು ಕರಕಲಾಗಿದ್ದರೂ Indian football player in Manipur lost their home ಅವರಿಗೆ ದೇಶದ ಪರ ಆಡಬೇಕಾದ ಅನಿವಾರ್ಯತೆ ಇದೆ.

ಭಾರತ ಫುಟ್ಬಾಲ್‌ ತಂಡದ ಗೋಲ್‌ಕೀಪರ್‌ ಧೀರಜ್‌ ಸಿಂಗ್‌ ಹಾಗೂ ಸೆಂಟರ್‌ ಬ್ಯಾಕ್‌ ಆಟಗಾರ ಚಿಂಗ್ಲೆನ್‌ಸನಾ ಸಿಂಗ್‌ ಅವರು ಮಣಿಪುರ ಹಿಂಸೆಯಲ್ಲಿ ಮನೆ ಕಳೆದುಕೊಂಡು ನೋವಿನಲ್ಲಿ ಭಾರತ ಹಾಗೂ ದೇಶದ ಇತರ ಕ್ಲಬ್‌ ಪರ ಆಡುತ್ತಿದ್ದಾರೆ. ಚೆಂಗ್ಲೆನ್‌ಸಿಂಗ್‌ ಅವರ ಮನೆ ಸುಟ್ಟು ಕರಲಾದ ಸಂದರ್ಭದಲ್ಲೇ ಏಷ್ಯನ್‌ ಗೇಮ್ಸ್‌ನಲ್ಲಿ ಆಡಲು ಕರೆ ಬಂದಿತ್ತು. ಮನೆಯವರನ್ನು ಇನ್ನೊಬ್ಬ ಆಟಗಾರ ಸಲಾಂ ರಂಜನ್‌ ಸಿಂಗ್‌ ಅವರ ಮನೆಯಲ್ಲಿ ಬಿಟ್ಟು ಏಷ್ಯನ್‌ ಗೇಮ್ಸ್‌ನಲ್ಲಿ ಪಾಲ್ಗೊಂಡರು. ಎಲ್ಲಕ್ಕಿಂತ ನೋವಿನ ಸಂಗತಿ ಎಂದರೆ ಸ್ಥಳೀಯ ಮಕ್ಕಳಿಗೆ ಫುಟ್ಬಾಲ್‌ ತರಬೇತಿ ನೀಡಬೇಕೆಂದು ನಿರ್ಮಿಸಿದ ಟರ್ಫ್‌ ಕೂಡ ಬೆಂಕಿಗೆ ಆಹುತಿಯಾಯಿತು. ಇಂಡಿಯನ್‌ ಸೂಪರ್‌ ಲೀಗ್‌ನಲ್ಲಿ ಹೈದರಬಾದ್‌ ಎಫ್‌ಸಿ ಪರ ಆಡುತ್ತಿರುವ ಚೆಂಗ್ಲೆನ್‌ಸನಾ ಅವರ ಕುಟುಂಬ ಈಗಲೂ ಇನ್ನೊಬ್ಬರ ಮನೆಯಲ್ಲಿ ಆಶ್ರಯ ಪಡೆಯುತ್ತಿದೆ.

ಗೋಲ್‌ಕೀಪರ್‌ ಧೀರಜ್‌ ಸಿಂಗ್‌ ಇಂಡಿಯನ್‌ ಸೂಪರ್‌ ಲೀಗ್‌ನಲ್ಲಿ ಎಫ್‌ಸಿ ಗೋವಾ ಪರ ಆಡುತ್ತಿದ್ದಾರೆ. ಸದ್ಯ ಗೋವಾದಲ್ಲಿ ಅಭ್ಯಾಸ ನಡೆಸುತ್ತಿರುವ ಧೀರಜ್‌ ಸಿಂಗ್‌, “ಕಳೆದ ಐದು ತಿಂಗಳಿಂದ ನಾವು ನೆರವಿಗಾಗಿ ಯಾಚಿಸುತ್ತಿದ್ದೇವೆ. ಇಸ್ರೇಲ್‌ ಮತ್ತು ಪ್ಯಾಲಿಸ್ತೇನ್‌ಗೆ ಕರಗುವ ಹೃದಯಗಳು ನಮ್ಮ ಬಗ್ಗೆ ಮೌವಾಗಿವೆ. ಜಗತ್ತಿನ ಯಾವ ಭಾಗದಲ್ಲೇ ದುರಂತ ನಡೆಯಲಿ ಅಲ್ಲಿ ನೋವು ಎಲ್ಲರ ನೋವಾಗಿರುತ್ತದೆ. ಆದರೆ ನಮ್ಮ ಮನೆಯ ನೋವಿಗೆ ನಾವು ಮೊದಲ ಅದ್ಯತೆ ನೀಡಬೇಕು,” ಎಂದಿದ್ದಾರೆ.

“ಮೇ ಕೊನೆಯ ವಾರದಲ್ಲಿ ಮಣಿಪುರದಲ್ಲಿದ್ದೆ. ಕಣ್ಣಮುಂದೆಯೇ ಕಟ್ಟಡಗಳು ಬೆಂಕಿಗಾಹುತಿಯಾದವು. ನಿತ್ಯವೂ ಗುಂಡಿನ ಸದ್ದು, ನಾನಿಲ್ಲಿ ರಾಜಕೀಯವಾಗಿ ಮಾತನಾಡುತ್ತಿಲ್ಲ, ಆದರೆ ಗಮನ ಸೆಳೆಯುವುದು ಅನಿವಾರ್ಯವಾಗಿದೆ. ಒಬ್ಬ ಕ್ರೀಡಾ ಪಟುವಾಗಿ ಎಲ್ಲಕ್ಕಿಂತ ಮುಖ್ಯವಾಗಿ ಈ ದೇಶದ ಪ್ರಜೆಯಾಗಿ ಗಮನ ಸೆಳೆಯಬೇಕಾದ ಅನಿವಾರ್ಯತೆ ಇದೆ. ಇಂದು ಸರಿಯಾಗಬಹದು, ನಾಳೆ ಸರಿಯಾಗಬಹುದು ಅಂದುಕೊಂಡಿದ್ದೆ ಆದರೆ ಪರಿಸ್ಥಿತಿ ಸುಧಾರಣೆ ಆಗಲೇ ಇಲ್ಲ,” ಎಂದು ಧೀರಜ್‌ ಸಿಂಗ್‌ ಅತ್ಯಂತ ನೋವಿನಲ್ಲಿ ಹೇಳಿಕೊಂಡಿದ್ದಾರೆ.

“ಭಾರತ ದೇಶವನ್ನು ಪ್ರತಿನಿಧಿಸುತ್ತಿರುವ ನಮಗೆ, ನಮ್ಮ ಕುಟುಂಬವನ್ನು ಕಾಪಾಡುವ ಜವಾಬ್ದಾರಿಯೂ ಇದೆ, ಅದಕ್ಕಾಗಿ ನಮ್ಮ ಕುಟುಂಬವನ್ನು ರಕ್ಷಿಸಿ ಎಂದು ಈ ಮೂಲಕ ನಾನು ಮನವಿ ಮಾಡಿಕೊಳ್ಳುತ್ತಿದ್ದೇನೆ,” ಎಂದು ಧೀರಜ್‌ ಸಿಂಗ್‌ ನೊಂದು ನುಡಿದರು.

ಮಣಿಪುರದಲ್ಲಿ ಸಂಭವಿಸಿದ ಹಿಂಸೆಗೆ ಈಗಾಗಲೇ 175ಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡಿದ್ದು ಸಾವಿರಾರು ಕುಟುಂಬಗಳು ಮನೆ ಕಳೆದುಕೊಂಡಿವೆ.

Related Articles