Friday, December 13, 2024

ಫೆಡರೇಷನ್ ಕಪ್ ಅಥ್ಲೆಟಿಕ್ಸ್: ರಾಷ್ಟ್ರೀಯ ದಾಖಲೆ ಬರೆದ ಶಿವ; ಸೀಮಾ ಪುನಿಯಾಗೆ ಕಾಮನ್‌ವೆಲ್ತ್ ಗೇಮ್ಸ್ ಟಿಕೆಟ್

ಪಟಿಯಾಲ: ತಮಿಳುನಾಡಿನ ಉದಯೋನ್ಮುಖ ಅಥ್ಲೀಟ್ ಸುಬ್ರಮಣಿ ಶಿವ, ಪಟಿಯಾಲದ ನೇತಾಜಿ ಸುಭಾಷ್‌ಚಂದ್ರ ಬೋಸ್ ರಾಷ್ಟ್ರೀಯ ಕ್ರೀಡಾ ಸಂಸ್ಥೆ ಮೈದಾನದಲ್ಲಿ ನಡೆಯುತ್ತಿರುವ 22ನೇ ಫೆಡರೇಷನ್ ಕಪ್ ರಾಷ್ಟ್ರೀಯ ಹಿರಿಯರ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ಪುರುಷರ ಪೋಲ್ ವಾಲ್ಟ್ ವಿಭಾಗದಲ್ಲಿ ನೂತನ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ.

PC: Twitter/AFI

ಭಾರತೀಯ ಸೇನೆಯಲ್ಲಿ ಹವಿಲ್ದಾರ್ ಆಗಿರುವ ಶಿವ, 5.15 ಮೀ. ಎತ್ತರ ಜಿಗಿದು ತಮ್ಮದೇ ರಾಷ್ಟ್ರೀಯ ದಾಖಲೆಯನ್ನು ಉತ್ತಮ ಪಡಿಸಿಕೊಂಡಿದ್ದಾರೆ. ಕಳೆದ ಇದೇ ಕ್ರೀಡಾಂಗಣದಲ್ಲಿ 5.14 ಮೀ. ಜಿಗಿದಿದ್ದರು.
ನೂತನ ದಾಖಲೆ ಬರೆದರೂ ಕಾಮನ್‌ವೆಲ್ತ್ ಗೇಮ್ಸ್ ಅರ್ಹತೆ ಪಡೆಯುವಲ್ಲಿ ಶಿವ ವಿಲಗೊಂಡರು. ಇದಕ್ಕೆ ತಾವು ಜ್ವರದಿಂದ ಬಳಲುತ್ತಿದ್ದದ್ದೇ ಕಾರಣ ಎಂದು ಶಿವ ಹೇಳಿದ್ದಾರೆ.
‘‘ಕಳೆದೆರಡು ದಿನಗಳಿಂದ ಜ್ವರದಿಂದ ಬಳಲುತ್ತಿದ್ದೆ. ಅಭ್ಯಾಸದ ವೇಳೆ 5.40 ಮೀ. ಜಿಗಿದಿದ್ದೆ. ನಾನು ಉತ್ತಮ ಫಿಟ್‌ನೆಸ್ ಹೊಂದಿರುತ್ತಿದ್ದರೆ ಅರ್ಹತೆಯ ಹತ್ತಿರ ಹತ್ತಿರ ಬರುತ್ತಿದ್ದೆ,’’ ಎಂದು ಶಿವ ನುಡಿದಿದ್ದಾರೆ.
ಇದೇ ವೇಳೆ ಮಹಿಳಾ ಡಿಸ್ಕಸ್ ಥ್ರೋನಲ್ಲಿ ಅನುಭವಿ ಅಥ್ಲೀಟ್ ಸೀಮಾ ಪುನಿಯಾ, ಚಿನ್ನ ಗೆಲ್ಲುವ ಮೂಲಕ ಕಾಮನ್‌ವೆಲ್ತ್ ಗೇಮ್ಸ್‌ಗೆ ಬಹುತೇಕ ಅರ್ಹತೆ ಸಂಪಾದಿಸಿದ್ದಾರೆ. 2006ರಿಂದ ಸೀಮಾ ಕಾಮನ್‌ವೆಲ್ತ್ ಗೇಮ್ಸ್‌ಗೆ ನಿರಂತರವಾಗಿ ಅರ್ಹತೆ ಪಡೆಯುತ್ತಾ ಬಂದಿದ್ದಾರೆ. 2006ರಲ್ಲಿ ಮೆಲ್ಬೋರ್ನ್‌ನಲ್ಲಿ ನಡೆದ ಗೇಮ್ಸ್‌ನಲ್ಲಿ 60.56 ಮೀ. ದೂರ ಡಿಸ್ಕಸ್ ಎಸೆಯುವ ಮೂಲಕ ಸೀಮಾ ಪುನಿಯಾ ಬೆಳ್ಳಿ ಗೆದ್ದಿದ್ದರು. 2010ರಲ್ಲಿ ದಿಲ್ಲಿಯಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚು ಗೆದ್ದಿದ್ದ ಅವರು, 2014ರಲ್ಲಿ ಗ್ಲಾಸ್ಗೊದಲ್ಲಿ ನಡೆದ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.

Related Articles