ದೇವಧರ್ ಟ್ರೋಫಿ: ಚಾಂಪಿಯನ್ ಕರ್ನಾಟಕಕ್ಕೆ ನಾಳೆ ಭಾರತ ‘ಬಿ’ ಎದುರಾಳಿ
ಧರ್ಮಶಾಲಾ: ವಿಜಯ್ ಹಜಾರೆ ಟ್ರೋಫಿ ಚಾಂಪಿಯನ್ ಕರ್ನಾಟಕ ತಂಡ, ದೇವಧರ್ ಟ್ರೋಫಿಯಲ್ಲೂ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ನೆಚ್ಚಿನ ತಂಡವಾಗಿದೆ. ಸೋಮವಾರ ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ (ಎಚ್‌ಪಿಸಿಎ) ಮೈದಾನದಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಕರುಣ್ ನಾಯರ್ ನಾಯಕತ್ವದ ಕರ್ನಾಟಕ ತಂಡ ಭಾರತ ‘ಬಿ’ ತಂಡವನ್ನು ಎದುರಿಸಲಿದೆ.

ಕರ್ನಾಟಕ ತಂಡದಲ್ಲಿ ನಾಯಕ ಕರುಣ್, ಆರ್.ಸಮರ್ಥ್, ರಣಜಿ ಟ್ರೋಫಿ ಹಾಗೂ ವಿಜಯ್ ಹಜಾರೆ ಟ್ರೋಫಿ ಟೂರ್ನಿಗಳಲ್ಲಿ 8 ಶತಕಗಳ ಸಹಿತ 2 ಸಾವಿರಕ್ಕೂ ಹೆಚ್ಚು ರನ್ ಗಳಿಸಿರುವ ರನ್ ಮಷಿನ್ ಮಯಾಂಕ್ ಅಗರ್ವಾಲ್, ಹುಬ್ಬಳ್ಳಿ ಹುಡುಗ ಪವನ್ ದೇಶಪಾಂಡೆ ಅವರನ್ನೊಳಗೊಂಡ ಬ್ಯಾಟಿಂಗ್ ಪಡೆಯಿದೆ.
ಅನುಭವಿ ವೇಗಿ, ಪೀಣ್ಯ ಎಕ್ಸ್‌ಪ್ರೆಸ್ ಅಭಿಮನ್ಯು ಮಿಥುನ್, ಯುವ ಬಲಗೈ ವೇಗದ ಬೌಲರ್‌ಗಳಾದ ಪ್ರಸಿದ್ಧ್ ಕೃಷ್ಣ, ಟಿ.ಪ್ರದೀಪ್, ಆಫ್ ಸ್ಪಿನ್ನರ್ ಕೆ.ಗೌತಮ್ ಮತ್ತು ಲೆಗ್‌ಸ್ಪಿನ್ನರ್ ಶ್ರೇಯಸ್ ಗೋಪಾಲ್ ಕರ್ನಾಟಕದ ಬೌಲಿಂಗ್‌ನ ಪ್ರಮುಖ ಅಸ್ತ್ರಗಳಾಗಿದ್ದಾರೆ.
ಮುಂಬೈ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಸಾರಥ್ಯದ ಭಾರತ ‘ಬಿ’ ತಂಡದಲ್ಲೂ ಅನುಭವಿ ಆಟಗಾರರಿದ್ದಾರೆ. ಬಂಗಾಳದ ಮನೋಜ್ ತಿವಾರಿ, ಉತ್ತರ ಪ್ರದೇಶದ ಆಕಾಶ್‌ದೀಪ್ ನಾಥ್, ಆಂಧ್ರದ ಹನುಮ ವಿಹಾರಿ, ಮುಂಬೈನ ಸಿದ್ದೇಶ್ ಲಾಡ್, ವಿದರ್ಭ ಉಮೇಶ್ ಯಾದವ್, ಪಂಜಾಬ್‌ನ ಸಿದ್ದಾರ್ಥ್ ಕೌಲ್ ಭಾರತ ‘ಬಿ’ ತಂಡದಲ್ಲಿದ್ದಾರೆ. ಪ್ರತಿ ತಂಡಗಳು ಲೀಗ್ ಹಂತದಲ್ಲಿ ತಲಾ ಎರಡು ಪಂದ್ಯಗಳನ್ನಾಡಲಿದ್ದು, ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಗುರುವಾರ ನಡೆಯುವ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ಭಾರತ ‘ಎ’ ತಂಡ ಟೂರ್ನಿಯಲ್ಲಿ ಭಾಗವಹಿಸಿರುವ ಮತ್ತೊಂದು ತಂಡವಾಗಿದೆ.
ತಂಡಗಳು ಹೀಗಿವೆ
ಕರ್ನಾಟಕ: ಕರುಣ್ ನಾಯರ್(ನಾಯಕ), ಮಯಾಂಕ್ ಅಗರ್ವಾಲ್, ಆರ್.ಸಮರ್ಥ್, ಪವನ್ ದೇಶಪಾಂಡೆ, ಸಿ.ಎಂ ಗೌತಮ್(ವಿಕೆಟ್ ಕೀಪರ್), ಕೆ.ಗೌತಮ್, ಸ್ಟುವರ್ಟ್ ಬಿನ್ನಿ, ಶ್ರೇಯಸ್ ಗೋಪಾಲ್, ಜೆ.ಸುಚಿತ್, ಅಭಿಷೇಕ್ ರೆಡ್ಡಿ, ಪ್ರಸಿದ್ಧ್ ಕೃಷ್ಣ, ಟಿ.ಪ್ರದೀಪ್, ಅಭಿಮನ್ಯು ಮಿಥುನ್, ಶರತ್ ಬಿ.ಆರ್, ರೋನಿತ್ ಮೋರೆ.
ಭಾರತ ‘ಬಿ’: ಶ್ರೇಯಸ್ ಅಯ್ಯರ್(ನಾಯಕ), ಅಭಿಮನ್ಯು ಈಶ್ವರನ್, ಆಕಾಶ್‌ದೀಪ್ ನಾಥ್, ಮನೋಜ್ ತಿವಾರಿ, ಸಿದ್ದೇಶ್ ಲಾಡ್, ಕೆ.ಎಸ್ ಭರತ್(ವಿಕೆಟ್ ಕೀಪರ್), ಜಯಂತ್ ಯಾದವ್, ಧರ್ಮೇಂದ್ರ ಸಿನ್ಹ ಜಡೇಜಾ, ರತುರಾಜ್ ಗಾಯಕ್ವಾಡ್, ಹನುಮ ವಿಹಾರಿ, ರಜತ್ ಪಾಟಿದಾರ್, ಸಿದ್ದಾರ್ಥ್ ಕೌಲ್, ಖಲೀಲ್ ಅಹ್ಮದ್, ಹರ್ಷಲ್ ಪಟೇಲ್, ಉಮೇಶ್ ಯಾದವ್.
ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ
ಸ್ಥಳ: ಎಚ್‌ಪಿಸಿಎ ಮೈದಾನ, ಧರ್ಮಶಾಲಾ.