ಡರ್ಬಾನ್: ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಕ್ರೀಡಾ ಸ್ಫೂರ್ತಿ ಮರೆತು ಅಶಿಸ್ತು ಪ್ರದರ್ಶಿಸಿದ್ದ ಆಸ್ಟ್ರೇಲಿಯಾದ ಆಫ್‌ಸ್ಪಿನ್ನರ್ ನೇಥನ್ ಲಯಾನ್ ಅವರಿಗೆ ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ), ಪಂದ್ಯ ಸಂಭಾವನೆಯ ಶೇಕಡಾ 15ರಷ್ಟು ದಂಡ ವಿಧಿಸಿದೆ.
ಡರ್ಬಾನ್‌ನ ಕಿಂಗ್ಸ್‌ಮೀಡ್ ಮೈದಾನದಲ್ಲಿ ಸೋಮವಾರ ಅಂತ್ಯಗೊಂಡ 4 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ನೇಥನ್ ಕ್ರೀಡಾಸ್ಫೂರ್ತಿ ಮರೆತು ವರ್ತಿಸಿದ್ದರು. ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಅವರನ್ನು ರನೌಟ್ ಮಾಡಿದ ನಂತರ ಲಯಾನ್, ರನ್ ಔಟ್ ತಪ್ಪಿಸಿಕೊಳ್ಳಲು ಕ್ರೀಸ್ ಬಳಿ ಡೈವ್ ಹೊಡೆದಿದ್ದ ಡಿವಿಲಿಯರ್ಸ್ ಅವರ ಮೇಲೆ ಚೆಂಡೆಸೆದು ಅನುಚಿತವಾಗಿ ವರ್ತಿಸಿದ್ದರು.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಐಸಿಸಿ, ಕಾಂಗರೂ ಆಟಗಾರನಿಗೆ ದಂಡ ವಿಧಿಸುವ ಮೂಲಕ ಛಾಟಿ ಬೀಸಿದೆ. ಇದೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಉಪನಾಯಕ ಡೇವಿಡ್ ವಾರ್ನರ್ ಮತ್ತು ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕ್ವಿಂಟನ್ ಡಿ’ಕಾಕ್ ಅವರ ಮಧ್ಯೆ ಮಾತಿನ ಚಕಮಕಿ ನಡೆಸಿದ್ದರು. ಮೈದಾನದಲ್ಲಿ ತಮ್ಮ ಪತ್ನಿಯ ಬಗ್ಗೆ ಡಿ’ಕಾಕ್ ಅಸಭ್ಯವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ರೊಚ್ಚಿಗೆದ್ದಿದ್ದ ವಾರ್ನರ್, ಡ್ರೆಸ್ಸಿಂಗ್ ರೂಮ್ ಬಳಿ ಡಿ’ಕಾಕ್ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದರು. ಈ ವೇಳೆ ಸಹ ಆಟಗಾರರು ವಾರ್ನರ್ ಅವರನ್ನು ತಡೆದು ಸಂಭಾವ್ಯ ಅವಘಡವನ್ನು ತಪ್ಪಿಸಿದ್ದರು.