Monday, April 15, 2024

ಐಪಿಎಲ್‌ನಿಂದ ಸ್ಮಿತ್, ವಾರ್ನರ್ ಬ್ಯಾನ್… ಕಾಂಗರೂ ಕಳಂಕಿತರ ಮೇಲೆ ನಿಷೇಧ ಹೇರಿದ ಬಿಸಿಸಿಐ

ಬೆಂಗಳೂರು: ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವನ್ ಸ್ಮಿತ್ ಮತ್ತು ಮಾಜಿ ಉಪನಾಯಕ ಡೇವಿಡ್ ವಾರ್ನರ್ ಅವರಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಒಂದು ವರ್ಷ ನಿಷೇಧ ಶಿಕ್ಷೆ ವಿಧಿಸಿದೆ.
PC: Twitter/StevenSmith
ಕ್ರಿಕೆಟ್ ಆಸ್ಟ್ರೇಲಿಯಾದಿಂದ ಶಿಕ್ಷೆ ಪ್ರಕಟವಾಗುತ್ತಿದ್ದಂತೆ ಬಿಸಿಸಿಐ ಕೂಡ ಮಹತ್ವದ ನಿರ್ಧಾರ ಕೈಗೊಂಡಿದ್ದು, ಸ್ಮಿತ್ ಮತ್ತು ವಾರ್ನರ್ ಅವರನ್ನು 2018ರ ಐಪಿಎಲ್ ಟೂರ್ನಿಯಿಂದ ನಿಷೇಧಿಸಿದೆ. ಸ್ಟೀವನ್ ಸ್ಮಿತ್ ಪ್ರತಿನಿಧಿಸಬೇಕಿದ್ದ ರಾಜಸ್ಥಾನ್ ರಾಯಲ್ಸ್ ಮತ್ತು ಡೇವಿಡ್ ವಾರ್ನರ್ ಪ್ರತಿನಿಧಿಸಬೇಕಿದ್ದ ಸನ್‌ರೈಸರ್ಸ್ ಹೈದ್ರಾಬಾದ್ ತಂಡಗಳಿಗೆ ಭಾರೀ ಆಘಾತವಾಗಿದೆ.
ಸ್ಟೀವನ್ ಸ್ಮಿತ್ ಬದಲು ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ರಾಜಸ್ಥಾನ್ ರಾಯಲ್ಸ್ ತಂಡದ ಚುಕ್ಕಾಣಿ ಹಿಡಿಯಲಿದ್ದರೆ, ಸನ್‌ರೈಸರ್ಸ್ ಹೈದ್ರಾಬಾದ್ ತಂಡದ ಇನ್ನಷ್ಟೇ ತನ್ನ ಸಾರಥಿಯನ್ನು ಹೆಸರಿಸಬೇಕಿದೆ. ಸ್ಮಿತ್ ಮತ್ತು ವಾರ್ನರ್ ಅವರಿಗೆ ಬದಲಿ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲು ರಾಜಸ್ಥಾನ್ ಮತ್ತು ಹೈದ್ರಾಬಾದ್ ತಂಡಗಳಿಗೆ ಬಿಸಿಸಿಐ ಅವಕಾಶ ಕಲ್ಪಿಸಿದೆ.
ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ನಡೆದ 3ನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಆಟಗಾರರು ಬಾಲ್ ಟ್ಯಾಂಪರಿಂಗ್ ನಡೆಸಿದ್ದರು. ಆರಂಭಿಕ ಬ್ಯಾಟ್ಸ್‌ಮನ್ ಕ್ಯಾಮರಾನ್ ಬ್ಯಾಂಕ್ರಾಫ್ಟ್ ಬಾಲ್ ಟ್ಯಾಂಪರಿಂಗ್ ನಡೆಸುತ್ತಿದ್ದದ್ದು ಕ್ಯಾಮರಾಗಳ ಕಣ್ಣಿನಲ್ಲಿ ಸೆರೆಯಾಗಿತ್ತು. ಬ್ಯಾಂಕ್ರಾಫ್ಟ್ ಅವರ ಮೇಲೆ ಕ್ರಿಕೆಟ್ ಆಸ್ಟ್ರೇಲಿಯಾ 9 ತಿಂಗಳು ನಿಷೇಧ ಹೇರಿದೆ.

Related Articles