ಅಂದು ಫಿಲ್, ಇಂದು ವಿಲ್… ಶಾನ್ ಬೌನ್ಸರ್‌ಗೆ ತಪ್ಪಿತು ಮತ್ತೊಂದು ಬಲಿ!
ಮೆಲ್ಬೋರ್ನ್: ನಾಲ್ಕು ವರ್ಷಗಳ ಹಿಂದೆ ಆಸ್ಟ್ರೇಲಿಯಾದ ಪ್ರತಿಭಾವಂತ ಕ್ರಿಕೆಟಿಗ ಫಿಲ್ ಹ್ಯೂಸ್, ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ವೇಗಿ ಶಾನ್ ಅಬಾಟ್ ಅವರ ಬೌನ್ಸರ್ ತಲೆಗೆ ಅಪ್ಪಳಿಸಿದ ದುರಂತ ಘಟನೆಯನ್ನು ಕ್ರಿಕೆಟ್ ಪ್ರಿಯರು ಇನ್ನೂ ಮರೆತಿಲ್ಲ. ಇದೀಗ ಅಂಥದ್ದೇ ಒಂದು ದುರಂತಮಯ ಘಟನೆ ನಡೆದಿದ್ದು, ಅದೃಷ್ಟವಶಾತ್ ಬ್ಯಾಟ್ಸ್‌ಮನ್ ವಿಲ್ ಪುಕೋಸ್ಕಿ ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ.

ಆಸ್ಟ್ರೇಲಿಯಾದ ದೇಶೀಯ ಕ್ರಿಕೆಟ್ ಟೂರ್ನಿ ಶೆಫೀಲ್ಡ್ ಶೀಲ್ಡ್ ಟೂರ್ನಿಯ ನ್ಯೂಸೌತ್ ವೇಲ್ಸ್ ಮತ್ತು ವಿಕ್ಟೋರಿಯಾ ತಂಡಗಳ ನಡುವಿನ ಪಂದ್ಯದಲ್ಲಿ ಈ ಘಟನೆ ನಡೆದಿದೆ. ನ್ಯೂ ಸೌತ್ ವೇಲ್ಸ್ ತಂಡದ ವೇಗಿ ಶಾನ್ ಅಬಾಟ್ ಅವರ ಶಾರ್ಟ್ ಬಾಲ್ ಎಸೆತವೊಂದು ವಿಲ್ ಅವರ ಹೆಲ್ಮೆಟ್‌ಗೆ ಅಪ್ಪಳಿಸಿತು. ಕೂಡಲೇ ವಿಲ್ ನೆಲಕ್ಕೆ ಕುಸಿದರು. ವಿಲ್ ಅವರತ್ತ ಧಾವಿಸಿದ ಅಬಾಟ್, ಸಹ ಆಟಗಾರನನ್ನು ಸಂತೈಸಿದರು. ಮೈದಾನಕ್ಕೆ ಓಡಿ ಬಂದ ವೈದ್ಯಕೀಯ ತಂಡ ವಿಲ್ ಪುಕೋಸ್ಕಿ ಅವರಿಗೆ ಪ್ರಥಮ ಚಿಕಿತ್ಸೆ ನೀಡಿತು. ಅದೃಷ್ಟವಶಾತ್ ವಿಲ್ ಯಾವುದೇ ಅಪಾಯವಿಲ್ಲದೆ ಪಾರಾದರು.
2014ರಲ್ಲಿ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಪಂದ್ಯದಲ್ಲಿ ಇದೇ ಶಾನ್ ಅಬಾಟ್ ಅವರ ಬೌನ್ಸರ್ ಎಸೆತವೊಂದು ತಲೆಗೆ ಅಪ್ಪಳಿಸಿದ ಕಾರಣ ಫಿಲ್ ಹ್ಯೂಸ್ ಮೈದಾನದಲ್ಲೇ ಕುಸಿದು ಬಿದ್ದಿದ್ದರು. ಕೋಮಾಗೆ ತಲುಪಿದ್ದ ಫಿಲ್‌ಗೆ ಚಿಕಿತ್ಸೆ ನೀಡಲಾಯಿತಾದರೂ, ಎರಡು ದಿನಗಳಲ್ಲಿ ಸಾವಿಗೀಡಾಗಿದ್ದರು.