ಬುಡಕಟ್ಟು ಸಾಧಕರು ಗೆದ್ದ ಟ್ರೋಫಿ ಸ್ವೀಕರಿಸಲು ಯಾರೂ ಇರಲಿಲ್ಲ!
ಬೆಂಗಳೂರು: ಛತ್ತೀಸ್‌ಗಢದಲ್ಲಿ ನಡೆದ ಖೇಲೋ ಇಂಡಿಯಾ ಟ್ರೈಬಲ್ ಗೇಮ್ಸ್‌ನಲ್ಲಿ ಚಾಂಪಿಯನ್ ಪಟ್ಟ ಗೆದ್ದಿರುವ ಕರ್ನಾಟಕ ತಂಡದ ಪರವಾಗಿ ಛತ್ತೀಸ್‌ಗಢದ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳಿಂದ ಟ್ರೋಫಿ ಸ್ವೀಕರಿಸಿದ ಕ್ಷಣ ನನಗೂ ಖುಷಿಯಾಗಿತ್ತು, ಆದರೆ ನಮ್ಮ ಕ್ರೀಡಾಪಟುಗಳು ಅದರಲ್ಲೂ ಬುಡಕಟ್ಟು ಸಮುದಾಯದ ಕ್ರೀಡಾಪಟುಗಳ ಸಾಧನೆಯನ್ನು ಅಧಿಕಾರಿಗಳು ಹಗುರವಾಗಿ ಪರಿಗಣಿಸಿರುವುದು ಅತೀವ ನೋವನ್ನುಂಟು ಮಾಡಿದೆ. Why is there no one to accept the trophy even though Karnataka won the championship title at the Khelo India Tribal Games held in Chhattisgarh?
ಕ್ರೀಡಾ ಪತ್ರಕರ್ತನಾಗಿ ಬೇರೆ ಬೇರೆ ಪತ್ರಿಕೆಗಳಲ್ಲಿ ಕೆಲಸ ಮಾಡಿರುವೆ, ಬೇರೆ ಬೇರೆ ಕ್ರೀಡಾಕೂಟಗಳಲ್ಲೂ ಭಾಗವಹಿಸಿ ವರದಿ ಮಾಡಿರುವೆ. ಆದರೆ ಇಂಥ ಮುಜುಗರದ ಸನ್ನಿವೇಶವನ್ನು ನಾನೆಲ್ಲೂ ಕಂಡಿಲ್ಲ. ಖೇಲೋ ಇಂಡಿಯಾ ಟ್ರೈಬಲ್ ಗೇಮ್ಸ್‌ನಲ್ಲಿ ಕರ್ನಾಟಕದ ಕ್ರೀಡಾಪಟುಗಳು 23 ಚಿನ್ನ, 8 ಬೆಳ್ಳಿ ಹಾಗೂ 7 ಚಿನ್ನದ ಪದಕಗಳೊಂದಿಗೆ ಚಾಂಪಿಯನ್ ಪಟ್ಟ ಗೆದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ದುರಂತವೆಂದರೆ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಚಾಂಪಿಯನ್ ತಂಡವನ್ನು ಪ್ರಶಸ್ತಿ ಸ್ವೀಕರಿಸಲು ಆಹ್ವಾನಿಸಿದಾಗ ಅಲ್ಲಿ ಇತರ ರಾಜ್ಯಗಳ ಕ್ರೀಡಾಪಟುಗಳ ಚಪ್ಪಾಳೆ ತುಂಬಿತ್ತೇ ವಿನಃ ಕರ್ನಾಟಕದ ಕ್ರೀಡಾಪಟುಗಳು ಕಾಣಲೇ ಇಲ್ಲ.

ರಾಜ್ಯದ ಒಬ್ಬ ಕ್ರೀಡಾ ಪತ್ರಕರ್ತನಾಗಿ ಟ್ರೋಫಿಯನ್ನು ಸ್ವೀಕರಿಸಿರುವೆ. ಆರು ಬಾರಿ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಪಟ್ಟ ಗೆದ್ದ ಕೋಮ್ ಹಾಗೂ ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕ ಬೈಚುಂಗ್ ಭೂಟಿಯಾ ಅವರೊಂದಿಗೆ ವೇದಿಕೆ ಹಂಚಿಕೊಳ್ಳುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ಆದರೆ ದೇಶದ ಕ್ರೀಡಾ ಇತಿಹಾಸದಲ್ಲೇ ಮೊದಲ ಬಾರಿಗೆ ಬುಡಕಟ್ಟು ಕ್ರೀಡಾಪಟುಗಳಿಗಾಗಿ ನಡೆದ ಕ್ರೀಡಾಕೂಟದಲ್ಲಿ ಚಾಂಪಿಯನ್ ಪಟ್ಟ ಗೆದ್ದ ಕರ್ನಾಟಕ ತಂಡದ ಯಾವುದೇ ಒಬ್ಬ ಕ್ರೀಡಾಪಟು, ಕ್ರೀಡಾ ಅಧಿಕಾರಿ ಟ್ರೋಫಿ ಸ್ವೀಕರಿಸಲು ಇಲ್ಲದಿರುವುದು ನೋವಿನ ಸಂಗತಿ.
ಕರ್ನಾಟಕ ಸರಕಾರದ ಕ್ರೀಡಾ ಇಲಾಖೆಯು ಈ ಕ್ರೀಡಾ ಕೂಟಕ್ಕೆ ಮಡಿಕೇರಿ ಜಿಲ್ಲೆಯ ಸಹಾಯಕ ನಿರ್ದೇಶಕರಾದ ವಿಸ್ಮಯ ಅವರನ್ನು ತಂಡದ ಮುಖ್ಯಸ್ಥರನ್ನಾಗಿ ನಿಯೋಜಿಸಿತ್ತು. ಆದರೆ ಅವರು ಅನಾರೋಗ್ಯದ ಕಾರಣ ಮೈಸೂರಿಗೆ ಹಿಂದಿರುಗಿದ್ದರು. ಕರ್ನಾಟಕದ ಕ್ರೀಡಾಪಟುಗಳು ಕ್ರೀಡಾ ಕೂಟದ ಕೊನೆಯ ದಿನದಲ್ಲೂ ಎರಡು ಚಿನ್ನದ ಪದಕ ಗೆದ್ದಿರುತ್ತಾರೆ. ಈಜಿನಲ್ಲಿ ಅಗ್ರಸ್ಥಾನ ಪಡೆದಾಗಲೇ ಕರ್ನಾಟಕ ಚಾಂಪಿಯನ್ ಪಟ್ಟ ಗೆಲ್ಲುವುದು ಖಚಿತ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದರು. ಕರ್ನಾಟಕದ ಕ್ರೀಡಾಪಟುಗಳು ಹತ್ತು ದಿನಗಳಲ್ಲಿ ಪ್ರತಿಯೊಂದು ದಿನವೂ ಪದಕ ಗೆದ್ದಿದ್ದಾರೆ. ಅವರಲ್ಲಿ ಕೆಲವು ಕ್ರೀಡಾಪಟುಗಳನ್ನು ಅಥವಾ ಕರ್ನಾಟಕ ತಂಡದ ನಿಯೋಗದ ಮುಖ್ಯಸ್ಥರು ಇರುತ್ತಿದ್ದರೆ ಅಲ್ಲಿ ಗೌರವ ಮನೆಮಾಡಿರುತ್ತಿತ್ತು.

ಟ್ರೋಫಿ ಸ್ವೀಕರಿಸುವುದು ಗೌರವ ಕಾರ್ಯ:
ಖೇಲೋ ಇಂಡಿಯಾ ಟ್ರೈಬಲ್ ಗೇಮ್ಸ್‌ನ ಸಮಾರೋಪ ಸಮಾರಂಭದ ದಿನ ಮಧ್ಯಾಹ್ನ ಛತ್ತೀಸ್‌ಗಢದ ಕ್ರೀಡಾ ಅಧಿಕಾಯೊಬ್ಬರು, “ನೀವು ಸಂಜೆ ಚಾಂಪಿಯನ್ ಕರ್ನಾಟಕ ತಂಡದ ಜೊತೆಗಿರುತ್ತಿರಿ ,” ಎಂದು ಸಂದೇಶ ಕಳುಹಿಸಿದರು. “ನಾನು ವರದಿಗಾರನಾಗಿ ಇದ್ದೇ ಇರುತ್ತೇನೆ ಅದರಲ್ಲೇನು ವಿಶೇಷ? ಎಂದು ಕೇಳಿದೆ. “ಇಲ್ಲ, ನಿಮ್ಮ ರಾಜ್ಯದಿಂದ ಟ್ರೋಫಿ ಸ್ವೀಕರಿಸಲು ಯಾರೂ ಇಲ್ಲ, ರಾಜ್ಯದ ಗೌರವವಾಗಿ ನೀವು ಸ್ವೀಕರಿಸುವುದು ಸೂಕ್ತ” ಎಂದರು. ಪರಿಸ್ಥಿತಿಯನ್ನು ಅರ್ಥೈಸಿಕೊಂಡ ನಾನು ಆ ಕಾರ್ಯಕ್ಕೆ ಒಪ್ಪಿದೆ.
ಮೆಡಲ್ ಜೀತ್ನೇ ವಾಲೇ ಕಿಲಾಡಿ ಕಹಾಂ ಹೇ? ಈ ರೀತಿಯಾಗಿ ರಾಜ್ಯದ ಮುಖ್ಯಮಂತ್ರಿಯೊಬ್ಬರು ತುಂಬಿದ ಸಭೆಯಲ್ಲಿ ಕೇಳಿದಾಗ ತಬ್ಬಿಬ್ಬಾಗುದು ಸಹಜ. “Sir, they left early” ಎಂದು ಉತ್ತರಿಸಿ ಸುಮ್ಮನಾದೆ. ಅವರು ನಗುತ್ತ ಟ್ರೋಫಿ ನೀಡಿದರು.
ಟ್ರೋಫಿ ಹಿಡಿದು ವೇದಿಕೆಯಿಂದ ಕೆಳಗೆ ಬಂದಾಗ ಹಿರಿಯ ಅಧಿಕಾರಿಯೊಬ್ಬರು “ಆಪ್ ನೆ ಕರ್ನಾಟಕ್ ಕೆ ಸಮ್ಮಾನ್ ಕಿ ರಕ್ಷಾ ಕಿ” ಎಂದು ನಗುತ್ತ ಹೇಳಿದಾಗ, ನಾನೂ ನಕ್ಕು ಸುಮ್ಮನಾದೆ. ರಾಯ್ಪುರ ವಿಮಾನ ನಿಲ್ದಾಣದಲ್ಲಿ ಬೇರೆ ರಾಜ್ಯಗಳ ಕ್ರಿಡಾ ಅಧಿಕಾರಿಗಳು “ಇದೇ ಮೊದಲ ಬಾರಿಗೆ ಚಾಂಪಿಯನ್ ರಾಜ್ಯವೊಂದರ ಆಟಗಾರರು ಪ್ರಶಸ್ತಿ ಸ್ವೀಕರಿಸಲು ಗೈರಾಗಿದ್ದಾರೆ” ಎಂದು ಹೇಳಿದರು. ಅಲ್ಲಿಯೂ ಮನಸ್ಸಿಗೆ ನೋವಾಯಿತು. ಬೆಂಗಳೂರಿಗೆ ಹೊರಟ ವಿಮಾನದಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರದ ಸಹಾಯಕ ನಿರ್ದೇಶಕರಾದ ಹರೀಶ್ ಸಿಕ್ಕಿದರು. “ನಾನು ಹಲವಾರು ಖೇಲೋ ಇಂಡಿಯಾ ಕ್ರೀಡಾಕೂಟಗಳ ಸಮಾರೋಪ ಸಮಾರಂಭದ ನೋಡಿರುವೆ, ಆದರೆ ಇದೆ ಮೊದಲು ಚಾಂಪಿಯನ್ ತಂಡ ಗೈರಾಗಿರುವುದು.” ಎಂದರು.
ನಾಲ್ಕೈದು ಕ್ರೀಡಾಪಟುಗಳನ್ನು ಉಳಿಸಿಕೊಳ್ಳಬಹುದಾಗಿತ್ತು: ಕರ್ನಾಟಕ ಚಾಂಪಿಯನ್ ಎಂಬುದನ್ನು ಮೊದಲ ದಿನದಿಂದಲೇ ಪದಕ ಪಟ್ಟಿ ಹೇಳುತ್ತಿತ್ತು. ಇದನ್ನರಿತ ಕರ್ನಾಟಕ ಕ್ರೀಡಾ ಇಲಾಖೆ ಅತಿ ಹೆಚ್ಚು ಪದಕ ಗೆದ್ದಿರುವ ಮಣಿಕಂಠ, ಧೋನೀಶ್, ಮೇಘಾಂಜಲಿ, ನಾಗಿನಿ ಹಾಗೂ ರಿತುಶ್ರೀ ಸೇರಿದಂತೆ ಕೆಲವು ಆಟಗಾರರನ್ನು ಉಳಿಸಿಕೊಳ್ಳಬಹುದಾಗಿತ್ತು. ಈ ಕ್ರೀಡಾಕೂಟದಲ್ಲಿ ಪಾಲ್ಗೊಂಡ ಮಕ್ಕಳೆಲ್ಲ ಬಡವರ ಮನೆಯ ಮಕ್ಕಳು. ಇವರ ಹೆತ್ತವರಲ್ಲಿ ಕೆಲವರು ಕೂಲಿ ಮಾಡುತ್ತಿದ್ದರೆ, ಇನ್ನು ಕೆಲವರು ಅಂಗನವಾಡಿಯಲ್ಲಿ ಅಡುಗೆ ಸಹಾಯಕಿಯರು, ಗಾರೆ ಕೆಲಸ, ಕಾರ್ಪೆಂಟರ್ ಕೆಲಸ ಇತ್ಯಾದಿ. ಇವರಿಗೆ ರಾಷ್ಟ್ರ ಮಟ್ಟದ ಟ್ರೋಫಿಯನ್ನು ಸ್ವೀಕರಿಸುವ ಅವಕಾಶ ಸಿಕ್ಕಿರುತ್ತಿದ್ದರೆ ಮತ್ತಷ್ಟು ಉತ್ತೇಜನ ಸಿಕ್ಕಿರುತ್ತಿತ್ತು. ಎಲ್ಲರೂ ರೈಲಿನಲ್ಲಿ ಪ್ರಯಾಣಿಸುವವರು. ರಾಯ್ಪುರದಿಂದ ಬೆಂಗಳೂರಿಗೆ ವಾರಕ್ಕೆ ಎರಡು ಬಾರಿ ಮಾತ್ರ ರೈಲು ಸೌಲಭ್ಯವಿದೆ. ಒಂದು ರೈಲು ತಪ್ಪಿಹೋದರೆ ಮತ್ತೊಂದು ರೈಲಿನಲ್ಲಿ ಪ್ರಯಾಣಿಸೋಣವೆಂದರೆ ಉಳಿದುಕೊಳ್ಳುವ ಸಮಸ್ಯೆ. ಈ ಕಾರಣಕ್ಕಾಗಿ ಹೆಚ್ಚಿನ ಕ್ರೀಡಾಪಟುಗಳು ಸ್ಪರ್ಧೆ ಮುಗಿದ ಕೂಡಲೇ ಪ್ರಯಾಣಿಸಿರುತ್ತಾರೆ.

ಐಪಿಎಲ್ ಟಿಕೆಟ್ ಬೇಡಿದವರು ಈಗ ಏನನ್ನುವಿರಿ? ಈಗ ದೇಶದಲ್ಲಿ ಐಪಿಎಲ್ ಹವಾ. ಟ್ರೈಬಲ್ ಗೇಮ್ಸ್ ಯಾರಿಗೆ ಬೇಕು ಸ್ವಾಮಿ?. ಮೊನ್ನೆ ವಿಧಾನ ಸೌಧದಲ್ಲಿ ರಾಜ್ಯದಲ್ಲಿರುವ ಸಮಸ್ಯೆಗಳ ಬಗ್ಗೆ ಮಾತನಾಡುವ ಬದಲು ಐಪಿಎಲ್ ಟಿಕೆಟ್‌ಗಾಗಿ ಅರಾಚಾಡಿ ಉಚಿತ ಟಿಕೆಟ್ ಪಡೆದುಕೊಂಡ ಜನಪ್ರತಿನಿಧಿಗಳು ಈ ಕ್ರೀಡಾಪಟುಗಳಿಗೆ ಆದ ಅನ್ಯಾಯದ ಬಗ್ಗೆ ಅಥವಾ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿಯ ಬಗ್ಗೆ ಏನು ಹೇಳುತ್ತಾರೆ?
ಚಿನ್ನ ಗೆದ್ದವರಲ್ಲಿ ಹೆಚ್ಚಿನವರು ರಾಜ್ಯ ಯುವ ಸಬಲೀರಕಣ ಹಾಗೂ ಕ್ರೀಡಾ ಇಲಾಖೆಯ ಹಾಸ್ಟೆಲ್ ಹಾಗೂ ಕ್ರೀಡಾ ಶಾಲೆಯ ವಿದ್ಯಾರ್ಥಿಗಳು. ಇಲಾಖೆಗೆ ಮುಂದಿನ ದಿನಗಳಲ್ಲಾದರೂ ಈ ಸಾಧಕರನ್ನು ಕರೆಸಿ ಗೌರವಿಸಿ, ಅವರಿಗೆ ಛತ್ತೀಸ್‌ಗಢದ ರೀತಿಯಲ್ಲಿ ನಗದು ಬಹುಮಾನ ಪ್ರಕಟಿಸುವುದು ಸೂಕ್ತವೆನಿಸುವುದು. ಇಲ್ಲವಾದಲ್ಲಿ ಕ್ರೀಡಾಪಟುಗಳಿಗೆ ಗೌರವ ನೀಡುವುದು, ಉತ್ಸಾಹ ತುಂಬುವುದಾದರೂ ಹೇಗೆ?

