Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಕ್ರೀಡಾಂಗಣಗಳಿಗೆ ರಾಜಕಾರಣಿಗಳ ಹೆಸರು ಯಾಕಿಡಬೇಕು?

ಬೆಂಗಳೂರು: ದೇಶದಲ್ಲಿ 20ಕ್ಕೂ ಹೆಚ್ಚು ಜವಹರಲಾಲ್‌ ನೆಹರು ಹೆಸರಿನಲ್ಲಿ  ಕ್ರೀಡಾಂಗಣಗಳಿವಿದೆ, ಹತ್ತಕ್ಕೂ ಹೆಚ್ಚು ಕ್ರೀಡಾಂಗಣಗಳಿಗೆ ಇಂದಿರಾ ಗಾಂಧಿ ಹೆಸರನ್ನಿಡಲಾಗಿದೆ, 4-5 ಕ್ರೀಡಾಂಗಣಗಳಿಗೆ  ಮಹಾತ್ಮಗಾಂಧೀ  ಹೆಸರಿಡಲಾಗಿದೆ, ಒಂದಿಷ್ಟು ಕ್ರೀಡಾಂಗಣಗಳಿಗೆ ರಾಜೀವ್‌ ಗಾಂಧೀ ಹೆಸರಿಡಲಾಗಿದೆ, ಅದೇ ರೀತಿ ನರೇಂದ್ರ ಮೋದಿ ಕ್ರೀಡಾಂಗಣವಿದೆ, ಅರುಣ್‌ ಜೇಟ್ಲಿ ಕ್ರೀಡಾಂಗಣವಿದೆ ಹೀಗೆ ದೇಶದ ಪ್ರಮುಖ ಕ್ರೀಡಾಂಗಣಗಳಿಗೆ ರಾಜಕಾರಣಿಗಳ ಹೆಸರನ್ನಿಡಲಾಗಿದೆಯೇ ವಿನಃ ಕ್ರೀಡಾ ಸಾಧಕರ ಹೆಸರನ್ನಿಟ್ಟಿದ್ದು ಬಹಳ ವಿರಳ. Why in India Stadiums are named after politicians not sports achievers?

ಕರ್ನಾಟಕದಲ್ಲಿ ಇದುವರೆಗೂ ಕರ್ನಾಟಕ ರಾಜ್ಯ ಲಾನ್‌ ಟೆನಿಸ್‌ ಅಸೋಸಿಯೇಷನ್‌ ಕ್ರೀಡಾಂಗಣ ಅಂತ ಇದ್ದಿತ್ತು. ಇನ್ನು ಮುಂದೆ ಅದು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಕ್ರೀಡಾಂಗಣ. ಅಂದ ಹಾಗೆ ಈ ರಾಜಕಾರಣಿಗಳು ಕ್ರೀಡೆಗೆ ನೀಡಿದ ಕೊಡುಗೆ ಏನು? ಅವರು ಆಟವಾಡಿ, ಯಾವುದಾದರೂ ಪ್ರಮುಖ ಟ್ರೋಫಿ ಗೆದ್ದಿದ್ದರೆ ಅವರ ಹೆಸರಿಡುವುದು ಸೂಕ್ತ. ಮೊನ್ನೆಯ ಕಾರ್ಯಕ್ರಮದಲ್ಲಿ ಗ್ರ್ಯಾನ್‌ ಸ್ಲಾಮ್‌ ಚಾಂಪಿಯನ್‌ ರೋಹನ್‌ ಬೋಪಣ್ಣ ಪಾಲ್ಗೊಂಡಿದ್ದರು. ನಿಜವಾಗಿಯೂ ಆ ಕ್ರೀಡಾಂಗಣಕ್ಕೆ ರೋಹನ್‌ ಬೋಪಣ್ಣ ಅವರ ಹೆಸರಿಟ್ಟಿದ್ದರೆ ಅರ್ಥಪೂರ್ಣ. ದೆಹಲಿಯಲ್ಲಿ ಮೇಜರ್‌ ಧ್ಯಾನ್‌ಚಂದ್‌ ಕ್ರೀಡಾಂಗಣವಿದೆ. ಆ ಕ್ರೀಡಾಂಗಣಕ್ಕೆ ಅವರ ಹೆಸರು ಸೂಕ್ತ ಹಾಗೂ ಅರ್ಥ ಪೂರ್ಣ. ಜವಹರಲಾಲ್‌ ನೆಹರು ಅವರ ಹೆಸರನ್ನು ಒಂದೆರಡು ಕ್ರೀಡಾಂಗಣಕ್ಕೆ ಇಡುವುದು ಅರ್ಥಪೂರ್ಣ ದೇಶದಲ್ಲಿರು ಹೆಚ್ಚಿನ ಎಲ್ಲ ಕ್ರೀಡಾಂಗಣಗಳಿಗೆ ಅವರ ಹೆಸರಿಡುವ ಬದಲು ಜಾಗತಿಕ ಮಟ್ಟದಲ್ಲಿ ಮಿಂಚಿದ ಕ್ರೀಡಾಪಟುಗಳ ಹೆಸರಿಟ್ಟರೆ ಮುಂದಿನ ಪೀಳಿಗೆಗೆ ಮಾದರಿಯಾಗುತ್ತದೆ. ಒಬ್ಬ ಮುಖ್ಯಮಂತ್ರಿಯಾಗಿ, ಟೆನಿಸ್‌ ಅಭಿಮಾನಿಯಾಗಿ ಎಸ್‌ಎಂ ಕೃಷ್ಣ ಅವರು ರಾಜ್ಯ ಟೆನಿಸ್‌ ಸಂಸ್ಥೆಗೆ ಉತ್ತಮ ಕೊಡುಗೆ ನೀಡಿದ್ದಾರೆ. ಅಲ್ಲಿರುವ ಪದಾಧಿಕಾರಿಗಳಲ್ಲಿ ರಾಜಕಾರಣಿಗಳೇ ತುಂಬಿದ್ದಾರೆ. ಯಾವುದಾದರೂ ಟೂರ್ನಿ ನಡೆದರೆ ಅಲ್ಲಿ ಆಟಗಾರರಾಗಿಂತ ರಾಜಕಾರಣಿಗಳೇ ರಾರಾಜಿಸುತ್ತಾರೆ. ಈ ಸಂಪ್ರದಾಯ ಕೊನೆಗೊಳ್ಳಬೇಕು, ಕ್ರೀಡಾ ಸಂಸ್ಥೆಗಳಲ್ಲಿ ಕ್ರೀಡಾಪಟುಗಳು ರಾರಾಜಿಸಬೇಕು, ಹಾಗಿದ್ದಲ್ಲಿ ಮಾತ್ರ ಕ್ರೀಡೆಗೆ ಹೆಚ್ಚಿನ ಒತ್ತು ಸಿಗುತ್ತದೆ. ರಾಜಕೀಯ ದೂರವಾಗುತ್ತದೆ. ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ಕರ್ನಾಟಕ ಲಾನ್‌ ಟೆನಿಸ್‌ ಅಸೋಸಿಯೇಷನ್‌ನ ಅಧ್ಯಕ್ಷರು. ಇವರು ಯಾವ ಹಂತದ ಟೆನಿಸ್‌‌ ಆಡಿದ್ದಾರೆ ಎಂಬುದು ಮುಖ್ಯ ಎರಡು ದಶಕಗಳಿಂದ ರಾಜ್ಯ ಒಲಿಂಪಿಕ್ಸ್‌ ಸಂಸ್ಥೆಯ ಅಧ್ಯಕ್ಷರಾಗಿರುವ ಕೆ. ಗೋವಿಂದ ರಾಜ್‌ ಯಾವ ಕ್ರೀಡೆಯಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ? ಕೆಎಸ್‌ಎಲ್‌ಟಿ ಹಿರಿಯ ಉಪಾಧ್ಯಕ್ಷ ಪ್ರಿಯಾಂಕ ಖರ್ಗೆ ಯಾವ ಹಂತದ ಟೆನಿಸ್‌ ಆಡಿದ್ದಾರೆ? ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್‌ ಸಂಸ್ಥೆಯ ಅಧ್ಯಕ್ಷ ಡಾ. ಪರಮೇಶ್ವರ್‌ ಯಾವ ಕ್ರೀಡಾಕೂಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದಾರೆ? ಇತ್ಯಾದಿ ಪ್ರಶ್ನೆಗಳು ಉದ್ಭವಿಸುವುದು ಸಹಜ.

ಅವರೆಲ್ಲ ಹಣ ಕೊಟ್ಟಿದ್ದಾರೆ. ಕೊಡುತ್ತಾರೆ. ಹಣವೇ ಕ್ರೀಡೆಯನ್ನು ಆಳುವುದಾದರೆ ಮತ್ತೆ ಕ್ರೀಡಾಪಟುಗಳೇಕೆ? ಅವರ ಸಾಧನೆಗೆ ಬೆಲೆ ನೀಡದೆ ರಾಜಕಾರಣಿಗಳೇ ಹೈಲೈಟ್ಸ್‌ ಆಗುವುದಾದರೆ ಕ್ರೀಡಾಕೂಟಗಳನ್ನು ಯಾಕೆ ನಡೆಬೇಕು?

ಕರ್ನಾಟಕ ರಾಜ್ಯ ಕ್ರಿಕೆಟ್‌‌ ಸಂಸ್ಥೆಯ ಕ್ರೀಡಾಂಗಣ ಎಂ. ಚಿನ್ನಸ್ವಾಮಿ ಅವರ ಹೆಸರಿನಲ್ಲಿದೆ, ಅವರು ಕ್ರಿಕೆಟ್‌ ಆಡಳಿತಗಾರರು ಹಾಗೂ ಕ್ರೀಡಾಂಗಣವನ್ನು ಕಟ್ಟುವಲ್ಲಿ ಅವರ ಪಾತ್ರ ಪ್ರಮುಖವಾಗಿತ್ತು. ಈ ಕಾರಣಕ್ಕಾಗಿ ಈ ಕ್ರೀಡಾಂಗಣಕ್ಕೆ ಚಿನ್ನಸ್ವಾಮಿ ಹೆಸರಿಟ್ಟಿದ್ದಾರೆ. ಇಲ್ಲವಾದಲ್ಲಿ ಅನಿಲ್‌ ಕುಂಬ್ಳೆ, ರಾಹುಲ್‌ ದ್ರಾವಿಡ್‌, ಜಿಆರ್‌ ವಿಶ್ವನಾಥ್‌ ಮೊದಲಾದ ಶ್ರೇಷ್ಠರ ಹೆಸರನ್ನಿಡಬಹುದಾಗಿತ್ತು.

ಹೈದರಾಬಾದ್‌ನ ಉಪ್ಪಳದಲ್ಲಿರುವ ಕ್ರೀಡಾಂಗಣಕ್ಕೆ ರಾಜೀವ್‌ ಗಾಂಧೀ ಕ್ರೀಡಾಂಗಣ ಎಂದು ಹೆಸರಿಡಲಾಗಿದೆ. ನಿಜವಾಗಿಯೂ ಒಬ್ಬ ಕ್ರಿಕೆಟಿಗರ ಹೆಸರಿಡುವುದಾದರೆ ಭಾರತ ತಂಡವನ್ನು ಪ್ರತಿನಿಧಿಸಿ, ನಾಯಕನಾಗಿ ಮುನ್ನಡೆಸಿದ ಹೈದರಾಬಾದ್‌ನ ಮೊದಲ ಕ್ರಿಕೆಟಿಗ ಘುಲಾಮ್‌ ಅಹಮ್ಮದ್‌ ಅವರ ಹೆಸರನ್ನಿಡಬಹುದಾಗಿತ್ತು. ಆದರೆ ಕ್ರಿಕೆಟ್‌ ಆಡದ ರಾಜೀವ್‌ ಗಾಂಧೀಯ ಹೆಸರಿಡಲಾಗಿದೆ.

ವೆಸ್ಟ್‌ಇಂಡೀಸ್‌ನಲ್ಲಿ ಹೆಚ್ಚಿನ ಕ್ರೀಡಾಂಗಣಗಳಿಗೆ ಆ ದೇಶದ ಮಾಜಿ ಆಟಗಾರರ ಹೆಸರನ್ನಿಟ್ಟು ಗೌರವಿಸಲಾಗಿದೆ. ಆಸ್ಟ್ರೇಲಿಯಾದಲ್ಲೂ ಈ ಕ್ರಮ ಇದೆ. ಅನೇಕ ಕ್ರೀಡಾಂಗಣಗಳು ಒಲಿಂಪಿಯನ್ನರ ಹೆಸರಿನಲ್ಲಿದೆ., ಆದರೆ ಭಾರತದಲ್ಲಿ ಮಾತ್ರ ರಾಜಕಾರಣಿಗಳ ಹೆಸರು. ಇದನ್ನು ಇದಕ್ಕೆ ಮುನ್ನುಡಿ ಬರೆದದದ್ದು ನೆಹರು, ಗಾಂಧೀ…. ಇತ್ಯಾದಿ.

ಇನ್ನಾದರೂ ಈ ದೇಶದಲ್ಲಿ ಕ್ರೀಡಾಂಗಣಗಳಿಗೆ ಹೆಸರಿಡುವಾಗ ಕ್ರೀಡಾ ಸಾಧಕರ ಹೆಸರನ್ನಿಟ್ಟರೆ ಅರ್ಥಪೂರ್ಣ. ಇಲ್ಲವಾದಲ್ಲಿ ಬರೇ ರಾಜಕಾರಣಿಗಳ ಹೆಸರು ರಾರಾಜಿಸುತ್ತಿರುತ್ತದೆ.


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.