Friday, October 25, 2024

ಲಕ್ಷಾಂತರ ಪ್ರೇಕ್ಷರನ್ನು ಮೌನಕ್ಕೆ ಸರಿಸುವುದೆಂದರೆ ಹುಡುಗಾಟವಲ್ಲ!

ಭಾನುವಾರ ಫೈನಲ್‌ ಪಂದ್ಯದ ವೇಳೆ ನರೇಂದ್ರ ಮೋದಿ ಕ್ರೀಡಾಂಗಣ ನೀಲ ಶರಧಿಯಂತಾಗಿತ್ತು. ಸುಮಾರು 1.30 ಲಕ್ಷ ಪ್ರೇಕ್ಷಕರು ಸೇರಿದ್ದರು. ನೆರೆದವರಲ್ಲಿ ಹೆಚ್ಚಿನವರು ಟೀಮ್‌ ಇಂಡಿಯಾದ ಜರ್ಸಿ ಧರಿಸಿದ್ದರು. ಭಾರತದ ಒಂದೊಂದು ರನ್‌ಗೂ ಅಲ್ಲಿ ನೀಲಿ ಸಾಗರದ ಬೋರ್ಗರೆತ. ಆದರೆ ಆಸ್ಟ್ರೇಲಿಯಾ ತಂಡ ಬ್ಯಾಟಿಂಗ್‌ ಮಾಡುವಾಗ ಅಲ್ಲಿ ಅಲೆಗಳೇ ಇಲ್ಲದ ಬರೇ ಮೌನಕ್ಕೆ ಜಾರಿದ ನೀಲಿ ಶಾಂತ ಸಾಗರ. How Australia handled crowd pressure?

ಕಳೆದ ಬಾರಿಯ ಐಪಿಎಲ್‌ ಫೈನಲ್‌ ಪಂದ್ಯದಲ್ಲಿ 1 ಲಕ್ಷ ಪ್ರೇಕ್ಷಕರು ಸೇರಿದ್ದು ದಾಖಲೆಯಾಗಿತ್ತು. ಈಗ ವಿಶ್ವಕಪ್‌ ಫೈನಲ್‌ ಪಂದ್ಯ ಆ ದಾಖಲೆಯನ್ನು ಮುರಿದಿದೆ. ಅಂಗಣದಲ್ಲಿದ್ದ ಆಸ್ಟ್ರೇಲಿಯಾದ 11 ಆಟಗಾರರು ಈ ನೀಲಿ ಸಾಗರವನ್ನು ಒಮ್ಮೆ ಮೌನಕ್ಕೆ ತಳ್ಳಿದರೆ, ಇನ್ನೊಮ್ಮೆ ಅಬ್ಬರದ ಅಲೆಗಳ ಶಬ್ದಕ್ಕೆ ಅನಿವಾರ್ಯವಾಗಿ ಕಿವಿಯಾಗುತ್ತಿದ್ದರು. ಕ್ರಿಕೆಟ್‌ ಅಥವಾ ಯಾವುದೇ  ಆಟವಿರಲಿ ಮನೆಯಂಗಣದಲ್ಲಿ ನಡೆಯುವ ಪಂದ್ಯಕ್ಕೆ ಅಲ್ಲಿಯ ಪ್ರೇಕ್ಷಕರು ತಮ್ಮ ತಂಡಕ್ಕೆ ಹೆಚ್ಚಿನ ಬೆಂಬಲ ನೀಡುತ್ತಿರುತ್ತಾರೆ. ಅದು ಸಹಜ. ಆದರೆ ಭಾನುವಾರ ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸೇರಿರುವುದು ಬರೇ ಪ್ರೇಕ್ಷಕರಲ್ಲ, ಅವರು ಭಾರತ ಗೆಲ್ಲುವುದನ್ನು ನೋಡಲು ಬಂದ ಅಭಿಮಾನಿಗಳು. ಅವರ ಪಾಲಿಗೆ ಆಸ್ಟ್ರೇಲಿಯಾ ಕೇವಲ ಎದುರಾಳಿ ತಂಡ. ಅವರ ಹಿಂದಿನ ಯಾವುದೇ ಸಾಧನೆಯನ್ನೂ ಪರಿಗಣಿಸುವ ಸಮಯ ಅಥವಾ ಸ್ಥಳ ಅಹಮದಾಬಾದ್‌ ಆಗಿರಲಿಲ್ಲ. ಭಾರತ ಗೆಲ್ಲಬೇಕು ಅಷ್ಟೆ.

ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪಂದ್ಯ ವೀಕ್ಷಿಸುತ್ತಿದ್ದಾರೆ. ಕೇಂದ್ರ ಗೃಹ ಸಚಿನ ಅಮಿತಾ ಶಾ ಕೂಡ ಪಂದ್ಯವನ್ನು ಸಂಭ್ರಮಿಸುತ್ತಿದ್ದಾರೆ. ಗೋಲ್ಡನ್‌ ಪಾಸ್‌ ಪಡೆದು ಬಂದಿರುವ ವಿಐಪಿಗಳು ಒಂದೆಡೆ. ಗುಜರಾತಿನಲ್ಲಿ ಬಿಜೆಪಿ ಸರಕಾರ ಆಡಳಿತದಲ್ಲಿರುವುದರಿಂದ ಕ್ರೀಡಾಂಗಣದಲ್ಲಿ ಬಿಜೆಪಿ ಕಾರ್ಯಕರ್ತರೇ ಹೆಚ್ಚಿರುವುದು ಸಹಜ. ಮೊದಲ ಪಂದ್ಯಕ್ಕೆ ಜನ ಸೇರಿಸಲು ಉಚಿತವಾಗಿ ಟಿಕೆಟ್‌ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು. ಬೆರಳೆಣಿಕೆಯ ಆಸ್ಟ್ರೇಲಿಯಾ ಪ್ರೇಕ್ಷಕರು. ಇಂಥ ಪರಿಸ್ಥಿತಿಯಲ್ಲಿ ಮನೆಯಂಗಣದ ತಂಡದ ವಿರುದ್ಧ ಜಯ ಸಾಧಿಸುವುದು ಅಷ್ಟು ಸುಲಭವಲ್ಲ. ಈ ಬಾರಿ ಬಿಸಿಸಿಐ ಹಾಗೂ ಐಸಿಸಿ ಡಿಜೆ ಅಬ್ಬರಕ್ಕೆ ಅವಕಾಶ ನೀಡಿದೆ. ಚಿಕ್ಕ ಬಿಡುವು ಸಿಕ್ಕರೆ ಅಲ್ಲಿಯೇ ಒಂದು ಕೂಗಾಟ, ಕಿರುಚಾಟ ಬೇರೆ.

ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್‌ ಕಮಿನ್ಸ್‌ ಪಂದ್ಯ ಆರಂಭಕ್ಕೆ ಮುನ್ನ ಒಂದು ಮಾತು ಹೇಳಿದ್ದರು, “ಇಲ್ಲಿ ನೆರೆದಿರುವ ಕ್ರಿಕೆಟ್‌ ಅಭಿಮಾನಿಗಳು ಒಂದು ಕಡೆಗೆ ಅಂದರೆ ಭಾರತಕ್ಕೆ ಬೆಂಬಲ ನೀಡುವವರು ಎಂಬುದು ಸಹಜ. ಆದರೆ ಅದೇ ಜನ ಸಾಗರವನ್ನು ಮೌನಕ್ಕೆ ಸರಿಸುವಂತೆ ಮಾಡುವುದು ಕ್ರಿಕೆಟಿಗರಿಗೆ ಸಿಗುವ ದೊಡ್ಡ ತೃಪ್ತಿ. ನಾಳೆಯ ದಿನ ಆ ಜನ ಸಾಗರವನ್ನು ಮೌನಕ್ಕೆ ಸರಿಯುಂತೆ ಮಾಡಲು ಯತ್ನಿಸುತ್ತೇವೆ,” ಎಂದಿದ್ದರು. ಹಾಗೆಯೇ ಮಾಡಿದರು. ಕ್ರೀಡೆಯಲ್ಲಿ ಮನಸ್ಸಿನ ಏಕಾಗ್ರತೆ ಅತ್ಯಂತ ಮುಖ್ಯವಾದುದು. ಆಟಗಾರನ ಮನಸ್ಸಿನ ಏಕಾಗ್ರತೆಗೆ ಭಂಗ ಉಂಟಾಯಿತೆಂದರೆ ಆಟದ ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತದೆ. ಅಹಮದಾಬಾದ್‌ನ ಕ್ರಿಕೆಟ್‌ ಸಾಗರದ ಅಬ್ಬರಕ್ಕೆ ಆಸೀಸ್‌ ತಂಡ ಗಮನ ಹರಿಸಲಿಲ್ಲ.

ದೊಡ್ಡ ಕ್ರೀಡಾಕೂಟಗಳಲ್ಲಿ ಆಟಗಾರರು ಮೊದಲು ಮಾಡುವ ಕೆಲಸವೆಂದರೆ ಪ್ರೇಕ್ಷರ ಬಗ್ಗೆ ಗಮನ ಹರಿಸದೆ, ತಮ್ಮ ಉದ್ದೇಶ ಏನಿದೆಯೋ ಅದರ ಬಗ್ಗೆ ಗಮನ ಹರಿಸುವುದು. ಆಸ್ಟ್ರೇಲಿಯಾ ಫೈನಲ್‌ನಲ್ಲಿ ಮಾಡಿದ ಮೊದಲ ಕೆಲಸವಿದು. ಟೆಸ್ಟ್‌ ಅಥವಾ ಏಕಮುಖವಾಗಿ ನಡೆಯುವ ಪಂದ್ಯಗಳಲ್ಲಿ ಸಾಮಾನ್ಯ ಪ್ರೇಕ್ಷಕರ ಕರೆಗೆ ಕೈ ಮಾಡುವುದು, ನಗು ಬೀರುವುದು ಇವೆಲ್ಲ ಇರುತ್ತದೆ. ಆದರೆ ಆಸೀಸ್‌‌ ಆಟಗಾರರು ಫೈನಲ್‌ ಪಂದ್ಯದಲ್ಲಿ ಆ ಕೆಲಸವನ್ನು ಮಾಡಿರಲಿಲ್ಲ. ಭಾರತ ಫೀಲ್ಡಿಂಗ್‌ ಮಾಡುವಾಗ ಕೆ.ಎಲ್‌ ರಾಹುಲ್‌ ಕಾಲಿನ ಮಧ್ಯದಿಂದ ಚೆಂಡೊಂದು ಸಾಗಿ ಬೌಂಡರಿ ತಲುಪಿತು. ಆಗ ವಿರಾಟ್‌ ಕೊಹ್ಲಿ ಪ್ರೇಕ್ಷರಿಗೆ ಹುರಿದುಂಬಿಸುವಂತೆ ಚಪ್ಪಾಳೆ ತಟ್ಟುವ ಸನ್ನೆ ಮಾಡುತ್ತಾರೆ. ಆದರೆ ಆಸ್ಟ್ರೇಲಿಯಾ ತಂಡಕ್ಕೆ ಈ ಅವಕಾಶ ಇರುವುದಿಲ್ಲ. ಇಂಥ ಸಂದರ್ಭಗಳಲ್ಲಿ ಮನೋಬಲ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಎದುರಾಳಿಗೆ ಪ್ರೋತ್ಸಾಹ ನೀಡುತ್ತಿದ್ದ ಪೇಕ್ಷಕರನ್ನು ತಮಗೆ ಪ್ರೋತ್ಸಾಹ ನೀಡುವಂತೆ ಮಾಡುವುದು, ತಮ್ಮ ಪರವಾಗಿ ಚಪ್ಪಾಳೆಯ ಮಳೆಗರೆಯುವಂತೆ ಮಾಡುವುದು, ನಡು ನಡುವೆ ಅವರನ್ನು ಮೌನಕ್ಕೆ ಸರಿಸುವುದು ಆಟಗಾರರ ಸಾಮರ್ಥ್ಯವಾಗಿರುತ್ತದೆ. ಆ ಕೆಲಸವನ್ನು ಆಸ್ಟ್ರೇಲಿಯಾ ತಂಡದ ಆಟಗಾರರು ಮಾಡಿದ್ದಾರೆ. ಬೆಂಬಲ ನೀಡುವ ಎಷ್ಟು ಜನರಿದ್ದರೇನಂತೆ, ಆಟಗಾರನಿಗೆ ಮನೋಬಲವಿಲ್ಲದಾಗ?

Related Articles