Tuesday, April 16, 2024

ವಿರಾಟ್ ಕೊಹ್ಲಿ ನಿಜವಾದ ಖೇಲ್ ರತ್ನವೇ?

ಸ್ಪೋರ್ಟ್ಸ್ ಮೇಲ್ ವರದಿ

ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಅವರಿಗೆ ಬದಲಾಗಿ ಸಚಿನ್ ತೆಂಡೂಲ್ಕರ್ ಅವರಿಗೆ ಭಾರತ ರತ್ನ ನೀಡಿರುವ ಬಗ್ಗೆ ಸಾಕಷ್ಟು ವಿವಾದಗಳು ಹುಟ್ಟಿಕೊಂಡಿತ್ತು. ಈಗಲೂ ಸಂದರ್ಭ ಬಂದಾಗ ಚರ್ಚೆ ನಡೆಯುತ್ತಿದೆ. ಅದೇ ರೀತಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರಿಗೆ ಪ್ರತಿಷ್ಠಿತ ಖೇಲ್ ರತ್ನ ಪ್ರಶಸ್ತಿ ನೀಡಿರುವುದು ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ.

ಸಚಿನ್ ತೆಂಡೂಲ್ಕರ್‌ಗೆ ಭಾರತ ರತ್ನ ನೀಡಿರುವ ಬಗ್ಗೆ ಇಲ್ಲಿ ತಕರಾರಲ್ಲ, ಬದಲಾಗಿ ಧ್ಯಾನ್‌ಚಂದ್ ಅವರಿಗೆ ಮರಣೋತ್ತರ ಗೌರವ ನೀಡಬೇಕೆಂದು ಇಡೀ ದೇಶವೇ ಒಕ್ಕೊರಲಿನಿಂದ ಕೇಳುತ್ತಿರುವಾಗ ಸರಕಾರ ಒಲಿಂಪಿಕ್ಸ್ ಪಟ್ಟಿಯಲ್ಲಿಲ್ಲದ ಕ್ರೀಡಾ ಸಾಧಕರಿಗೆ ನೀಡಿರುವುದು ಅನೇಕರಲ್ಲಿ ಅಸಮಾಧಾವನ್ನುಂಟು ಮಾಡಿತ್ತು. ಈ ಬಾರಿ ಧ್ಯಾನ್ಚಂದ್‌ಗೆ ಕೊಡಿ ಆಮೇಲೆ ನನ್ನ ಬಗ್ಗೆ ಯೋಚಿಸಿದರಾಯಿತು ಎಂದು ಸಚಿನ್ ತೆಂಡೂಲ್ಕರ್ ಕೂಡ ಹೇಳದಿರುವುದು ಪ್ರಶಸ್ತಿಯ ಬಗ್ಗೆ ಇರುವ ಆಸಕ್ತಿಯನ್ನು ಸ್ಪಷ್ಟಪಡಿಸುತ್ತದೆ.

ಕೊಹ್ಲಿ ಶೂನ್ಯ ಸಂಪಾದನೆ!

ರಾಜೀವ್ ಗಾಂಧೀ ಖೇಲ್ ರತ್ನ ಪ್ರಶಸ್ತಿ ನೀಡಲು ಸರಕಾರ ಸಮಿತಿಯೊಂದನ್ನು ರಚಿಸಿತ್ತು. ಆ ಸಮಿತಿಯು ನೀಡುವ ಅಂಕಗಳ ಆಧಾರದ ಮೇಲೆ ಸಾಧಕರನ್ನು ಆಯ್ಕೆ ಮಾಡಲಾಗುತ್ತದೆ. ಈ ಬಾರಿ 11 ಮಂದಿ ಹಿರಿಯ ಸಾಧಕರು ಖೇಲ್ ರತ್ನ ಗೌರವಕ್ಕೆ ಸಾಧಕರನ್ನು ಆಯ್ಕೆ ಮಾಡಿದೆ. ಕೊಹ್ಲಿಗೆ ಸಮಿತಿ ನೀಡಿದ್ದು, 0 ಅಂಕ. ಮೀರಾಬಾಯಿ ಚಾನು 44 ಅಂಕಗಳನ್ನು ಗಳಿಸಿರುತ್ತಾರೆ. ಕುಸ್ತಿಪಟು ಬಜರಂಗ್ ಪೂನಿಯಾ  ಮತ್ತು ವಿನೇಶ್  ಪೋಗತ್  ಒಟ್ಟು 80 ಅಂಕ ಗಳಿಸಿರುತ್ತಾರೆ. ಇತರ ಆರು ಮಂದಿ ಕ್ರೀಡಾಪಟುಗಳು ಚಾನು ಅವರಿಗಿಂತ ಹೆಚ್ಚು ಅಂಕ ಗಳಿಸಿರುತ್ತಾರೆ. ಆದರೆ ಪ್ರಶಸ್ತಿಯಿಂದ ವಂಚಿತರಾಗುತ್ತಾರೆ. ಸಮಿತಿಯಲ್ಲಿರುವವರು ಯಾರಿಗೆ ನೀಡಬೇಕು ಎಂದು ಕೈ ಎತ್ತಿದಾಗ ಸಿಕ್ಕ ಬೆಂಬಲದ ಆಧಾರದ ಮೇಲೆ ಪ್ರಶಸ್ತಿಗೆ ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಯಿತು.

ಕ್ರಿಕೆಟ್ ಒಲಿಂಪಿಕ್ಸ್ ಕ್ರೀಡೆಯಲ್ಲ

ಯಾವುದೇ ಪ್ರಶಸ್ತಿಯ ಸಮಿತಿಯನ್ನು ಗಮನಿಸಿದಾಗ ಅಲ್ಲಿ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡವರು ಅಥವಾ ಸಾಧನೆ ಮಾಡಿದವರು ಇರುತ್ತಾರೆ. ಇವರು ಮೊದಲು ಆಯ್ಕೆ ಮಾಡುವುದು ಒಲಿಂಪಿಕ್ಸ್ ಕ್ರೀಡೆಗಳಲ್ಲಿ ಸಾಧನೆ ಮಾಡಿದವರನ್ನು. ಆದರೆ ಕ್ರಿಕೆಟ್ ಒಲಿಂಪಿಕ್ಸ್ ಕ್ರೀಡೆಯಲ್ಲ. ಜಗತ್ತಿನ ಎಲ್ಲ ರಾಷ್ಟ್ರಗಳಲ್ಲೂ ಆಡುತ್ತಿರುವ ಕ್ರೀಡೆಯಲ್ಲ. ಆದರೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ತನ್ನ ಆಟಗಾರರನ್ನು ಪ್ರತಿ ವರ್ಷ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡುತ್ತದೆ.
ಕ್ರಿಕೆಟ್‌ಗೆ ಹೋಲಿಸಿದಾಗ ಇತರ ಕ್ರೀಡಾಪಟಗಳು ಒಲಿಂಪಿಕ್ಸ್‌ನಲ್ಲಿ ಸಾಧನೆ ಮಾಡಿದರೂ ಬಡ ಕ್ರೀಡಾಪಟುಗಳೆಂದೇ ಹೇಳಬಹುದು. ಕ್ರಿಕೆಟಿಗರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದಿದ್ದರೂ ರಾಜ್ಯದ ತಂಡದ ಪರ ಆಡಿದರೂ ಹಣ ಹರಿದು ಬರುತ್ತದೆ. ಇಂತ ಕ್ರಿಕೆಟಿಗರನ್ನು ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡುವಾಗ ಸರಕಾರ ಹಾಗೂ ಹಿರಿಯ ಸಾಧಕರು ಮತ್ತೊಮ್ಮೆ ಯೋಚಿಸುವುದು ಸೂಕ್ತ.
ತನ್ನನ್ನು ಕಡೆಗಣಿಸಿ, ಸೂಕ್ತ ರೀತಿಯಲ್ಲಿ ಆಯ್ಕೆ ಮಾಡದೆ, ಕ್ರಿಕೆಟಿಗರನ್ನು ಆಯ್ಕೆ ಮಾಡಿರುವುದಕ್ಕೆ ಬಜರಂಗ್ ಪೂನಿಯಾ ಬಹಳ ಅಸಮಧಾನ ವ್ಯಕ್ತಪಡಿಸಿದ್ದಾರೆ. ‘ನನ್ನ ಪ್ರತಿಭೆ  ಹಾಗೂ ಸಾಧನೆಗೆ ಬೆಲೆ ನೀಡದಿರುವುದು ಬೇಸರ ತಂದಿದೆ. ಈ ಪ್ರಶಸ್ತಿಗೆ ಮಾನದಂಡ ಏನೆಂಬುದೇ ನನಗೆ ತಿಳಿಯಲಾಗಲಿಲ್ಲ, ಕ್ರೀಡಾ ಸಚಿವ ರಾಜ್ಯರ್ಧನ  ಸಿಂಗ್ ರಾಥೋಡ್ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಲಿಲ್ಲ. ಸಚಿವರಿಗೆ ಗೊತ್ತಿದೆ ನಾನು ಪ್ರಶಸ್ತಿಗೆ ಅರ್ಹನಾದ ವ್ಯಕ್ತಿ ಎಂದು,‘ ಎಂದು ಬಜರಂಗ್ ಅತ್ಯಂತ ನೋವಿನಿಂದ ಹೇಳಿಕೆ ನೀಡಿದ್ದಾರೆ.
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿರುವ ಪೂನಿಯಾ, ಏಷ್ಯನ್ ಗೇಮ್ಸ್‌ನಲ್ಲೂ ಚಿನ್ನದ ಸಾ‘ನೆ ಮಾಡಿದ್ದಾರೆ. ವಿಶ್ವ ಚಾಂಪಿಯನ್‌ಷಿಪ್‌ನಲ್ಲೂ ಕಂಚು ಹಾಗೂ ಬೆಳ್ಳಿಯ ಪದಕ ಗೆದ್ದಿದ್ದಾರೆ. ಆದರೆ ಜನಪ್ರಿಯ ವ್ಯಕ್ತಿಗಳನ್ನು ಆಯ್ಕೆ ಮಾಡುತ್ತಾರೆಂಬುದು ಈ ಕುಸ್ತಿಪಟುವಿಗೆ ತಿಳಿದಿಲ್ಲ. ಕ್ರೀಡಾ  ಸಚಿವರು ಸರಿಯಾಗಿ ಉತ್ತರ ನೀಡದಿದ್ದರೆ ನ್ಯಾಯಾಲಯದ ಮೆಟ್ಟಿಲು ಏರುವುದಾಗಿ ಪೂನಿಯಾ ಎಚ್ಚರಿಕೆ ನೀಡಿದ್ದಾರೆ.

ಹಣ ಎಂದರೆ ವೃತ್ತಿಪರತೆ

ಕ್ರಿಕೆಟ್ ಜಗತ್ತಿನ ವೃತ್ತಿಪರ ಕ್ರೀಡೆ ಎಂದು ಹೇಳುತ್ತಾರೆ. ಒಪ್ಪುವಂಥ ವಿಚಾರ. ಆದರೆ ಹಣ ಗಳಿಸುವ ಕ್ರೀಡೆಗಳೆಲ್ಲ ವೃತ್ತಿಪರತೆಯಿಂದ ಕೂಡಿದ ಕ್ರೀಡೆ. ಇತರ ಕ್ರೀಡೆಗಳಲ್ಲಿ ಸಾಧನೆ ಮಾಡಿದರೆ ಅವುಗಳಿಗೆ ಬೆಲೆ ಇಲ್ಲ ಎಂಬ ಅರ್ಥವನ್ನು ನಮ್ಮ ಆಯ್ಕೆ ಪ್ರಕ್ರಿಯೆ ಹೇಳುತ್ತದೆ. ಒಂದು ಕ್ರೀಡೆಯನ್ನು ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡುವಾಗ ಅದರಲ್ಲಿನ ಮೋಸದಾಟದ ಬಗ್ಗೆಯೂ ಸರಕಾರ ತಿಳಿದಿರಬೇಕು. ಅಲ್ಲಿಯ ಆಡಳಿತ ವ್ಯವಸ್ಥೆ. ಆಯ್ಕೆ ಪ್ರಕ್ರಿಯೆ ಪ್ರತಿಯೊಂದನ್ನೂ ಗಮನಿಸಿಬೇಕು. ಕ್ರಿಕೆಟ್ ಈಗ ಜಂಟ್ಲ್ ಮನ್ ಕ್ರೀಡೆಯಾಗಿ ಉಳಿದಿಲ್ಲ. ಅದೊಂದು ಉದ್ದಿಮೆಯಾಗಿದೆ. ಭಾರತ ತಂಡದ ಪರ ಆಡಿ ದೇಶಕ್ಕಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಸಲೀಸಾಗಿ ಹೇಳುತ್ತಾರೆ. ಗಳಿಸಿದ ಹಣ, ಅಂತಸ್ತು, ಜಾಹೀರಾತಿನಿಂದ ಬರುವ ಆದಾಯ. ಪಂದ್ಯ ನಡೆಸುವ ಉದ್ದೇಶ ಇವುಗಳ ಬಗ್ಗೆ ಗಮನಿಸುವುದಿಲ್ಲ. ಆಟಗಾರರನ್ನು ಆಯ್ಕೆ ಮಾಡುವಾಗ ಯಾವ ರೀತಿಯ ಕ್ರಮ ಅನುಸರಿಸುತ್ತಾರೆ?, ಸಾಧನೆಯೋ ಅಥವಾ ಕೋಟಾದಡಿ ಆಯ್ಕೆ ಮಾಡಲಾಗುತ್ತದೆಯೇ?, ಕೆಪಿಎಲ್‌ನಲ್ಲಿ ಉತ್ತಮ ಸಾಧನೆ ಮಾಡಿದವರು, ರಣಜಿಯಲ್ಲಿ ಉತ್ತಮ ಸಾಧನೆ ಮಾಡಿದವರು, ಆ ರಾಜ್ಯದಿಂದ ಒಬ್ಬರು, ಈ ರಾಜ್ಯದಿಂದ ಒಬ್ಬರು. ಹೀಗೆ ಆಯ್ಕೆ ನಡೆಸುತ್ತಾರೆ. ನಾಯಕನ ಜತೆ ಚೆನ್ನಾಗಿ ಇರುವ ಕೋಚ್, ಕೋಚ್ ಜತೆ ಆತ್ಮೀಯವಾಗಿರುವ ನಾಯಕ, ನಾಯಕನಿಗೆ ಸದಾ ಬಕೆಟ್ ಹಾಕಿಕೊಂಡಿರುವ ಆಟಗಾರರು ಹೀಗೆ ಪ್ರಕ್ರಿಯೆ ಮುಂದುವರಿಯುತ್ತದೆ.
ಕ್ರಿಕೆಟ್‌ನಲ್ಲಿ ಎಷ್ಟು ರಾಷ್ಟ್ರಗಳು ಪಾಲ್ಗೊಳ್ಳುತ್ತಿವೆ. ಒಂದು ವರ್ಷದಲ್ಲಿ ಎಷ್ಟು ರಾಷ್ಟ್ರಗಳೊಂದಿಗೆ ಭಾರತ ತಂಡ ಆಡುತ್ತದೆ?, ಭಾರತ ತಂಡದ ಪರ ಆಡಿದ ನಂತರ ಅವರು ತಮ್ಮ ರಾಜ್ಯದ ತಂಡವನ್ನು ಪ್ರತಿನಿಧಿಸುತ್ತಾರೆಯೇ?, ಕುಸ್ತಿಪಟುಗಳು ಒಮ್ಮೆ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡರೆ ಮತ್ತೆ ರಾಜ್ಯ ಅಥವಾ ದೇಶೀಯ ಚಾಂಪಿಯನ್‌ಷಿಪ್‌ನಲ್ಲಿ ಆಡುತ್ತಾರೆಯೇ? ಅವರು ಎದುರಿಸಿದ ತಂಡಗಳ ರಾಂಕ್  ಯಾವುದು? ಎಂಬ ಅಂಶಗಳನ್ನು ಗಮನಿಸಬೇಕಾಗುತ್ತದೆ.
ಕೊಹ್ಲಿಗೆ ಪ್ರಭಾವದ ಆಧಾರದ ಮೇಲೆ ಕೊಡಲಾಯಿತೇ ವಿನಃ ಸಾಧನೆಯ ಆಧಾರ ಎಂದರೆ ಅಲ್ಲಿ ಹಲವಾರು ಅಂಶಗಳನ್ನು ಗಮನಿಸಬೇಕಾಗುತ್ತದೆ. ಕೊಹ್ಲಿಗೆ ಪ್ರತಿಸ್ಪರ್ಧಿಯಾಗಿ ಯಾರೂ ಇರಲಿಲ್ಲವೇ?, ಪ್ರತಿ ಬಾರಿಯೂ ಕೊಹ್ಲಿಯೇ ಭಾರತ ತಂಡಕ್ಕೆ ಜಯ ತಂದುಕೊಟ್ಟರೇ?, ಬೌಲಿಂಗನ್ನೂ ಅವರೇ ಮಾಡಿದರೇ?, ಅವರ ಯಶಸ್ಸಿಗೆ ನಾನ್‌ ಸ್ಟ್ರೈಕರ್  ಕೊನೆಯಲ್ಲಿ ಇನ್ನೊಬ್ಬ ಆಟಗಾರನಿದ್ದರಲ್ಲ ಅವರು ಕೂಡ ಕೊಹ್ಲಿಯ ಯಶಸ್ಸಿನಲ್ಲಿ ಭಾಗಿಯಲ್ಲವೇ?, ಕೊಹ್ಲಿಗೆ ಬಿಸಿಸಿಐ ಹಣ ಕೊಟ್ಟು ಆಡಿಸುವುದಲ್ಲವೇ?, ಕುಸ್ತಿಪಟುಗಳಿಗೆ ಹಣ ಕೊಟ್ಟು ದೇಶದ ಪರ ಆಡು ಎಂದು ಹೇಳಿರುವುದು ಎಲ್ಲಿಯಾದರೂ ಇದೆಯೇ? ಈ ಎಲ್ಲ ಪ್ರಶ್ನೆಗಳು ಸಾಮಾನ್ಯರನ್ನು ಕಾಡುತ್ತದೆ. ಕ್ರಿಕೆಟ್‌ಗಿಂತ ಇತರ ಕ್ರೀಡೆಗಳಲ್ಲಿ ಭಾಗವಹಿಸಿ ದೇಶಕ್ಕೆ ಕೀರ್ತಿ ತಂದವರಿಗೆ ಪ್ರಶಸ್ತಿ ನೀಡುವುದರಲ್ಲಿ ಅರ್ಥವಿದೆ. ಜನಪ್ರಿಯತೆಯ ಆಧಾರ, ಮನರಂಜನೆ ಇವುಗಳ ಆಧಾರದ ಮೇಲೆ ನೀಡುವುದಾದರೆ ಸಿನಿಮಾಗಳಲ್ಲಿ ನಟರಿಗೂ ಖೇಲ್ ರತ್ನ ನೀಡಬೇಕಾದ ದಿನ ಬರಬಹುದು.

Related Articles