Saturday, October 12, 2024

Kambala ಕಂಬಳದ ಓಟಕ್ಕೆ ಅಭಿಜಿತ್‌ ಕಾಮೆಂಟರಿಯ ಮೋಡಿ!

ಒಲಿಂಪಿಕ್ಸ್‌ನಲ್ಲಿ ಉಸೇನ್ ಬೋಲ್ಟ್‌ ಓಡುತ್ತಿರುವುದನ್ನು ನೋಡುತ್ತಿರುವಾಗ ಆ ವೇಗಕ್ಕೆ ಮತ್ತಷ್ಟು ಆವೇಗ ಸಿಗುವುದು ಬ್ರೂಸ್‌ ಮೆಕ್‌ಅವೆನಿ ಅವರ ವೀಕ್ಷಕ ವಿವರಣೆಯ ಧ್ವನಿ ಸೇರಿದಾಗ. ಕ್ರಿಕೆಟ್‌ನಲ್ಲೂ ಹಾಗೆ ಟಾನಿ ಗ್ರೆಗ್‌ ಅವರ ವೀಕ್ಷಕ ವಿವರಣೆಯಲ್ಲಿ ಕ್ರಿಕೆಟ್‌ ನೋಡುವುದೇ ಸಂಭ್ರಮ. ಟಾಸ್‌ನಂಥ ಚಿಕ್ಕ ಪ್ರಕ್ರಿಯೆಗೆ ಡ್ಯಾನಿ ಮಾರಿಸನ್‌ ಹಾಗೂ ರವಿ ಶಾಸ್ತ್ರೀ ಹೊಸ ಕಾವ್ಯ ಬರೆದರು. ಈಗ ನಮ್ಮ ಜನಪ್ರಿಯ ಜಾನಪದ ಕ್ರೀಡೆ ಕಂಬಳಕ್ಕೆ ಬನ್ನಿ. ಇಲ್ಲಿ ವೀಕ್ಷಕ ವಿವರಣೆಗಾರರು ಇದ್ದಾರಾ? ಮೊದಲೆಲ್ಲ ಇದ್ದಿಲ್ಲ. ಆದರೆ ಕಳೆದ ನಾಲ್ಕು ವರ್ಷಗಳಿಂದ ಓಡುತ್ತಿರುವ ಕೋಣಗಳ ಹೆಸರನ್ನು ಹೇಳುತ್ತ, ಮಾಲೀಕರ ಹೆಸರು ಸೂಚಿಸುತ್ತ, ಹಿಂದಿನ ಇತಿಹಾಸವನ್ನು ಮೆಲುಕು ಹಾಕುತ್ತ ಕಂಬಳ ಗದ್ದೆಯಲ್ಲಿ ವೀಕ್ಷಿಸುತ್ತಿರುವ ಪ್ರೇಕ್ಷಕರ ಮೈ ಮನ ಸೂರೆಗೊಳ್ಳುತ್ತ ವೀಕ್ಷಕ ವಿವರಣೆ ನೀಡುತ್ತಾರೆ ಉತ್ಸಾಹಿ ಯುವಕ ಉಡುಪಿ ಜಿಲ್ಲೆಯ ಅಭಿಜಿತ್‌ ಪಾಂಡೇಶ್ವರ. Udupi District Kambala Commentator Abhijith Pandeshwara.

ವಾಲಿಬಾಲ್‌ ಮತ್ತು ಕಬಡ್ಡಿ ಪಂದ್ಯಗಳಿಗೆ ವೀಕ್ಷಕ ವಿವರಣೆ ನೀಡುತ್ತಿದ್ದ ಅಭಿಜಿತ್‌ ಚಿಕ್ಕಂದಿನಿಂದಲೂ ಹತ್ತಿರದ ಕಂಬಳ ವೀಕ್ಷಿಸುತ್ತಿದ್ದರು. ಕಾಲೇಜು ವ್ಯಾಸಂಗ ಮಾಡುತ್ತಿರುವಾಗ ದೂರದ ಕಂಬಳಗಳನ್ನು ನೋಡಲು ಹೋಗುತ್ತಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವ ಕಂಬಳಗಳಲ್ಲಿ ವೀಕ್ಷಕ ವಿವರಣೆ ನೀಡುವುದನ್ನು ಗಮನಿಸಿದ್ದರು. ಕೋಣಗಳಿಗೆ ಇರುವ ಹೆಸರು, ಅದರ ಮಾಲೀಕರು, ಹಿಂದಿನ ವರ್ಷದ ಸಾಧನೆ, ನಡೆದು ಬಂದ ಇತಿಹಾಸ, ಕಂಬಳದ ಪ್ರಾಮುಖ್ಯತೆ ಇವುಗಳನ್ನೆಲ್ಲ ಅಭ್ಯಾಸ ಮಾಡಿದರು.

ಆರಂಭದಲ್ಲಿ ಸುಮ್ಮನೆ ಮೈಕ್‌ ಹಿಡಿದು ಕೋಣಗಳ ಬಗ್ಗೆ, ಮಾಲೀಕರ ಬಗ್ಗೆ ಮಾತನಾಡುತ್ತಿದ್ದರು. ಆಗ ಅನೇಕರು ಅಭಿಜಿತ್‌ ಅವರನ್ನು ತಮಾಷೆ ಮಾಡಿದ್ದುಂಟು. “ನಿಂಗ್‌ ಬೇರೆ ಕೆಲ್ಸು ಇಲ್ಯ ಮರಾಯʼ ಎಂದು. ಆದರೆ ಅಭಿಜಿತ್‌ ಅದಕ್ಕೆಲ್ಲ ಸೊಪ್ಪು ಹಾಕಲಿಲ್ಲ. ತನ್ನ ಉದ್ದೇಶವೇನೆಂಬುದು ಅವರಿಗೆ ಸ್ಪಷ್ಟವಾಗಿತ್ತು. ಆರಂಭದಲ್ಲಿ ಎಲ್ಲವೂ ಹಾಗೆ ಟೀಕೆಗಳಿಂದಲೇ ಆರಂಭ. ತಾತ್ಸಾರದ ಮಾತುಗಳನ್ನೇ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಬಂದ ಅಭಿಜಿತ್‌ ಪಾಂಡೇಶ್ವರ ಅವರು ಇಂದು ಉಡುಪಿ ಜಿಲ್ಲೆಯಲ್ಲಿ ಯಾವುದೇ ಕಂಬಳ ನಡೆದರೂ ಅವರ ಅನಿವಾರ್ಯವಾಗಿದ್ದಾರೆ. ಬಾರ್ಕೂರು ಶಾಂತರಾಮ್‌ ಶೆಟ್ಟಿ ಅಂದರೆ ಕಂಬಳದ ಮನೆ ಮಾತು. ಅವರು ಅಭಿಜಿತ್‌ ಅವರಲ್ಲಿದ್ದ ಪ್ರತಿಭೆಗೆ ಪ್ರೋತ್ಸಾಹ ನೀಡಿದರು.

“ಗಗನಕ್ಕೆ ಚಿಮ್ಮಿದ ಕೆಸರು,” “ಗದ್ದೆಯನ್ನೇ ಸೀಳಿ ಬರುವ ರಾಜಾ” ಹೀಗೆ ಓಡುವ ಕೋಣದ ಹೆಸರು ಹೇಳುತ್ತ, ಹಿಂದೆ ಓಡುವವರನ್ನು ಹುರಿದುಂಬಿಸುತ್ತ ಅಭಿಜಿತ್‌ ಅವರು ವೀಕ್ಷಕ ವಿವರಣೆ ನೀಡಿದರೆಂದರೆ ಕಂಬಳ ಗದ್ದೆಯಲ್ಲಿ ಮತ್ತಷ್ಟು ಸಂಭ್ರಮ. ಹವ್ಯಾಸಕ್ಕಾಗಿ ಆರಂಭಿಸಿದ ಈ ಕಾರ್ಯ ಈಗ ಅಭಿಜಿತ್‌ ಅವರಿಗೆ ಗೌರವವನ್ನು ತಂದುಕೊಟ್ಟಿದೆ. ಮೊದಮೊದಲು ಅಭಿಜಿತ್‌ ಕಂಬಳ ನಡೆಯುವಲ್ಲಿಗೆ ಹೋಗಿ ವಿನಂತಿ ಮಾಡಿಕೊಂಡು ವೀಕ್ಷಕ ವಿವರಣೆ ನೀಡಿ ಖುಷಿ ಪಡುತ್ತಿದ್ದರು. ಆದರೆ ಈಗ ಕಂಬಳದ ವೇಳಾಪಟ್ಟಿ ಸಿದ್ಧಗೊಂಡ ದಿನದಿಂದ ಅಭಿಜಿತ್‌ಗೆ ಕರೆಗಳು ಬರಲಾರಂಭಿಸುತ್ತವೆ. “ಈ ಸಲುವೂ ಬಂದ್‌ ಕಂಬ್ಳ ಒಂದ್‌ ನ್ಯಡ್ಸಿ ಕೊಡಿ ಮರ್ರೆ,” ಎಂದು ಗೌರವದಿಂದ ಆಹ್ವಾನಿಸುತ್ತಾರೆ. ಮೊದಲು ವೀಕ್ಷಕ ವಿವರಣೆ ನೀಡಿ ಬರಿಗೈಯಲ್ಲಿ ಮನೆ ಸೇರುತ್ತಿದ್ದ ಅಭಿಜಿತ್‌ಗೆ ಈಗ ಚಿಕ್ಕಪುಟ್ಟ ಸಂಭಾವನೆಯನ್ನೂ ನೀಡುತ್ತಾರೆ. “ಇವೆಲ್ಲಕ್ಕಿಂತ ನನಗೆ ವೀಕ್ಷಕ ವಿವರಣೆ ನೀಡುವುದೇ ಖುಷಿ, ಈ ಜನಪದ ಲೋಕದ ಒಂದು ಭಾಗವಾಗಿ ಬದುಕುವುದು ಹೆಮ್ಮೆಯ ಸಂಗತಿ,” ಎನ್ನುತ್ತಾರೆ ಅಭಿಜಿತ್‌.

ಕ್ರಿಕೆಟ್‌ ಅಂಗಣದಲ್ಲಿ ಭಾರತ ತಂಡದ ಆಟಗಾರರು ಮತ್ತು ಆಸ್ಟ್ರೇಲಿಯಾ ತಂಡದ ಆಟಗಾರರ ನಡುವೆ ಪಂದ್ಯ ನಡೆಯುತ್ತಿದ್ದರೆ ವೀಕ್ಷಕ ವಿವರಣೆಗಾರರಿಗೆ ಆಟಗಾರರ ಜೆರ್ಸಿ ನಂಬರ್‌ ಕೊಟ್ಟಿರುತ್ತಾರೆ. ಒಂದು ವೇಳೆ ಪರಿಚಯ ಸಿಗಲಿಲ್ಲವೆಂದರೂ ಅವರ ಜೆರ್ಸಿ ನಂಬರ್‌ ನೋಡಿ ಹೆಸರು ಹೇಳಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಪಂದ್ಯಗಳನ್ನು ನಿರಂತರವಾಗಿ ನೋಡಿ ದೂರದಿಂದಲೇ ಆಟಗಾರರನ್ನು ಪರಿಚಯಿಸುವ ಸಾಮರ್ಥ್ಯವನ್ನು ಈಗಿನ ವೀಕ್ಷಕ ವಿವರಣೆಗಾರರು ಹೊಂದಿರುತ್ತಾರೆ. ಆಟಗಾರರ ದಾಖಲೆಗಳನ್ನು ನೀಡಲು ಪತ್ಯೇಕವಾದ ಅಂಕಿಅಂಶ ತಜ್ಞರು ಹತ್ತಿರದಲ್ಲಿರುತ್ತಾರೆ. ಇತರ ಕ್ರೀಡೆಗಳಲ್ಲೂ ಹಾಗೆ. ಆದರೆ ಕಂಬಳದಲ್ಲಿ ಇದ್ಯಾವುದೂ ಇರುವುದಿಲ್ಲ. “ಪ್ರತಿ ವರ್ಷ ಕಂಬಳಕ್ಕೆ ಹೋಗಿ ಮಾಲೀಕರನ್ನು ಮಾತನಾಡಿಸುತ್ತೇನೆ. ಕೋಣಗಳ ಹೆಸರನ್ನು ದಾಖಲಿಸಿಕೊಳ್ಳುತ್ತೇವೆ. ಹಿಂದಿನ ಕಂಬಳಗಳಲ್ಲಿ ಅವುಗಳ ಸಾಧನೆ ಏನೆಂಬುದನ್ನು ತಿಳಿದಿರುತ್ತೇನೆ. ಕೋಣಗಳ ಹಿಂದೆ ಓಡುವ ಓಟಗಾರರ ಹೆಸರುಗಳನ್ನು ತಿಳಿದಿರುತ್ತೇನೆ. ಕಂಬಳಕ್ಕೆ ಹೋಗುವ ಮುನ್ನ ಪ್ರತಿ ವರ್ಷ ಇವುಗಳನ್ನು ಪರಿಷ್ಕೃತಗೊಳಿಸಿಕೊಳ್ಳುತ್ತೇನೆ. ಇದರಿಂದ ಕೆಲಸ ಸುಲಭವಾಗುತ್ತದೆ,ʼ ಎನ್ನುತ್ತಾರೆ ಅಭಿಜಿತ್‌‌ ಪಾಂಡೇಶ್ವರ.

ಕರಾವಳಿಯ ಜಾನಪದ ಕ್ರೀಡೆ ಕಂಬಳ ಈ ಬಾರಿ ಬೆಂಗಳೂರಿನಲ್ಲಿ ನಡೆದ ಪರಿಣಾಮ ಈ ಕ್ರೀಡೆಗೆ ಆಧುನಿಕತೆಯ ಸ್ಪರ್ಷ ಸಿಕ್ಕಿದೆ. ಇದರಿಂದಾಗಿ ಊರಿನಲ್ಲಿ ನಡೆಯುವ ಸಾಂಪ್ರದಾಯಿಕ ಕಂಬಳದಲ್ಲೂ ಹೊಸತನ ಕಾಣುತ್ತಿದೆ. ಎಲ್‌ಇಡಿಯಲ್ಲಿ ಪ್ರಸಾರ, ಯೂಟ್ಯೂಬ್‌ಗಳಲ್ಲಿ ನೇರ ಪ್ರಸಾರ ಇತರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದೆ. ಇದೆಲ್ಲದರ ಜೊತೆಯಲ್ಲಿ ಅಭಿಜಿತ್‌ ಪಾಂಡೇಶ್ವರ ಅವರ ವೀಕ್ಷಕ ವಿವರಣೆ ಕಂಬಳಕ್ಕೆ ತಿಲಕವಿಟ್ಟಂತೆ. ನವ ಭಾವ, ನವ ಜೀವ, ನವ ಶಕ್ತಿ ತುಂಬಿರುವ ಕಂಬಳಕ್ಕೆ ಅಭಿಜಿತ್‌ ಅವರ ವೀಕ್ಷಕವಿವರಣೆ ಹೊಸ ಭಾಷ್ಯವಾಗಲಿ.

Related Articles