Thursday, September 12, 2024

ನಿಟ್ಟೆಯಲ್ಲಿ ಮೂರು ದಿನಗಳ ಕ್ರಿಕೆಟ್‌ ಹಬ್ಬ

ನಿಟ್ಟೆ: ಬೆಳ್ಳಿಪ್ಪಾಡಿ ಆಳ್ವಾಸ್‌ ಕ್ರಿಕೆಟ್‌ ಅಕಾಡೆಮಿ (ಬಿಎಸಿಎ) ಬ್ರಹ್ಮಾವರ ಹಾಗೂ ಕೆಆರ್‌ಎಸ್‌ ಕ್ರಿಕೆಟ್‌ ಅಕಾಡೆಮಿ ಆಶ್ರಯದಲ್ಲಿ ಜನವರಿ 26, 27, ಮತ್ತು 28ರಂದು ಕಾರ್ಕಳದ ನಿಟ್ಟೆಯಲ್ಲಿರುವ ನಿಟ್ಟೆ ಬಿ.ಸಿ ಆಳ್ವಾ ಕ್ರಿಕೆಟ್‌ ಅಂಗಣದಲ್ಲಿ ಮೂರು ದಿನಗಳ ಕಾಲ ಕ್ರಿಕೆಟ್‌‌ ಹಬ್ಬ ನಡೆಯಲಿದೆ. Three days cricket tournament at NITTE campus.

50 ವರ್ಷ ಮೇಲ್ಪಟ್ಟವರಿಗಾಗಿ ನಡೆಯಲಿರುವ ಈ ಕ್ರಿಕೆಟ್‌ ಟೂರ್ನಿಯಲ್ಲಿ ನಾಲ್ಕು ರಾಜ್ಯಗಳ ಹಿರಿಯ ಆಟಗಾರರು ಪಾಲ್ಗೊಳ್ಳಲಿದ್ದಾರೆ. ನಿಟ್ಟೆ ಎಜ್ಯುಕೇಶನ್‌ ಟ್ರಸ್ಟ್‌ ಇದರ ನೆರವಿನೊಂದಿಗೆ ಚಾಂಪಿಯನ್‌ಷಿಪ್‌ ನಡೆಯಲಿದೆ. ಇದು ಮೂರನೇ ವರ್ಷದ ಟೂರ್ನಿಯಾಗಿದ್ದು, ಕಳೆದ ಎರಡು ವರ್ಷಗಳಲ್ಲಿ ದೇಶದ ಬೇರೆ ಬೇರೆ ರಾಜ್ಯಗಳ ತಂಡಗಳು ಪಾಲ್ಗೊಂಡಿದ್ದವು. ಈ ಬಾರಿ ಲೀಗ್‌/ ನಾಕೌಟ್‌ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ.

ಪಾಲ್ಗೊಳ್ಳುತ್ತಿರುವ ತಂಡಗಳು: ಮಹಾರಾಜ ಬೆಂಗಳೂರು, ಬಿಎಸಿಎ-ಕೆಆರ್‌ಎಸ್‌‌ ಇಲೆವೆನ್‌, ಕ್ರಿಕ್‌ಕೊಕರ್ಸ್‌ ಗೋವಾ, ಚೋಲಾಸ್‌ ತಮಿಳುನಾಡು. ಕಳೆದ ಎರಡು ವರ್ಷಗಳಿಂದ ಮಹಾರಾಷ್ಟ್ರದ ರಾಯಲ್‌‌ ಇಂಡಿಯನ್ಸ್‌ ತಂಡ ಪಾಲ್ಗೊಳ್ಳುತ್ತಿತ್ತು. ಮಾಜಿ ಆಟಗಾರ ಪ್ರದೀಪ್‌ ಗೋಡ್ಬೊಲೆ ಅವರು ರಾಯಲ್‌ ಇಂಡಿಯನ್ಸ್‌ ತಂಡದ ನಾಯಕತ್ವ ವಹಿಸಿದ್ದರು. ಮುಂದಿನ ತಿಂಗಳು ಚೆನ್ನೈನಲ್ಲಿ ನಡೆಯಲಿರುವ ಹಿರಿಯರ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುತ್ತಿರುವ ಭಾರತ ತಂಡದವರಿಗೆ ಅಭ್ಯಾಸ ಪಂದ್ಯವಾಗಿಯೂ ಈ ಟೂರ್ನಿ ನೆರವಾಗಲಿದೆ. ವಿಶ್ವಕಪ್‌ಗೆ ಆಯ್ಕೆಯಾಗಿರುವ ಭಾರತ ತಂಡದ ಎಲ್ಲ ಆಟಗಾರರು ಈ ಟೂರ್ನಿಯ ವಿವಿಧ ತಂಡಗಳಲ್ಲಿ ಆಡುತ್ತಿದ್ದು, ಈ ಬಾರಿಯ ಟೂರ್ನಿ ಕುತೂಹಲದ ಕ್ಷಣಗಳಿಗೆ ಸಾಕ್ಷಿಯಾಗಲಿದೆ.

ಗಣರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಟೂರ್ನಮೆಂಟ್‌ಗೆ ಚಾಲನೆ ದೊರೆಯಲಿದ್ದು, ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ವಿನಯ್‌ ಹೆಗ್ಡೆ ಅವರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಅದೇ ರೀತಿ ನಿಟ್ಟೆ ವಿಶ್ವವಿದ್ಯಾನಿಲಯದ ಇತರ ಗಣ್ಯರು, ಬೆಳ್ಳಿಪ್ಪಾಡಿ ಆಳ್ವಾಸ್‌ ಕ್ರಿಕೆಟ್‌ ಅಕಾಡೆಮಿ ಹಾಗೂ ಕೆಆರ್‌ಎಸ್‌ ಕ್ರಿಕೆಟ್‌ ಅಕಾಡೆಮಿಯ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.

Related Articles