Saturday, July 27, 2024

ಒಂಟಿಗಣ್ಣಿನ ವಾಲಿಬಾಲ್‌ ಪ್ರತಿಭೆ ಉಡುಪಿಯ ಯತಿನ್‌ ಕಾಂಚನ್‌

ಎರಡೂ ಕಣ್ಣುಗಳಿದ್ದರೂ ಕುರುಡರಂತೆ ವರ್ತಿಸುವವರಿದ್ದಾರೆ. ಆದರೆ ಉಡುಪಿ ಜಿಲ್ಲೆಯ ತೆಂಕ ಎರ್ಮಾಳಿನ ಯತಿನ್‌ ಕಾಂಚನ್‌ ಒಂಟಿಗಣ್ಣಿನಲ್ಲೇ ರಾಷ್ಟ್ರ ಮಟ್ಟದ ವಾಲಿಬಾಲ್‌ ಪಂದ್ಯಗಳನ್ನಾಡಿ ಈಗ ಭಾರತ ತಂಡದ ಕದ ತಟ್ಟಲು ಸಜ್ಜಾಗಿರುವುದು ಸ್ಫೂರ್ತಿಯ ಪ್ರತೀಕ. Having one eye Yathin Kanchan from Udupi played volleyball at National level.

ತೆಂಕ ಎರ್ಮಾಳಿನ ಮೀನುಗಾರರ ಕುಟುಂಬದಲ್ಲಿ ಸುರೇಶ್‌ ಹಾಗೂ ಜಯಶ್ರೀ ದಂಪತಿಯ ಮಗನಾಗಿರುವ ಯತಿನ್‌ ಕಾಂಚನ್‌ ಒಂಟಿಗಣ್ಣಿನಲ್ಲೇ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ವಾಲಿಬಾಲ್ ಟೂರ್ನಿಗಳಲ್ಲಿ ಮಿಂಚಿ ಈಗ ಅವರ ಅದ್ಭುತ ಆಟವನ್ನು ನೋಡಿ ಮುಂಬಯಿಯ ಘಾಟ್‌ಕೋಪರ್‌ನಲ್ಲಿ ಆರ್‌,ಜೆ ಕಾಲೇಜಿನಲ್ಲಿ ಬಿಕಾಂ ಓದಲು ಅವಕಾಶ ಸಿಕ್ಕಿದೆ. ಇದರಿಂದಾಗಿ ಮುಂಬಯಿ ವಿಶ್ವವಿದ್ಯಾನಿಯಲ ಮಟ್ಟದಲ್ಲಿ ಆಡುವ ಅವಕಾಶ ಯತಿನ್‌ಗೆ ಒದಗಿದೆ.

ಪಟಾಕಿಗೆ ಬಲಿಯಾದ ಬಲಗಣ್ಣು: ಯತಿನ್‌ ನಾಲ್ಕನೇ ವಯಸ್ಸಿನಲ್ಲಿರುವಾ ದೀಪಾವಳಿಯ ಸಂದರ್ಭದಲ್ಲಿ ಗೆಳೆಯರೊಂದಿಗೆ ಪಟಾಕಿ ಸುಡುವಾಗ ಕಣ್ಣಿಗೆ ಪಟಾಕಿಯ ಕಿಡಿ ತಗಲಿದ ಪರಿಣಾಮ ಬಲಗಣ್ಣನ್ನೇ ಕಳೆದುಕೊಂಡರು. ಆದರೆ ಒಂದೇ ಕಣ್ಣಿನಲ್ಲಿ ಕ್ರೀಡಾ ಸಾಧನೆಯನ್ನು ಮಾಡಿ, ಹಲವಾರು ಟೂರ್ನಿಗಳನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದರು. ರಾಷ್ಟ್ರೀಯ ಸಬ್‌ ಜೂನಿಯರ್‌, ರಾಜ್ಯಮಟ್ಟದ ಸೀನಿಯರ್‌ ಹಾಗೂ ರಾಷ್ಟ್ರೀಯ ಮಟ್ಟದ ಪಂದ್ಯಗಳಲ್ಲಿ ಮಿಂಚಿ ಗಮನ ಸೆಳೆದರು. ಪಿಯುಸಿ ಹಂತದ ವರೆಗೆ ಮೂಡಬಿದಿರೆಯ ಆಳ್ವಾಸ್‌ ಕಾಲೇಜಿನ ತಂಡದ ಪರ ಆಡಿರುವ ಯತಿನ್‌, ಎಸ್‌ಡಿಎಂ ಹಾಗೂ ಆಳ್ವಾಸ್‌ ಜಂಟಿ ತಂಡದಲ್ಲಿ ರಾಜ್ಯ ಮಟ್ಟದ ತಂಡದಲ್ಲಿ ಆಡಿದ್ದಾರೆ. ಕರ್ನಾಟಕ ತಂಡ ರಾಜ್ಯ ಮಟ್ಟದ ಚಾಂಪಿಯನ್‌ಷಿಪ್‌ ಗೆಲ್ಲುವಲ್ಲಿಯೂ ಯತಿನ್‌ ಅವರ ಪಾತ್ರ ಪ್ರಮುಖವಾಗಿತ್ತು.

“ಒಂಟಿ ಗಣ್ಣಿನಲ್ಲೇ ಆಡುತ್ತಿರುವೆ. ಇನ್ನು ರಾಷ್ಟ್ರ ತಂಡಕ್ಕೆ ಆಡುವಾಗ ದಿವ್ಯಾಂಗ ಎಂದು ನನ್ನನ್ನು ಹೊರಗಿಡುವ ಸಾಧ್ಯತೆ ಇದೆ. ಆ ಕಾರಣಕ್ಕಾಗಿ ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳವ ಆಶಯ ಹೊಂದಿದ್ದೇನೆ. ಈಗ ಮುಂಬಯಿಯ ಆರ್‌.ಜೆ. ಕಾಲೇಜು ನನಗೆ ಬಿಕಾಂ ಓದಲು ಪ್ರವೇಶ ನೀಡಿದೆ. ಆ ಕಾಲೇಜಿನ ಪಂದ್ಯಗಳಲ್ಲಿ ಆಡುತ್ತಿರುವೆ. ಮುಂದೇನಾಗುತ್ತದೋ ಕಾದು ನೋಡಬೇಕು,” ಎನ್ನುತ್ತಾರೆ ಯತಿನ್‌.

ಬಿಡುವಿನ ಸಮಯದಲ್ಲಿ ಮೀನುಗಾರಿಕೆ: ಮೊಗವೀರ ಸಮಯದಾಯದ ಹೆಚ್ಚಿನ ಯುವಕರು ತಾವೇನೇ ಆಗಿದ್ದರೂ ಕುಲ ಕಸುಬನ್ನು ಮಾತ್ರ ನಂಬಿಕೊಂಡಿರುತ್ತಾರೆ. ಯತಿನ್‌ ವಾರದಲ್ಲಿ ಐದು ದಿನ ಮೀನುಗಾರಿಕೆಗೆ ತೆರಳುತ್ತಾರೆ. ಶನಿವಾರ ಮತ್ತು ಬಾನುವಾರವನ್ನು ವಾಲಿಬಾಲ್‌ಗೆ ಮೀಸಲಿಟ್ಟಿದ್ದಾರೆ. ಈ ನಡುವೆ ಏನಾದರೂ ಟೂರ್ನಿ ನಡೆದರೆ ಮೀನುಗಾರಿಕೆಗೆ ರಜೆ ಹಾಕಿ ವಾಲಿಬಾಲ್‌ನಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.

ಕ್ರಿಕೆಟ್‌ ಟೂರ್ನಿಗಳಿಗೆ ಪ್ರಾಯೋಜಕತ್ವ ನೀಡುವವರನ್ನು ಕ್ರೀಡಾ ಸಾಧಕರೆಂದು ಗುರುತಿಸುವ, ಜೀವನದಲ್ಲಿ ಒಮ್ಮೆಯೂ ಕ್ರೀಡೆಯಲ್ಲಿ ಪಾಲ್ಗೊಳ್ಳದೆ ವಯಸ್ಸಾದವರೊಂದಿಗೆ ಓಡಿ ಪದಕ ಗೆದ್ದವರನ್ನು ಅಂತಾರಾಷ್ಟ್ರೀಯ ಕ್ರೀಡಾಪಟುಗಳೆಂದು ಸನ್ಮಾನಿಸುವ ಸಮಾಜದ ಗಣ್ಯರು ಇಂಥ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸಬೇಕಾದ ಅನಿವಾರ್ಯತೆ ಇದೆ.

Related Articles