Saturday, October 12, 2024

ವಿಕ್ರಮರ ಬೈಂದೂರಿನಲ್ಲಿ ಕ್ರಿಕೆಟ್‌ ಪರಾಕ್ರಮ

ಸೋಮಶೇಖರ್‌ ಪಡುಕರೆ sportsmail

ಉಡುಪಿ ಜಿಲ್ಲಾ ಟೆನಿಸ್‌ ಬಾಲ್‌ ಕ್ರಿಕೆಟ್‌ ಸಂಸ್ಥೆ ಆಶ್ರಯಲ್ಲಿ ಬೈಂದೂರು ತಾಲೂಕು ಮಟ್ಟದ ಟೆನಿಸ್‌ ಬಾಲ್‌ ಕ್ರಿಕೆಟ್‌ ಟೂರ್ನಿಗೆ ಬೈಂದೂರಿನ ಗಾಂಧೀ ಮೈದಾನ ಸಜ್ಜಾಗಿದ್ದು, ಡಿಸೆಂಬರ್‌ 25 ಮತ್ತು 26 ರಂದು ಪಂದ್ಯಗಳು ನಡೆಯಲಿವೆ. ಟೆನಿಸ್‌ ಬಾಲ್‌ ಕ್ರಿಕೆಟ್‌ನ ವಿಕ್ರಮರೆನಿಸಿರುವ ವಿಕ್ರಮ್‌ ಬೈಂದೂರು ಕ್ರಿಕೆಟರ್ಸ್‌ ತವರಿನಲ್ಲಿ ಎರಡು ದಿನಗಳ ಕಾಲ ಕ್ರಿಕೆಟ್‌ ಹಬ್ಬ ನಡೆಯಲಿದೆ.

ಟೆನಿಸ್‌ ಬಾಲ್‌ ಕ್ರಿಕೆಟ್‌ನಲ್ಲಿ ಸುಮಾರು 50ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿರುವ, ಹಲವಾರು ರಾಜ್ಯಮಟ್ಟದ ಟೂರ್ನಿಗಳನ್ನು ಆಯೋಜಿಸಿ ಯಶಸ್ಸು ಸಾಧಿಸಿರುವ ವಿಕ್ರಮ್‌ ಬೈಂದೂರು ತಂಡ ಈ ಟೂರ್ನಿಗೆ ಹೆಗಲುಕೊಟ್ಟಿದೆ. ಬೈಂದೂರು ತಾಲೂಕು ಟೆನಿಸ್‌ ಬಾಲ್‌ ಕ್ರಿಕೆಟ್‌ ಸಂಸ್ಥೆ ಆಯೋಜಿಸಿರುವ ಈ ಟೂರ್ನಿಯಲ್ಲಿ ಬೈಂದೂರು ತಾಲೂಕಿನ ಆಟಗಾರರಿಗೆ ಮಾತ್ರ ಅವಕಾಶ ಇರುತ್ತದೆ ಎಂದು ಉಡುಪಿ ಜಿಲ್ಲಾ ಟೆನಿಸ್‌ ಬಾಲ್‌ ಕ್ರಿಕೆಟ್‌ ಸಂಸ್ಥೆಯ ಗೌರವಾಧ್ಯಕ್ಷ ಹಾಗೂ ವಿಕ್ರಮ್‌ ಬೈಂದೂರಿನ ಗೌರವಾಧ್ಯಕ್ಷರೂ ಆಗಿರುವ ಗಿರೀಶ್‌ ಬೈಂದೂರು ಅವರು ತಿಳಿಸಿದ್ದಾರೆ.

ಭಾಗವಹಿಸುವ ತಂಡಗಳು:

ಬೈಂದೂರು ತಾಲೂಕು ಮಟ್ಟದಲ್ಲಿ ಸುಮಾರು 95 ಆಟಗಾರರು ತಾಲೂಕು ಟೆನಿಸ್‌ ಬಾಲ್‌ ಕ್ರಿಕೆಟ್‌ ಸಂಸ್ಥೆಯಲ್ಲಿ ಹೆಸರು ನೋಂದಾವಣೆ ಮಾಡಿಕೊಂಡಿದ್ದಾರೆ. ಆರು ತಂಡಗಳನ್ನಾಗಿ ವಿಭಾಗಿಸಲಾಗಿದ್ದು, ಪ್ರತಿಯೊಂದು ತಂಡದಲ್ಲೂ ಹದಿನೈದು ಆಟಗಾರರಿದ್ದಾರೆ.

ಗೌರೀಶ್‌ ನಾಯಕತ್ವದ ತ್ರಿವಿಕ್ರಮ್‌ ಬೈಂದೂರು, ದೇವರಾಜ್‌ ನಾಯಕತ್ವದ  ಹೊಳೆಬಾಗಿಲು ಕ್ರಿಕೆಟರ್ಸ್‌, ಅನೂಪ್‌ ರಾಮನಗರ ನಾಯಕತ್ವದ ನಾಡವಾಸ್‌ ಗ್ರೂಪ್‌ ಬೈಂದೂರು, ಸಂತೋಷ್‌ (ಜೆಡಿ) ನಾಯಕತ್ವದ ಹಳ್ಳಿಮನೆ ಅಟ್ಯಾಕರ್ಸ್‌ ಕಂಬದಕೋಣೆ, ಗೌರೀಶ್‌ ಹುದಾರ್‌ ನಾಯಕತ್ವದ ಅನ್ವಿ ಕ್ವೀನ್‌,

ಸತ್ಯನಾರಾಯಣ ಮಾಲೀಕತ್ವ ಮತ್ತು ನಾಯಕತ್ವದ 8 ಸ್ಟಾರ್ಸ್‌ ಉಪ್ಪುಂದ ತಂಡಗಳು ಚಾಂಪಿಯನ್ಷಿಪ್‌ಗಾಗಿ ಸ್ಪರ್ಧಿಸಲಿವೆ. ವಿಜೇತ ತಂಡ 10,000 ರೂ. ನಗದು ಬಹುಮಾನವನ್ನು ಗೆಲ್ಲಲಿದೆ. ವೈಯಕ್ತಿಕ ಬಹುಮಾನವೂ ಒಳಗೊಂಡಿರುತ್ತದೆ.

ಉದ್ಘಾಟನಾ ಸಮಾರಂಭ:

ಡಿ.25ರಂದು ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಉಡುಪಿ ಜಿಲ್ಲಾ ಟೆನಿಸ್‌ಬಾಲ್‌ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷ, ಟಾರ್ಪೆಡೊಸ್‌ ಸ್ಪೋರ್ಟ್ಸ್‌ ಕ್ಲಬ್‌ನ ಅಧ್ಯಕ್ಷರೂ ಆಗಿರುವ ಗೌತಮ್‌ ಶೆಟ್ಟಿಯವರು ಅಧ್ಯಕ್ಷರಾಗಿ ಪಾಲ್ಗೊಳ್ಳುವರು. ಉದ್ಘಾಟನೆಯನ್ನು ಯು.ಬಿ, ಗ್ರೂಪ್‌ ಆಫ್‌ ಕಂಪೆನಿಯ ಮಾಲೀಕ ಯು.ಬಿ. ಶೆಟ್ಟಿ ಅವರು ಉದ್ಘಾಟಿಸುವರು. ಸುಮುಖಾ ಸರ್ಜಿಕಲ್ಸ್‌ನ ಮಾಲೀಕ ಬಿ,ಎಸ್.‌ ಸುರೇಶ್‌ ಶೆಟ್ಟಿ, ಕ್ಲಾಸ್‌ 1 ಗುತ್ತಿಗೆದಾರರಾದ ಗೋಕುಲ್‌ ಶೆಟ್ಟಿ, ಬೆಂಗಳೂರಿನ ಚಿತ್ತೇರಿ ಡೆವಲಪ್ಪರ್ಸ್‌ನ ಮಾಲೀಕ ಸುಖಾನಂದ ಶೆಟ್ಟಿ ಮತ್ತು ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಟೆನಿಸ್‌ ಬಾಲ್‌ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷ ಗೌತಮ್‌ ಶೆಟ್ಟಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮನೀಶ್‌ ಗ್ರೂಪ್‌ ಆಫ್‌ ಹೊಟೇಲ್ಸ್‌ ಘಟಪ್ರಭಾ ಇದರ ಮಾಲೀಕರಾದ ಜಯಶೀಲ ಶೆಟ್ಟಿ ವಹಿಸುವರು.

ಟೂರ್ನಿಗೆ ಉಸಿರಾದವರು:

ಬೈಂದೂರು ವಲಯದಲ್ಲಿ ಟೆನಿಸ್‌ ಬಾಲ್‌ ಕ್ರಿಕೆಟ್‌ ಹಸಿರಾಗಿ ಬೆಳೆಯಲು ವಿಕ್ರಮ್‌ ಬೈಂದೂರು ತಂಡದ ಶ್ರಮ ಬಹಳ ಕಾಲದಿಂದ ಇದೆ. ಈಗಲೂ ತಮ್ಮ ವೃತ್ತಿಯ ಜವಾಬ್ದಾರಿಯ ಜತೆಯಲ್ಲಿ ಮುಂದಿನ ಪೀಳಿಗೆಗೆ ನೆರವಾಗುವಲ್ಲಿ ಅನೇಕ ಸದಸ್ಯರು ಶ್ರಮಿಸಿದ್ದಾರೆ. ಅವರಲ್ಲಿ ಕೆಲವರನ್ನು ಇಲ್ಲಿ ಸ್ಮರಿಸದಿದ್ದರೆ ಈ ಸಂಭ್ರಮದ ಕ್ರಿಕೆಟ್‌ ಟೂರ್ನಿ ಅಪೂರ್ಣವೆನಿಸುವುದು ಸಹಜ, ಅವರಲ್ಲಿ ಯಾವಾಗಲೂ ಕ್ರಿಕೆಟ್‌ ಅಭಿವೃದ್ಧಿಗೆ ಶ್ರಮಿಸುತ್ತಿರುವ ಗಿರೀಶ್‌ ಬೈಂದೂರು, ನಾಗರಾಜ ಶೆಟ್ಟಿ, ದಿನೇಶ್‌ ಕುಮಾರ್‌, ನಾರಾಯಣ ಮತ್ತು ಸದಾಶಿವ ಪಡುವರಿ.

Related Articles