Friday, March 29, 2024

ಚಿನ್ನ ಮನೆ ಸೇರುವ ಮೊದಲೇ ಬಂಗಾರ ಹೊರಟು ಹೋಗಿತ್ತು!

ಸ್ಪೋರ್ಟ್ಸ್ ಮೇಲ್ ವರದಿ

ಏಷ್ಯನ್ ಗೇಮ್ಸ್ ಶಾಟ್‌ಪುಟ್‌ನಲ್ಲಿ ಚಿನ್ನ ಗೆದ್ದ ತೇಜಿಂದರ್‌ಪಾಲ್ ಸಿಂಗ್ ತೂರ್ ಮನೆಗೆ ಬಂದು ಚಿನ್ನವನ್ನು ತಂದೆಗೆ ತೋರಿಸಬೇಕೆನ್ನುವಷ್ಟರಲ್ಲಿ ಅವರು ಇಹವನ್ನೇ ತ್ಯಜಿಸಿದರು.  ತಂದೆ ಕರಮ್ ಸಿಂಗ್ ಕ್ಯಾನ್ಸರ್‌ನಿಂದ ಬಳಲುತ್ತಿರುವ ವಿಷಯವನ್ನು ತೇಜಿಂದರ್ ದಾಖಲೆಯೊಂದಿಗೆ ಚಿನ್ನ ಗೆದ್ದ ನಂತರ ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದರು. ಆದರೆ ಕ್ಯಾನ್ಸರ್ ಇಷ್ಟು ಬೇಗನೆ ತಂದೆಯವರ ಬದುಕನ್ನು ಕಸಿದುಕೊಳ್ಳುತ್ತದೆ ಎಂದು ತೇಜಿಂದರ್ ಊಹಿಸಿಯೂ ಇರಲಿಲ್ಲ.

ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆದ್ದವರಿಗೆ ಸರಕಾರದ ವತಿಯಿಂದ ದಿಲ್ಲಿಯಲ್ಲಿ ಔತಣ ಕೂಟವನ್ನು ಏರ್ಪಡಿಸಲಾಗಿತ್ತು. ತೇಜಿಂದರ್ ವಿಮಾನದಿಂದ ಇಳಿದವರೇ ಹೊಟೇಲ್ ಕಡೆ ಹೊರಟಿದ್ದರು. ವಿಮಾನ ನಿಲ್ದಾಣದಲ್ಲಿ ಅವರನ್ನು ಹೂವಿನ ಹಾರ ಹಾಕಿ ಸ್ವಾಗತಿಸಲಾಗಿತ್ತು. ಆದರೆ ಹೊಟೇಲ್ ಸೇರುವುದಕ್ಕೆ ಮುನ್ನವೇ ತಂದೆ ನಿಧನದ ಸುದ್ದಿ ಅವರ ಕಿವಿಗೆ ಬಿತ್ತು. ಭಾರತೀಯ ಅಥ್ಲೆಟಿಕ್ಸ್ ಸಂಸ್ಥೆ ಕರಮ್ ಸಿಂಗ್ ಅವರ ನಿಧನಕ್ಕೆ ಸಂತಾಪ ಸೂಚಿಸಿದೆ.
ತಂದೆಗಾಗಿ ಪದಕ ಗೆಲ್ಲಬೇಕೆಂದೇ ಏಷ್ಯನ್ ಗೇಮ್ಸ್‌ನಲ್ಲಿ ಸ್ಪರ್ಧಿಸಿದ್ದೆ. ಅವರಿಗೆ ಈ ಪದಕ ಅರ್ಪಣೆ ಎಂದು ಸ್ಪರ್ಧೆಯ ನಂತರ ಹೇಳಿದ್ದ ತೇಜಿಂದರ್, ಅವರಸರದಲ್ಲಿ ಪದಕವನ್ನು ತಂದೆಗೆ ತೋರಿಸಬೇಕು ಎಂದು ಖುಷಿಯಿಂದ ಬಂದಾಗ ಈ ಆಘಾತಕರ ಸುದ್ದಿ ಅವರ ಕಿವಿಗೆ ಬಿತ್ತು. ಈ ಪದಕ ಗೆಲ್ಲಲು ಸಾಕಷ್ಟು ತ್ಯಾಗ ಮಾಡಿದ್ದೇನೆ. ಕಳೆದ ಎರಡು ವರ್ಷಗಳಿಂದ ನಮ್ಮ ತಂದೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಇದರಿಂದ ನಾನು ನೋವು ಅನುಭವಿಸಬಾರದು ಎಂದು ಕುಟುಂಬ ಎಚ್ಚರಿಕೆ ವಹಿಸಿದೆ. ನನ್ನ ಕನಸು ನನಸಾಗಿಸಲು ಅವರು ಹಾರೈಸಿದ್ದಾರೆ. ನನ್ನ ಕುಟುಂಬ ಹಾಗೂ ಗೆಳೆಯರು ಸಾಕಷ್ಟು ತ್ಯಾಗ ಮಾಡಿದ್ದಾರೆ. ಆ ತ್ಯಾಗದ ಫಲವೇ ಈ ಪದಕ ಎಂದು ತೇಜಿಂದರ್‌ಪಾಲ್ ಸಿಂಗ್ ಜಯದ ನಂತರ ಹೇಳಿದ್ದರು.

Related Articles