ಆಧುನಿಕ ಸೌಲಭ್ಯಗಳಿಗಾಗಿ ಇಲಾಖೆಗೆ ಚಂದರಗಿ ಕ್ರೀಡಾ ಶಾಲೆ ಮನವಿ
ಚಂದರಗಿ (ಬೆಳಗಾವಿ): ಕ್ರೀಡಾ ಉತ್ತೇಜನ ಹಾಗೂ ಅಭುವೃದ್ಧಿ ಸಹಕಾರಿ ನಿಯಮಿತ (SPOCO) ಸಂಸ್ಥೆಯ ಮೂಲಕ ಸಹಕಾರಿ ತತ್ವದ ಆಧಾರದ ಮೇಲೆ ಸ್ಥಾಪಿಸಲ್ಪಟ್ಟ ದೇಶದ ಮೊದಲ ಕ್ರೀಡಾ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ, ಚಂದರಗಿ ಕ್ರೀಡಾ ಶಾಲೆಯು ಉತ್ತಮ ಕ್ರೀಡಾ ಸೌಲಭ್ಯಗಳನ್ನು ಹೊಂದಿದ್ದು, ಅವುಗಳನ್ನು ಆಧುನೀಕರಣಗೊಳಿಸುವ ಸಲುವಾಗಿ ಯುವಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ನೆರವಿಗಾಗಿ ಮನವಿ ಸಲ್ಲಿಸಿದೆ. Sports Promotion & Development Co Operative LTD Chandaragi requested Department of Youth Service and Sports for providing modern sports facilities for Sports School.
ಇತ್ತೀಚಿಗೆ ಚಂದರಗಿ ಕ್ರೀಡಾ ಶಾಲೆಯಲ್ಲಿ ನಡೆದ ರಾಷ್ಟ್ರೀಯ ಆಟ್ಯ-ಪಾಟ್ಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯಕ್ತ ಚೇತನ್ ಆರ್. IPS ಅವರಿಗೆ ಚಂದರಗಿ ಕ್ರೀಡಾ ಶಾಲೆಯ ಆಡಳಿತ ಮಂಡಳಿ ಮನವಿ ಸಲ್ಲಿಸಿತ್ತು.

ಅಂತಾರಾಷ್ಟ್ರೀಯ ಮಾಜಿ ಕುಸ್ತಿಪಟು ಎಸ್.ಎಂ. ಕಲೂತಿ ಅವರು 1984ರಲ್ಲಿ ಸ್ಥಾಪಿಸಿದ ಈ ಶಾಲೆಯು ಗ್ರಾಮೀಣ ಹಿನ್ನೆಲೆಯಲ್ಲಿ ಬಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅಧ್ಯಯನ, ಕ್ರೀಡಾ ತರಬೇತಿ ಮತ್ತು ಸಂಸ್ಕಾರಯುತ ಮೌಲ್ಯಾಧಾರಿತ ಜೀವನ ಶೈಲಿಯನ್ನು ಒದಗಿಸುತ್ತಿರುವ ಅಪೂರ್ವ ಗ್ರಾಮೀಣ ಕ್ರೀಡಾ ವಸತಿ ಶಾಲೆಯಾಗಿದೆ.
ಈ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ಮಾಧ್ಯಮ, ಸಿಬಿಎಸ್‌ಇ ಹಾಗೂ ಪದವಿಪೂರ್ವ ವಿದ್ಯಾಲಯ ಸೇರಿ ಒಟ್ಟು 1000ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇಲ್ಲಿ 14 ಕ್ರೀಡೆಗಳಲ್ಲಿ ತರಬೇತಿ ನೀಡಲಾಗುತ್ತಿದ್ದು, ಎಲ್ಲ ಕ್ರೀಡೆಗಳಿಗೂ ವಿಶೇಷವಾದ ತರಬೇತಿ ಕೇಂದ್ರ ಹಾಗೂ ತರಬೇತುದಾರರಿದ್ದಾರೆ.
ಇಲ್ಲಿ ಕಲಿತ ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಕ್ರೀಡಾಪಟುಗಳು, ಶಿಕ್ಷಕರು, ಸೈನಿಕರು, ಐಆರ್‌ಎಸ್ ಹಾಗೂ ಕೆಎಎಸ್ ಹುದ್ದೆ ಗಳಿಸಿದ್ದಾರೆ. ಈ ವರ್ಷ ಕೇಂದ್ರ ಸರಕಾರ ಜಾರಿಗೆ ತಂದಿರುವ ಕ್ರೀಡಾ ನೀತಿಯಲ್ಲಿ ಏನೆಲ್ಲ ಅಂಶಗಳಿವೆಯೋ ಅವುಗಳಲ್ಲಿ ಚಂದರಗಿ ಕ್ರೀಡಾ ಶಾಲೆಯಲ್ಲಿ ನಾಲ್ಕು ದಶಕಗಳ ಹಿಂದೆಯೇ ಪಾಲಿಸಿಕೊಂಡು ಬರಲಾಗುತ್ತಿದೆ. ಈ ರಾಷ್ಟ್ರೀಯ ಮಟ್ಟದ ಸಂಸ್ಥೆಯನ್ನು ಇನ್ನಷ್ಟು ಬಲಪಡಿಸಲು, ಆಧುನಿಕ ಸ್ಪರ್ಷ ನೀಡಿ, ಕ್ರೀಡಾಪಟುಗಳಿಗೆ ಅನುಕೂಲವಾಗುವ ಉದ್ದೇಶಕ್ಕಾಗಿ ಈ ಕೆಳಗಿನ ಸಾಮಗ್ರಿಗಳು ಮತ್ತು ಸೌಕರ್ಯಗಳ ಅಗತ್ಯವಿರುತ್ತದೆ.

ಮಣ್ಣಿನ ಟ್ರ್ಯಾಕ್ ಬದಲಿಗೆ ಸಿಂಥಟಿಕ್ ಟ್ರ್ಯಾಕ್: ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡಲು ಮತ್ತು ರಾಷ್ಟ್ರ ಮಟ್ಟದಲ್ಲಿ ವ್ಯವಸ್ಥೆಗೆ ಹೊಂದಿಕೊಳ್ಳಲು ಸಿಂಥಟಿಕ್ ಟ್ರ್ಯಾಕ್ ಅಗತ್ಯವಿದೆ. ಈಗ ಮಣ್ಣಿನ ಟ್ರ್ಯಾಕ್ ಇದ್ದು ಇದನ್ನು 400 ಮೀ. ಸಿಂಥಟಿಕ್ ಟ್ರ್ಯಾಕ್ ಆಗಿ ಬದಲಾಯಿಸಬೇಕಾಗಿದೆ.
ಕಬಡ್ಡಿ, ಕುಸ್ತಿ, ಎತ್ತರ ಜಿಗಿತ ಹಾಗೂ ಜಿಮ್ನಾಸ್ಟಿಕ್ ಮೈದಾನಗಳಿಗೆ ಮ್ಯಾಟ್ ಅಳವಡಿಸಬೇಕಾಗಿದೆ. ಹಾಕಿ ಅಂಗಣಕ್ಕೂ ಆಸ್ಟ್ರೋ ಟರ್ಫ್ ಅಳವಡಿಸುವ ಅಗತ್ಯವಿದೆ. ಸ್ಪೋರ್ಟ್ಸ್ ಸೈನ್ಸ್ ಕೇಂದ್ರಕ್ಕೆ ಬೇಕಿರುವ ಅಗತ್ಯ ಸೌಲಭ್ಯಗಳು. ಎಲೆಕ್ಟ್ರಾನಿಕ್ ಸ್ಕೋರ್ ಬೋರ್ಡ್, ಫೋಮ್ ರೋಲರ್, ಜಾವೆಲಿನ್, ಟೆಕ್ವಾಂಡೋ ಮ್ಯಾಟ್, ಮೆರಿಡಾ ರಿಯಾಕ್ಟೋ ರೋಡ್ ಸೈಕಲ್ (L&M) 4, ವಾಹೂ ಸಿಕ್ಕರ್ ಕೋರ್ ಝ್ವಿಫ್ಟ್ ಬೈಕ್ ಇಂಡೋರ್ ಟ್ರೈನರ್ (02) ಮೊದಲಾದ ಕ್ರೀಡಾ ಸಾಮಗ್ರಿಗಳ ಒದಗಿಸುವಂತೆ ಕ್ರೀಡಾ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ.

