ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್
ಕನ್ನಡ ನಾಡು, ನುಡಿ ಎಂದು ಹೋರಾಡುವವರು ಈ ಬಗ್ಗೆಯೂ ಕಾಳಜಿ ವಹಿಸಿ……..
ರಾಜ್ಯದಲ್ಲಿರುವ ಕ್ರೀಡಾಪಟುಗಳಿಗೆ ಸ್ಪೋರ್ಟ್ಸ್ ಕೋಟಾದಡಿ ಹೆಚ್ಚು ಉದ್ಯೋಗ ಸಿಗುತ್ತಿಲ್ಲ. ಇಲ್ಲಿರುವ ಕೇಂದ್ರ ಸರಕಾರದ ರೇಲ್ವೆ, ಆದಾಯ ತೆರೆಗೆ, ಬ್ಯಾಂಕ್, ಕಸ್ಟಮ್ಸ್ ಮೊದಲಾದ ಇಲಾಖೆಗಳಲ್ಲಿ ಕರ್ನಾಟಕದ ಕ್ರೀಡಾಪಟುಗಳು ವಂಚಿತರಾಗುತ್ತಿದ್ದಾರೆ.
ಈ ಅವ್ಯವಸ್ಥೆಗೆ ಸಂಬಂಧಪಟ್ಟ ಕ್ರೀಡಾ ಫೆಡರೇಷನ್‌ಗಳು, ತರಬೇತುದಾರರು ಹಾಗೂ ಸರಕಾರ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರಣರಾಗಿರುತ್ತಾರೆ. ಕ್ರಿಕೆಟ್ ಕೂಡ ಇದರಿಂದ ಹೊರತಾಗಿಲ್ಲ. ಬೇರೆ ರಾಜ್ಯಗಳಿಂದ ಆಟಗಾರರನ್ನು ಕೆರಿಸಿಕೊಂಡು, ಅವರಿಗೆ ಶಾಲಾ ಶಿಕ್ಷಣಕ್ಕೆ ಅವಕಾಶ ಮಾಡಿಕೊಟ್ಟು ತಮ್ಮ ಅಕಾಡೆಮಿಗಳಿಗೆ ಸೇರಿಸಿಕೊಂಡು ಅವರನ್ನು ರಾಜ್ಯದ ಆಟಗಾರರನ್ನಾಗಿ ಮಾಡುವ ದಂದೆಯಲ್ಲೇ ಕೆಲವು ತರಬೇತುದಾರರು ನಿಸ್ಸೀಮರಾಗಿದ್ದಾರೆ.
ಇನ್ನು ಅಥ್ಲೆಟಿಕ್ಸ್ ವಿಭಾಗವನ್ನು ಗಮನಿಸಿದಾಗ ಇಲ್ಲಿ ಎಂಇಜಿ ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರದ ಕ್ರೀಡಾಪಟುಗಳೇ ಮೇಲುಗೈ ಸಾಧಿಸುತ್ತಾರೆ. ಇಲ್ಲಿ ರುವುದು ಬೇರೆ ರಾಜ್ಯಗಳಿಂದ ಬಂದು ತರಬೇತಿ ಪಡೆಯುತ್ತಿರುವವರೇ. ಕೇಂದ್ರದ ಯಾವುದಾದರೂ ಕ್ರೀಡಾ ಕೋಟಾದ ಹುದ್ದೆಯನ್ನು ಪಡೆಯಬೇಕಾದರೆ ನಮ್ಮ ಅಥ್ಲೀಟ್‌ಗಳು ಇವರೊಂದಿಗೆ ಸ್ಪರ್ಧೆ ನಡೆಸಬೇಕಾಗುತ್ತದೆ. ರೇಲ್ವೆ. ಕಸ್ಟಮ್ಸ್ ಹಾಗೂ ಆದಾಯ ತೆರಿಗೆ ಇಲಾಖೆಗಳಲ್ಲಿರುವ ನಮ್ಮ ಕ್ರೀಡಾಪಟುಗಳು ಬೆರಳೆಣಿಕೆಯಷ್ಟೇ. ಕೇರಳ ಹಾಗೂ ತಮಿಳುನಾಡು ಇಲ್ಲವೇ ಉತ್ತರ ಭಾರತೀಯರು ನಿರಾಯಾಸವಾಗಿ ಕೆಲಸ ಗಳಿಸುತ್ತಾರೆ. ನಮ್ಮವರು ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಬಂದರೆ ಮೊದಲ ಹಾಗೂ ಎರಡನೇ ಸ್ಥಾನ ಬೇರೆ ರಾಜ್ಯಗಳಿಂದ ಬಂದ ಕ್ರೀಡಾಪಟುಗಳ ಅಥವಾ ಎಂಇಜಿ ಅಥವಾ ಇತರ ಸರಕಾರಿ ಸ್ವಾಮ್ಯದ ಸಂಸ್ಥೆಗಳ ಕ್ರೀಡಾಪಟುಗಳ ಪಾಲಾಗುತ್ತದೆ.
ಎಲ್ಲಿದೆ ಕ್ರೀಡಾ ನೀತಿ?
ಪ್ರತಿ ಬಾರಿಯೂ ಕ್ರೀಡಾ ಸಚಿವರ ಮುಂದಿರುವುದು ಕ್ರೀಡಾ ನೀತಿಯನ್ನು ರೂಪಿಸುವ ಬಗ್ಗೆ. ಆದರೆ ಅದು ನೀಲಿ ನಕ್ಷೆಯಲ್ಲೇ ಕೊನೆಗೊಳ್ಳುತ್ತಿದೆ. ಕ್ರೀಡಾ ಸಾಧಕರಿಗೆ ಕ್ರೀಡಾ ಕೋಟಾದಡಿ ಉದ್ಯೋಗ ನೀಡುವ ಬಗ್ಗೆ ನಮ್ಮ ರಾಜ್ಯದಲ್ಲಿ ಯಾವುದೇ ಕಾನೂನು ಇಲ್ಲ. ಪೊಲೀಸ್ ಇಲಾಖೆಯಲ್ಲಿ ಆ ಅವಕಾಶ ಇದ್ದಿತ್ತು, ಆದರೆ ಈಗ ಅದೂ ನಾಪತ್ತೆಯಾಗಿದೆ. ಕೆಲವು ಶಿಕ್ಷಣ ಸಂಸ್ಥೆಗಳು ಗೆದ್ದ ಕ್ರೀಡಾಪಟುಗಳಿಗೆ ತಮ್ಮ ಶಾಲಾ ಕಾಲೇಜಿನಲ್ಲಿ ಪ್ರವೇಶ ನೀಡಿ, ಅವರಿಗೆ ತಿಂಗಳಿಗೆ ಒಂದಿಷ್ಟು ಹಣ ಕೊಟ್ಟು ತಮ್ಮ ಬ್ರಾಂಡ್ ಇಮೇಜನ್ನು ಹೆಚ್ಚಿಸಿಕೊಂಡು ಮತ್ತೆ ಮರೆತು ಬಿಡುತ್ತವೆ.
ಕ್ರೀಡೆಗೆ ಯಾವುದೇ ರೀತಿಯ ತಾರತಮ್ಯ ಇರಬಾರದು. ಇದು ಎಲ್ಲ ಎಲ್ಲೆಯನ್ನು ಮೀರಿ ಬೆಳೆಯುವಂಥದ್ದು. ಹಾಗಂತ ಕರ್ನಾಟಕದಲ್ಲಿರುವ ಉದ್ಯೋಗ ಕೇರಳದ ಕ್ರೀಡಾಪಟುವಿಗೆ ಸಿಕ್ಕಿದಾಗಲೂ ನಾವು ಸುಮ್ಮನೇ ಇರಬೇಕು. ಕರ್ನಾಟಕದ ಅರಣ್ಯ ಇಲಾಖೆಯಲ್ಲಿ ಗಾರ್ಡ್ ಹುದ್ದೆಗಳಿಗೆ ಸ್ಪೋರ್ಟ್ಸ್ ಕೋಟಾದಡಿ ಅವಕಾಶ ಕಲ್ಪಿಸಲಾಗಿತ್ತು. ಕೇರಳದ ಜ್ಯೋತಿ ಕೃಷ್ಣ ಎಂಬ ಕ್ರೀಡಾಪಟುವಿಗೆ ಉದ್ಯೋಗ ನೀಡಲಾಗಿದೆ. ನಮ್ಮ ಕ್ರೀಡಾಪಟುಗಳು ಈ ಬಗ್ಗೆ ವಿರೋಧ ವ್ಯಕ್ತಪಡಿಸಿದರೂ ಯಾವುದೇ ಪ್ರಯೋಜನ ಆಗಲಿಲ್ಲ.
ಬೇರೆ ರಾಜ್ಯಗಳಲ್ಲಿ ನಮ್ಮವರು ಸ್ಪರ್ಧಿಸುವಂತಿಲ್ಲ
ಬೇರೆ ರಾಜ್ಯದಲ್ಲಿ ನಡೆಯುವ ರಾಜ್ಯಮಟ್ಟದ ಕ್ರೀಡಾಕೂಟಗಳಲ್ಲಿ ಆ ರಾಜ್ಯದ ಕ್ರೀಡಾಪಟುಗಳು ಮಾತ್ರ ಪಾಲ್ಗೊಳ್ಳುತ್ತಾರೆ. ಆದರೆ ನಮ್ಮಲ್ಲಿ ಏನೇನೋ ದಾಖಲೆಗಳನ್ನು ನೀಡಿ ಕಂಠೀರವ ಕ್ರೀಡಾಂಗಣದಲ್ಲಿ ಪ್ರತ್ಯಕ್ಷರಾಗುತ್ತಾರೆ. ಈ ಕ್ರೀಡಾ ಸಂಸ್ಥೆಯ ಪದಾಧಿಕಾರಿಗಳು ಯಾವ ಗೋಜಿಗೂ ಹೋಗದೆ ಅವರಿಗೆ ಅವಕಾಶ ಕಲ್ಪಿಸುತ್ತಾರೆ. ಇದನ್ನು ಪ್ರಶ್ನಿಸಿದ ಕ್ರೀಡಾಪಟುಗಳ ಮೇಲೆ ಒಂದು ಕಣ್ಣು ಇಟ್ಟಿರುತ್ತಾರೆ. ಅಲ್ಲಿಗೆ ಆತನ ಭವಿಷ್ಯ ಮುಗಿಯಿತು.
ಪರಿಹಾರವೇನು?
ರಾಜ್ಯದಲ್ಲಿ ನಡೆಯುವ ಯಾವುದೇ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಬೇಕಾದರೆ ಆತ ಕರ್ನಾಟಕದಲ್ಲಿ ಕನಿಷ್ಠ 10ನೇ ತರಗತಿ ತನಕ ಓದಿರಬೇಕೆಂಬ ನಿಯಮ ಜಾರಿಗೆ ತರಬೇಕು. ಹೆತ್ತವರು ಕೇಂದ್ರ ಸರಕಾರದ ಉದ್ಯೋಗದಲ್ಲಿದ್ದು ಅವರು ವರ್ಗಾವಣೆಗೊಂಡರೆ ಅಂಥ ಕ್ರೀಡಾಪಟುಗಳಿಗೆ ಯಾವುದೇ ಅಭ್ಯಂತರ ಇರಬಾರದು. ಕೇವಲ ಕ್ರೀಡಾ ಉದ್ದೇಶದಿಂದ ಇಲ್ಲಿಗೆ ಬಂದು ರಾಜ್ಯಮಟ್ಟದ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು, ನಂತರ ರಾಷ್ಟ್ರೀಯ ಮಟ್ಟದಲ್ಲಿ ತಮ್ಮ ರಾಜ್ಯವನ್ನು ಪ್ರತಿನಿಧಿಸುವ ಕ್ರೀಡಾಪಟುಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಪ್ರಾಯೋಜಕತ್ವ ನೀಡುವ ಶಿಕ್ಷಣ ಸಂಸ್ಥೆಗಳು ಪದಕ ಗೆದ್ದ ಮೇಲೆ ಪ್ರವೇಶ ನೀಡುವ ಬದಲು ಪದಕ ಗೆಲ್ಲುವಂತೆ ಮಾಡಲು ಪ್ರವೇಶ ನೀಡಬೇಕು. ಪ್ರತಿಭಾನ್ವೇಷಣೆ ಮಾಡಬೇಕು. ಇಲ್ಲಿ ಕಾಯ್ದಿರಿಸಿದ ಹುದ್ದೆಗಳು ಮೊದಲು ಇಲ್ಲಿರುವ ಅರ್ಹರಿಗೆ ಸಿಗುವಂತಾಗಬೇಕು. ಅಂಗಣದಲ್ಲಿ ಆಡುವುದಕ್ಕೆ ಅವಕಾಶ ಕಲ್ಪಿಸುವ ಮೊದಲು ಅಥ್ಲೆಟಿಕ್ಸ್ ಅಥವಾ ಇನ್ನಾವುದೇ ಸಂಸ್ಥೆಗಳು ಅವರ ಇರುವಿಕೆಯನ್ನು ಖಚಿತಪಡಿಸಿಕೊಳ್ಳುವುದು ಅಗತ್ಯ.
ವಿ.ಸೂ. ಸಾಧ್ಯವಾದರೆ ನಮ್ಮ ಕ್ರೀಡಾಪಟುಗಳಿಗೆ ಕೇರಳ, ತಮಿಳುನಾಡು, ಆಂಧ್ರ ಅಥವಾ ಮಹಾರಾಷ್ಟ್ರದಲ್ಲಿ ಸ್ಪರ್ಧಿಸಲು ಬಿಡುತ್ತಾರಾ ಎಂಬುದನ್ನು ಅರಿತುಕೊಳ್ಳಿ.