Saturday, February 24, 2024

ಗಿರೀಶ್ ನಾಡಿಗ್ ಎಂಬ ಸ್ಪಿನ್ ಮಾಂತ್ರಿಕನ ನೋವಿನ ಕತೆ

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್

ಈ ಸ್ಪಿನ್ ಮಾಂತ್ರಿಕನ ಕತೆ ಕೇಳಿದಾಗ ನನಗೆ ಅನಿಸಿದ್ದು….”ನಾವೆಂಥ ಕೊಳಕು ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ” ಎಂದು…..ಛೆ!!!

ಆತ ಕ್ರಿಕೆಟ್ ಗಾಗಿ ಮನೆಯನ್ನೇ ತೊರೆದ ಜತೆಯಲ್ಲಿ ಶಿಕ್ಷಣವನ್ನೂ….ಎಲ್ಲರೂ ಆತನನ್ನು “ನೀನೊಬ್ಬ ಶ್ರೇಷ್ಠ ಸ್ಪಿನ್ ಬೌಲರ್,” ಎಂದು ಹೊಗಳಿದರು. ಕರ್ನಾಟಕದಲ್ಲಿ ಸ್ಪಿನ್ ಬೌಲರ್ ಗಳ ಸಂಖ್ಯೆ ಸಾಕಷ್ಟಿರುವಾಗ ಆತ ಅತಿ ಹೆಚ್ಚು ವಿಕೆಟ್ ಗಳಿಸಿ ಗಮನ ಸೆಳೆಯುತ್ತಿದ್ದ… ಆಸ್ಟ್ರೇಲಿಯಾದ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಈತನ ಬೌಲಿಂಗ್ ಗೆ ಮೆಚ್ಚಿ ಮುಂದೊಂದು ದಿನ ಭಾರತ ತಂಡದಲ್ಲಿ ಇರಬೇಕಾದ ಬೌಲರ್ ಎಂದು ತಾನು ಧರಿಸಿದ್ದ ಆಸ್ಟ್ರೇಲಿಯಾ ತಂಡದ ಜರ್ಸಿಯನ್ನೇ ನೀಡಿ ಅಪ್ಪಿಕೊಂಡರು…..ನಾಲ್ಕು ಪಂದ್ಯಗಳಲ್ಲಿ 24 ವಿಕೆಟ್ ಗಳಿಸಿದ… ಊಟಕ್ಕೆ ಕಷ್ಟವಾಗುತ್ತಿದೆ ಎಂದಾಗ ಭಾರತದ ಶ್ರೇಷ್ಠ ಸ್ಪಿನ್ ಬೌಲರ್ ಕನ್ನಡಿಗ ಎರಾಪಳ್ಳಿ ಪ್ರಸನ್ನ ಅವರು “ನೀನು ಮುಂದೊಂದು ದಿನ ಭಾರತ ತಂಡದಲ್ಲಿ ಆಡಬೇಕಾದವ, ಕ್ರಿಕೆಟ್ ಬಿಡಬೇಡ,” ಎಂದು ಸೆಕ್ಯುರಿಟಿ ಕಂಪೆನಿಯೊಂದರಲ್ಲಿ ಕೆಲಸ ಕೊಡಿಸಿರು….ಕರ್ನಾಟಕ ರಣಜಿ ತಂಡದ ಅಂದಿನ ನಾಯಕ ಜೆ. ಅರುಣ್ ಕುಮಾರ್, “ನಿನ್ನನ್ನು ಯಾವಾಗಬೇಕಾದರೂ ತಂಡಕ್ಕೆ ಕರೆಸಿಕೊಳ್ಳಬಹುದು ರೆಡಿಯಾಗಿರು,” ಎಂದರು….ಪ್ರತಿಯೊಂದು ಪಂದ್ಯದಲ್ಲೂ 3…4 ವಿಕೆಟ್ ಗಳಿಸುತ್ತಲೇ ಇದ್ದ…9 ವರ್ಷಗಳ ಕಾಲ ರಾಜ್ಯ ರಣಜಿ ತಂಡದಲ್ಲಿ ಸಂಭಾವ್ಯರ ಪಟ್ಟಿಯಲ್ಲಿದ್ದು ಅವಕಾಶಕ್ಕಾಗಿ ಕಾಯತೊಡಗಿದ….ಅನಿಲ್ ಕುಂಬ್ಳೆ, ಸುನಿಲ್ ಜೋಶಿ, ರಾಹುಲ್ ದ್ರಾವಿಡ್, ವೆಂಕಟೇಶ್ ಪ್ರಸಾದ್, ಜಾವಗಲ್ ಶ್ರೀನಾಥ್ ಅವರ ಸಮ್ಮುಖದಲ್ಲೇ ಆ ಹುಡುಗ ಮೂಲೆಗುಂಪಾದ…ಆದರೆ ಅವರನ್ನು ಹತ್ತಿರದಿಂದ ಕಾಣುವ ಅವಕಾಶ ಸಿಕ್ಕಿದ್ದೇ ತನ್ನ ಪುಣ್ಯ ಎನ್ನುತ್ತಾನೆ……ಸಚಿನ್ ತೆಂಡೂಲ್ಕರ್ ಸೇರಿದಂತೆ ಜಗತ್ತಿನ ವಿವಿಧ ತಂಡಗಳ ಶ್ರೇಷ್ಠ ಬ್ಯಾಟ್ಸ್ ಮನ್ ಗಳಿಗೆ ನೆಟ್ ನಲ್ಲಿ ಬೌಲಿಂಗ್ ಮಾಡಿದ….ಐಪಿಎಲ್ ನಲ್ಲಿ ಆರ್ ಸಿ ಬಿ ತಂಡದ ಬ್ಯಾಟ್ಸ್ ಮನ್ ಗಳಿಗೆ ನೆಟ್ ಬೌಲರ್ ಆಗಿದ್ದ…ಕೊನೆಯಲ್ಲಿ ಯಾರಿಗೂ ಬೇಡವಾಗಿ.ದಿನಕ್ಕೆ 120 ರೂ.ಗಳಿಗೆ ಡಿಟಿಡಿಸಿ ತಂಡದ ಪರ ಆಡಿದ….ಆತನಿಗೆ ಮತ್ತೆ ಅವಕಾಶವೇ ಸಿಗಲಿಲ್ಲ….ಏಕೆಂದರೆ ಆತನಿಗೆ ಫಾದರ್ ಇದ್ದರೂ ಗಾಡ್ ಫಾದರ್ ಇರಲಿಲ್ಲ…

 

ನಾನು ಹೇಳ ಹೊರಟಿದ್ದು ಕೇವಲ ಮೆಚ್ಚುಗೆಯ ಮಾತುಗಳಲ್ಲೇ ತನ್ನ ಕ್ರಿಕೆಟ್ ಬದುಕನ್ನು ಪೂರ್ಣಗೊಳಿಸಿದ ಸ್ಪಿನ್ ಮಾಂತ್ರಿಕ ಗಿರೀಶ್ ನಾಡಿಗ್ ಬಗ್ಗೆ. ಈಗ ಗಿರೀಶ್ ಸೆಂಟ್ರಲ್ ಎಕ್ಸಸೈಸ್ ನಲ್ಲಿ ಸಿ ದರ್ಜೆಯ ನೌಕರ ಹಾಗೂ ರಾರಾಜಿನಗರ ಮಿಲ್ಕ್ ಕಾಲನಿಯಲ್ಲಿ ಸ್ಥಳೀಯ ಯುವಕರಿಗೆ ಸ್ಪಿನ್ ಬೌಲಿಂಗ್ ತರಬೇತಿ ನೀಡುತ್ತಿದ್ದಾರೆ.

ಶಿವಮೊಗ್ಗದಿಂದ ಬೆಂಗಳೂರಿಗೆ….

14ನೇ ವಯಸ್ಸಿನಲ್ಲಿ ತನ್ನ ಹುಟ್ಟುರಾದ ಶಿವಮೊಗ್ಗವನ್ನು ತೊರೆದ ಗಿರೀಶ್ ನಾಡಿಗ್ ಗೆ ಕ್ರಿಕೆಟ್ಟೇ ಬದುಕಾಗಿತ್ತು. ರಾಹುಲ್ ದ್ರಾವಿಡ್ ಹಾಗೂ ಕೆ.ಎಲ್. ರಾಹುಲ್ ಅವರು ಆಡಿದ್ದ ಬೆಂಗಳೂರು ಯುನೈಟೆಡ್ ಕ್ರಿಕೆಟ್ ಕ್ಲಬ್ ನಲ್ಲಿ ಲೀಗ್ ಪಂದ್ಯಗಳನ್ನು ಆಡುವ ಅವಕಾಶ ಸಿಕ್ಕಿತು. ಪಂದ್ಯವೊಂದರಲ್ಲೇ 7 ವಿಕೆಟ್ ಗಳಿಸಿದ ಗಿರೀಶ್ ನಾಡಿಗ್ ಗೆ ಎಲ್ಲರಿಂದಲೂ ಪ್ರಶಂಸೆ. 22 ವರ್ಷ ವಯೋಮಿತಿಯ ಕ್ರಿಕೆಟ್ ನಲ್ಲಿ ರಾಜ್ಯ ತಂಡದಲ್ಲಿ ಆಡಿ ಗಮನ ಸೇಳೆದರೂ ಅವರ ಕ್ರಿಕೆಟ್ ಬದುಕು ಅಲ್ಲಿಗೇ ಕೊನೆಯಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ರಣಜಿಯಲ್ಲಿ ಸತತ 9 ವರ್ಷಗಳ ಕಾಲ ಸಂಭಾವ್ಯರ ಪಟ್ಟಿಯಲ್ಲಿದ್ದರೂ ಒಂದು ಪಂದ್ಯವನ್ನೂ ಆಡಿಸುವ ಮನಸ್ಸು ಯಾರಿಗೂ ಬರಲಿಲ್ಲ. ಇವರ ಬಗ್ಗೆ ಪ್ರಭಾವ ಬೀರುವವರೂ ಯಾರೂ ಇರಲಿಲ್ಲ. ನಂತರ ಬಿವೈಸಿ, ಮಲ್ಲೇಶ್ವರಂ ಜಿಮ್ಖಾನ ಕ್ಲಬ್ ಗಳ ಪರ ಆಡಿದರು. ಇಂಗ್ಲೆಂಡ್, ಪಾಕಿಸ್ತಾನ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಭಾರತ ಪ್ರವಾಸ ಕೈಗೊಂಡಾಗ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯವಿದ್ದರೆ ಆ ತಂಡದ ಆಟಗಾರರಿಗೆ ನೆಟ್ ನಲ್ಲಿ ಬೌಲಿಂಗ್ ಮಾಡುವ ಕಾಯಂ ಬೌಲರ್ ಆದರು. ಒಮ್ಮೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಚಿನ್ ತೆಂಡೂಲ್ಕರ್ ಅವರಿಗೆ ನೆಟ್ ನಲ್ಲಿ ಬೌಲಿಂಗ್ ಮಾಡುವ ಅವಕಾಶ ಸಿಕ್ಕಿತ್ತು. ನೆಟ್ ಅಭ್ಯಾಸ ಮುಗಿಸಿ ಹಿಂದಿರುಗುವಾಗ “ನೀನು ಭಾರತ ತಂಡದಲ್ಲಿರಬೇಕಾದ ಬೌಲರ್,” ಎಂದು ಸಚಿನ್ ಹೇಳಿದ ಮಾತನ್ನು ಗಿರೀಶ್ ಈಗಲೂ ನೆನಪಿಸಿಕೊಂಡು ಖುಷಿ ಪಡುತ್ತಾರೆ. ಡೇವಿಡ್ ಜಾನ್ಸನ್ ನಾಯಕತ್ವದಲ್ಲಿ ಡಿಟಿಡಿಸಿ ತಂಡದ ಪರ ಆಡುವ ಅವಕಾಶ. ತಿಂಗಳಿಗೆ 3200 ರೂ. ಪಡೆಯುತ್ತಿದ್ದ ಗಿರೀಶ್ ಗೆ ಅದರಿಂದ ಬದುಕನ್ನು ರೂಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಟೈಮ್ಸ್ ನೌ ಸುದ್ದಿವಾಹಿನಿ ಶೇನ್ ವಾರ್ನ್ ಮತ್ತು ಗಿರೀಶ್ ಅವರ ಸ್ಪಿನ್ ಬೌಲಿಂಗ್ ಶೈಲಿಯನ್ನು ತುಲನೆ ಮಾಡಿ ವರದಿ ಬಿತ್ತರಿಸಿತ್ತು. ಇದು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದರೂ ಕೆಎಸ್ ಸಿಎಯ ಆಯ್ಕೆ ಮಂಡಳಿಗೆ ಕಣ್ಣು ಕಾಣಲೇ ಇಲ್ಲ…ಕಿವಿ ಕೇಳಲೇ ಇಲ್ಲ. ಇದರಿಂದಾಗಿ ಗಿರೀಶ್ ನಾಡಿಗ್ ಕಹಿ ಸಿಹಿ ನೆನಪುಗಳ ಬುತ್ತಿಯೊಂದಿಗೆ ಕ್ರಿಕೆಟ್ ಅಂಗಣದಿಂದ ಹೊರನಡೆದರು.

ಈಗಲೂ ಗಿರೀಶ್ ಸ್ಪಿನ್ ಮಾಂತ್ರಿಕ: ಅಲ್ಲಿಲ್ಲಿ ಆಡಿಕೊಂಡಿದ್ದ ಗಿರೀಶ್ ಗೆ ಕೊನೆಗೂ ಸೆಂಟ್ರಲ್ ಎಕ್ಸೈಸ್ ನಲ್ಲಿ ಡಿ ದರ್ಜೆಯ ನೌಕರಿ ಸಿಕ್ಕಿತು. ಅಲ್ಲಿಯ ತಂಡದ ಪರ ಉತ್ತಮ ಬೌಲಿಂಗ್ ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ತನ್ನಲ್ಲರುವ ಬೌಲಿಂಗ್ ಪ್ರತಿಭೆಯನ್ನು ಬೇರೆಯವರಿಗೆ ನೀಡಬೇಕೆಂಬ ಉದ್ದೇಶದಿಂದ ಗಿರೀಶ್ ಚಿಕ್ಕ ಮಕ್ಕಳಿಗೆ ತರಬೇತಿ ನೀಡಲಾರಂಭಿಸಿದರು. ಬೆಂಗಳೂರಿನ ರಾಜಾಜಿ ನಗರದಲ್ಲಿರುವ ಮಿಲ್ಕ್ ಕಾಲೊನಿಯ ಸಾರ್ವಜನಿಕ ಅಂಗಣದಲ್ಲಿ ಗಿರೀಶ್ ನಿತ್ಯವೂ ಸ್ಪಿನ್ ಬೌಲಿಂಗ್ ತರಬೇತಿ ನೀಡುತ್ತಿದ್ದಾರೆ. ಜತೆಯಲ್ಲಿ ಶಿವಮೊಗ್ಗದಲ್ಲೂ ಯುವಕರಿಗೆ ತಮ್ಮ ಸ್ಪಿನ್ ಅನುಭವದ ಪಾಠ ಹೇಳುತ್ತಿದ್ದಾರೆ. “ನನಗೆ ಸಿಗದ ಅವಕಾಶ ನನ್ನಲ್ಲಿ ತರಬೇತಿ ಪಡೆದ ಮಕ್ಕಳಿಗೆ ಸಿಕ್ಕರೆ ಅದೇ ನನಗೆ ನೆಮ್ಮದಿ,” ಎನ್ನುತ್ತಾರೆ ಗಿರೀಶ್. ಬೆಂಗಳೂರಿನಲ್ಲಿ ಸುಮಾರು 14 ಯುವ ಸ್ಪಿನ್ ಬೌಲರ್ ಗಳು ಗಿರೀಶ್ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ. 19ರ ವಯೋಮಿತಿಯ ವಲಯ ಮಟ್ಟ ಹಾಗೂ 16ರ ವಯೋಮಿತಿಯ ವಲಯ ಮಟ್ಟದಲ್ಲಿ ಗಿರೀಶ್ ಅವರಲ್ಲಿ ತರಬೇತಿ ಪಡೆದ ಹಲವಾರು ಯುವ ಸ್ಪಿನ್ ಬೌಲರ್ ಗಳು ಮಿಂಚುತ್ತಿದ್ದಾರೆ. “ಇದಕ್ಕಿಂತ ಬೇರೆ ಖುಷಿ ಬೇರಿಲ್ಲ, ಈ ಯುವ ಪ್ರತಿಭೆಗಳು ಮುಂದೊಂದು ದಿನ ಈ ಸ್ಪಿನ್ ಬೌಲರ್ ಗಳು ನಮ್ಮಂತೆ ಅವಕಾಶ ವಂಚಿತರಾಗದೆ ದೇಶದ ಪರ ಆಡಲಿ ಎಂಬುದೇ ಹಾರೈಕೆ,” ಎಂದು ಗಿರೀಶ್ ಹೇಳಿದರು.

ಪ್ರಭಾವಿಲ್ಲದೆ ಪ್ರತಿಭೆಯೊಂದು ಮೂಲೆಗುಂಪಾಯಿತು, ಆದರೆ ತನ್ನದೇ ಪ್ರಭಾವ ಬೀರಿ ಮತ್ತಷ್ಟು ಪ್ರತಿಭೆಗಳನ್ನು ಹುಟ್ಟುಹಾಕುವ ಗಿರೀಶ್ ನಾಡಿಗ್ ಅವರ ಶ್ರಮ ಸಾರ್ಥಕವಾಗಲಿ…

 

Related Articles