Saturday, July 20, 2024

ಭಾರತ ಕ್ರಿಕೆಟ್ ತಂಡದಲ್ಲೊಬ್ಬ ಶಂಕರ್ ಧವನ್ !

ಸೋಮಶೇಖರ್ ಪಡುಕರೆ ಬೆಂಗಳೂರು

ಭಾರತ ಕ್ರಿಕೆಟ್ ತಂಡದಲ್ಲಿ ಶಿಖರ್ ಧವನ್ ಗೊತ್ತು. ಆದರೆ ಶಂಕರ್ ಧವನ್ ಗೊತ್ತಾ? ಇಲ್ಲವಾದಲ್ಲಿ ಇಲ್ಲಿದೆ ವಿವರ..

ಕ್ರೀಡೆಯಲ್ಲಿ ಈ ದೇಶದ ಉಸಿರೇ ಕ್ರಿಕೆಟ್. ಯಾವುದೇ ಲಾಪೇಕ್ಷೆ ಇಲ್ಲದ ಅಭಿಮಾನ, ತಂಡ, ಆಟಗಾರ ಎಲ್ಲೇ ಹೋದರೂ ಅವರ ಜಾಡು ಹಿಡಿದು ಹಿಂಬಾಲಿಸುವ ಅಭಿಮಾನ. ಕೆಲಸ ಕಾರ್ಯಗಳನ್ನು ಬದಿಗೊತ್ತಿ ತಮ್ಮ ಆಟಗಾರರನ್ನು ಹಿಂಬಾಲಿಸುವವರಿದ್ದಾರೆ. ಅಭಿಮಾನಿಗೆ ಪಂದ್ಯಕ್ಕಾಗಿ ಟಿಕೆಟ್ ನೀಡುವ ಆಟಗಾರರಿದ್ದಾರೆ. ಸಚಿನ್ ತೆಂಡೂಲ್ಕರ್ ಅವರ ಅಭಿಮಾನಿ ಸುಧೀರ್ ಕುಮಾರ್ ಅವರ ಬಗ್ಗೆ ನಾವು ತಿಳಿದ್ದೇವೆ. ಸಚಿನ್ ನಿವೃತ್ತಿಯಾದರೂ ಅವರು ಈ ಅಭಿಮಾನಿ ಮಾತ್ರ ಇನ್ನೂ ಅಂಗಣ ತೊರೆದಿಲ್ಲ. ಮಿಸ್ ಯೂ ಸಚಿನ್ ಎಂದು ಮೈಗೆಲ್ಲ ತ್ರಿವರ್ಣ ಧ್ವಜದ ಬಣ್ಣ ಹಚ್ಚಿಕೊಂಡು, ರಾಷ್ಟ್ರ ಧ್ವಜವನ್ನು ಕೈಯಲ್ಲಿ ಹಿಡಿದು, ಶಂಖ ನಾದವನ್ನು ಮೊಳಗುವ ಸುಧೀರ್ ಕುಮಾರ್ ಬಗ್ಗೆ ಎಲ್ಲರಿಗೂ ಗೊತ್ತು. ಆದರೆ ಸದ್ದಿಲ್ಲದೆ ಶಿಖರ್ ಧವನ್ ಅವರನ್ನು ಹಿಂಬಾಲಿಸುತ್ತಿರುವ, ಅಥವಾ ಶಿಖರ್ ಧವನ್ ಪ್ರೀತಿಯಿಂದ ನೋಡಿಕೊಳ್ಳುತ್ತಿರುವ ಬೆಂಗಳೂರಿನ ಶಂಕರ್ ಧವನ್ ಬಗ್ಗೆ ತಿಳಿದವರು ವಿರಳ. 
‘ಧವನ್  ಅವರಂತೆಯೇ ಕೇಶವಿನ್ಯಾಸ, ಧವನ್ ಅವರಂತೆಯೇ ಮೀಸೆ, ಧವನ್ ಅವರಂತೆಯೇ ಕಿವಿಗೆ ಟಿಕ್ಕಿ, ಧವನ್ ಅವರಂತೆಯೇ ಕೈಗೆ ಟ್ಯಾಟೂ ಹೀಗೆ ಪ್ರತಿಯೊಂದು ವಿಚಾರದಲ್ಲೂ ಧವನ್ ಅವರನ್ನು ಅನುಸರಿಸುವ ಶಂಕರ್ ಧವನ್ ಪಾಲಿಗೆ ಮನೆಯ ಸದಸ್ಯನಂತೆ. ತನ್ನ ಮನೆಗೆ ಶಂಕರ್ ಅವರನ್ನು ಬರಮಾಡಿಕೊಂಡ ಧವನ್, ಮನೆಯವರಿಗೆ ಪರಿಚಯಿಸುವಾಗ, ‘ಎ ಮೇರಾ ಚೋಟಾ ಭಾಯಿ,‘ ಎಂದು ಹೇಳಿದ್ದಾರೆ.
2008ರಿಂದ ಧವನ್ ಶಂಕರ್ ಪಾಲಿಗೆ ದೇವರಿದ್ದಂತೆ. ಇತ್ತೀಚಿಗೆ ಮುಂಬೈಯಲ್ಲಿ ಆರಂಭಗೊಂಡ ದ ಒನ್ ಆನ್‌ಲೈನ್ ಉತ್ಪನ್ನಗಳ ಉದ್ಘಾಟನಾ ಸಮಾರಂಭಕ್ಕೆ ಧವನ್ ತಮ್ಮ ಪ್ರೀತಿಯ ಅಭಿಮಾನಿ ಶಂಕರ್ ಅವರ ಕುಟುಂಬವನ್ನೇ ಆಹ್ವಾನಿಸಿದ್ದಾರೆ. ಪ್ರತಿಯೊಂದು ಪಂದ್ಯಕ್ಕೂ ಟಿಕೆಟ್ ಉಚಿತವಾಗಿ ನೀಡುತ್ತಾರೆ. ಭಾರತದ ಡ್ರೆಸ್ಸಿಂಗ್ ರೂಮ್‌ನಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಏಕೈಕ ಅಭಿಮಾನಿ ಎಂದರೆ ಅದು ಶಂಕರ್. ಸಚಿನ್ ತೆಂಡೂಲ್ಕರ್ ಅವರ ಅಭಿಮಾನಿ ಸುಧೀರ್ ಬೆಂಗಳೂರಿಗೆ ಬಂದರೆ ಉಳಿದುಕೊಳ್ಳುವುದು ಧವನ್ ಅಭಿಮಾನಿ ಶಂಕರ್ ಅವರ ಮನೆಯಲ್ಲೇ
ಟೆನಿಸ್ ಬಾಲ್ ಕ್ರಿಕೆಟ್‌ನಿಂದ ಆರಂಭ 
ಶಂಕರ್ ರಾಜ್ಯ ಕಂಡ ಉತ್ತಮ ಆಟಗಾರ. ಸದ್ಯ ಲೀಗ್ ಪಂದ್ಯಗಳನ್ನು ಆಡುತ್ತಾರೆ.ತರಬೇತಿ ಕೂಡ ನೀಡುತ್ತಾರೆ. ಹೈದರಾಬಾದ್‌ನಲ್ಲೂ ಲೀಗ್ ಆಡಿದ ಅನುಭವಹೊಂದಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ತಂಡದ ನಿತ್ಯದ ಅತಿಥಿ. ಆರಂಭದಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಆಡುತ್ತಿದ್ದ ಶಂಕರ್,  ಅಂಬೇಡ್ಕರ್ ಯಂಗ್ ಬಾಯ್ಸ್, ಬ್ಲೂ ಸ್ಟಾರ್ಸ್, ಜೆಪಿ ಕ್ರಿಕೆಟರ್ಸ್, ಜೆಎಸ್‌ಆರ್, ಫೀನಿಕ್ಸ್  ಹಾಗೂ ಎಂಎಸ್‌ಆರ್ ತಂಡಗಳ ಪರ ಆಡಿದ್ದಾರೆ.ಕೆಎಸ್‌ಸಿಎ ನಾಲ್ಕು ಮತ್ತು ಐದನೇ ಹಂತದ ಲೀಗ್‌ನಲ್ಲಿ ವಿಸಿಸಿ, ಬಿಯುಸಿಸಿ ಹಾಗೂ ಮಿತ್ರಾ ಕ್ರಿಕೆಟ್ ಕ್ಲಬ್ ಪರ ಆಡಿದ್ದಾರೆ. ಶಂಕರ್ ಅವರ ಪತ್ನಿ ರಾಜ್ಯ ಮಟ್ಟದ ಚೆಸ್ ಆಟಗಾರ್ತಿ.
ಬೆಂಗಳೂರಿನ ಸಿದ್ಧಾಪುರ ನಿವಾಸಿ ಶಂಕರ್ ಅವರಿಗೆ ಪ್ರೋತ್ಸಾಹ ನೀಡುತ್ತಿರುವುದು ಅವರ ಸಹೋದರ ಶಿವಾನಂದ. ತಂದೆ ಕಾಟಮಯ್ಯ ಹಾಗೂ ತಾಯಿ ನಾರಾಯಣಮ್ಮ  ಶಂಕರ್ ಅವರ ಕ್ರಿಕೆಟ್ ಪ್ರೀತಿಗೆ ಎಲ್ಲ ರೀತಿಯ ನೆರವನ್ನು ನೀಡಿದ್ದರು. ಸಹೋದರ ಆನಂದ್, ಮಧು, ಸಹೋದರಿಯರಾದ ಶೋಭಾ ಹಾಗೂ ಶಾರದಾ ಕೂಡ ನೆರವಾಗಿದ್ದಾರೆ.
ಎರಡೇ ಗಂಟೆಯಲ್ಲಿ ಬದಲಾದ ಧವನ್
ಒಮ್ಮೆ ಧವನ್ ಅವರು ತಮ್ಮ ಆತ್ಮೀಯ ಅಭಿಮಾನಿ ಶಂಕರ್ ಅವರನ್ನು ಹೊಟೇಲ್ ರೂಮಿಗೆ ಬರಮಾಡಿಕೊಂಡಿದ್ದರು. ಆಗ ಶಂಕರ್ ಹೊಸ ಗೆಟ್‌ಅಪ್‌ನಲ್ಲಿ ಫ್ರೆಂಚ್ ಗಡ್ಡದೊಂದಿಗೆ  ಕಾಣಿಸಿಕೊಂಡರು. ಧವನ್‌ಗೆ ಎಲ್ಲಿಲ್ಲದ ಅಚ್ಚರಿ. ಇದುವರೆಗೂ ನೀನು ನನ್ನ ಶೈಲಿಯನ್ನು ಅನುಕರಿಸುತ್ತಿದ್ದೆ. ಈಗ ನಾನು ನಿನ್ನ ಶೈಲಿಯನ್ನು ಅನುಕರಿಸುತ್ತೇನೆ. ಎಂದು ಹೊರಗಡೆ ಹೋದ ಧವನ್ ಎರಡು ಗಂಟೆಯಲ್ಲಿ ಫ್ರೆಂಚ್ ದಾಡಿಯೊಂದಿಗೆ ಕಾಣಿಸಿಕೊಂಡರು. ಅಂದಿನ ಅವರಿಬ್ಬರ ಫೋಟೋ ತೋರಿಸಿದ ಶಂಕರ್ ಹಳೆ ನೆನಪುಗಳನ್ನು ಮೆಲುಕು ಹಾಕಿದರು.
1.20 ಲಕ್ಷ  ರೂ.ಗಳ ಟ್ಯಾಟೂ!
ಶಿಖರ್ ಧವನ್ ಅವರ ಮೈಯಲ್ಲಿ ಯಾವ ವಿಧದ ಟ್ಯಾಟೂ ಇದೆಯೋ ಅಷ್ಟೂ ಬಗೆಯ ಟ್ಯಾಟೂ ಶಂಕರ್ ಅವರ ಮೈಯಲ್ಲಿದೆ. ಕೈ, ಬೆನ್ನು, ಬೆರಳು, ಎದೆ, ಭುಜ ಹೀಗೆ ಧವನ್ ಅವರು ಹಾಕಿಸಿಕೊಂಡಿರುವ ಟ್ಯಾಟೂ ಶಂಕರ್ ಅವರ ಮೈ ಮೇಲೆ ಇದೆ. ಇದಕ್ಕೆ ಶಂಕರ್ ಅವರಿಗೆ ತಗಲಿದ ವೆಚ್ಚ 1.20 ಲಕ್ಷ ರೂ.
‘‘ಧವನ್ ಅಣ್ಣ ನನ್ನ ಪಾಲಿಗೆ ದೇವರಿದ್ದಂತೆ. ಇದುವರೆಗೂ ಅವರಾಗಿಯೇ ಕರೆದಿದ್ದಾರೆ. ಮನೆಗೂ ಕರೆದುಕೊಂಡು ಹೋಗಿದ್ದಾರೆ. ಎಲ್ಲಿಯೂ ಅವರ ಸಂಬಂಧವನ್ನು ಹಾಳುಗೆಡಹುವ ಕೆಲಸ ಮಾಡಿಲ್ಲ. ಅವರ ದೂರವಾಣಿ ಸಂಖ್ಯೆಯನ್ನು ಯಾರೊಂದಿಗೂ ಹಂಚಿಕೊಂಡಿಲ್ಲ. ಮೊನ್ನೆ ಮುಂಬೈಯಲ್ಲಿ ಪ್ರತಿಯೊಬ್ಬ ಆಟಗಾರರಿಗೂ ನನ್ನನ್ನು ಪರಿಚಯಿಸಿದರು. ಮಹೇಂದ್ರ ಸಿಂಗ್ ಧೋನಿ ತಮ್ಮ ಮೊಬೈಲ್‌ನಲ್ಲೇ ಸೆಲ್ಫಿ ತೆಗೆಸಿಕೊಂಡರು. ಶಿಖರ್ ಧವನ್ ಫ್ಯಾನ್ಸ್ ಎಫ್ ಬಿ   ಖಾತೆಯನ್ನು ಹೊಂದಿದ್ದೇನೆ. ಸುಮಾರು 20 ಸಾವಿರ ಸದಸ್ಯರಿದ್ದಾರೆ. ಧವನ್ ಅವರೊಂದಿಗೆ ಒಂದು ಜಾಹೀರಾತು ಶೂಟಿಂಗ್ ಮಾಡಿದ್ದೇನೆ, ಅದಕ್ಕೆ ಬಹಳ ಹಣವಿದ್ದಿತ್ತು. ಹಣ ನೀಡಲು ಮುಂದೆ ಬಂದರು. ಆದರೆ ನಾನು ಸ್ವೀಕರಿಸಿಲ್ಲ. ಅದರ ಬದಲಾಗಿ ಅವರು ಇಂಡಿಯನ್ ಪ್ರೀಮಿಯರ್ ಲೀಗ್‌ನ ಪ್ರತಿಯೊಂದು ಪಂದ್ಯಕ್ಕೂ ನನಗೆ ಹೊಟೇಲ್ ಬುಕ್ ಮಾಡಿ ಟಿಕೆಟ್ ನೀಡುತ್ತಾರೆ. ಈ ಪ್ರೀತಿ ಕೊನೆ ತನಕ ಹೀಗೆ ಇರಲಿ ಎಂಬುದು ನನ್ನ ಆಸೆ,‘ ಎಂದು ಶಂಕರ್ ಹೇಳಿದರು.
ಕ್ರಿಕೆಟಗನಿಗೆ ಬದುಕು ನೀಡಿದ ಶಂಕರ್ 
ನವೀನ್ ಎಂಬ ಹುಡುಗ ಕ್ರಿಕೆಟನ್ನೇ ಬದುಕಾಗಿಸಿಕೊಳ್ಳಬೇಕೆಂದು ಬೆಂಗಳೂರಿಗೆ ಬಂದ. ಆದರೆ ಅವಕಾಶಗಳು ಸಿಗದೆ ಅಸಾಯಕನಾಗಿ ಆಕಾಶ ನೋಡಲಾರಂಭಿಸಿದ. ಬೇರೆ ದಾರಿ ಕಾಣದೆ ಶಂಕರ್ ಅವರಲ್ಲಿ ತನ್ನ ಕಷ್ಟ ಹೇಳಿಕೊಂಡ. ಶಂಕರ್ ನವೀನ್‌ಗೆ ಹೈದರಾಬಾದ್‌ನಲ್ಲಿ ಕ್ರಿಕೆಟ್ ತರಬೇತಿ, ಅಂಪೈರಿಂಗ್ ಹಾಗೂ ಸ್ಕೋರರ್  ಆಗಿ ಕೆಲಸ ನೀಡಿದರು. ಈಗ ನವೀನ್ ಕ್ರಿಕೆಟ್ ಮೂಲಕವೇ ತಮ್ಮ ಬದುಕನ್ನು ಕಂಡುಕೊಂಡಿದ್ದಾರೆ. ಶಂಕರ್ ನನ್ನ ಪಾಲಿನ ದೇವರು ಎನ್ನುತ್ತಾರೆ.
ಕ್ರಿಕೆಟ್ ಅಂಗಣದಲ್ಲಿ ಶಂಕರ್ ಅಪೂರ್ವ ಅಭಿಮಾನಿ…ಶಿಖರ್ ಧವನ್ ಅಂಗಣದಲ್ಲಿ ಹೀರೋ . ಶಂಕರ್ ಧವನ್ ಅಭಿಮಾನಿಗಳ ಹೃದಯದಲ್ಲಿ ಹೀರೋ.

Related Articles