ಕಾಣದ ಕಂಗಳಿಗೆ ಬೆಳಕಾದ ಶೇಖರ್ ನಾಯಕ್
ಸೋಮಶೇಖರ್ ಪಡುಕರೆ ಬೆಂಗಳೂರು
ಅವರ ಕುಟುಂಬದಲ್ಲಿ ಹದಿನಾರಕ್ಕೂ ಹೆಚ್ಚು ಮಂದಿಗೆ ಸರಿಯಾಗಿ ಕಣ್ಣು ಕಾಣುತ್ತಿಲ್ಲ. ಈಗ ಉಳಿದಿರುವ ಏಳೆಂಟು ಮಂದಿಗೂ ದೇವರು ಸರಿಯಾಗಿ ನೋಡುವ ಭಾಗ್ಯ ಕೊಟ್ಟಿಲ್ಲ. ಇವರ ನಡುವೆ ಬೆಳೆದ ಪ್ರತಿಭೆ ಶೇಖರ್ ನಾಯ್ಕ್. ಭಾರತ ದೃಷ್ಟಿ ವಿಶೇಷ ಚೇತನರ ಕ್ರಿಕೆಟ್ ತಂಡದ ನಾಯಕ, ಎರಡು ಬಾರಿ ವಿಶ್ವಕಪ್ ಗೆದ್ದುಕೊಟ್ಟ ಪ್ರತಿಭಾವಂತ.
ಶೇಖರ್ ಅವರಿಗೆ ನಮ್ಮ ರಾಜ್ಯ ಸರಕಾರ ಇದುವರೆಗೂ ಉದ್ಯೋಗ ಕೊಟ್ಟಿಲ್ಲ. ಪದ್ಮಶ್ರೀ ಗೌರವ ಸಿಕ್ಕಿರುವ ಒಬ್ಬ ಸಾಧಕನನ್ನು ನಿರುದ್ಯೋಗಿಯನ್ನಾಗಿ ಮಾಡಿದ ಕುಖ್ಯಾತಿ ಈ ರಾಜ್ಯಕ್ಕೆ ತಟ್ಟದಿರದು. ಆದರೆ ಈ ಬಗ್ಗೆ ಶೇಖರ್ ನಾಯ್ಕ್ ಹೆಚ್ಚು ಯೋಚಿಸದೆ ತನ್ನಿಂದಾದ ಕೆಲಸವನ್ನು ಮಾಡುತ್ತ ಬಂದಿದ್ದಾರೆ. ಈಗ ತಮ್ಮದೇ ಹೆಸರಿನಲ್ಲಿ ಅಂದರೆ ಶೇಖರ್ ನಾಯ್ಕ್ ಫೌಂಡೇಷನ್ ಸ್ಥಾಪಿಸಿ ವಿಶೇಷ ಚೇತನ ಕ್ರಿಕೆಟಿಗರಿಗೆ ತರಬೇತಿ ನೀಡುವ ಗುರಿ ಹೊಂದಿದ್ದಾರೆ.

ಭಾರತ ದೃಷ್ಟಿ ವಿಶೇಷ ಕ್ರಿಕೆಟ್ ತಂಡದ ಮಾಜಿ ನಾಯಕ ಶೇಖರ್ ನಾಯ್ಕ್ ಸ್ಥಾಪಿಸಿರುವ ಫೌಂಡೇಷನ್ ದೃಷ್ಟಿ ವಿಶೇಷ ಚೇತನ ಕ್ರಿಕೆಟಿಗರಿಗೆ ತರಬೇತಿ ನೀಡಲಿದ್ದಾರೆ.

ಸರಕಾರ ಭೂಮಿ ನೀಡಲಿ!

ಸಾಕಷ್ಟು ಹಣ ಮಾಡಿರುವ, ಈ ರಾಜ್ಯಕ್ಕೆ ಯಾವುದೇ ರೀತಿಯ ಕೊಡುಗೆ ನೀಡದ ಮಹೇಶ್ ಭೂಪತಿಯಂಥ ಟೆನಿಸ್ ಆಟಗಾರರಿಗೆ ಅತ್ಯಂತ ಬೆಲೆಬಾಳುವ ಭೂಮಿಯನ್ನು ನೀಡಿರುವ ಕರ್ನಾಟಕ ಸರಕಾರ ಶೇಖರ್ ನಾಯ್ಕ್ ಅವರಂಥ ಯಾರ ನೆರವಿಲ್ಲದ ಕ್ರೀಡಾಪಟುವಿಗೆ ಭೂಮಿ ನೀಡಬೇಕಾದ ಅನಿವಾರ್ಯತೆ ಇದೆ. ಏಕೆಂದರೆ ಅವರು ಉಚಿತವಾಗಿ ತರಬೇತಿ ನೀಡುವ ಗುರಿ ಹೊಂದಿದ್ದಾರೆ. ಅದಕ್ಕಾಗಿ ಬೆಂಗಳೂರಿನಲ್ಲಿರುವ ಶಾಲಾ ಕಾಲೇಜುಗಳಲ್ಲಿ ಬೇಡಿಕೊಂಡು ಅಂಗಣವನ್ನು ಪಡೆದು ಅಂಧ ಮಕ್ಕಳಿಗೆ ತರಬೇತಿ ನೀಡಲಿದ್ದಾರೆ. ಶೇಖರ್ ನಾಯ್ಕ್ ಫೌಂಡೇಷನ್‌ಗೆ ನೆರವು ನೀಡಿದರೆ ಸರಕಾರ ಒಂದು ಉತ್ತಮ ಸಾಮಾಜಿಕ ಕೆಲಸವನ್ನು ಮಾಡಿದಂತಾಗುತ್ತದೆ.
ಮಾಜಿ ಟೆನಿಸ್ ಆಟಗಾರ ಮಹೇಶ್ ಭೂಪತಿಗೆ ಅಕಾಡೆಮಿ ಮಾಡಲು ಸರಕಾರ ಭೂಮಿ ನೀಡಿದೆ. ಮಹೇಶ್ ಭೂಪತಿ ರಾಜ್ಯದ ಮಕ್ಕಳಿಗೆ ಉಚಿತವಾಗಿ ತರಬೇತಿ ನೀಡುತ್ತಿಲ್ಲ. ಈ ರಾಜ್ಯದಿಂದ ತಿಂಗಳು ಲಕ್ಷಾಂತರ ರೂ. ಅವರ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ.

ಮೆಚ್ಚುಗೆ ವ್ಯಕ್ತಪಡಿಸಿದ ದ್ರಾವಿಡ್
ಶೇಖರ್ ನಾಯ್ಕ್ ಅವರ ಸಾಮಾಜಿಕ ಕಾಳಜಿಗೆ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಕಾಶ್ ಪಡುಕೋಣೆ ಹಾಗೂ ರಾಹುಲ್ ದ್ರಾವಿಡ್ ಅಕಾಡೆಮಿಯಲ್ಲಿ ತಿಂಗಳಿಗೊಮ್ಮೆ ಪಂದ್ಯ ನಡೆಸಲು ಅವಕಾಶ ಕಲ್ಪಿಸುವುದಾಗಿ ಹೇಳಿದ್ದಾರೆ. ಈ ವಿಷಯವನ್ನು ಶೇಖರ್ ನಾಯ್ಕ್ ಸ್ಪೋರ್ಟ್ಸ್ ಮೇಲ್‌ಗೆ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಆರಂಭ
ನವೆಂಬರ್ ೧೧ರಂದು ಶಿವಮೊಗ್ಗದ ಶಾಸಕ ಅಶೋಕ್ ನಾಯ್ಕ್ ಅಕಾಡೆಮಿಗೆ ಚಾಲನೆ ನೀಡಿದರು. ಭಾರತ ಅಂಧರ ಕ್ರಿಕೆಟ್ ತಂಡದ ಉಪನಾಯಕರಾಗಿದ್ದ ಪ್ರಕಾಶ್ ಜಯಸಿಂಹ ಹಾಗೂ ಸುರೇಶ್ ತರಬೇತಿ ನೀಡಲಿದ್ದಾರೆ. ಮೊದಲ ದಿನವೇ ೧೫ ಯುವ ಕ್ರಿಕೆಟಿಗರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.
ಒಂದೇ ಕುಟುಂಬದಲ್ಲಿ ೧೬ಕ್ಕೂ ಹೆಚ್ಚು ಕುರುಡರು!
ಶೇಖರ್ ನಾಯ್ಕ್ ಅವರ ಕುಟುಂಬದ್ದು ದುರಂತ ಕತೆ. ಅದು ವಂಶಪಾರಂಪರ್ಯವೋ ಏನೋ, ತಲೆ ಮಾರಿನಿಂದ ಕುಟುಂಬದಲ್ಲಿ ೧೬ಕ್ಕೂ ಹೆಚ್ಚು ಮಂದಿ ವಿವಿಧ ರೀತಿಯ ಅಂಧತ್ವ ಹೊಂದಿದ್ದಾರೆ. ಈಗಲೂ ಕುಟುಂಬದಲ್ಲಿ ಏಳೆಂಟು ಮಂದಿಗೆ ದೃಷ್ಟಿ ಇಲ್ಲ.
ಉಚಿತ ತರಬೇತಿ
ಫೌಂಡೇಷನ್‌ನ ಕಾರ್ಯವೈಖರಿ ಕುರಿತು ಸ್ಪೋರ್ಟ್ಸ್ ಮೇಲ್ ಜತೆ ಮಾತನಾಡಿದ ಶೇಖರ್ ನಾಯ್ಕ್, ‘ದೇವರು ನನಗೆ ದೃಷ್ಟಿ ಕೊಟ್ಟಿಲ್ಲ, ಆದರೆ ಕ್ರಿಕೆಟ್ ಆಡುವ ಹುಚ್ಚು ನನ್ನನ್ನು ಇಲ್ಲಿಯವರೆಗೆ ತಂದುಬಿಟ್ಟಿದೆ. ಪದ್ಮಶ್ರೀ ಪ್ರಶಸ್ತಿಯೂ ಕ್ರಿಕೆಟ್‌ನಿಂದ ಸಿಕ್ಕಿದೆ. ಆದರೆ ನನಗೆ ಉದ್ಯೋಗ ಇದುವರೆಗೂ ಸಿಕ್ಕಿಲ್ಲ. ನಮ್ಮ ಅಸಹಾಯಕತೆ ಇನ್ನೊಬ್ಬರ ಬಂಡವಾಳವಾಗುವುದು ಸೂಕ್ತವಲ್ಲ. ಅದಕ್ಕಾಗಿಯೇ ಫೌಂಡೇಷನ್ ಮಾಡಿದ್ದೇನೆ. ಇಲ್ಲಿ ಉಚಿತವಾಗಿ ತರಬೇತಿ ನೀಡಲಾಗುತ್ತದೆ. ಹಣ ಮಾಡುವ ಉದ್ದೇಶದಿಂದ ಸ್ಥಾಪನೆ ಮಾಡಿಲ್ಲ.ಇದಕ್ಕೆ ಮೂಲಭೂತ ಸೌಕರ್ಯ ಇನ್ನೂ ಸಿದ್ಧಪಡಿಸಿಲ್ಲ. ಸರಕಾರ ಭೂಮಿ ನೀಡಿದರೆ ಬಹಳ ಉಪಯೋಗವಾಗುತ್ತದೆ. ಪಾರ್ಕರ್ ಒಲೇರ್ ಹಾಗೂ ಇಂಕ್ ಟಾಕ್ಸ್ ಪ್ರೋತ್ಸಾಹ ಸಿಕ್ಕಿದೆ,‘ ಎಂದು ಹೇಳಿದರು.