Tuesday, November 12, 2024

ಬಾಯಿ ಬಾರದು…ಕಿವಿಯೂ ಕೇಳದು…. ಪ್ರಕಾಶ್ ಗೆದ್ದಿರುವುದು ೨೦೦ ಕುಸ್ತಿ ಪಂದ್ಯಗಳು

ಸೋಮಶೇಖರ್ ಪಡುಕರೆ, ಬೆಂಗಳೂರು 

ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರವರೇ, ಜೂನಿಯರ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ಅಸ್ಸಾಂನ ಹಿಮಾ ದಾಸ್, ಅವರನ್ನು ಯಾರೋ ದಲಿತರು ಎಂದ ಕಾರಣಕ್ಕೆ ತಮ್ಮ ಖಾತೆಯಿಂದ 10 ಲಕ್ಷ ರೂ. ನಗದು ಬಹುಮಾನ ಪ್ರಕಟಿಸಿದಿರಿ. ಖುಷಿ. ಆದರೆ ನಿಮ್ಮ ಮನೆಯಲ್ಲೇ ಕಷ್ಟದಲ್ಲಿರುವವರ ಬಗ್ಗೆ ನೀವೇನು ಮಾಡುವಿರಿ? ಇಲ್ಲಿದೆ ಮೂಗ ಹಾಗೂ ಕಿವುಡ ಕುಸ್ತಿ ಚಾಂಪಿಯನ್ ಒಬ್ಬರ ದಾರುಣ ಕತೆ…. ಉತ್ತರ ಕರ್ನಾಟಕದ ಬಗ್ಗೆ ಕಾಳಜಿ ಇರುವವರು ಸ್ಪಂದಿಸಿ….

ಕಳೆದ ಹದಿನೈದು ವರ್ಷಗಳಿಂದ ಕುಸ್ತಿಯಲ್ಲೇ ಬದುಕು, ಪಾಲ್ಗೊಂಡಿರುವುದು ಸುಮಾರು 250 ಕುಸ್ತಿ ಪಂದ್ಯಗಳು, ಗೆದ್ದಿರುವುದು 200ಕ್ಕೂ ಹೆಚ್ಚು…..ಹಲವಾರು ಪದಕ, ಹಲಾವರು ಫಲಕ, ೨೫ಕ್ಕೂ ಹೆಚ್ಚು ಟಗರು, ಅಂತಾರಾಷ್ಟ್ರೀಯ ಕುಸ್ತಿಯೊಂದರಲ್ಲಿ ಪದಕ. ವರ್ಷ ೨೫, ಕೆಲಸ ಇಲ್ಲ. ದುಡಿಯಲು ಅವಕಾಶ ಇಲ್ಲ… ಹೇಳ ಹೊರಟ್ಟಿದ್ದು ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಕಲ್ಮಠ ಬೀದಿಯ ಪ್ರಕಾಶ ಮಹದೇವಪ್ಪ ಹುಣಸಿಕಟ್ಟಿಯ ಬದುಕಿನ ಬಗ್ಗೆ. ಏಕೆಂದರೆ ಈ ಸಾಧಕನಿಗೆ ಬಾಯಿ ಬಾರದು, ಕಿವಿಯೂ ಕೇಳದು…..
ಓದಿದದ್ದು ಬ್ರೈಲ್ ಲಿಪಿಯಲ್ಲಿ 10ನೇ ತರಗತಿ. ಕುಸ್ತಿಯೇ ಬದುಕು. ಕುಟುಂಬದವರೂ ಕುಸ್ತಿಪಟುಗಳು. ತಾತ. ತಂದೆ, ಚಿಕ್ಕಪ್ಪ ಎಲ್ಲರೂ ಕುಸ್ತಿಯಾಡಿದವರು. ತಂದೆ ಅಪಘಾತದಲ್ಲಿ ಕಾಲು ಕಳೆದುಕೊಂಡು ಮನೆಯಲ್ಲೇ ಇದ್ದಾರೆ. ಬಡ ಕುಟಂಬ. ತಾಯಿ ನೀಲವ್ವಗೆ ಮನೆಯ ಜವಾಬ್ದಾರಿ. ಸ್ಥಳೀಯ ಪ್ರಮುಖರು ಸಾಧನೆಗೆ   ಚಪ್ಪಾಳೆ ತಟ್ಟುತ್ತಾರೆ, ಮನೆ ಸೇರುತ್ತಾರೆ.

ಬಾಯಿ ಬಾರದು, ಕಿವಿ ಕೇಳದು

ಪ್ರಕಾಶ ಮಹದೇವಪ್ಪ ಉತ್ತಮ ಕುಸ್ತಿ ಪಟು, ಮಟ್ಟಿ ಕುಸ್ತಿಯಲ್ಲಿ ಎತ್ತಿದ ಕೈ. ಉತ್ತರ ಕರ್ನಾಟಕದಲ್ಲಿ ಕುಸ್ತಿಯಲ್ಲಿ ಗೆದ್ದವರಿಗೆ ಗದೆ, ಫಲಕ ಅಥವಾ ಟಗರನ್ನು ಬಹುಮಾನವಾಗಿ ನೀಡುತ್ತಾರೆ. ಪ್ರಕಾಶ ಇದುವರೆಗೂ ೨೫ಕ್ಕೂ ಹೆಚ್ಚು ಟಗರುಗಳನ್ನು ಗೆದ್ದಿರುತ್ತಾರೆ. ತಂದೆ ಕೀರಪ್ಪ ಕುಸ್ತಿಪಟು, ಚಿಕ್ಕಪ್ಪ ಚನ್ನಪ್ಪ ಪೈಲ್ವಾನ್, ಈಗ ಪ್ರಕಾಶ ಮೂರನೇ ತಲೆಮಾರಿನವರು. ಗೆದ್ದೆನೆಂದು ಹೇಳಿಕೊಳ್ಳಲು ಬಾಯಿಯೇ ಬಾರದು. ಆದರೂ ಯಾವುದೇ ಎದುರಾಳಿಗಳನ್ನೂ ಎದುರಿಸುವ ಸಾಮರ್ಥ್ಯ ಹೊಂದಿರುವವರು. ಬೆಳಗಾವಿ, ಹಾಸನ, ಧಾರವಾಡ ಹಾಗೂ ಜಾರ್ಖಂಡ್‌ಗಳಲ್ಲಿ ನಡೆದ ಕುಸ್ತಿ ಪಂದ್ಯಗಳಲ್ಲಿ ಜಯ ಗಳಿಸಿ ಪ್ರಭುತ್ವ
ಮೆರೆದವರು.

ಬೆಳಗಾವಿಯಲ್ಲೊಂದು ಉದ್ಯೋಗ ಕೊಡಿ

ಪ್ರಕಾಶ್‌ಗೆ ಮೊಬೈಲ್‌ನಲ್ಲಿ ಮಾತನಾಡಲಾಗದು. ಏನಾದರೂ ಸಮಸ್ಯೆ ಇದ್ದರೆ ಬರೆದು ತೋರಿಸುತ್ತಾರೆ. ಅವರ ಪರವಾಗಿ ಸಂಬಂಧಿ ಬಸವರಾಜು ಸ್ಪೋರ್ಟ್ಸ್ ಮೇಲ್ ಜತೆಮಾತನಾಡಿದ್ದಾರೆ. ‘ನಮ್ಮದು ಕುಸ್ತಿ ಕುಟುಂಬ, ಪ್ರಕಾಶ್‌ಗೆ ಇತ್ತೀಚಿಗೆ ಮದುವೆಯಾಗಿದೆ. ಆದರೆ ಮನೆಯಲ್ಲಿ ಬಡತನ ಇದೆ. ತಾಯಿ ಹಾಗೂ ತಂದೆಗೆ ದುಡಿಯಲಾಗದು. ಅವರಿಗೆ ಬೆಳಗಾವಿ ಸಮೀಪ ಏನಾದರೂ ಉದ್ಯೋಗ ನೀಡಿದರೆ ಕುಟಂಬಕ್ಕೆ ನೆರವಾಗುತ್ತದೆ. ಮ್ಯಾಟ್ ಹಾಗೂ ಮಟ್ಟಿ ಕುಸ್ತಿ ಎರಡರಲ್ಲೂ ಪ್ರಕಾಶ್ ಪಳಗಿದ್ದಾರೆ. ಮಾತು ಬಾರದೆ, ಕಿವಿ ಕೇಳಸಿದ್ದರೂ ಕುಸ್ತಿಯಲ್ಲಿ ಮಾತ್ರ ಪ್ರಕಾಶ್ ಎತ್ತಿದ ಕೈ, ನಮ್ಮ ಪೀಳಿಗೆಯಲ್ಲೇ ಉತ್ತಮ ಕುಸ್ತಿಪಟು. ಕುಟುಂಬ ನಿರ್ವಹಣೆಗೆ ಕೆಲಸದ ಅಗತ್ಯವಿದೆ,‘ ಎಂದು ನೋವಿನಿಂದ ನುಡಿದರು.

ಮುಖ್ಯಮಂತ್ರಿಗಳ ಗಮನಕ್ಕೆ 

ಸಾಂಪ್ರದಾಯಿಕ ಕ್ರೀಡೆ, ಗರಡಿ ಮನೆ, ಕುಸ್ತಿಪಟುಗಳು ಇವನ್ನೆಲ್ಲ ಉಳಿಸಿಕೊಂಡು ಹೋಗಬೇಕು, ಅವುಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಹೇಳುವ ಸರಕಾರ ಇಂಥ ಕುಸ್ತಿಪಟುಗಳ ಬದುಕಿನ ಬಗ್ಗೆಯೂ ಯೋಚಿಸಬೇಕು. ಉತ್ತರ ಕರ್ನಾಟಕವನ್ನು ಕಡೆಗಣಿಸಿಲ್ಲ, ಅಲ್ಲಿಯ ಜನರ ಬದುಕಿಗೆ ಸ್ಪಂದಿಸುವೆ ಎಂದು ಚುನಾವಣೆ ವೇಳೆ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಕುಮಾರ ಸ್ವಾಮಿಯವರು ಇಂಥ ಸಮಸ್ಯೆಗಳಿಗೆ ಸ್ಪಂದಿಸಿದರೆ ಆ ಭಾಗದ ಜನರಲ್ಲಿ ಮತ್ತಷ್ಟು ಆತ್ಮವಿಶ್ವಾಸ ತುಂಬಿದಂತಾಗುತ್ತದೆ.

ಪ್ರಕಾಶ್ ಅವರಿಗೆ ನೆರವು ನೀಡುವವರು ಈ ದೂರವಾಣಿ ಮೂಲಕ ಸಂಪರ್ಕಿಸಬಹುದು. 9035966965

Related Articles