Saturday, October 12, 2024

ಗಾಯದಿಂದ ಚೇತರಿಸಿ ಚಿನ್ನ ಗೆದ್ದ ಜೆಸ್ಸಿ ಸಂದೇಶ್

ಸೋಮಶೇಖರ್ ಪಡುಕರೆ, ಬೆಂಗಳೂರು:

ಐದು ವರ್ಷಗಳ ಹಿಂದೆ ಹೈಜಂಪ್ ಸ್ಪರ್ಧೆಯ ವೇಳೆ ಗಾಯಗೊಂಡು ತನ್ನ ಕ್ರೀಡಾ ಬದುಕೇ ಮುಗಿದುಹೋಯಿತು ಅಂದುಕೊಂಡಿದ್ದ ಕ್ರೀಡಾಪಟುವೊಬ್ಬ ಮತ್ತೆ ಚೇತರಿಸಿ, ರಾಷ್ಟ್ರೀಯ ಚಾಂಪಿಯನ್ಷಿಪ್ ನಲ್ಲಿ ಚಿನ್ನ ಗೆದ್ದಿರುವು ಇತರ ಸಾಧಕರಿಗೆ ಸ್ಫೂರ್ತಿಯನ್ನುಂಟು ಮಾಡುವ ಸಂಗತಿಯಾಗಿದೆ.

ರೈಲ್ವೆಯಲ್ಲಿ ಉದ್ಯೋಗಿಯಾಗಿರುವ ಬೆಂಗಳೂರಿನ ಜೆಸ್ಸೆ ಸಂದೇಶ್ ತೆಲಂಗಾಣದ ವಾರಂಗಲ್ ನಲ್ಲಿ ನಡೆದ ರಾಷ್ಟ್ರೀಯ ಮಕ್ತ ಚಾಂಪಿಯನ್ಷಿಪ್ ನ ಹೈಜಂಪ್ ನಲ್ಲಿ ಚಿನ್ನ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. 2.17 ಮೀಟರ್ ಎತ್ತರಕ್ಕೆ ಜಿಗಿಯುವ ಮೂಲಕ ಜೆಸ್ಸಿ ಸಂದೇಶ್ ಚಿನ್ನದ ಸಾಧನೆ ಮಾಡಿದರು.

 

2016ರಲ್ಲಿ ಕಾಲು ನೋವಿನಗೆ ತುತ್ತಾಗಿ ಕ್ರೀಡೆಯಿಂದ ದೂರ ಉಳಿದಿದ್ದ ಸಂದೇಶ್ ಐದು ವರ್ಷಗಳಿಂದ ಯಾವುದೇ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿರಲಿಲ್ಲ. ಇದಕ್ಕೂ ಮುನ್ನ ಯೂತ್ ನ್ಯಾಷನಲ್ಸ್ ನಲ್ಲಿ ಚಿನ್ನ ಮತ್ತು ಸೀನಿಯರ್ ನ್ಯಾಷನಲ್ಸ್ ನಲ್ಲಿ ಬೆಳ್ಳಿ ಹಾಗೂ ಕಂಚಿನ ಸಾಧನೆ ಮಾಡಿದ್ದರು. ಆದರೆ ಚಿನ್ನದ ಸಾಧನೆ ಇದೇ ಮೊದಲು.

ಶುಕ್ರವಾರ ಚಿನ್ನದ ಪದಕ ಗೆದ್ದ ನಂತರ ಸ್ಪೋರ್ಟ್ಸ್ ಮೇಲ್ ಜತೆ ಮಾತನಾಡಿದ ಜೆಸ್ಸಿ ಸಂದೇಶ್ ತಾವು ಸಾಗಿ ಬಂದ ಹಾದಿಯನ್ನೊಮ್ಮೆ ಹಿಂದಿರುಗಿ ನೋಡಿ ತಮಗೆ ನೆರವಾದ ಎಲ್ಲರನ್ನೂ ಸ್ಮರಿಸಿದ್ದಾರೆ.

ಬೆಂಗಳೂರಿನ ಬಸವನಗುಡಿಯ ತ್ಯಾಗರಾಜ್ ನಗರದ ನಿವಾಸಿ ಸೊಲೊಮನ್ ಮತ್ತು ಪ್ರೆಸಿಲ್ಲಾ ದಂಪತಿಯ ಪುತ್ರನಾದ ಸಂದೇಶ್, ಶಾಲಾ ದಿನಗಳಲ್ಲೇ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಇವರ ಸಾಮರ್ಥ್ಯವನ್ನು ಗಮನಿಸಿದ ಶಾಲಾ ದೈಹಿಕ ಶಿಕ್ಷಕರು ಹೈಜಂಪ್ ಮತ್ತು ಲಾಂಗ್ ಜಂಪ್ ನಲ್ಲಿ ತರಬೇತಿ ನೀಡಿದರು. ಕೇವಲ ಒಂದು ತಿಂಗಳಲ್ಲೇ ಎರಡೂ ಜಂಪ್ ಗಳಲ್ಲಿ ಪಳಗಿದ ಜೂನಿಯರ್ ಸಂದೇಶ್ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಮಿಂಚತೊಡಗಿದರು.

ದೇಶ ಕಂಡ ಉತ್ತಮ ಹೈಜಂಪ್ ಕೋಚ್, ಭಾರತೀಯ ಕ್ರೀಡಾ ಪ್ರಾಧಿಕಾರದ ಜಿ.ವಿ. ಗಾಂವ್ಕರ್ ಅವರಲ್ಲಿ ತರಬೇತಿ ಪಡೆದರು. ಒಲಿಂಪಿಯನ್ ಹೈಜಂಪರ್ ಸಹನಾ ಕುಮಾರಿ ಕೂಡ ಸಂದೇಶ್ ಅವರ ಯಶಸ್ಸಿನ ಹಿಂದೆ ಶ್ರಮಿಸಿದ್ದಾರೆ.

ಬಳ್ಳಾರಿಯ ಜೆಎಸ್ ಡಬ್ಲ್ಯುಕ್ರೀಡಾ ಕ್ಯಾಂಪಸ್ ನಲ್ಲಿ ತರಬೇತಿ ಪಡೆಯುತ್ತಿರುವ ಸಂದೇಶ್ ಬಾಲ ಚೈತನ್ಯ ಅವರ ಶಿಷ್ಯ. ಸ್ಪೆನ್ಸರ್ ಅವರು ಫಿಟ್ನೆಸ್ ಕೋಚ್ ಆಗಿರುತ್ತಾರೆ.

 

ಹೊಸ ಬದುಕು ನೀಡಿದ ವೇಯ್ನ್ ಲ್ಯಾಂಬಾರ್ಡ್…

ಭಾರತ ಮಹಿಳಾ ಹಾಕಿ ತಂಡ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಐತಿಹಾಸಿಕ ಸಾಧನೆ ಮಾಡಲು ತಂಡದ ಸೈಂಟಿಫಿಕ್ ಅಡ್ವೈಸರರ್ ದಕ್ಷಿಣ ಆಫ್ರಿಕಾದ ವೇಯ್ನ್ ಲ್ಯಾಂಬಾರ್ಡ್ ಅವರ ಪಾತ್ರ ಹಿರಿದಾದುದು. ರಾಷ್ಟ್ರೀಯ ಚಾಂಪಿಯನ್ಷಿಪ್ ನಲ್ಲಿ ಪದಕ ಗೆದ್ದ ನಂತರ ಸಂದೇಶ್ ಮೊದಲು ಧನ್ಯವಾದ ಹೇಳಿದ್ದು ವೇಯ್ನ್ ಲ್ಯಾಂಬಾರ್ಡ್ ಅವರಿಗೆ. ಮಹಿಳಾ ಹಾಕಿ ತಂಡದ ಫಿಟ್ನೆಸ್ ಕೋಚ್ ಮತ್ತು ಹೈಜಂಪ್ ಸ್ಪರ್ಧಿಗೂ ಏನು ಸಂಬಂಧ ಎಂದು ಕೇಳಿದಾಗ ಆರು ವರ್ಷಗಳ ಹಿಂದಿನ ಘಟನೆಯನ್ನು ಸಂದೇಶ್ ಹೇಳಿದರು.

2016 ರಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಅಭ್ಯಾಸ ಮಾಡುವಾಗ ಕಾಲಿನ ಮಂಡಿಯ ಸ್ನಾಯು ರಜ್ಜು ಹರಿದು ಹೋಗಿತ್ತು. ಎಲ್ಲ ಪರೀಕ್ಷೆ ಮಾಡಿ ನೋಡಿದಾಗ ಡಾಕ್ಟರ್ ಮೇಜರ್ ಆಪರೇಷನ್ ಅಗತ್ಯ ಇದೆ ಎಂದು ಸೂಚಿಸಿದ್ದರು. ಇಲ್ಲಿಗೆ ನನ್ನ ಕ್ರೀಡಾ ಬದುಕೇ ಮುಗಿಯಿತು ಎಂದು ಸಂದೇಶ್ ಚಿಂತೆಯಲ್ಲಿ ಯೋಚಿಸುತ್ತ ಕುಳಿತಿರುವಾಗ. ಅಲ್ಲಿ ಮಹಿಳಾ ಹಾಕಿ ತಂಡದ ಫಿಟ್ನೆಸ್ ಟ್ರೈನರ್ ಹಾದುಹೋಗುತ್ತಿದ್ದರು. ಈ ಕ್ರೀಡಾಪಟು ಯಾಕೆ ಬೇಸರದಲ್ಲಿ ಕುಳಿತಿದ್ದಾನೆ ಎಂದು ಹತ್ತಿರಕ್ಕೆ ಬಂದು ವಿಚಾರಿಸಿದರು. ಸಂದೇಶ್ ಎಲ್ಲವನ್ನೂ ವಿವರಿಸಿ, ವೈದ್ಯಕೀಯ ಪರೀಕ್ಷೆಯ ವರದಿಯನ್ನು ಕೈಗಿತ್ತ. ವರದಿಯನ್ನು ನೋಡಿದ ಲ್ಯಾಂಬಾರ್ಡ್ ಇದಕ್ಕೆ ಶಸ್ತ್ರಚಿಕಿತ್ಸೆಯ ಅಗತ್ಯ ಇಲ್ಲ. ರಿಹ್ಯಾಬಿಲೇಷನ್ ಮೂಲಕವೇ ಗುಣಪಡಿಸಬಹುದು ಎಂದಾಗ ಸಂದೇಶ್ ಗೆ ಹೋದ ಜೀವ ಬಂದಂತಾಯಿತು. ನಿರಂತರ ಫಿಟ್ಸೆಸ್ ಟ್ರೈನಿಂಗ್ ಮೂಲಕ ಸಂದೇಶ್ ಸಂಫೂರ್ಣ ಗುಣಮುಖರಾಗಿ ಮತ್ತೆ ಅಂಗಣಕ್ಕಿಳಿದರು. ಈಗ ಟ್ರಿಪಲ್ ಜಂಪ್ ನಲ್ಲೂ ಸ್ಪರ್ಧಿಸುವ ಉತ್ಸಾಹ ಹೊಂದಿದ್ದಾರೆ.

Related Articles