Thursday, October 10, 2024

ಮುಖ್ಯ ಮಂತ್ರಿಗಳೇ ನಿಮ್ಮ ಹೃದಯ ಈ ಸಾಧಕಿಗಾಗಿ ಮಿಡಿಯಲಿ

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್ 
ಮಂಗಳೂರಿನ ಮೀನು ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್ ಚೀಲ ಮಾರುತ್ತಿರುವ (ಈಗ ನಿಷೇಧದ ಕಾರಣ ಮಾರುತ್ತಿಲ್ಲ) ಅಂತಾರಾಷ್ಟ್ರೀಯ ಮಾಜಿ ಪವರ್ ಲಿಫ್ಟರ್ ಗೀತಾ ಭಾಯಿ ಬಗ್ಗೆ ಇನ್ನು ಮುಂದೆ ಬರೆಯ ಬಾರದು ಅಂದಿದ್ದೆ. ಏಕೆಂದರೆ ಈ ಆಡಳಿತ ವ್ಯವಸ್ಥೆಯ ಬಗ್ಗೆ ಅಷ್ಟು ಬೇಸರವಾಗಿದೆ. ಆದರೆ ಆ ಹೆಣ್ಣು ಮಗಳು ಕೊನೆಯದಾಗಿ ನನ್ನ ಬದುಕನ್ನು ಮುಖ್ಯಮಂತ್ರಿಗಳ ಗಮನಕ್ಕೆ ತನ್ನಿ ಎಂದು ವಿನಂತಿಸಿಕೊಂಡಿರುವುದಕ್ಕೆ ಬರೆಯುತ್ತಿದ್ದೇನೆ.
ಅವರು ಏಕಲವ್ಯ ಪ್ರಶಸ್ತಿಗೆ ಎಷ್ಟು ಬಾರಿ ಅರ್ಜಿ ಹಾಕಿದ್ದಾರೆ ಎಂಬುದಕ್ಕೆ ಲೆಕ್ಕವೇ ಇಲ್ಲ. ರಾಜ್ಯೋತ್ಸವ ಪ್ರಶಸ್ತಿ ಕೈಗೆ ಬಂದರೂ ಬಾಯಿಗೆ ಬರಲಿಲ್ಲ, ಉದ್ಯೋಗವಂತೂ ನಮ್ಮ ಪ್ರಜ್ಞಾವಂತ ನಾಗರಿಕರಿಗೆ ನೀಡಲಾಗಲಿಲ್ಲ, ಬಿಡಿಎ ಸೈಟ್ ಬಿಡುಗಡೆಯಾದರೂ ಕೈ ಸೇರಿಲ್ಲ. ತಬ್ಬಲಿಯಾಗಿರುವ ಗೀತಾ ಭಾಯಿಗೆ ಈಗ ಬದುಕುವ ಆಸೆಯೂ ಇಲ್ಲ.
ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಈಕೆಯ ಬಗ್ಗೆ ಗಮನ ಹರಿಸಿ ನೆರವು ನೀಡಿ ಎಂದು ರಾಜ್ಯ ಸರಕಾರಕ್ಕೆ ಪತ್ರ ಬರೆದರೂ ಅದಕ್ಕೂ ನಮ್ಮ ಸರಕಾರ ಬೆಲೆ ಕೊಡಲಿಲ್ಲ. ದಕ್ಷಿಣ ಕನ್ನಡದ ಜನನಾಯಕರಿಗೆ ಬೇರೆ ಎಲ್ಲರನ್ನು ಗೌರವಿಸಲು ಕಾಲಾವಕಾಶವಿದೆ, ಆದರೆ ಈ ಒಂಟಿ ಜೀವಕ್ಕೆ ನೆರವಾಗುವ ಸಮಯವೇ ಇಲ್ಲ.
ಬಿಜೆಪಿ ಕಾರ್ಪೊರೇಟರ್ 
ತನ್ನ ಅವ್ಯವಸ್ಥೆಯ ಬದುಕಿನ ನಡುವೆಯೂ ಗೀತಾ ಭಾಯಿ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ಸೇವಾ ಮನೋಭಾವ ಅವರನ್ನು ಮಂಗಳೂರು ಮಹಾನಗರ ಪಾಲಿಕೆಯ ಉಳ್ಳಾಲ ನಗರ ಸಭೆಯ  ಚುನಾವಣೆಯಲ್ಲಿ ಗೆಲ್ಲುವಂತೆ ಮಾಡಿತು. ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಗೀತಾ ಭಾಯಿಗೆ ಜನರು ಬೆಂಬಲಿಸಿ ಗೆಲ್ಲಿಸಿದರು.  ಬಿಜೆಪಿಯನ್ನು ಸೇರಿದ ಕಾರಣಕ್ಕೆ ಕಾಂಗ್ರೆಸ್ ನ ಪ್ರಮುಖರು ಗೀತಾ ಬಾಯಿಯನ್ನು ದೂರವಿಡಲಾರಂಭಿಸಿದರು. ಇದರಿಂದ ಕೊನೆಗೂ ನೂರಾರು ಪದಕಗಳ ಸಾಧಕಿ ಬೀದಿಪಾಲಾದರು.
ರಾಜ್ಯೋತ್ಸವ ಪ್ರಶಸ್ತಿ 
ಹಲವು ಬಾರಿ ಗೀತಾ ಭಾಯಿ ಅವರುಕನ್ನಡ  ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಹಾಕಿರುತ್ತಾರೆ. ಆಯ್ಕೆ ಮಾಡಿಯೂ ಅಂತಿಮ ಕ್ಷಣದಲ್ಲಿ ಅವರ ಹೆಸರು ಪಟ್ಟಿಯಿಂದ ಕೈಬಿಟ್ಟಿರುವುದೂ ಉಂಟು. ”ನನ್ನ ಸಾಧನೆಗೆ ರಾಜ್ಯ ಮಟ್ಟದ ಪ್ರಶಸ್ತಿ ಯಾವುದೂ ಸಿಕ್ಕಿಲ್ಲ, ಎಲ್ಲದಕ್ಕೂ ಪ್ರಶಸ್ತಿಯೇ ಅಂತಿಮವಲ್ಲ. ಆದರೆ ಇಷ್ಟು ವರ್ಷ ಮಾಡಿದ ಕ್ರೀಡಾ ಸಾಧನೆಯನ್ನು ಸರಕಾರ ಗುರುತಿಸಿದರೆ ನನ್ನ ಬದುಕು ಪರಿಪೂರ್ಣವಾಗುತ್ತದೆ ಎಂಬ ನಂಬಿಕೆ.”ಎಂದು ಗೀತಾ ಭಾಯಿ ಸ್ಪೋರ್ಟ್ಸ್ ಮೇಲ್ ಗೆ ತಿಳಿಸಿದರು.
ನಿರುದ್ಯೋಗಿ 
ದಕ್ಷಿಣ ಕನ್ನಡದ ಜನಪ್ರತಿನಿಧಿಗಳಿಗೆ ಇಂಥ ಸಾಧಕಿಯೊಬ್ಬರು ನಿರುದ್ಯೋಗಿಯಾಗಿ ದಿನ ದೂಡುವುದು ಎಷ್ಟು ಸಮಂಜಸ ಎನಿಸುತ್ತದೋ ಗೊತ್ತಿಲ್ಲ. ನಮಗೆ ಅನುಕಂಪ ತೋರಿಸಲು ಮಾತ್ರ ಗೊತ್ತಿದೆ, ಆದರೆ ಪರಿಹಾರ ನೀಡುವ ಬಗ್ಗೆ ನಿರಾಸಕ್ತಿ. ಈಗ ಗೀತಾ ಭಾಯಿ ತಾನು ಗೆದ್ದಿರುವ ವಾರ್ಡ್ ನಲ್ಲಿ ಇರುವ ಸಮಸ್ಯೆಗಳ ಬಗ್ಗೆ ಸ್ಪಂದಿಸುತ್ತಿದ್ದಾರೆ. ಈಗ ಅಲ್ಲಿಯ ಜನರ ಪ್ರೀತಿಯೇ ಗೀತಾ ಭಾಯಿಗೆ ಬದುಕಾಗಿದೆ. ”ಸಾಧನೆ ಮಾಡಿದರೂ ಪ್ರಭಾವ ಬೀರಲು ಆಗುತ್ತಿಲ್ಲ, ಅಸಹಹಯಕಳಾಗಿ ಬದುಕು ಸಾಗಿಸುತ್ತಿರುವೆ. ನಿತ್ಯದ ಬದುಕಿಗೂ ಕಷ್ಟವಾಗಿದೆ. ಏಕಲವ್ಯ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಹಲವು ವರ್ಷಗಳಿಂದ ಅರ್ಜಿ ಸಲ್ಲಿಸುತ್ತಿರುವೆ, ಯಾರೂ ಗುರುತಿಸಿಲ್ಲ, ಈಗ ನಾನು ಆಡಳಿತ ಪಕ್ಷದಲ್ಲೇ ಕಾರ್ಪೊರೇಟರ್ ಆಗಿ ಕೆಲಸ ಮಾಡುತ್ತಿರುವೆ. ಈಗಲಾದರೂ ನನ್ನ ಸಾಧನೆಯನ್ನು ಗುರುತಿಸುತ್ತಾರೆಂಬ ನಂಬಿಕೆ ಇದೆ. ನನಗೆ ನೀಡಿದ ಬಿಡಿಎ ಸೈಟ್ ಎಲ್ಲಿ ಹೋಯಿತು ಎಂಬುದೇ ಗೊತ್ತಿಲ್ಲ, ಸರಕಾರ ಈ ಬಗ್ಗೆ ಗಮನ ಹರಿಸಿದರೆ ಇರುವಷ್ಟು ದಿನ ಖುಷಿಯಾಗಿ ಬದುಕಬೇಕೆಂಬ ಹಂಬಲ,” ಎಂದು ಗೀತಾ ಭಾಯಿ ಸ್ಪೋರ್ಟ್ಸ್ ಮೇಲ್ ಗೆ ತಿಳಿಸಿದ್ದಾರೆ.

Related Articles