Wednesday, November 13, 2024

ಕ್ರೀಡಾ ತರಬೇತುದಾರರ ಹುದ್ದೆ ಕಾಯಂ ಅವರ ಸಾವಿನ ಬಳಿಕವೇ?

ಸೋಮಶೇಖರ್‌ ಪಡುಕರೆ ಬೆಂಗಳೂರು

ಕರ್ನಾಟಕ ರಾಜ್ಯ ಸರಕಾರ ಈ ಬಾರಿ ಕ್ರೀಡಾ ಸಾಧಕರ ಬದುಕಿಗೆ ಭದ್ರತೆ ನೀಡುವ ಉತ್ತಮ ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರಲು ಸಜ್ಜಾಗಿದೆ. ಆದರೆ ಈ ಕ್ರೀಡಾ ಸಾಧಕರ ಯಶಸ್ಸಿನ ಹಿಂದೆ ಶ್ರಮಿಸುತ್ತಿರುವ ತರಬೇತುದಾರರ ಬದುಕಿನ ಬಗ್ಗೆ ಯೋಚಿಸಿದಂತಿಲ್ಲ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ನೂರಕ್ಕೂ ಹೆಚ್ಚು ವಿವಿಧ ತರಬೇತುದಾರರು ದಶಕಗಳಿಂದ ದುಡಿಯುತ್ತಿದ್ದಾರೆ. ಕೆಲವರು ಸಾವಿಗೀಡಾದರೆ, ಇನ್ನು ಕೆಲವರು ನಿವೃತ್ತಿಯಾದರು. ಇನ್ನು ಕೆಲವರು ನಿವೃತ್ತಿಯ ಅಂಚಿನಲ್ಲಿದ್ದಾರೆ ಆದರೆ ಇದ್ದವರ ಬದುಕಿಗೆ ಭದ್ರತೆ ಇನ್ನೂ ಸಿಕ್ಕಿಲ್ಲ.

ಒಂದು ರಾಜ್ಯದ ಅಥವಾ ದೇಶದ ಕ್ರೀಡಾ ಯಶಸ್ಸಿನಲ್ಲಿ ಅಲ್ಲಿಯ ಕ್ರೀಡಾ ತರಬೇತುದಾರರ ಪಾತ್ರ ಪ್ರಮುಖವಾಗಿರುತ್ತದೆ. ಕ್ರೀಡಾ ಶಾಲೆಗಳಲ್ಲಿ ತರಬೇತಿ ನೀಡುತ್ತಿರುವ ತರಬೇತುದಾರರ ಕಾಯಂ ಉದ್ಯೋಗವಿಲ್ಲದೆ ಸಂಕಷ್ಟಕ್ಕೆ ಸಿಲುಕಿರುತ್ತಾರೆ. ನಾವು ತರಬೇತುದಾರರನ್ನು ಚೆನ್ನಾಗಿ ನೋಡಿಕೊಳ್ಳದೆ, ಅವರ ಬದುಕಿಗೆ ಅಗತ್ಯ ಇರುವ ಸೌಲಭ್ಯಗಳನ್ನು ನೀಡದೆ ಪದಕಗಳನ್ನು ನಿರೀಕ್ಷಿಸುವುದು ಹೇಗೆ ಸಾಧ್ಯ?

ರಾಜಕೀಯದಾಟದಲ್ಲಿ ಸ್ಪರ್ಧಿಸುವ ಜನಪ್ರತಿನಿಧಿಗಳು ಪ್ರತಿ ಬಾರಿ ಚುನಾವಣೆಯಲ್ಲಿ ಗೆದ್ದ ನಂತರ ತಮ್ಮ ಭತ್ಯೆ ಹಾಗೂ ವೇತನಗಳನ್ನು ಪರೀಷ್ಕರಿಸಿಕೊಂಡು ನೆಮ್ಮದಿಯಾಗಿರುತ್ತಾರೆ. ಅದೇ ರೀತಿಯಲ್ಲಿ ಅವರು ಸರಕಾರಿ ಸೇವೆಯಲ್ಲಿ ಕಾರ್ಯನಿರ್ವಹಿಸುತ್ತಿರುವವರ ಬದುಕಿನ ಬಗ್ಗೆಯೂ ಯೋಚಿಸಬೇಕಾದ ಅನಿವಾರ್ಯತೆ ಇದೆ.

ಮುಷ್ಕರ ಮಾಡಿದರೂ ಫಲ ಸಿಗಲಿಲ್ಲ:

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತರಬೇತಿ ನೀಡುತ್ತಿರುವ ತರಬೇತುದಾರರು ತಮ್ಮ ಉದ್ಯೋಗಕ್ಕೆ ಭದ್ರತೆ ನೀಡಿ ಎಂದು ಹಲವು ಬಾರಿ ಮುಷ್ಕರ ಮಾಡಿದ್ದಾರೆ. ಆದರೆ ಸರಕಾರ ಇದಕ್ಕೆ ಸೊಪ್ಪು ಹಾಕಲಿಲ್ಲ. ಆದರೂ ಈ ತರಬೇತುದಾರರು ತಮ್ಮ ಜವಾಬ್ದಾರಿಯಿಂದ ಹಿಂದೆ ಸರಿಯದೆ ಕ್ರೀಡಾಪಟುಗಳಿಗೆ ತರಬೇತಿ ನೀಡುತ್ತಿದ್ದಾರೆ. “ಅವರು ಸರಿಯಾಗಿ ಕೆಲಸ ಮಾಡುತ್ತಿಲ್ಲ, ಅದಕ್ಕೆ ಹುದ್ದೆ ಕಾಯಂಗೊಳ್ಳಲಿಲ್ಲ,” ಎಂಬ ಧ್ವನಿ ಇಲಾಖೆಯಿಂದ ಕೇಳಿ ಬಂದಿತ್ತು. ಸಿಗಬೇಕಾದ ಸೌಲಭ್ಯಗಳು ಸಿಗದಿದ್ದರೆ ಕೆಲಸದಲ್ಲಿ ಉತ್ಸಾಹ ಬರುವುದಾದರೂ ಹೇಗೆ?

ಇತರ ಇಲಾಖೆಗಳಂತಲ್ಲ ಕ್ರೀಡಾ ಇಲಾಖೆ:

ಇತರ ಇಲಾಖೆಗಳೊಂದಿಗೆ ಕ್ರೀಡಾ ಇಲಾಖೆಯನ್ನು ಹೋಲಿಸುವುದು ಸೂಕ್ತವಲ್ಲ. ಇದು ಇತರ ಇಲಾಖೆಗಳಂತೆ ಆರ್ಥಿಕ ಲಾಭದ ಇಲಾಖೆಯಲ್ಲ. ಇದು ಯುವಜನರ ಭವಿಷ್ಯವನ್ನು ರೂಪಿಸುವ ಇಲಾಖೆ. ಇಲ್ಲಿಯ ಸಾಧನೆಯೇ ಸಂಪತ್ತು. ಸಹಸ್ರಾರು ಯುವಕರ ಬದುಕನ್ನು ರೂಪಿಸುವ ಕ್ರೀಡಾ ಇಲಾಖೆಯ ತರಬೇತುದಾರರ ಬದುಕಿಗೇ ಭದ್ರತೆ ಇಲ್ಲವೆಂದಾಗ ರಾಜ್ಯದಲ್ಲಿ ಕ್ರೀಡಾ ಯಶಸ್ಸು ಕಾಣುವುದಾದರೂ ಹೇಗೆ? ಖೇಲೋ ಇಂಡಿಯಾದಂಥ ಪ್ರತಿಷ್ಠಿತ ಕ್ರೀಡಾಕೂಟವನ್ನು ಆಯೋಜಿಸಿ ಕೇಂದ್ರ ಸರಕಾರದ ಮೆಚ್ಚುಗೆಗೆ ಪಾತ್ರವಾದ ರಾಜ್ಯದಲ್ಲಿ ಕ್ರೀಡಾ ತರಬೇತುದಾರರ ಬದುಕು ಅತಂತ್ರವಾಗಿದೆ ಎಂದು ಯೋಚಿಸುವುದೇ ಕಷ್ಟ.

ಕ್ರೀಡೆಯಲ್ಲಿ ಸಾಧನೆ ಮಾಡಿದವರಿಗೆ ಉದ್ಯೋಗ ನೀಡುತ್ತೇವೆಂದು ರಾಜ್ಯದ ಮುಖ್ಯಮಂತ್ರಿಗಳು ಘೋಷಿಸಿರುವುದು ರಾಜ್ಯದ ಪಾಲಿಗೆ ಐತಿಹಾಸಿಕ ನಿರ್ಣಯ. ಇದರಿಂದ ಕ್ರೀಡೆಯಲ್ಲಿ ಪಾಲ್ಗೊಂಡು ಬದುಕನ್ನು ರೂಪಿಸಿಕೊಳ್ಳಲು ಯುವಜನರು ಮುಂದೆ ಬರುತ್ತಾರೆ. ಅದೇ ರೀತಿಯಲ್ಲಿ ಅವರಿಗೆ ತರಬೇತಿ ನೀಡುವವರ ಬಗ್ಗೆಯೂ ಸರಕಾರ ಯೋಚಿಸಿ, ಸೂಕ್ತ ನಿರ್ಣಯ ಕೈಗೊಂಡರೆ ಕ್ರೀಡಾ ಕ್ಷೇತ್ರಕ್ಕೆ ಉತ್ತಮ ಪ್ರೋತ್ಸಾಹ ಸಿಕ್ಕಂತಾಗುತ್ತದೆ.

Related Articles