Saturday, October 12, 2024

ಕೋಮಾದಿಂದ ಹೊರಬಂದು ಏಳುಬಾರಿ ಚಾಂಪಿಯನ್‌ ಪಟ್ಟಗೆದ್ದ ಕೊಡಗಿನ ಹೇಮಂತ್

ಸೋಮಶೇಖರ್‌ ಪಡುಕರೆ, ಬೆಂಗಳೂರು

ರಸ್ತೆ ಅಪಘಾತದಲ್ಲಿ ಗಾಯಗೊಂಡು ಸುಮಾರು ತಿಂಗಳ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಕೈ ಮತ್ತು ಕಾಲಿನ ಮೂಳೆ ಮುರಿದು ಎರಡು ವರ್ಷಗಳ ಕಾಲ ಸಂಕಷ್ಟದಲ್ಲಿ ಬದುಕನ್ನು ಕಳೆದ ಯುವಕನೊಬ್ಬ ಮತ್ತೆ ಚೇತರಿಸಿ ನೋವನ್ನೇ ಸವಾಲಾಗಿ ಸ್ವೀಕರಿಸಿ ದ್ವಿಚಕ್ರ ವಿಭಾಗದಲ್ಲಿ ಏಳು ಬಾರಿ ರಾಷ್ಟ್ರೀಯ ಮೋಟಾರ್‌ ರಾಲಿ ಚಾಂಪಿಯನ್‌ ಪಟ್ಟ ಗೆದ್ದು ಈಗ ಏಷ್ಯನ್‌ ಚಾಂಪಿಯನ್ಷಿಪ್‌ ಗೆ ಸಜ್ಜಾಗಿರುವ ಕೊಡಗಿನ ವೀರ ಹೇಮಂತ್‌ ಮುದ್ದಪ್ಪ ಅವರು ಈ ನಾಡಿನ ಯುವಕರಿಗೆ ಸ್ಫೂರ್ತಿಯ ಚಿಲುಮೆ.

ಖ್ಯಾತ ಕಣ್ಣಿನ ತಜ್ಞ ಡಾ. ಟಿ.ಎಂ. ಮುದ್ದಪ್ಪ ಹಾಗೂ ಶಾರದಾ ಮುದ್ದಪ್ಪ ದಂಪತಿಯ ಈ ಚಾಂಪಿಯನ್‌ ಮಗ ಜನಿಸಿದ್ದು ಲಂಡನ್‌ ನಲ್ಲಿ. ಆದರೆ ಓದು ಆರಂಭಿಸಿದ್ದು ಬೆಂಗಳೂರಿನಲ್ಲಿ. ಹೇಮಂತ್‌ ಗೆ ಚಿಕ್ಕಂದಿನಿಂದಲೇ ಬೈಕ್‌ ಹುಚ್ಚು. ಆ ಹುಚ್ಚೇ ಒಬ್ಬ ಚಾಂಪಿಯನ್ ನನ್ನು ಸೃಷ್ಟಿಸಿತು. ಹದಿನೇಳನೇ ವಯಸ್ಸಿಗೆ ಸೂಪರ್‌ ಬೈಕ್‌ ಖರೀದಿಸಿ ಚಾಂಪಿಯನ್‌ ಎನಿಸಿದ ದಿಟ್ಟ ಹೋರಾಟಗಾರ.

ಹೇಮಂತ್‌ ದ್ವಿತೀಯ ಪಿಯುಸಿಯಲ್ಲಿ ಓದುತ್ತಿರುವಾಗ ಸಾಮಾನ್ಯ ರಸ್ತೆಯಲ್ಲಿ ವೇಗವಾಗಿ ರೇಸ್‌ ನಲ್ಲಿ ಬೈಕ್‌ ಓಡಿಸಿದಂತೆ ಓಡಿಸಿ ಅಪಘಾತಕ್ಕೀಡಾದರು. ಕೈ ಕಾಲು ಗಂಭೀರ ಗಾಯವಾಯಿತಲ್ಲದೆ ತಲೆ ಬರುಡೆಗೂ ಪೆಟ್ಟಾಗಿ ಕೋಮಾಕ್ಕೆ ತಲುಪಿದರು. ಸುಮಾರು ಒಂದು ತಿಂಗಳು ಕಾಲ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಡಾಕ್ಟರ್‌ ಸಲಹೆ ಪ್ರಕಾರ ಇವರು ಬೈಕ್‌ ಚಲಾಯಿಸುವುದಿರಲಿ, ಬೈಕ್‌ ನಲ್ಲಿ ಕುಳಿತುಕೊಳ್ಳುವುದೇ ಕಷ್ಟ ಎಂದು ಹೇಳಿದರು. ಹೇಮಂತ್‌ ಗೆ ಈ ಸಂಕಷ್ಟದಿಂದ ಚೇತರಿಸಿಕೊಳ್ಳಲು ಎರಡು ವರ್ಷಗಳೇ ಬೇಕಾಯಿತು. ಗಾಯಗಳೆಲ್ಲ ಗುಣವಾಯಿತು ಆತ್ಮವಿಶ್ವಾಸ ಹೆಚ್ಚಿಸಿತು. ಯಾವ ಬೈಕ್‌ ನಲ್ಲಿ ಬಿದ್ದೆನೋ ಅದೇ ಬೈಕ್‌ ನಿಂದ ಸಾಧನೆ ಮಾಡುಬೇಕೆಂಬ ಛಲ ಹೆಚ್ಚಾಯಿತು. ತಂದೆಯಲ್ಲಿ ಸೂಪರ್‌ ಬೈಕ್‌ ಕೊಡುವಂತೆ ವಿನಂತಿ ಮಾಡಿದರು. ಮಗನ ಆಸೆಗೆ ವಿರೋಧ ವ್ಯಕ್ತಪಡಿಸದ ಮುದ್ದಪ್ಪ ಅವರು ಸೂಪರ್‌ ಬೈಕನ್ನೇ ನೀಡಿದರು. ಅಲ್ಲಿಂದ ಗಂಭೀರವಾಗಿ ಬೈಕ್‌ ಓಡಿಸಿದ ಹೇಮಂತ್‌ ಮತ್ತೆ ಹಿಂದಿರುಗಿ ನೋಡಲಿಲ್ಲ. ಭಾಗವಹಿಸಿದ ಏಳು ರಾಷ್ಟ್ರೀಯ ರಾಲಿಗಳಲ್ಲಿ ಏಳು ಬಾರಿ ಚಾಂಪಿಯನ್‌ ಪಟ್ಟ ಗೆಲ್ಲುತ್ತಾರೆ.

ಬೆಂಗಳೂರಿನಲ್ಲಿ ಮಂತ್ರಾ ರೇಸಿಂಗ್‌ ತಂಡವನ್ನು ಪ್ರತಿನಿಧಿಸುತ್ತಿರುವ ಹೇಮಂತ್‌ ಮುದ್ದಪ್ಪ ಕಳೆದ ವರ್ಷ ಥಾಯ್ಲೆಂಡ್‌ ನಲ್ಲಿ ನಡೆಯಬೇಕಿದ್ದ ಏಷ್ಯನ್‌ ಮೋಟಾರ್‌ ರಾಲಿಯಲ್ಲಿ ಪಾಲ್ಗೊಳ್ಳಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಅಂದಿನ ಕ್ರೀಡಾ ಸಚಿನ ಕಿರಣ್‌ ರಿಜುಜ್ಜು ಅವರು ಸನ್ಮಾನ ಮಾಡಿದ್ದರು, ಆದರೆ ಕೊರೋನಾ ಹಿನ್ನೆಲೆಯಲ್ಲಿ ಅದು ಸಾಧ್ಯವಾಗಿರಲಿಲ್ಲ. ಮುಂದಿನ ವರ್ಷವಾದರೂ ಪಾಲ್ಗೊಳ್ಳಬೇಕೆಂಬ ಹಂಬಲ ಇದೆ ಎಂದು ಹೇಮಂತ್‌ ಹೇಳಿದ್ದಾರೆ.

ಸಿ.ಎಸ್.‌ ಸಂತೋಷ್‌, ಅರವಿಂದ್‌ ಕೆ.ಪಿ. ನಂತರ ಮೋಟಾರ್‌ ರೇಸ್‌ ನಲ್ಲಿ ತನ್ನದೇ ಪ್ರಭುತ್ವ ಸಾಧಿಸುತ್ತಿರುವ ಹೇಮಂತ್‌ ಮುದ್ದಪ್ಪ ಪ್ರಭಾವಗಳಿಗೆ ಗುರಿಯಾಗಿ ಅವಸರದ ತೀರ್ಮಾನ ಕೈಗೊಳ್ಳುವವರಲ್ಲ. “ಬದುಕಿನಲ್ಲಿ ನಾವು ನಮ್ಮ ಸಾಮರ್ಥ್ಯದಿಂದಲೇ ಯಶಸ್ಸನ್ನು ಕಾಣಬೇಕು, ರಾಜ್ಯ, ರಾಷ್ಟ್ರ, ಏಷ್ಯ ನಂತರ ವಿಶ್ವ ಮಟ್ಟದ ಸ್ಪರ್ಧೆಗಳಲ್ಲಿ ಹಂತಹಂತವಾಗಿ ಪಾಲ್ಗೊಳ್ಳಬೇಕು. ಆಗ ಆ ಮುನ್ನಡೆಗೆ ಒಂದು ಅರ್ಥವಿರುತ್ತದೆ ಮತ್ತು ಅದು ಖುಷಿಯನ್ನು ನೀಡುತ್ತದೆ,” ಎಂದರು.

ಜಗತ್ತಿನ ಶ್ರೇಷ್ಠ ಮೋಟಾರ್‌ ಬ್ರಾಂಡ್‌ ಹೀರೋ ಮೋಟಾರ್ಸ್‌ ಜತೆ ಹೇಮಂತ್‌ ಮುದ್ದಪ್ಪ ಒಪ್ಪಂದವೋಂದಕ್ಕೆ ಸಹಿ ಮಾಡಿದ್ದು ಅದರ ವಿವರಗಳನ್ನು ಸದ್ಯದಲ್ಲೇ ಬಹಿರಂಗಪಡಿಸಲಿದ್ದಾರೆ. ಸದ್ಯ ಸಿವಿಲ್‌ ಗುತ್ತಿಗೆದಾರರಾಗಿರುವ ಹೇಮಂತ್‌, ವಿದೇಶದಿಂದ ನ್ಯೂಟ್ರಿಷನ್‌ ಉತ್ಪನ್ನಗಳನ್ನು ಆಮದು ಮಾಡಿಕೊಂಡು ಭಾರತದಲ್ಲಿ ಮಾರಾಟ ಮಾಡುತ್ತಿದ್ದಾರೆ.

Related Articles